7

ಈ ಸೃಷ್ಟಿ ಒಂದು ಒಗಟೇ?

ಗುರುರಾಜ ಕರಜಗಿ
Published:
Updated:

ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು ? |
ಬಗೆದು ಬಿಡಿಸುವರಾರು ಸೋಜಿಗವನಿದನು ||
ಜಗವ ನಿರವಿಸಿದ ಕೈಯೊಂದಾದೊಡೇಕಿಂತು |
ಬಗೆಬಗೆಯ ಜೀವಗತಿ ? - ಮಂಕುತಿಮ್ಮ ||೬||

ಒಗಟೆಯೇನೀ =ಒಗಟು+ಏನು+ಈ ಬಾಳಿನರ್ಥವದೇನು=ಬಾಳಿನ+ಅರ್ಥ+ಅದೇನು, ಬಗೆದು =ತಿಳಿದು, ನಿರವಿಸಿದ ನಿರ್ಮಿಸಿದ, ಕೈಯೊಂದಾದೊಡೇಕಿಂತು=ಕೈ+ಒಂದೇ+ಅದೊಡೆ+ಏಕಿಂತು

ಈ ಸೃಷ್ಟಿ ಒಂದು ಒಗಟೇ ? ಈ ಬಾಳಿನ ಅರ್ಥವೇನು ? ಈ ಆಶ್ಚರ್ಯವನ್ನು ತಿಳಿದು ಬಿಡಿಸುವರು ಯಾರು ? ಜಗತ್ತನ್ನು ನಿರ್ಮಿಸಿದ ಒಂದೇ ಆಗಿದ್ದರೆ ಬೇರೆ ಬೇರೆಯಾದ ಜೀವಗತಿಗಳು ಏಕಿರಬೇಕಿತ್ತು?

ಮೊದಲು ಬರುವ ಪ್ರಶ್ನೆಗಳ ಸಾಲಿನಲ್ಲಿ ಇವೂ ಕೆಲವು. ಈ ಪ್ರಶ್ನೆ ಅನೇಕರನ್ನು ಕಾಡಿದೆ. ಪ್ರಪಂಚದಲ್ಲಿ ಒಬ್ಬರ ಹಾಗೆ ಮತ್ತೊಬ್ಬರಿಲ್ಲ - ರೂಪದಲ್ಲಿ, ಚಿಂತನೆಯಲ್ಲಿ, ಜ್ಞಾನದಲ್ಲಿ, ಸ್ಥಾನದಲ್ಲಿ. ಯಾಕೆ ಹೀಗೆ ಬೇರೆ ಬೇರೆ ಜೀವಗಳು ಬಂದವು? ಸೃಷ್ಟಿಸಿದ ಭಗವಂತ ಒಬ್ಬನೇ ಆಗಿದ್ದಲ್ಲಿ ಹೀಗೆ ವೈವಿಧ್ಯತೆಯನ್ನು ಯಾಕೆ ಮಾಡಬೇಕಿತ್ತು? ಇದನ್ನು ಕಂಡುಹಿಡಿಯಲು ಮಾಡಿದ ಅನೇಕ ಪ್ರಯತ್ನಗಳು ಪೂರ್ಣ ಸಫಲತೆಯನ್ನು ಪಡೆದಿಲ್ಲ.

ಬದುಕು ಒಂದು ಒಗಟೇ, ರಹಸ್ಯ. ನಾನು ಹುಡುಗನಾಗಿದ್ದಾಗ ದಿನಪತ್ರಿಕೆಯ ಭಾನುವಾರದ ಸಂಚಿಕೆಯಲ್ಲಿ ಒಂದು ಒಗಟು ಬರುತ್ತಿತ್ತು. ಖಾಲಿ ಕಾಗದದ ಮೇಲೆ ಮುದ್ರಿಸಲಾದ ಸಂಖ್ಯೆಗಳನ್ನು ಜೋಡಿಸುವ ಆಟ. ನಾನು ಲೇಖನಿಯಿಂದ ಆ ಸಂಖ್ಯೆಗಳನ್ನು, ಒಂದು, ಎರಡು, ಮೂರು ಹೀಗೆ ಅನುಕ್ರಮದಲ್ಲಿ ಜೋಡಿಸುತ್ತ ಹೋದಾಗ, ಕೊನೆಯ ಸಂಖ್ಯೆಯನ್ನು ತಲುಪಿದಾಗ ಖುಷಿಯಿಂದ ಬೀಗುತ್ತಿದ್ದೆ. ಯಾಕೆಂದರೆ ಎಲ್ಲ ಸಂಖ್ಯೆಗಳನ್ನು ಜೋಡಿಸಿದಾಗ ಸುಂದರ ಚಿತ್ರದ ಸ್ವರೂಪ ಕಾಣುತ್ತಿತ್ತು. ನನಗೆ ಅದು ಯಾವಾಗಲೂ ಆಶ್ಚರ್ಯವಾಗಿ ತೋರುತ್ತಿತ್ತು. ಕಾಗದದ ಮೇಲೆ ಹರಡಿದ್ದ ಅಸಹಾಯ ಸಂಖ್ಯೆಗಳನ್ನು ಕಂಡಾಗ ಅದೇನೆಂದು ತಿಳಿಯದೆ ಒಗಟಾಗುತ್ತಿತ್ತು, ಆದರೆ ಒಂದು ಸಲ ಚಿತ್ರ ನಿರ್ಮಾಣವಾಯಿತೋ ಅದು ಮನದಲ್ಲಿ ಸ್ಥಿರವಾಗುತ್ತಿತ್ತು. ಬರೀ ಸಂಖ್ಯೆಗಳನ್ನು ಕಂಡಾಗ ಚಿತ್ರವನ್ನೇಕೆ ನಾನು ಊಹಿಸಲಿಲ್ಲ ಎಂದು ಚಕಿತನಾಗುತ್ತಿದ್ದೆ. ಬದುಕು ಕೂಡ ಹೀಗೆ ಕಣ್ಣಿಗೆ ಕಾಣದ ಚುಕ್ಕೆಗಳನ್ನು ಸೇರಿಸುವ ಒಗಟು. ಈ ಚುಕ್ಕೆಗಳು ಏಕೆ ಬೇರೆ ಬೇರೆ ಸ್ಥಳಗಳಲ್ಲಿ ಇವೆ? ಒಂದು ಎಲ್ಲೋ ಇದೆ, ಹತ್ತು ಇನ್ನೆಲ್ಲೋ ಇದೆ ಆದರೆ ಐದು ಒಂದರ ಹತ್ತಿರವೇ ಇದೆ. ಏಕೆ ಹೀಗೆ? ಎಂದು ಚಿಂತಿಸುತ್ತಿದ್ದೆ. ಆದರೆ ಚುಕ್ಕೆಗಳನ್ನು ಜೋಡಿಸಿದ ಮೇಲೆ ಆ ಚುಕ್ಕೆಗಳು ಹಾಗೆ ಬೇರೆಯಾಗಿ, ಬೇರೆ ಸ್ಥಾನದಲ್ಲಿದ್ದಾಗಲೇ ಈ ಸುಂದರ ಚಿತ್ರ ಬರುವುದು ಸಾಧ್ಯ ಎಂಬ ಅರಿವಾಯಿತು. ಅಂತೆಯೇ ಬದುಕಿನ ಅನೇಕ ಪ್ರಶ್ನೆಗಳು, ಒಗಟುಗಳು ಈ ಚುಕ್ಕೆಗಳಿದ್ದಂತೆ. ಒಂದೊಂದನ್ನೇ ನೋಡುತ್ತ ಹೋದರೆ ಏನೂ ತಿಳಿಯಲಾರದು. ಆದರೆ ಸಮಗ್ರ ದೃಷ್ಟಿಯನ್ನು ನಾವು ಹೊಂದಿದ್ದೇ ಆದರೆ ಆ ಚುಕ್ಕೆಗಳು ಇರುವ ಸ್ಥಾನದ, ಕಾರಣಗಳೆಲ್ಲ ಸ್ಪಷ್ಟವಾಗುತ್ತವೆ.
ಬಹುಶ: ಬಗೆಬಗೆಯ ಜೀವಗತಿಗಳು ಇರುವುದೂ ಈ ಚುಕ್ಕೆಗಳ ಹಾಗೆಯೇ? ಇವುಗಳನ್ನು ನಿರ್ಮಿಸಿದ ಕೈ ಉದ್ದೇಶಪೂರ್ವಕವಾಗಿಯೇ ಹಾಗೆ ಮಾಡಿರಬಹುದೇ? ಅವುಗಳನ್ನೂ ಸಮಗ್ರ ದೃಷ್ಟಿಯಿಂದ, ಆಳವಾದ ಚಿಂತನೆಯಿಂದ ನೋಡಿದಾಗ ಅವೆಲ್ಲ ಸೇರಿ ಸೃಷ್ಟಿ ಎಂಬ ಸುಂದರ ಚಿತ್ರವನ್ನೂ ತೆರೆದಿರಿಸಬಹುದೇ? ಅದೇ ಬದುಕಿನ ಅರ್ಥವೂ ಆಗಿದ್ದಿರಬೇಕು. ನಾಲ್ಕೇ ನಾಲ್ಕು ಸಾಲಿನಲ್ಲಿ ನಮ್ಮ ಮನಸ್ಸನ್ನು ಈ ರೀತಿ ಕೆಣಕುವ, ಪ್ರಚೋದಿಸುವ ಕಗ್ಗಕ್ಕೆ ನಾವು ಬಾಗಬೇಕು.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !