ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಯೆ ತಂದ ಅಭಯ

Last Updated 24 ಜುಲೈ 2018, 19:30 IST
ಅಕ್ಷರ ಗಾತ್ರ

ಬ್ರಹ್ಮದತ್ತ ವಾರಣಾಸಿಯಲ್ಲಿ ರಾಜ್ಯಭಾರ ಮಾಡುವಾಗ ಬೋಧಿಸತ್ವ ಒಂದು ಸುಂದರ ಜಿಂಕೆಯಾಗಿ ಹುಟ್ಟಿದ. ಅದರ ಮೈ ಬಂಗಾರ ಬಣ್ಣದ್ದು, ಅದರ ಮೇಲೆ ಕಪ್ಪು ಚುಕ್ಕೆಗಳು.

ಜಿಂಕೆಯ ಕಣ್ಣು ಕಪ್ಪು, ಬಾಯಿ ಕಡುಕೆಂಪು. ಅದು ಒಂದು ಕುದುರೆಯ ಮರಿಯಷ್ಟು ದಪ್ಪ ಹಾಗೂ ಬಲಿಷ್ಠ. ಆ ಜಿಂಕೆಗೆ ನಿಗ್ರೋಧ ಮೃಗರಾಜ ಎಂದು ಹೆಸರು. ಅದು ಐದುನೂರು ಜಿಂಕೆಗಳ ಪರಿವಾರವನ್ನು ನಡೆಸುತ್ತಿತ್ತು. ಅದೇ ಕಾಡಿನಲ್ಲಿ ಇನ್ನೊಂದು ಐದುನೂರು ಶಾಖಾಮೃಗಗಳ ಗುಂಪು ಮನೆಮಾಡಿಕೊಂಡಿತ್ತು.

ರಾಜ ಬ್ರಹ್ಮದತ್ತನಿಗೆ ನಿತ್ಯವೂ ಊಟಕ್ಕೆ ಜಿಂಕೆಯ ಮಾಂಸ ಬೇಕು. ಹೀಗಾಗಿ ಮೇಲಿಂದ ಮೇಲೆ ಪರಿವಾರವನ್ನು ಕರೆದುಕೊಂಡು ಜಿಂಕೆಗಳ ಬೇಟೆಗೆ ಹೋಗುತ್ತಿದ್ದ. ಆಗ ರಾಜಕಾರ್ಯಗಳೆಲ್ಲ ನಿಂತು ಹೋಗುತ್ತಿದ್ದವು. ಮಂತ್ರಿಗಳು ಯೋಚಿಸಿ ಬೇಟೆಗಾರರನ್ನು ಕರೆಸಿ ಕಾಡಿನಲ್ಲಿದ್ದ ಬಹುತೇಕ ಜಿಂಕೆಗಳನ್ನು ಓಡಿಸಿಕೊಂಡು ಬಂದು ಅರಮನೆಯ ತೋಟದಲ್ಲಿ ಬಂಧಿಸಿಟ್ಟರು. ಈಗ ಬೇಟೆಯ ಚಿಂತೆಯಿಲ್ಲ. ರಾಜ ಬೇಕಾದಾಗ ಹೋಗಿ ಜಿಂಕೆಯನ್ನು ಹೊಡೆದು ತರುತ್ತಿದ್ದ.

ಈ ಜಿಂಕೆಗಳ ಸಮೂಹದಲ್ಲಿ ನಿಗ್ರೋಧ ರಾಜ ಹಾಗೂ ಅವನ ಪರಿವಾರದ ಮತ್ತು ಶಾಖಾ ಮೃಗಗಳೂ ಇದ್ದವು. ಒಂದು ದಿನ ರಾಜ ನಿಗ್ರೋಧ ರಾಜನನ್ನು ಕಂಡು ಸಂತೋಷಪಟ್ಟ, ಅದನ್ನು ಕೊಲ್ಲುವುದಿಲ್ಲವೆಂದು ಅಭಯ ನೀಡಿದ. ಪರಿವಾರದವರಿಗೆಲ್ಲ ಅಂತೆಯೇ ಸೂಚನೆ ಕೊಟ್ಟ.

ಇತ್ತ ಜಿಂಕೆಗಳು ತಮ್ಮ ತಮ್ಮಲ್ಲಿ ಮಾತನಾಡಿಕೊಂಡು ಸರದಿಯಂತೆ ತಾವೇ ಹೋಗಿ ಅಲ್ಲಿದ್ದ ವಧಾಸ್ಥಾನದ ಹತ್ತಿರ ಕುಳಿತುಕೊಂಡಾಗ ಸೇವಕರು ಆ ಜಿಂಕೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಒಂದು ಬಾರಿ ಗರ್ಭಿಣಿ ಜಿಂಕೆಯ ಸರದಿ ಬಂತು. ಅದು ಹೋಗಿ ನಾಯಕನಿಗೆ ಬಿನ್ನವಿಸಿಕೊಂಡಿತು, “ನಾನು ಗರ್ಭಿಣಿಯಾದ್ದರಿಂದ ನಾನು ಸತ್ತರೆ ನನ್ನ ಮಗುವೂ ಸತ್ತು ಹೋಗುತ್ತದೆ. ಈ ಬಾರಿ ನನ್ನ ಬದಲು ಮತ್ತೊಬ್ಬರನ್ನು ಕಳುಹಿಸಿದರೆ ಪ್ರಸವವಾದ ನಂತರ ನಾನು ಹೋಗುತ್ತೇನೆ”. ನಾಯಕ ಒಪ್ಪಲಿಲ್ಲ.

ಜಿಂಕೆ ಅಳುತ್ತ ಬೋಧಿಸತ್ವನ ಬಳಿಗೆ ಹೋದಾಗ ಆತ, “ಚಿಂತೆ ಬೇಡ. ನಿನ್ನ ಬದಲು ನಾನೇ ಹೋಗುತ್ತೇನೆ” ಎಂದು ವಧಾಸ್ಥಾನದ ಬಳಿಗೆ ಹೋಗಿ ನಿಂತ. ಇದು ಅಭಯ ಪಡೆದ ಜಿಂಕೆ ಎಂದು ಗೊತ್ತಿದ್ದ ಸೇವಕರು ಅದನ್ನು ರಾಜನ ಬಳಿಗೆ ಕರೆದೊಯ್ದರು.

ರಾಜ ಕಾರಣ ಕೇಳಿದಾಗ ಬೋಧಿಸತ್ವ ಬಸುರಿ ಜಿಂಕೆಯ ಕರುಣಾಜನಕ ಕಥೆಯನ್ನು ಹೇಳಿದ. ಆಗ ರಾಜ, “ನಿನ್ನಷ್ಟು ದಯೆ, ಪ್ರೀತಿ, ಮೈತ್ರಿಗಳನ್ನು ಹೊಂದಿದ ಮನುಷ್ಯರನ್ನೂ ಕಂಡಿಲ್ಲ. ಆಯ್ತು, ಆ ಬಸುರಿ ಜಿಂಕೆಗೆ ಅಭಯ ನೀಡುತ್ತೇನೆ” ಎಂದ. ಬೋಧಿಸತ್ವ, “ರಾಜಾ, ಪ್ರತಿಯೊಂದು ಜಿಂಕೆಗೂ ಇಂಥದ್ದೇ ಕರುಣಾಜನಕ ಕಥೆ ಇದೆ” ಎಂದ.

“ಹಾಗಾದರೆ ಎಲ್ಲ ಜಿಂಕೆಗಳಿಗೂ ಅಭಯ ನೀಡಿದ್ದೇನೆ” ಎಂದ ರಾಜ. “ಬೇರೆ ಪ್ರಾಣಿಗಳು ನಿನಗೆ ಏನು ಅನ್ಯಾಯ ಮಾಡಿವೆ ರಾಜ?” ಕೇಳಿದ ಬೋಧಿಸತ್ವ. ರಾಜನಿಗೆ ಬೆಳಕು ಹೊಳೆಯಿತು, “ಇಂದಿನಿಂದ ನಾನು ಬೇಟೆಯಾಡುವುದಿಲ್ಲ, ಯಾವ ಪ್ರಾಣಿಯನ್ನೂ ಹಿಂಸಿಸುವುದಿಲ್ಲ” ಎಂದು ಮಾತು ಕೊಟ್ಟ.

ಒಂದು ಜಿಂಕೆಗೆ ನೀಡಿದ ದಯೆ, ಅಭಯ ಇಡೀ ಪ್ರಾಣಿ ಸಂಕುಲವನ್ನು ಕಾಪಾಡಿತು. ದಯಾಗುಣದ ಶಕ್ತಿ ಅಪಾರ. ಅದಕ್ಕೆ ಕ್ರೌರ್ಯದ ಸಾವಿರ ಪಾಲು ಶಕ್ತಿ. ಹಿಂಸೆ, ಕ್ರೌರ್ಯಗಳು ರಾಕ್ಷಸೀ ಪ್ರವೃತ್ತಿಗಳಾದರೆ ದಯೆ, ಕರುಣೆಗಳು ದೈವತ್ವದ ಲಕ್ಷಣಗಳು. ಅವೇ ಮನುಕುಲವನ್ನು ಸಾಮೂಹಿಕ ನಾಶದಿಂದ ತಡೆಯಬಲ್ಲವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT