ಈಶ್ವರ-ಪ್ರಕೃತಿ ಸಂಬಂಧ

ಬ್ರಹ್ಮವೇ ಸತ್ಯ, ಸೃಷ್ಟಿಯೇ ಮಿಥ್ಯೆಯೆನ್ನುವೊಡೆ |
ಸಂಬಂಧವಿಲ್ಲವೇನಾ ವಿಷಯಯುಗಕೆ? ||
ನಮ್ಮ ಕಣ್ಮನಸುಗಳೆ ನಮಗೆ ಸಟೆ ಪೇಳುವೊಡೆ |
ನೆಮ್ಮುವುದದಾರನೋ ? – ಮಂಕುತಿಮ್ಮ ||30||
ಪದ-ಅರ್ಥ: ಮಿಥ್ಯೆ=ಸುಳ್ಳು, ವಿಷಯಯುಗಕೆ=ವಿಷಯ+ಯುಗಕೆ(ಎರಡರ ಜೋಡಿಗೆ), ಕಣ್ಮನಸುಗಳೆ=ಕಣ್ಣು+ಮನಸ್ಸುಗಳೆ, ಸಟೆ=ಸುಳ್ಳು, ನೆಮ್ಮುವುದದಾರನೋ=ನೆಮ್ಮುವುದು(ನಂಬುವುದು)+ಆರನೋ
ವಾಚ್ಯಾರ್ಥ: ಬ್ರಹ್ಮವೇ ಸತ್ಯ ಹಾಗೂ ಈ ಪ್ರಕೃತಿಯೆಲ್ಲ ಸುಳ್ಳು ಎನ್ನುವುದಾದರೆ ಈ ಎರಡರ ಮಧ್ಯೆ ಯಾವ ಸಂಬಂಧವೂ ಇಲ್ಲವೇ? ನಮ್ಮ ಕಣ್ಣು, ಮನಸ್ಸುಗಳೇ ಸುಳ್ಳು ಹೇಳುವುದಾದರೆ ನಂಬುವುದು ಯಾರನ್ನು?
ವಿವರಣೆ: ಇದೊಂದು ಅದ್ಭುತವಾದ ಚೌಪದಿ. ನಮ್ಮ ಸಮಗ್ರ ಅಧ್ಯಾತ್ಮದ ಬೀಜರೂಪ ಇಲ್ಲಿದೆ. ಜೀವ, ಜಗತ್ತು, ಈಶ್ವರ ಈ ಮೂರರ ಅರಿವಿನ ವಿಚಾರವೇ ತತ್ವಜ್ಞಾನ. ಈ ಜ್ಞಾನವನ್ನು ಸಂಪಾದಿಸಬೇಕೆನ್ನುವ ವ್ಯಕ್ತಿ ಜಿಜ್ಞಾಸು. ದೇವರ ಮುಂದೆ ದೀಪವನ್ನು ಬೆಳಗಲು ಕೇವಲ ಹಣತೆಯೊಂದೇ ಸಾಲದು, ಬತ್ತಿ ಇದ್ದರೂ ಪ್ರಯೋಜನವಿಲ್ಲ, ಎಣ್ಣೆ ತುಂಬಿದ್ದರೂ ಫಲವಿಲ್ಲ. ಉರಿಯುವ ಬೆಂಕಿಕಡ್ಡಿ ಬತ್ತಿಯ ಸಂಪರ್ಕಕ್ಕೆ ಬಂದಾಗ ಮಾತ್ರ ದೀಪದ ಬೆಳಕು. ಅಂತೆಯೇ ಈಶ್ವರನ, ಜಗತ್ತಿನ, ಜೀವಗಳ ಬಗ್ಗೆ ಅರಿವುಂಟಾಗಲು ನಂಬಿಕೆ ಎನ್ನುವ ಬೆಂಕಿ ಮುಖ್ಯ. ನಂಬಿಕೆ ಇಲ್ಲದವನಿಗೆ ಮೊದಲಿನ ಮೂರೂ ಪ್ರಯೋಜನವಿಲ್ಲ. ಅದಕ್ಕೇ ಪ್ರಚೋದಿಸುವ ರೀತಿಯಲ್ಲಿ “ನೆಮ್ಮುವುದು ಅದಾರನೋ?” ಪ್ರಶ್ನೆ ಕೇಳಿದ್ದಾರೆ.
ಬ್ರಹ್ಮ ಸತ್ವವನ್ನು ಎರಡು ರೀತಿಯಲ್ಲಿ ಗಮನಿಸಬಹುದು 1.ವ್ಯಕ್ತ ಅಥವಾ ದೃಶ್ಯ ಹಾಗು 2. ಅವ್ಯಕ್ತ ಅಥವಾ ಅದೃಶ್ಯ. ಮೊದಲನೆಯದು ಕಣ್ಣಿಗೆ ಕಾಣುವಂತಹದು, ಇದೇ ಪ್ರಕೃತಿ ಅಥವಾ ಸೃಷ್ಟಿ. ಇನ್ನೊಂದು ಅವ್ಯಕ್ತವಾದದ್ದು ಶುದ್ಧ ಸತ್ವ ಅಥವಾ ಈಶ್ವರ. ಕಣ್ಣಿಗೆ ಕಾಣುವ ಪ್ರಕೃತಿ ಶುದ್ಧಸತ್ವದ ಅಥವಾ ಈಶ್ವರ ಶಕ್ತಿಯ ಕೇವಲ ಒಂದಂಶ ಮಾತ್ರ. ಕಣ್ಣಿಗೆ ಕಾಣದ ಬ್ರಹ್ಮಸತ್ವದ ಮಹಾಸಮುದ್ರದಲ್ಲಿ ಕಿಂಚಿತ್ತಾದ ಪ್ರಕೃತಿ ಪುಟ್ಟ ನಡುಗಡ್ಡೆಯಂತೆ ತೇಲುತ್ತಿದೆ. ಇದೇ ಬ್ರಹ್ಮ ಮತ್ತು ಪ್ರಕೃತಿಗಳ ನಡುವಿನ ಸಂಬಂಧ. ವ್ಯಕ್ತವಾದ ಬ್ರಹ್ಮಸತ್ವ ಪ್ರಕೃತಿ ಅಥವಾ ಸೃಷ್ಟಿಯಾದರೆ, ಕಣ್ಣಿಗೆ ಕಾಣದ, ಅವ್ಯಕ್ತವಾದ ಸೃಷ್ಟಿಯೇ ಬ್ರಹ್ಮಸತ್ವ. ಹಾಗಾದರೆ ನಮ್ಮ ಕಣ್ಣು, ಮನಸ್ಸುಗಳು ಸುಳ್ಳು ಹೇಳುತ್ತಿವೆಯೇ? ಇಲ್ಲ. ಆದರೆ ಅವುಗಳು ಕಂಡದ್ದು ತುಂಬ ಮಿತವಾದದ್ದು ಮತ್ತು ತಾತ್ಕಾಲಿಕವಾದದ್ದು.
ಬ್ರಹ್ಮ ಶಾಶ್ವತವಾದದ್ದು ಬದಲಾವಣೆ ರಹಿತವಾದದ್ದು. ಹಾಗಾದರೆ ನಮ್ಮ ನೋಟದಲ್ಲಿ ಈ ಬ್ರಹ್ಮ ಮತ್ತು ಸೃಷ್ಟಿಯ ನಡುವಿನ ಸಂಬಂಧ ಕಾಣುವುದಿಲ್ಲವೇಕೇ? ಇದಕ್ಕೆ ನಮ್ಮ ಅಧ್ಯಾತ್ಮ ನೀಡುವ ಕಾರಣ – ಮಾಯೆ. ಇದು ಪ್ರಕೃತಿಕಾರ್ಯದಲ್ಲಿಯ ತಂತ್ರ ವಿಶೇಷ. ಮಾಯೆ ಸುಳ್ಳಲ್ಲ, ಸತ್ಯವೂ ಅಲ್ಲ. ಸಂಜೆಗತ್ತಲಿನಲ್ಲಿ ದಾರಿಯಲ್ಲಿ ಬಿದ್ದ ಹಗ್ಗ ಹಾವಿನಂತೆ ತೋರಿ ಭಯವನ್ನುಂಟುಮಾಡುವುದಿಲ್ಲವೇ? ಆ ಮನುಷ್ಯ ಹಗ್ಗ ಕಂಡದ್ದು ಸುಳ್ಳಲ್ಲ, ಹಾವೆಂದು ಭ್ರಮಿಸಿದ್ದೂ ಸುಳ್ಳಲ್ಲ, ಬೆವೆತು ಗಾಬರಿಯಾದದ್ದು ಸತ್ಯ. ಆದರೆ ಅದು ಹಾವು ಅಲ್ಲದಿದ್ದದ್ದೂ ಸತ್ಯ.
ಹೀಗೆ ಒಂದು ವಸ್ತುವನ್ನು ಮತ್ತೊಂದಾಗಿ ತೋರಿ ಭ್ರಮೆ ಸೃಷ್ಟಿಸುವ ವಿಶೇಷವೇ ಮಾಯೆ. ಹಾಗಾಗಿಯೇ ಈ ಕಗ್ಗ ಬ್ರಹ್ಮಸತ್ವದ ಬಗ್ಗೆ, ಸೃಷ್ಟಿಯ ಬಗ್ಗೆ, ಅವುಗಳ ನಡುವಿನ ಸಂಬಂಧದ ಬಗ್ಗೆ, ನಮ್ಮ ಇಂದ್ರಿಯಗಳು ಹುಟ್ಟಿಸಬಹುದಾದ ಮಾಯೆಯ ಬಗ್ಗೆ, ಕೊನೆಗೆ ನಮಗೆ ಅವಶ್ಯಕವಾದ ನಂಬಿಕೆಯ ಬಗ್ಗೆ ಚಿಂತನೆಯನ್ನು ಮೂಡಿಸುತ್ತದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.