ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯ ವಿಷ

Last Updated 19 ಜೂನ್ 2019, 18:18 IST
ಅಕ್ಷರ ಗಾತ್ರ

ಮಾಯೆಯೊಮ್ಮೊಮ್ಮೆ ತೋರುವಳು ಮಿಗಿಲಕ್ಕರೆಯ
ಮಾಯಿಪಳು ಗಾಯಗಳನೀವಳಿಷ್ಟಗಳ ||
ಮೈಯ ನೀಂ ಮರೆಯೆ ನೂಕುವಳಾಗ ಪಾತಾಳಕೆ |
ಪ್ರೇಯ ಪೂತನಿಯವಳು – ಮಂಕುತಿಮ್ಮ | 147 ||

ಪದ-ಅರ್ಥ: ಮಾಯೆಯೊಮ್ಮೆಮ್ಮೆ=ಮಾಯೆ+ಒಮ್ಮೊಮ್ಮೆ, ಮಿಗಿಲಕ್ಕರೆಯ =ಮಿಗಿಲು(ಹೆಚ್ಚಾದ)+ಅಕ್ಕರೆಯ, ಮಾಯಿಪಳು=ಮಾಯಿಸುವಳು, ವಾಸಿಮಾಡುವಳು, ಪ್ರೇಯ ಪೂತನಿಯವಳು=ಮೇಲ್ನೋಟಕ್ಕೆ ಪ್ರಿಯಳಾಗಿ ಕಂಡರೂ ಒಳಗೊಳಗೆ ವಿಷ ನೀಡುವವಳು.

ವಾಚ್ಯಾರ್ಥ: ಮಾಯೆ ಒಮ್ಮೊಮ್ಮೆ ತುಂಬ ಪ್ರೀತಿಯನ್ನು ತೋರುವಳು, ಗಾಯಗಳನ್ನು ವಾಸಿಮಾಡುವಳು, ನಮ್ಮ ಅಪೇಕ್ಷೆಗಳನ್ನು ಪೂರೈಸುವಳು. ಆದರೆ ಆ ಸಂತೋಷದಲ್ಲಿ ಮೈ ಮರೆತರೆ ಪಾತಾಳಕ್ಕೇ ನೂಕುವಳು. ಹೀಗೆ ಮೇಲ್ನೋಟಕ್ಕೆ ಪ್ರಿಯಳಾಗಿರುವಂತೆ ಕಂಡರೂ ಆಂತರ್ಯದಲ್ಲಿ ಪೂತನಿಯಂತೆ ವಿಷವೂಡಲು ಬಂದವಳು.

ವಿವರಣೆ: ಅವಳು ನನ್ನ ಪರಿಚಯದ ಹುಡುಗಿ. ತುಂಬ ಬಡತನದಲ್ಲಿ ಬೆಳೆದವಳು. ಬಹಳ ಬುದ್ಧಿವಂತೆ, ಚೆಲುವೆ. ಮನೆಯ ಪರಿಸ್ಥಿತಿ ತುಂಬ ಕಷ್ಟ. ಸ್ಕಾಲರ್‍ಶಿಪ್ ಪಡೆದು, ಅವರಿವರ ಸಹಾಯ ಪಡೆದು ಪದವೀಧರೆಯಾಗಿ, ಒಂದು ಕೆಲಸಕ್ಕೆ ಸೇರಿದಳು. ಆ ಕಂಪನಿಯ ಉಪಾಧ್ಯಕ್ಷ, ಅವನೇ ಒಡೆಯನೂ ಹೌದು, ಆಕೆಯನ್ನು ಇಷ್ಟಪಟ್ಟ. ಮನೆಯವರ ಅಭಿಪ್ರಾಯಕ್ಕೆ ವಿರುದ್ಧವಾಗಿ ಆಕೆಯನ್ನು ಮದುವೆಯಾದ. ಬಡತನ ಮರೆತೇ ಹೋಗುವಷ್ಟು ತೀವ್ರವಾಗಿ ಶ್ರೀಮಂತಿಕೆ ಆಕೆಯನ್ನು ಅಪ್ಪಿಕೊಂಡಿತು. ಗಂಡನ ಅಧಿಕಾರ, ಹಣ, ಯೌವನ ಆಕೆಯನ್ನು ಸಂಭ್ರಮದಲ್ಲಿ ತೇಲಾಡಿಸಿತು. ನಾಲ್ಕಾರು ವರ್ಷಗಳಲ್ಲಿ ಹತ್ತಾರು ದೇಶಗಳ ತಿರುಗಾಟ. ದೇವರ ಕೃಪೆ ಅವಳನ್ನು ಎಲ್ಲಿಂದ ಎಲ್ಲಿಗೆ ಕರೆದೊಯ್ದಿತು ಎಂದು ಕಂಡವರು ಆಶ್ಚರ್ಯಪಟ್ಟರು. ಗಂಡ-ಹೆಂಡತಿ ಪ್ಯಾರಿಸ್‍ಗೆ ಹೋಗಿದ್ದರು. ಸಾಯಂಕಾಲ ನಾಟಕನೋಡಿ ಬಂದು ಸಂತೋಷದಿಂದ ಮಾತನಾಡುತ್ತ ಮಲಗಿದರು. ಹೆಂಡತಿ ಬೆಳಗಾಗ ಎದ್ದು ಗಂಡನನ್ನು ಎಬ್ಬಿಸಲು ಹೋದರೆ ಅವನಿಲ್ಲ, ಮಲಗಿದಲ್ಲೇ ಹೆಣವಾಗಿದ್ದ. ಸಂಭ್ರಮದ ಸ್ವರ್ಗ ಕುಸಿದಿತ್ತು. ಪ್ರೀತಿಸಿ ಆದ ಮದುವೆಯಾದ್ದರಿಂದ ಎರಡೂ ಮನೆಯವರೂ ಕೈಬಿಟ್ಟರು. ಕೊನೆಗೆ ಒಂದು ಗುಮಾಸ್ತರ ಕೆಲಸ ಸಿಕ್ಕರೂ ಸಾಕು ಎಂದು ಒದ್ದಾಡಿತು ಆ ಹೆಣ್ಣು ಜೀವ. ಎಲ್ಲಿಂದೆಲ್ಲಿಗೆ ಬದುಕಿನ ಪಯಣ?

ಇದೇ ಮಾಯೆಯ ಆಟ. ಒಮ್ಮೊಮ್ಮೆ ಆಕೆ ತೋರುವ ಅಕ್ಕರೆ ಅಷ್ಟಿಷ್ಟಲ್ಲ. ಬೇಡಿದ್ದನ್ನೆಲ್ಲ ಬೇಡಿದ್ದಕ್ಕಿಂತ ಹೆಚ್ಚಾಗಿ ನೀಡಿ ಇಷ್ಟಗಳನ್ನು ಪೂರೈಸುತ್ತಾಳೆ. ಓಹೋ, ಅಪೇಕ್ಷೆ ಪಟ್ಟಿದ್ದೆಲ್ಲ ಸಿಕ್ಕಿತಲ್ಲ ಎಂದು ಸಂತೋಷಪಡುತ್ತಿದ್ದಂತೆ, ಪಡೆದದ್ದೆಲ್ಲ ಮಂಜಿನಂತೆ ಕರಗಿ ಹೋದೀತು. ಒಂದು ಕ್ಷಣ ಆನಂದದಲ್ಲಿ ಮೈ ಮರೆತರೆ ಸಾಕು ಆ ತಾಯಿ ಮಾಯೆ, ನಮ್ಮನ್ನು ಆಶಾಸೌಧದ ಪಾತಾಳಕ್ಕೇ ನೂಕಿಬಿಡುತ್ತಾಳೆ.

ಅದಕ್ಕೇ ಕಗ್ಗ ಮಾಯೆಯನ್ನು ಪ್ರೇಮಪೂತನಿಯೆಂದು ಕರೆಯುತ್ತದೆ. ಸುಂದರವಾದ ಸ್ತ್ರೀರೂಪದಲ್ಲಿ ಬಂದ ರಾಕ್ಷಸಿ ಪೂತನಿ ಬಾಲಕೃಷ್ಣನ ಮೇಲೆ, ಎಲ್ಲರೂ ಕಾಣುವಂತೆ ತೋರಿದ್ದು ಅತಿಶಯವಾದ ಪ್ರೀತಿ. ಅವಳು ತೋರಿದ ಪ್ರೀತಿಯಿಂದಾಗಿಯೇ ಯಶೋಧೆ ಮಗುವನ್ನು ಆಕೆಯ ಕೈಗೆ ಇತ್ತದ್ದು. ಮತ್ತೊಬ್ಬರ ಮಗುವಿಗೆ ಎದೆಹಾಲು ಕುಡಿಸುವಷ್ಟು ಪ್ರೀತಿ! ಆದರೆ ಆಕೆಯ ಹೃದಯದಲ್ಲಿ ಇದ್ದದ್ದು ಹಾಲಾಹಲ. ಹೊರಗಿನ ತೋರಿಕೆಗೆ ಪ್ರೀತಿ, ಆದರೆ ಆಂತರ್ಯದಲ್ಲಿ ಕೊಲೆಗಡುಕುತನ. ಹೀಗಾಗಿ ಮಾಯೆ ಯಾವಾಗ ಏನು ಮಾಡಿಯಾಳು ಎಂಬುದನ್ನು ಹೇಳುವುದು ಅಸಾಧ್ಯ. ಅವಳ ತೀರ್ಮಾನವನ್ನು ಪ್ರಶ್ನಿಸುವುದೂ, ಬದಲಿಸುವುದೂ ಆಗದ ಮಾತು. ಆಕೆ ಮಾಡಿದ್ದೇ ನಮ್ಮ ದೈವ ಎಂದು ಕೂಡ್ರಬೇಕೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT