ಪ್ರಕಟವಾದ ಆಂತರಿಕ ಶಕ್ತಿ

ಭಾನುವಾರ, ಜೂಲೈ 21, 2019
28 °C

ಪ್ರಕಟವಾದ ಆಂತರಿಕ ಶಕ್ತಿ

ಗುರುರಾಜ ಕರಜಗಿ
Published:
Updated:
Prajavani

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ವರ್ತಕನ ಮಗನಾಗಿ ಹುಟ್ಟಿದ್ದ. ಮುಂದೆ ದೊಡ್ಡವನಾದ ಮೇಲೆ ಬಹುದೊಡ್ಡ ಕುದುರೆ ವ್ಯಾಪಾರಿಯಾದ. ಅವನು ಕುದುರೆಗಳನ್ನು ತಂದು ವಾರಾಣಸಿಯಲ್ಲಿ ಮಾರುತ್ತಿದ್ದ.

ವಾರಾಣಸಿಗೆ ಬರುವ ದಾರಿಯಲ್ಲಿ ಒಂದು ದೊಡ್ಡ ಹಾಳು ಬಂಗಲೆ ಇತ್ತು. ಹಿಂದಕ್ಕೆ ಯಾರೋ ಪುಣ್ಯಾತ್ಮ ಕಟ್ಟಿಸಿದ್ದ ಮನೆ, ಅವನು ತೀರಿಹೋದ ಮೇಲೆ ಅದು ಹಾಳಾಗಿತ್ತು. ಅದರಲ್ಲಿ ಒಬ್ಬ ಮುದುಕಿ ಇರುತ್ತಿದ್ದಳು. ಒಂದು ದಿನ ಒಬ್ಬ ಕುದುರೆ ವ್ಯಾಪಾರಿ ಬಂದು ಆ ಕಟ್ಟಡದ ಆವರಣದಲ್ಲಿ ತನ್ನ ಕುದುರೆಗಳನ್ನು ಕಟ್ಟಿ ಹಾಕಿದ್ದ. ಆಗೊಂದು ಕುದುರೆ ಮರಿ ಹಾಕಿತ್ತು. ವ್ಯಾಪಾರಿ ಅಲ್ಲಿಂದ ಹೊರಡುವಾಗ ಆ ಕುದುರೆ ಮರಿಯನ್ನು ಮುದುಕಿಗೆ ಕೊಟ್ಟು ಹೋದ. ಮುದುಕಿ ತನಗೆ ತಿಳಿದಂತೆ ಅದರ ಆರೈಕೆಯನ್ನು ಪ್ರೀತಿಯಿಂದ ಮಾಡುತ್ತಿದ್ದಳು. ಅದೂ ಎಲ್ಲ ಸಾಧಾರಣ ಕುದುರೆ ಮರಿಯಂತೆ ಬೆಳೆಯುತ್ತಿತ್ತು.

ಒಂದು ಸಲ ಬೋಧಿಸತ್ವ ತನ್ನ ಕುದುರೆಗಳನ್ನು ತೆಗೆದುಕೊಂಡು ಅಲ್ಲಿಗೆ ಬಂದ. ಆ ಕುದುರೆಮರಿಯನ್ನು ನೋಡಿದ. ಅದು ಅತ್ಯಂತ ವಿಶೇಷದ ಕುದುರೆಮರಿ. ಅದು ಪ್ರಸಿದ್ಧವಾದ ಕುಂಡಕಖಾದಸೈಂಧವ ಜಾತಿಗೆ ಸೇರಿದ್ದು. ಇದು ಅಲ್ಲಿ ಏಕೆ ಇದೆ ಎಂದು ಆಶ್ಚರ್ಯಪಟ್ಟ. ನಂತರ ಮುದುಕಿಯೊಂದಿಗೆ ಮಾತನಾಡಿ ಆರು ಸಾವಿರ ಕರ್ಪಾಹಣಗಳನ್ನು ನೀಡಿ ಅದನ್ನು ಕೊಂಡುಕೊಂಡ. ವಾರಾಣಸಿಗೆ ತಂದು ಅದಕ್ಕೆ ವಿಶೇಷ ಆಹಾರ ಮತ್ತು ತರಬೇತಿಗಳನ್ನು ಏರ್ಪಡಿಸಿದ.

ನಂತರ ಕುದುರೆಯನ್ನು ತೆಗೆದುಕೊಂಡು ರಾಜನ ಬಳಿಗೆ ಹೋಗಿ, ಇಂಥ ಅತ್ಯಂತ ವಿಶೇಷ ಗುಣದ ಕುದುರೆ ಕೇವಲ ರಾಜರ ಬಳಿ ಇರತಕ್ಕುದೆಂದೂ, ಅದರಿಂದ ರಾಜ್ಯದ ಬೆಳವಣಿಗೆ ಹೆಚ್ಚುವುದೆಂದೂ ಹೇಳಿದ. ರಾಜ ಕುತೂಹಲದಿಂದ ಕುದುರೆಯ ಶಕ್ತಿಯನ್ನು ತಾನು ನೋಡಬೇಕೆಂದು ಹೇಳಿದ. ಮರುದಿನವೇ ಅದರ ಶಕ್ತಿ ಪ್ರದರ್ಶನದ ಏರ್ಪಾಡಾಯಿತು.

ರಾಜಾಂಗಣದಲ್ಲಿ ಜನ ಕಿಕ್ಕಿರಿದು ನೆರೆದಿದ್ದರು. ಬೋಧಿಸತ್ವ ಈ ಕುದುರೆಯನ್ನು ಒಂದು ದೊಡ್ಡ ವೃತ್ತದಲ್ಲಿ ಓಡಲು ಬಿಟ್ಟ. ಯಾರಿಗೂ ಕುದುರೆ ಕಾಣಲೇ ಇಲ್ಲ. ಅಷ್ಟು ವೇಗವಾಗಿ ಅದು ಓಡುತ್ತಿತ್ತು! ನಂತರ ಕುದುರೆಯ ಹೊಟ್ಟೆಯ ಸುತ್ತ ಒಂದು ಕೆಂಪು ಬಟ್ಟೆಯನ್ನು ಕಟ್ಟಿ ಅದನ್ನು ಓಡಿಸಿದ. ಆಗ ಜನ ಕೇವಲ ಕೆಂಪುಬಟ್ಟೆ ಗಾಳಿಯಲ್ಲಿ ಗರಗರನೆ ತಿರುಗುವುದನ್ನು ಕಂಡರು. ಆಮೇಲೆ ಅದನ್ನು ಉದ್ಯಾನವನದ ಕೊಳದಲ್ಲಿ ಓಡಿಸಿದ. ಕುದುರೆ ಎಷ್ಟು ವೇಗವಾಗಿ ಓಡಿತ್ತೆಂದರೆ ಅದರ ಖುರಗಳೂ ಪೂರ್ತಿ ನೀರಿನಲ್ಲಿ ಮುಳುಗಿರಲಿಲ್ಲ! ಅದನ್ನು ಕಮಲದ ಎಲೆಗಳ ಮೇಲೆ ಓಡಿಸಿದ.

ಒಂದು ಕಮಲದ ಎಲೆಯೂ ನೀರಿನಲ್ಲಿ ಮುಳುಗಲಿಲ್ಲ. ಅಂದರೆ ಅದು ಅಷ್ಟು ಹಗುರವಾಗಿ ಗಾಳಿಯಲ್ಲೇ ಹಾರುವಂತೆ ಓಡುತ್ತಿತ್ತು. ಆಮೇಲೆ ಬೋಧಿಸತ್ವ ಕೈ ತಟ್ಟಿದಾಗ ಕುದುರೆ ಹಾರಿಬಂದು ತನ್ನ ನಾಲ್ಕು ಕಾಲುಗಳನ್ನು ಜೋಡಿಸಿಕೊಂಡು ಕೇವಲ ಒಂದಡಿಯ ಕಲ್ಲಿನ ಮೇಲೆ ನಿಂತುಕೊಂಡಿತು. ಜನ ನಿಬ್ಬೆರಗಾದರು. ರಾಜ ಸಂತುಷ್ಟನಾಗಿ ಬೋಧಿಸತ್ವನಿಗೆ ಅರ್ಧರಾಜ್ಯವನ್ನೇ ಕೊಟ್ಟುಬಿಟ್ಟ. ಕುದುರೆಯನ್ನು ಮಾಂಗಳೀಕ ರಾಜಕುದುರೆ ಎಂದು ಮನ್ನಿಸಿ ಅದಕ್ಕೆ ವಿಶೇಷವಾದ ವ್ಯವಸ್ಥೆಯನ್ನು ಮಾಡಿ ನೋಡಿಕೊಂಡ. ಕೆಲವೇ ವರ್ಷಗಳಲ್ಲಿ ಈ ರಾಜ್ಯಕ್ಕೇ ಇಡೀ ಜಂಬೂದ್ವೀಪದ ಒಡೆತನ ದೊರೆಯಿತು.

ಕುದುರೆ ಮುದುಕಿಯ ಹತ್ತಿರವೇ ಇದ್ದಿದ್ದರೆ ಉಳಿದ ಸಾಮಾನ್ಯ ಕುದುರೆಗಳಂತೆಯೇ ಬದುಕುತ್ತಿತ್ತು. ಅದಕ್ಕೆ ವಿಶೇಷ ಆಹಾರ ತರಬೇತಿ ದೊರೆತಾಗ ಅದರ ಅತ್ಯಂತ ವಿಶಿಷ್ಟ ಗುಣಗಳು ಹೊರಗೆ ಬಂದವು. ನಿಜವಾದ, ಆಂತರ್ಯದಲ್ಲಿದ್ದ ಶಕ್ತಿ ಪ್ರದರ್ಶನಕ್ಕೆ ವಾತಾವರಣವೂ ತಕ್ಕದ್ದಾಗಿರಬೇಕಾಗುತ್ತದೆ. ಸರಿಯಾದ ವಾತಾವರಣವಿಲ್ಲದಾಗ ಶಕ್ತಿ ಕುಂದಿ ಹೋಗುತ್ತದೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !