ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕೃತಿ ಬೇಡ, ಸುಕೃತಿ ಬೇಕು

Last Updated 21 ಜೂನ್ 2019, 20:02 IST
ಅಕ್ಷರ ಗಾತ್ರ

ಪ್ರಕೃತಿಯಿಂ ಪೊರಗಿರುವ ನರನಾರು ಸೃಷ್ಟಿಯಲಿ ? |
ಸ್ಪಕೃತಿಯೆಂದವನೆನುವುದವಳಿರದೊಡಿರದು ||
ಸುಕೃತವೆನಿಸುವುದವಳ ನೀಂ ವಶಕೆ ಕೊಳುವ ನಯ |
ವಿಕೃತಿಗೆಡೆಯಾಗದಿರೊ – ಮಂಕುತಿಮ್ಮ || 148 ||

ಪದ-ಅರ್ಥ: ಪೊರಗಿರುವ=ಹೊರಗಿರುವ, ಸ್ಪಕೃತಿಯೆಂದವನೆನುವುದವಳಿರದೊಡಿರದು= ಸ್ಪಕೃತಿ(ತನ್ನ ಕಾರ್ಯ) +ಎಂದು+ಅವನು+ಎನುವುದು+ಅವಳು+ಇರದೊಡೆ+ಇರದು, ಸುಕೃತವೆನಿಸುವುದವಳ=ಸುಕೃತ(ಒಳ್ಳೆಯ ಕೆಲಸ)+ಎನಿಸುವುದು+ಅವಳ, ವಿಕೃತಿಗೆಡೆಯಾಗದಿರೊ=ವಿಕೃತಿಗೆ(ವಿಕಾರಕ್ಕೆ)+ಎಡೆಯಾಗದಿರೊ.

ವಾಚ್ಯಾರ್ಥ: ಸೃಷ್ಟಿಯಲ್ಲಿ ಪ್ರಕೃತಿಯಿಂದ ಹೊರಗಿರುವ ಮನುಷ್ಯನಾರು? ಇದು ತಾನೇ ಮಾಡಿದ ಕಾರ್ಯ ಎಂದು ಅವನು ಎನ್ನುವುದು ಪ್ರಕೃತಿಯನ್ನು ಹೊರತುಪಡಿಸಿ ಇರುವುದು ಸಾಧ್ಯವಿಲ್ಲ. ಪ್ರಕೃತಿಯೊಂದಿಗೆ ಯೋಜಿಸಿ, ನಯದಿಂದ ಅದನ್ನು ವಶಪಡಿಸಿಕೊಂಡರೆ ಅದೇ ಶ್ರೇಷ್ಠ ಕಾರ್ಯ - ಸುಕೃತಿ. ಆದ್ದರಿಂದ ನಾನೇ ಮಾಡಿದ್ದು, ನನ್ನದೇ ಸ್ವಂತ ಕೃತಿ ಎಂಬ ವಿಕಾರಕ್ಕೆ ಒಳಗಾಗುವುದು ಬೇಡ.

ವಿವರಣೆ: ನಾವೆಲ್ಲ ಪ್ರಕೃತಿಯ ಒಂದಂಶ. ಪ್ರಕೃತಿಯ ಸೃಷ್ಟಿ ನಾವು. ಆದ್ದರಿಂದ ಎಂದೆಂದಿಗೂ ನಾವು ಪ್ರಕೃತಿಯ ಒಳಗೇ, ಅದರ ನಿಯಮಗಳಿಗೆ ಬದ್ಧರಾಗಿಯೇ ಬದುಕು ಸಾಗಿಸುವವರು. ಆದರೂ ಮನುಷ್ಯನಿಗೆ ಆಗಾಗ ಅಹಂಕಾರ ಬರುವುದುಂಟು. ಇದನ್ನು ನಾನೇ ಮಾಡಿದ್ದು, ಸ್ವಂತ ಶಕ್ತಿಯಿಂದ ಯಾರ ಸಹಾಯವಿಲ್ಲದೇ ನಿರ್ಮಿಸಿದ್ದು, ಕಂಡುಹಿಡಿದಿದ್ದು ಎಂಬ ಭ್ರಮೆ ಬರುತ್ತದೆ. ಹೀಗೆ ನನ್ನದು, ನಾನೇ ಮಾಡಿದ್ದು ಎನ್ನುವುದು ಯಾವುದಾದರೂ ಪ್ರಕೃತಿಯನ್ನು ಬಿಟ್ಟು ಹೊರಗಿದೆಯೇ? ಯಾವುದೇ ಹೊಸಸೃಷ್ಟಿಯಾಗಲಿ ಅದು ಪ್ರಕೃತಿಯ ಅಂಶಗಳನ್ನು ಬಳಿಸಿಯೇ ಆದದ್ದಲ್ಲವೇ? ಸೃಷ್ಟಿಯಲ್ಲಿಲ್ಲದ ವಸ್ತುಗಳನ್ನು ನಿರ್ಮಿಸುವುದು ಅಸಾಧ್ಯ. ನಾವು ಏನು ಮಾಡಿದರೂ, ಸೃಷ್ಟಿ ನಮಗೆ ಕೊಡಮಾಡಿರುವ ಅಪಾರ ಸಂಗ್ರಹದಿಂದ ಕೊಂಚವನ್ನು ಪಡೆದು, ಮಾರ್ಪಾಡು ಮಾಡಿಕೊಂಡದ್ದು. ಅದು ಸ್ವಂತ ನಮ್ಮದೇ ಹೇಗೆ ಆದದ್ದು? ಮನುಷ್ಯ ಸೃಷ್ಟಿ ಮಾಡಿದ್ದು ಪ್ರಕೃತಿಯ ನಿಯಮಗಳಿಗೆ ಅನುಸಾರವಾಗಿ ಆಗಿಲ್ಲದಿದ್ದರೆ ಆ ವಸ್ತು ಉಳಿಯಲಾರದು.

ಹಾಗಾದರೆ ನಮಗೆ ಸ್ವಂತ ಶಕ್ತಿಯಿಂದ ಸಾಧನೆ ಮಾಡುವುದು ಸಾಧ್ಯವಿಲ್ಲವೇ? ನಮ್ಮ ಪ್ರಯತ್ನಕ್ಕೆ ಬೆಲೆಯೇ ಇಲ್ಲವೇ? ಇದೆ. ಅದು ಒಳ್ಳೆಯ, ಶ್ರೇಷ್ಠ ಕೆಲಸವಾಗುವುದು ನಾವು ಸೃಷ್ಟಿಯನ್ನು ನಯವಾಗಿ ಒಲಿಸಿ, ಬಳಸಿಕೊಂಡಾಗ. ಗಾಳಿ ಸೃಷ್ಟಿಯ ಒಂದಂಶ. ಮನುಷ್ಯ ಅದನ್ನು ನಯವಾಗಿ ಬಳಸಿಕೊಂಡಾಗ ಗಾಳಿಯಂತ್ರ ನಿರ್ಮಾಣವಾಗಿ ಶಕ್ತಿಯನ್ನು ನೀಡುತ್ತದೆ. ಪ್ರಕೃತಿಯ ವರದಾನವಾದ ಸೂರ್ಯನ ಬೆಳಕು, ಮನುಷ್ಯ ಪ್ರಯತ್ನದಿಂದ ಸೌರಶಕ್ತಿಯಾದೀತು. ಅಣುಗಳಲ್ಲಿ ಅವಿತಿದ್ದ ಶಕ್ತಿಯನ್ನು ಜಾಗರೂಕತೆಯಿಂದ ಹೊರತಂದರೆ ಪ್ರಪಂಚಕ್ಕೆ ಅನುಕೂಲವಾದ ಅಪಾರ ಶಕ್ತಿ ದೊರೆಯುತ್ತದೆ. ಪ್ರಕೃತಿಯ ಕೊಡುಗೆಯನ್ನು ವಿನೀತಭಾವದಿಂದ ಸ್ವೀಕರಿಸಿ, ಬಳಸಿ ಮನುಷ್ಯನ ಬೆಳವಣಿಗೆಗೆ ಉಪಯೋಗಿಸುವುದು ಒಳ್ಳೆಯ ಕೆಲಸ, ಅದೇ ಸುಕೃತಿ,

ಆದರೆ ಅದೇ ಪ್ರಕೃತಿಯ ವಿರುದ್ಧವಾಗಿ, ಅದರ ನಿಯಮಗಳನ್ನು ಮೀರಿ ಮಾಡುವ ಕೆಲಸ, ನಾಶದ ಕೆಲಸ, ಅದೇ ವಿಕೃತಿ. ಪ್ರಕೃತಿ ಉದಾರವಾಗಿ ನೀಡಿರುವ ಸಸ್ಯಸಂಪತ್ತನ್ನು ವಿವೇಚನೆಯಿಲ್ಲದೆ ತೊಡೆದು ಹಾಕುವ, ನೀರನ್ನು, ಗಾಳಿಯನ್ನು ಕಲುಷಿತಗೊಳಿಸುವ, ಕಲ್ಲಿದ್ದಲು, ಎಣ್ಣೆಯಂಥ ನೈಸರ್ಗಿಕ ಪರಿಕರಗಳನ್ನು ಬೇಜವಾಬ್ದಾರಿಯಿಂದ ಹಾಳುಮಾಡುವುದೇ ವಿಕೃತಿ.

ಪ್ರಕೃತಿ ನೀಡಿರುವ ವರದಾನವನ್ನು ನಯದಿಂದ, ಅದರ ನಿಯಮಗಳಿಗೆ ಬದ್ಧರಾಗಿ ಬಳಸುವುದು ಸುಕೃತಿ, ಹಾಳುಮಾಡುವುದು ವಿಕೃತಿ. ಇಂಥ ವಿಕೃತಿಗೆ ಮನಸ್ಸನ್ನು ಕೊಡಬೇಡಿ ಎನ್ನುತ್ತದೆ ಕಗ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT