ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸೆಯನ್ನು ಗೆಲ್ಲದ ಚಕ್ರವರ್ತಿ

Last Updated 30 ಜೂನ್ 2019, 20:00 IST
ಅಕ್ಷರ ಗಾತ್ರ

ಹಿಂದೆ ಪ್ರಥಮ ಕಲ್ಪದಲ್ಲಿ ಮಹಾಸಮ್ಮತ ಎಂಬ ರಾಜನಿದ್ದ. ಅವನ ವಂಶದಲ್ಲೇ ಮುಂದೆ ಮಂಧಾತು ಎಂಬ ಚಕ್ರವರ್ತಿ ರಾಜ್ಯವನ್ನು ಆಳಿದ. ಆತ ಅಸಾಮಾನ್ಯ ಸಾಧನೆ ಮಾಡಿದವನು. ಅವನು ಸಪ್ತರತ್ನ ಮತ್ತು ಚತುರ್ ಬುದ್ಧಿಗಳೆಂಬ ಶಕ್ತಿಗಳನ್ನು ವಶಪಡಿಸಿಕೊಂಡಿದ್ದ. ತನ್ನ ಎಡಗೈಯನ್ನು ಮುಷ್ಟಿಮಾಡಿ ಬಲಗೈಯಿಂದ ಚಪ್ಪಾಳೆ ತಟ್ಟಿದರೆ ಆಕಾಶದಿಂದ ಅವನು ಸಾಕೆನ್ನುವವರೆಗೆ ರತ್ನಗಳ ಮಳೆ ಸುರಿಯುತ್ತಿತ್ತು. ಅವನ ಆಯಸ್ಸು ಮಿತಿ ಇಲ್ಲದ್ದಾಗಿತ್ತು. ಆತ ಎಂಭತ್ನಾಲ್ಕು ಸಾವಿರ ವರ್ಷ ಬಾಲಕನಾಗಿ ಕ್ರೀಡೆಯಾಡಿದ. ಎಂಭತ್ನಾಲ್ಕು ಸಾವಿರ ವರ್ಷ ಚಕ್ರವರ್ತಿಯಾಗಿ ರಾಜ್ಯವಾಳಿದ.

ಆದರೂ ಆತನಿಗೆ ತೃಪ್ತಿಯಾಗಲಿಲ್ಲ. ತನ್ನ ಅಮಾತ್ಯರಿಗೆ ಕೇಳಿದ, ‘ನನಗೆ ಈ ಪುಟ್ಟ ದೇಶ ಸಾಕಾಗಿದೆ. ಇದಕ್ಕಿಂತ ದೊಡ್ಡ ಲೋಕ ಯಾವುದಾದರೂ ಉಂಟೇ?’ ಅವರು ವಿನೀತರಾಗಿ ಹೇಳಿದರು, ‘ಸ್ವಾಮಿ, ದೇವಲೋಕ, ಇದಕ್ಕಿಂತ ದೊಡ್ಡದಾದದ್ದು’. ತಕ್ಷಣ ಆತ ತನ್ನ ಪರಿವಾರದವರೊಡನೆ ದೇವಲೋಕಕ್ಕೆ ಹೋದ. ಅದನ್ನು ನಾಲ್ಕು ಜನ ದೇವತೆಗಳು ಆಳುತ್ತಿದ್ದರು. ಈತ ಬರುತ್ತಿದ್ದಂತೆ ಅವರೇ ಮೇಲೆದ್ದು ಇವನನ್ನು ಸ್ವಾಗತಿಸಿ ದೇವಲೋಕವನ್ನು ಅವನಿಗೆ ಒಪ್ಪಿಸಿಬಿಟ್ಟರು. ಅಲ್ಲಿಯೂ ಆತ ಅನೇಕ ಸಾವಿರ ವರ್ಷಗಳ ಕಾಲ ರಾಜ್ಯ ನಡೆಸಿ, ಭೋಗಿಸಿದ. ನಂತರ ಅವನಿಗೆ ಅದೂ ತೃಪ್ತಿಯನ್ನು ಕೊಡಲಿಲ್ಲ. ಮತ್ತೆ ಅಲ್ಲಿಯ ಮಂತ್ರಿಗಳನ್ನು ಕೇಳಿದ, ‘ಇದಕ್ಕಿಂತ ದೊಡ್ಡದಾದ, ಶ್ರೀಮಂತವಾದ ಲೋಕ ಯಾವುದಾದರೂ ಇದೆಯೇ?’ ಅವರು ಹೇಳಿದರು, ‘ಪ್ರಭು, ಈ ದೇವಲೋಕಗಳ ಮೇಲೆ ಮೂವತ್ತುಮೂರು ದೇವಲೋಕಗಳ ಸಮೂಹವಿದೆ.

ಅದು ಬಹಳ ದೊಡ್ಡದು, ಪ್ರಭಾವಶಾಲಿಯಾದದ್ದು ಮತ್ತು ಇಂದ್ರನೇ ಅದನ್ನು ಆಳುವುದು’. ಮಂಧಾತು ಪರಿವಾರದೊಂದಿಗೆ ಅಲ್ಲಿಗೇ ಹೊರಟ. ಇವನು ಬರುವುದನ್ನು ತಿಳಿದಿದ್ದ ಇಂದ್ರ ತಾನೇ ದೇವಲೋಕದ ಬಾಗಿಲಿನಲ್ಲಿ ಹೂಮಾಲೆ ಹಿಡಿದು ನಿಂತಿದ್ದ. ಇವನನ್ನು ಆದರಿಸಿ ಕರೆದೊಯ್ದು, ತನ್ನ ಲೋಕದ ಅರ್ಧಕ್ಕೆ ಅವನನ್ನೇ ಚಕ್ರವರ್ತಿಯನ್ನಾಗಿ ಮಾಡಿದ. ಹೀಗೆ ಆ ಉನ್ನತವಾದ ದೇವಲೋಕಕ್ಕೆ ಇಬ್ಬರು ಅಧಿಪತಿಗಳು. ಅರ್ಧಕ್ಕೆ ಇಂದ್ರ, ಇನ್ನರ್ಧಕ್ಕೆ ಮಂಧಾತು. ಅರ್ಧಲೋಕದ ಇಂದ್ರ ಮೂರು ಕೋಟಿ ಅರವತ್ತು ಸಾವಿರ ವರ್ಷ ಬದುಕಿ, ತನ್ನ ಆಯುಷ್ಯವನ್ನು ಮುಗಿಸಿ ಮರಣ ಹೊಂದಿದ. ಮತ್ತೊಬ್ಬ ಇಂದ್ರ ಅಷ್ಟೇ ವರ್ಷ ಜೀವಿಸಿ ಲೋಕವನ್ನಾಳಿದ. ನಂತರ ಮೃತ್ಯುವನ್ನು ಹೊಂದಿದ. ಇದೇ ರೀತಿ ಮೂವತ್ತಾರು ಇಂದ್ರರು ತೀರಿಹೋದರು. ಆದರೆ ಮನುಷ್ಯನಾದ ಮಂಧಾತು. ಇನ್ನು ಬದುಕಿಯೇ ಇದ್ದ. ಇದು ಎಲ್ಲರಿಗೂ ಪವಾಡ ಸದೃಶವಾಗಿತ್ತು. ಇಷ್ಟೆಲ್ಲ ಭೋಗಭಾಗ್ಯಗಳಿದ್ದರೂ ಮಂಧಾತುವಿಗೆ ತೃಪ್ತಿಯಾಗಿರಲಿಲ್ಲ.

ದೇವಲೋಕದ ಉಳಿದ ಅರ್ಧವನ್ನು ಪಡೆಯಬೇಕೆಂಬ ಆಸೆ ಬಲವಾಯಿತು. ಇಂದ್ರನನ್ನು ಕೊಂದು ಅವನ ಭಾಗವನ್ನು ತಾನೇ ಪಡೆಯಬೇಕೆಂದು ಯೋಚಿಸಿದ. ಆದರೆ ದೇವಲೋಕದ ನಿಯಮಗಳ ಪ್ರಕಾರ ಮನುಷ್ಯ ಇಂದ್ರನನ್ನು ಕೊಲ್ಲುವುದು ಸಾಧ್ಯವಿಲ್ಲ. ಈ ಯೋಚನೆ ಅವನ ಮನದಲ್ಲಿ ಬಂದೊಡನೆ ಅವನನ್ನು ವೃದ್ಧಾಪ್ಯ ಅಡರಿಕೊಂಡಿತು. ಅವನಿಗೆ ತನ್ನ ಕಿರುಬೆರಳನ್ನು ಅಲುಗಾಡಿಸುವುದು ಅಸಾಧ್ಯವಾಯಿತು. ಮನುಷ್ಯ ದೇವಲೋಕದಲ್ಲಿ ಸಾಯುವುದು ಸಾಧ್ಯವಿಲ್ಲ. ಆದ್ದರಿಂದ ಅವನನ್ನು ಅಲ್ಲಿಂದ ತಳ್ಳಿದಾಗ ಆತ ತನ್ನ ಮೊದಲಿನ ಅರಮನೆಯ ಮುಂದಿನ ಉದ್ಯಾನವನದಲ್ಲಿ ಬಂದು ಬಿದ್ದ. ಅವನ ಪರಿವಾರದವರೆಲ್ಲ ಬಂದು ಸೇರಿದಾಗ ಆತ ಹೇಳಿದ, ‘ಇದು ನನ್ನ ಕೊನೆಯ ಸಂದೇಶ. ಇದನ್ನು ದಯವಿಟ್ಟು ಎಲ್ಲರಿಗೂ ಹೇಳಿ. ನನ್ನಷ್ಟು ರಾಜ್ಯವನ್ನು, ಸಂಪತ್ತನ್ನು, ಸುಖವನ್ನು ಭೋಗಿಸಿದವರು ಯಾರೂ ಇಲ್ಲ. ಎಲ್ಲವನ್ನೂ ಗೆದ್ದ ನಾನು ನನ್ನ ಮನಸ್ಸಿನ ಅಪೇಕ್ಷೆಗಳಿಗೆ, ಕಾಮಕ್ಕೆ ಸೋತು ಬಲಿಯಾಗಿ ಹೋದೆ. ಜನರಿಗೆ ಈ ಮಾತನ್ನು ನೆನಪಿಡಲು ಹೇಳಿ’.

ಆದರೆ ಇದನ್ನು ನೆನಪಿನಲ್ಲಿಟ್ಟು ನಡೆಯುವವರು ಬಹಳ ಕೆಲವೇ ಕೆಲವು ಮಂದಿ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT