ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವಿನ ದೂತ

Last Updated 4 ಜುಲೈ 2019, 19:31 IST
ಅಕ್ಷರ ಗಾತ್ರ

ವಾರಣಾಸಿಯಲ್ಲಿ ಬ್ರಹ್ಮದತ್ತ ರಾಜ್ಯವಾಳುವಾಗ ಬೋಧಿಸತ್ವ ಅವನ ಮಗನಾಗಿ ಹುಟ್ಟಿ ಬೆಳೆದು, ತಕ್ಷಶಿಲೆಯಲ್ಲಿ ಜ್ಞಾನಸಂಪಾದನೆ ಮಾಡಿ ಮರಳಿ ಬಂದು ತನ್ನ ತಂದೆ ಮರಣಹೊಂದಿದ ಮೇಲೆ ಅವನೇ ರಾಜನಾದ.

ಈ ರಾಜನಿಗೆ ಊಟದ ವಿಷಯದಲ್ಲಿ ಬಹಳ ನಸನಸೆ. ಊಟಕ್ಕೆಸಂಬಂಧಿಸಿದ್ದೆಲ್ಲ ತುಂಬ ಶುದ್ಧವಾಗಿರಬೇಕು, ಬಡಿಸುವವರು ಶುದ್ಧವಾಗಿರಬೇಕು, ವಾತಾವರಣ ಶುದ್ಧವಾಗಿರಬೇಕು ಎಂದು ಬಯಸುತ್ತಿದ್ದ. ಆದ್ದರಿಂದ ಜನರೆಲ್ಲ ಅವನನ್ನು ಭೋಜನ ಸುದ್ದಿಕ ರಾಜ ಎಂದು ಕರೆಯುತ್ತಿದ್ದರು.

ಅವನು ಊಟ ಮಾಡುವಾಗ ಲಕ್ಷ ವರಹ ಬಾಳುವ ಬಂಗಾರದ ತಟ್ಟೆಯನ್ನು ಬಳಸುತ್ತಿದ್ದ. ಊಟ ಮಾಡುವ ವಿಷಯ ಅಷ್ಟೊಂದು
ಜನಪ್ರಿಯವಾದದ್ದನ್ನು ತಿಳಿದು ಉತ್ಸಾಹಿತನಾಗಿ ಇನ್ನೊಂದು ಪ್ರಯೋಗವನ್ನು ಪ್ರಾರಂಭಿಸಿದ. ಅರಮನೆಯಲ್ಲಿ ಊಟ ಮಾಡುವುದನ್ನು ಬಿಟ್ಟ. ತಾನು ಸಂಭ್ರಮದಿಂದ, ಅತ್ಯಂತ ಶ್ರೀಮಂತಿಕೆಯಿಂದ ಊಟ ಮಾಡುವ ಪರಿಯನ್ನು ಕಾಣುವ ಸೌಭಾಗ್ಯ ತನ್ನ ನಾಗರಿಕರಿಗೆ ದೊರಕಲಿ ಎಂದುಕೊಂಡು ರಾಜದ್ವಾರದಲ್ಲೊಂದು ಮಂಟಪವನ್ನು ಕಟ್ಟಿಸಿದ. ಅದನ್ನು ರತ್ನ, ಮಾಣಿಕ್ಯಗಳಿಂದ ಅಲಂಕರಿಸಿದ. ಆ ಮಂಟಪದಲ್ಲಿ ಬೆಳ್ಳಿಯ ಮೇಜು, ಕುರ್ಚಿಗಳನ್ನು ಹಾಕಿಸಿಕೊಂಡ. ಅಲ್ಲಿ ತನ್ನ ಹೊನ್ನಿನ ತಟ್ಟೆಯನ್ನಿಟ್ಟುಕೊಂಡು, ಹೊನ್ನಿನ ಬಟ್ಟಲುಗಳಲ್ಲಿ ಅನೇಕಾನೇಕ ಖಾದ್ಯಗಳನ್ನು ಅತ್ಯಂತ ಸುಂದರಿಯರಾದ ಕನ್ಯೆಯರಿಂದ ಬಡಿಸಿಕೊಂಡು ಊಟಮಾಡುತ್ತಿದ್ದ. ನಗರದ ನಾಗರಿಕರೆಲ್ಲ ಅದನ್ನು ಆಶ್ಚರ್ಯದಿಂದ, ಕೌತುಕದಿಂದ ನೋಡುತ್ತಿದ್ದರು.

ಒಂದು ದಿನ ಹೀಗೆ ಊಟದ ಕಾರ್ಯಕ್ರಮ ನಡೆದಾಗ ಒಬ್ಬ ಬಡ ಯುವಕ ಅದನ್ನು ನೋಡಲು ಬಂದ. ಮೊದಲೇ ಆತ ಹಸಿವೆಯಿಂದ ಕಂಗಾಲಾಗಿದ್ದಾನೆ. ಅಂಥ ಪರಿಸ್ಥಿತಿಯಲ್ಲಿ ಹೀಗೆ ಸಂಭ್ರಮದಲ್ಲಿ, ಎಲ್ಲರಿಗೆ ಕಾಣುವಂತೆ ಅತ್ಯಂತ ಸಮೀಚೀನವಾದ ಭೋಜನ ಮಾಡುವ ರಾಜನನ್ನು ಕಂಡು ಗಾಯದ ಮೇಲೆ ಉಪ್ಪನ್ನು ಸುರಿದಂತಾಯಿತು.

ಆತನಿಗೆ ತಡೆದುಕೊಳ್ಳಲಾಗಲಿಲ್ಲ. ಜನರನ್ನು ತಳ್ಳಿಕೊಂಡು ಮುಂದೆ ನುಗ್ಗಿದ. ರಾಜನ ಸುತ್ತಮುತ್ತಲಿದ್ದ ಜನಕ್ಕೆ ಏನಾಗುತ್ತಿದೆ ಎಂಬುದು ತಿಳಿಯುವ ಮೊದಲೇ ಆತ ರಾಜನ ಮುಂದೆ ನಿಂತು ಸರಸರನೇ ತಟ್ಟೆಯಲ್ಲಿದ್ದ ಆಹಾರವನ್ನು ತೆಗೆದುಕೊಂಡು ಗಬಗಬನೇ ತಿನ್ನತೊಡಗಿದ. ರಾಜ ಆಶ್ಚರ್ಯಚಕಿತನಾದ. ಅವನ ಅಂಗರಕ್ಷಕರು ಖಡ್ಗವನ್ನು ಹಿರಿದು ತರುಣನನ್ನು ಕೊಲ್ಲಲು ನುಗ್ಗಿ ಬಂದರು.

ಆಗ ಆ ತರುಣ ನಾನು ‘ದೂತ, ದೂತ’ ಎಂದು ಕೂಗಿಕೊಂಡ. ಆಗ ಯಾರಾದರೂ ‘ದೂತ’ ಎಂದರೆ ಅವನು ರಾಜನನ್ನು ಬೆಟ್ಟಿಯಾಗಿ ಅವನಿಂದಲೇ ನ್ಯಾಯ ಪಡೆಯಬಹುದಾಗಿತ್ತು. ರಾಜ ತನ್ನ ಅಂಗರಕ್ಷಕರಿಗೆ ಸುಮ್ಮನಿರುವಂತೆ ಸಂಜ್ಞೆ ಮಾಡಿ ತರುಣನಿಗೆ ಊಟ ಮಾಡಲು ಅವಕಾಶ ಮಾಡಿಕೊಟ್ಟ. ನೀನು ಯಾರ ದೂತ ಎಂದು ಕೇಳಿದಾಗ ತರುಣ, ‘ಪ್ರಭೂ, ನಾನು ಹಸಿವಿನ ದೂತ. ಅದೇ ನನ್ನನ್ನು ಹೀಗೆ ನುಗ್ಗುವಂತೆ ಕಳುಹಿಸಿದ್ದು’ ಎಂದ. ರಾಜನಿಗೆ ಜ್ಞಾನೋದಯವಾಯಿತು.

ಬಡವರ, ಹಸಿದ ಜನರ ಮುಂದೆ ರಾಜಭೋಗದ ಊಟವನ್ನು ಮಾಡುತ್ತ ಅವರಿಗೆ ಅಪಮಾನ ಮಾಡುತ್ತಿದ್ದೆ ಎನ್ನಿಸಿ ಮುಂದೆ ಹಾಗೆ ಮಾಡುವುದನ್ನು ನಿಲ್ಲಿಸಿ ಪ್ರಜೆಗಳ ಕ್ಷಮೆ ಕೇಳಿದ.

ನಮ್ಮಿಂದ ಸಹಾಯ ಮಾಡಲಾಗದಿದ್ದರೂ ಮತ್ತೊಬ್ಬರ ಅಸಹಾಯಕತೆಯ, ಅಶಕ್ತತೆಯ, ದೀನತೆಯ ಪರಿಹಾಸ್ಯವನ್ನಾದರೂ ಮಾಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT