ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತನಾಡುವ ಕಲೆ

Last Updated 5 ಜುಲೈ 2019, 18:30 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಣಾಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ಶ್ರೀಮಂತ ಶ್ರೇಷ್ಠಿಯ ಮಗನಾಗಿ ಜನಿಸಿದ್ದ. ರಾಜನಿಗೆ ಬೇಕಾಗಿ, ಹತ್ತಿರದವನಾಗಿ ಬೇಕಾದ ಸಲಹೆಗಳನ್ನು ಕೊಟ್ಟು ಅವನ ಮೆಚ್ಚುಗೆ ಗಳಿಸಿದ್ದ. ಒಮ್ಮೆ ಮಾತನಾಡುವಾಗ ರಾಜ ಕೇಳಿದ, ‘ನಾನು ಅಧಿಕಾರದಲ್ಲಿ ಇರುವುದರಿಂದ ಜನರ ಜೊತೆಗೆ ಹೇಗೆ ಮಾತನಾಡುವುದು ಎಂಬುದು ತಿಳಿಯುವುದಿಲ್ಲ. ಗಟ್ಟಿಯಾಗಿ ಹೇಳಿದರೆ, ರಾಜ ಕ್ರೂರಿ ಎನ್ನುತ್ತಾರೆ, ಮೆದುವಾಗಿ ಹೇಳಿದರೆ, ರಾಜ ಅಶಕ್ತ ಎನ್ನುತ್ತಾರೆ. ಹೊಗಳಿ ಹೇಳಿದರೆ ಸಲುಗೆ ತೆಗೆದುಕೊಳ್ಳುತ್ತಾರೆ. ಸತ್ಯವನ್ನು ಮುಖಕ್ಕೆ ಹೊಡೆದಂತೆ ನೇರವಾಗಿ ಹೇಳಿದರೆ ದುರಹಂಕಾರಿ ಎನ್ನುತ್ತಾರೆ. ನಿಜವಾಗಿಯೂ ಮಾತನಾಡುವ ಬಗೆ ಹೇಗೆ?’ ಬೋಧಿಸತ್ವ ಮಾತನಾಡುವ ಕಲೆಯನ್ನು ವಿವರಿಸುತ್ತ ಒಂದು ಕಥೆ ಹೇಳಿದ.

ಒಂದು ರಾಜ್ಯದಲ್ಲಿ ವಾರ್ಷಿಕ ಹಬ್ಬವನ್ನು ಆಚರಿಸುವುದೆಂದು ತೀರ್ಮಾನವಾಯಿತು. ಇಡೀ ಊರೇ ಸಂಭ್ರಮದಲ್ಲಿ ಮುಳುಗಿ ಸಿದ್ಧವಾಗತೊಡಗಿತು. ಊರಿಗೆ ಊರೇ ಥಳಥಳ ಹೊಳೆಯತೊಡಗಿತು. ಜನ ತಮ್ಮ ಮನೆಯ, ಬೀದಿಯ ಅಲಂಕಾರಗಳನ್ನು ಮಾಡತೊಡಗಿದರು, ಕಲಾವಿದರು, ನಾಟ್ಯ ವಿಶಾರದರು, ಕವಿಗಳು, ನಾಟಕಕಾರರು ಎಲ್ಲರೂ ತಮ್ಮ ತಮ್ಮ ಕಲೆಗಳ ಪ್ರದರ್ಶನಕ್ಕೆ ಸಿದ್ಧವಾಗತೊಡಗಿದರು. ನಗರ ಮಧ್ಯದಲ್ಲಿ ಮೆರವಣಿಗೆಯನ್ನು ಯೋಜಿಸಿದರು. ಅಲ್ಲಿ ಜನ ಅಲಂಕಾರ ಮಾಡಿಕೊಂಡು ಮೆರವಣಿಗೆಯಲ್ಲಿ ಬರತಕ್ಕದ್ದು, ತರುಣಿಯರು ಅಲ್ಲಿ ನೃತ್ಯ ಮಾಡುತ್ತಾರೆ ಎಂದು ಘೋಷಿಸಿದರು. ಇದು ತರುಣರಲ್ಲಿ ವಿಶೇಷ ಆಸಕ್ತಿಯನ್ನು ಹುಟ್ಟಿಸಿತು.

ಮೂರು ಜನ ತರುಣರು ಕಮಲದ ಮಾಲೆಗಳನ್ನು ಧರಿಸಿ ಮೆರವಣಿಗೆಯಲ್ಲಿ ಹೋಗಲು ತೀರ್ಮಾನಿಸಿದರು. ಅತ್ಯಂತ ಸುಂದರವಾದ ಕಮಲಗಳು ದೊರಕುವುದೆಲ್ಲಿ? ಊರಹೊರಗೆ ಇದ್ದ ವಿಶಾಲವಾದ ಕೆರೆಯಲ್ಲಿ ಬಹಳ ಸುಂದರವಾದ ಕಮಲದ ಹೂಗಳು ಇವೆ. ಆದರೆ ಅವುಗಳನ್ನು ಕಾಯಲು ಭಾರೀ ಬಲಿಷ್ಠನಾದ ಕಾವಲುಗಾರನಿದ್ದಾನೆ. ಅವನಿಗೆ ಯಾರ ಮುಲಾಜೂ ಇಲ್ಲ. ಅವನದೊಂದು ಕೊರತೆಯೆಂದರೆ ಯಾವುದೋ ಯುದ್ಧದಲ್ಲಿ ಅವನ ಮೂಗು ಕತ್ತರಿಸಿ ಹೋಗಿದೆ. ಮೂವರೂ ತರುಣರು ಅಲ್ಲಿಗೆ ಹೋದರು. ಹೇಗಾದರೂ ಮಾಡಿ ಕಾವಲುಗಾರನ ಮನಸ್ಸನ್ನು ಗೆದ್ದು ಕಮಲದ ಹೂಗಳನ್ನು ತಂದೇ ತರಬೇಕೆಂದು ಪ್ರತಿಜ್ಞೆ ಮಾಡಿದರು.

ಒಬ್ಬ ತರುಣ ಕಾವಲುಗಾರನ ಬಳಿ ಹೋಗಿ ಹೇಳಿದ, ‘ಅಯ್ಯಾ, ಕತ್ತರಿಸಿದ ಕೂದಲು, ಮೀಸೆ ಮತ್ತೆ ಬೆಳೆಯುತ್ತವೆ. ಹಾಗೆಯೇ ನಿನ್ನ ಕತ್ತರಿಸಿದ ಮೂಗೂ ಖಂಡಿತವಾಗಿಯೂ ಬೆಳೆಯುವಂತೆ ಪ್ರಾರ್ಥನೆ ಮಾಡುತ್ತೇನೆ. ದಯವಿಟ್ಟು ಕಮಲದ ಹೂಗಳನ್ನು ಕೊಡು’ ಕಾವಲುಗಾರ ಸಿಟ್ಟಿನಿಂದ ಹೊಡೆಯುವಂತೆಯೇ ಬಂದು ಅವನನ್ನು ಓಡಿಸಿ ಬಿಟ್ಟ. ಎರಡನೆಯವನು ಕಾವಲುಗಾರನ ಬಳಿ ಹೋಗಿ, ‘ಅಯ್ಯಾ, ಶರತ್ಕಾಲದಲ್ಲಿ ಹೊಲದಲ್ಲಿ ಬಿತ್ತಿದ ಬೀಜಗಳು ಹೇಗೆ ಮೊಳೆಯುತ್ತವೋ ಹಾಗೆಯೇ ನಿನ್ನ ಮೂಗೂ ಮೊಳೆಯಲಿ ಎಂದು ಪ್ರಾರ್ಥಿಸುತ್ತೇನೆ, ದಯವಿಟ್ಟು ಕಮಲಗಳನ್ನು ಕೊಡು’ ಕಾವಲುಗಾರ ಅವನನ್ನೂ ಬೈದು ಓಡಿಸಿಬಿಟ್ಟ. ಮೂರನೆಯ ತರುಣ ಕಾವಲುಗಾರನನ್ನು ಸಮೀಪಿಸಿ, ‘ಅಯ್ಯಾ, ಈ ನಗರದ ಹಬ್ಬದ ಮೆರವಣಿಗೆಯಲ್ಲಿ ಕಮಲದ ಹಾರವನ್ನು ಹಾಕಿಕೊಂಡು ಭಾಗವಹಿಸಬೇಕೆಂದಿದ್ದೇನೆ. ಅದು ಮೆರವಣಿಗೆಗೆ ಹೆಚ್ಚಿನ ಸಡಗರವನ್ನು ತರುತ್ತದೆ. ದಯವಿಟ್ಟು ನೀನು ಸಹಕರಿಸಿ ಹೂಗಳನ್ನು ಕೊಡುತ್ತೀಯಾ?’ ಎಂದು ಕೇಳಿದ. ಅದನ್ನು ಮೆಚ್ಚಿ ಕಾವಲುಗಾರ ರಾಶಿ ರಾಶಿ ಹೂಗಳನ್ನು ಕೊಟ್ಟುಬಿಟ್ಟ.

ಬೋಧಿಸತ್ವ ಹೇಳಿದ, ‘ಮಾತು ಅತಿ ಒರಟೂ ಆಗಿರಬಾರದು. ಅತಿರಂಜಕವೂ, ಮನ್ನಣೆಯನ್ನು ಪಡೆಯಲೂ ಆಡಿದ ಮಾತು ನಂಬಿಕೆಗೆ ಅರ್ಹವಾಗುವುದಿಲ್ಲ. ಇದ್ದುದನ್ನು ನೇರವಾಗಿ, ಆದರೆ ಮೃದುವಾಗಿ, ಮನನೋಯದಂತೆ ಹೇಳುವುದೇ ಸರಿಯಾದ ವಿಧಾನ’.

ಇದೇ ಮಾತನಾಡುವ ಕಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT