ಭಾನುವಾರ, ಆಗಸ್ಟ್ 18, 2019
25 °C

ನಾಯಕನ ಲಕ್ಷಣ

Published:
Updated:

ಹಿಂದಿನ ಕಾಲದಲ್ಲಿ ಕಾಗೆಗಳು ಹಗಲಿನಲ್ಲಿ ಗೂಡಿನೊಳಗೆ ಅಡಗಿ ಕುಳಿತಿದ್ದ ಗೂಬೆಗಳನ್ನು ಹುಡುಕಿ, ಕಚ್ಚಿ ಕೊಂದು ಹಾಕುತ್ತಿದ್ದವು. ರಾತ್ರಿಯಾದೊಡನೆ ಗೂಬೆಗಳು ಮರಗಳನ್ನು ಸುತ್ತಿ ಸುತ್ತಿ ಮಲಗಿದ್ದ ಕಾಗೆಗಳನ್ನು ಕತ್ತರಿಸಿ ಕೊಲ್ಲುತ್ತಿದ್ದವು. ಒಮ್ಮೆ ಶಿಷ್ಯನೊಬ್ಬ ಬುದ್ಧನಿಗೆ ಕೇಳಿದ, “ಭಂತೇ, ಕಾಗೆ ಮತ್ತು ಗೂಬೆಗಳ ನಡುವೆ ದ್ವೇಷವೇಕೆ? ಇದು ಎಂದು ಪ್ರಾರಂಭವಾಯಿತು?” ಬುದ್ಧ ಹೇಳಿದ, “ಇದು ಪ್ರಥಮ ಕಲ್ಪದಿಂದಲೇ ಬಂದದ್ದು” ಹೀಗೆ ನುಡಿದು ಆ ಹಿಂದಿನ ಕಥೆಯನ್ನು ತಿಳಿಸಿದ.

ಪ್ರಥಮ ಕಲ್ಪದಲ್ಲಿದ್ದ ಮನುಷ್ಯರೆಲ್ಲ ಒಂದೆಡೆಗೆ ಸೇರಿ ಒಬ್ಬ ಅತ್ಯಂತ ಸುಂದರನಾದ, ಶೂರನಾದ ಮತ್ತು ಸಮರ್ಥನಾದ ವ್ಯಕ್ತಿಯೊಬ್ಬನನ್ನು ಆರಿಸಿ ತಮ್ಮ ರಾಜನನ್ನಾಗಿ ಮಾಡಿಕೊಂಡರು. ಇದನ್ನು ಕಂಡು ಎಲ್ಲ ನಾಲ್ಕು ಕಾಲಿನ ಪ್ರಾಣಿಗಳು ಒಂದೆಡೆಗೆ ಸೇರಿಕೊಂಡು ಪರಾಕ್ರಮಿಯಾದ ಹಾಗೂ ತುಂಬ ಗಂಭೀರವಾದ ಸಿಂಹವನ್ನು ರಾಜನನ್ನಾಗಿ ಆಯ್ಕೆ ಮಾಡಿಕೊಂಡವು. ಸಮುದ್ರದ ಮೀನುಗಳೆಲ್ಲ ಸೇರಿ ಆನಂದನೆಂಬ ಬೃಹತ್ ಮೀನನ್ನು ರಾಜನನ್ನಾಗಿ ಸ್ಥಾಪಿಸಿದವು. ಕೆಲವರ್ಷಗಳ ನಂತರ ಎಲ್ಲ ಪಕ್ಷಿಗಳು ಹಿಮಾಲಯದ ಒಂದು ದೊಡ್ಡ ಬಂಡೆಯ ಮೇಲೆ ಸಭೆ ಸೇರಿ ಚಿಂತಿಸಿದವು. ಎಲ್ಲರಿಗೂ ನಾಯಕನೊಬ್ಬ ಬೇಕೇ ಬೇಕು.

ಮನುಷ್ಯರು ರಾಜನನ್ನು ಪಡೆದರು, ಅಂತೆಯೇ ಪಕ್ಷಿಗಳು, ಮೀನುಗಳು ತಮ್ಮ ತಮ್ಮ ಪಂಗಡಗಳಿಗೆ ರಾಜರನ್ನು ಆಯ್ದುಕೊಂಡಿದ್ದಾರೆ. ನಾವೂ ಒಬ್ಬರನ್ನು ರಾಜನನ್ನಾಗಿ ಮಾಡಿಕೊಳ್ಳುವುದು ಸರಿ ಎಂಬ ತೀರ್ಮಾನಕ್ಕೆ ಬಂದರು. ಯಾವ ಪಕ್ಷಿಯನ್ನು ರಾಜನನ್ನಾಗಿ ಮಾಡುವುದು ಎಂಬ ಬಗ್ಗೆ ಜಿಜ್ಞಾಸೆ ಮೂಡಿತು. ಒಂದು ಪಕ್ಷಿಯ ಹೆಸರನ್ನು ಯಾರಾದರೂ ಹೇಳಿದರೆ ಥಟ್ಟನೆ ಮತ್ತೊಂದು ಹೆಸರು ನುಗ್ಗಿ ಬರುತ್ತಿತ್ತು. ನಾಲ್ಕಾರು ತಾಸು ಹೀಗೆಯೇ ನಡೆಯಿತು. ಈ ಹೊತ್ತಿನಲ್ಲಿ ಯಾವ ಮಾತೂ ಆಡದೆ ಗಂಭೀರವಾಗಿ ಕುಳಿತ ಗೂಬೆ ಎಲ್ಲರ ಗಮನ ಸೆಳೆಯಿತು. ತುಂಬ ತಿಳಿವಳಿಕೆಯುಳ್ಳ, ಗಂಭೀರವಾದ ಗೂಬೆಯೇ ನಮ್ಮ ನಾಯಕನಾಗಲಿ ಎಂದು ಹಲವು ಪಕ್ಷಿಗಳು ಹೇಳಿದವು. ಬಹುತೇಕ ಎಲ್ಲರಿಗೂ ಈ ಮಾತು ಒಪ್ಪಿಗೆಯಾದಂತೆ ಕಂಡಿತು. ಎಲ್ಲರ ಒಪ್ಪಿಗೆಯನ್ನು ತಿಳಿಯುವುದಕ್ಕೆ ಗಿಳಿ ಜೋರಾಗಿ ಕೂಗಿತು, “ಗೂಬೆ ನಮ್ಮ ರಾಜ. ಇದು ಎಲ್ಲರಿಗೂ ಒಪ್ಪಿಗೆಯೆ?” ಹೀಗೆ ಮೂರು ಬಾರಿ ಕೂಗುವಾಗ, ಕೊನೆಯಬಾರಿ ಕೂಗುವ ಮೊದಲು ಕಾಗೆಯೊಂದು ಮೇಲೆ ಹಾರಿ, “ನಿಲ್ಲಿ, ಗೂಬೆಯನ್ನು ರಾಜನನ್ನಾಗಿ ಮಾಡಬೇಡಿ. ಅದರ ಮುಖವನ್ನು ನೋಡಿ. ರಾಜನಾಗುತ್ತೀಯಾ ಎಂದು ಹೇಳಿದಾಗಲೂ ಅದರ ಮುಖದ ಮೇಲೆ ಒಂದು ಚೂರಾದರೂ ಸಂತೋಷ ಕಾಣುತ್ತಿದೆಯೆ? ಅದೇ ಹುಳಿ ತಿಂದು ಕಿವುಚಿದಂಥ ಮುಖ. ಅದರ ಕಣ್ಣು ನೋಡಿ, ಉಗ್ರವಾಗಿ ಮತ್ತೊಬ್ಬರನ್ನು ತಿಂದು ಹಾಕುವಂತಿದೆ. ಇಂಥ ನಾಯಕನನ್ನು ಇಟ್ಟುಕೊಂಡು ನಾವೇನು ಸಾಧಿಸಲಾಗುತ್ತದೆ?” ಎಂದು ಹೇಳಿ ಆಕಾಶದಲ್ಲಿ ಹಾರಿಹೋಯಿತು.

ಬೇರೆ ಪಕ್ಷಿಗಳಿಗೂ ಈ ಮಾತು ಸರಿ ಎನ್ನಿಸಿ ಗೂಬೆಯನ್ನು ರಾಜನನ್ನಾಗಿ ಮಾಡುವುದು ಬೇಡ ಎಂದು ತೀರ್ಮಾನಿಸಿ ಕೊನೆಗೆ ಸುವರ್ಣ ಹಂಸವನ್ನು ರಾಜನಾಗಿ ಸ್ವೀಕರಿಸಿದವು. ಗೂಬೆಗೆ ಇದು ದೊಡ್ಡ ಅಪಮಾನವಾದಂತಾಗಿ ಅದೂ ಆಕಾಶದಲ್ಲಿ ಹಾರಿ ಕಾಗೆಯನ್ನು ಬೆನ್ನಟ್ಟಿತು. ಆದರೆ ಹಗಲಿನಲ್ಲಿ ಅದನ್ನು ಹಿಡಿಯಲಾಗಲಿಲ್ಲ. ಆದ್ದರಿಂದ ರಾತ್ರಿ ಕಾಗೆಗಳು ಮಲಗಿದಾಗ ಅವುಗಳನ್ನು ಗೂಬೆಗಳು ಕೊಲ್ಲತೊಡಗಿದವು. ಪ್ರತಿಯಾಗಿ ಕಾಗೆಗಳು ಹಗಲಿನಲ್ಲಿ ದ್ವೇಷ ತೀರಿಸಿಕೊಂಡವು. ಅಂದಿನಿಂದ ಹಗೆ ಬೆಳೆದಿದೆ.

ಕಾಗೆಯ ಮಾತು ಸತ್ಯ. ರಾಜನಾದವನು ಪ್ರಸನ್ನನಾಗಿರಬೇಕು, ಶಾಂತವಾಗಿರಬೇಕು, ಧನಾತ್ಮಕವಾಗಿ, ತೂಕವಾಗಿ ಮಾತನಾಡಬೇಕು. ದ್ವೇಷದಿಂದ, ಉಗ್ರವಾಗಿ, ಒರಟಾಗಿ ಮಾತನಾಡುವವ ನಾಯಕನಾಗಲಾರ, ಆಕಸ್ಮಾತ್ತಾಗಿ ಆದರೂ ಬಹುಕಾಲ ಉಳಿಯಲಾರ.

Post Comments (+)