ಗುರುವಾರ , ಆಗಸ್ಟ್ 22, 2019
27 °C

ದೈವದ ಗುಟ್ಟು

ಗುರುರಾಜ ಕರಜಗಿ
Published:
Updated:
Prajavani

ಆವ ಬೇಳೆಯದಾವ ನೀರಿನಲಿ ಬೇಯುವುದೋ! |
ಆವ ಜೀವದ ಪಾಕವಾವ ತಾಪದಿನೋ ||
ಆ ವಿವರವನು ಕಾಣದಾಕ್ಷೇಪಣೆಯದೇನು? |
ದೈವಗುಟ್ಟದು ತಿಳಿಯೆ – ಮಂಕುತಿಮ್ಮ || 160 ||

ಪದ-ಅರ್ಥ: ಬೇಳೆಯದಾವ=ಬೇಳೆ+ಅದಾವ, ಪಾಕವಾವ=ಪಾಕ+ಯಾವ, ಕಾಣದಾಕ್ಷೇಪಣೆಯದೇನು = ಕಾಣದ + ಆಕ್ಷೇಪಣೆ +ಅದೇನು.

ವಾಚ್ಯಾರ್ಥ: ಯಾವ ಬೇಳೆ ಯಾವ ನೀರಿನಲ್ಲಿ ಬೇಯುತ್ತದೋ? ಯಾವ ಜೀವದ ರಸಪಾಕ ಯಾವ ತಾಪದಿಂದ, ಪರೀಕ್ಷೆಯಿಂದ ಆಗುತ್ತದೋ? ಆ ಎಲ್ಲ ವಿವರಗಳನ್ನು ತಿಳಿಯದೆ, ಕಾಣದೆ ಅಕ್ಷೇಪಣೆ ಮಾಡುವುದು ಸರಿಯೇ? ಅದು ದೈವದ ಗುಟ್ಟು.

ವಿವರಣೆ: ‘ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಲಿಂದೆತ್ತ ಸಂಬಂಧವಯ್ಯ” ಎಂಬ ವಚನದಂತೆ ಯಾವ ಜೀವಕ್ಕೆ ಎಲ್ಲಿಂದ ಪ್ರಚೋದನೆ ಸಿಕ್ಕೀತು ಎಂದು ಹೇಳುವುದು ಕಷ್ಟ. ಕೇರಳದ ಒಂದು ಕುಗ್ರಾಮದಲ್ಲಿ ಅತ್ಯಂತ ಬಡಕುಟುಂಬದಲ್ಲಿ ಜನಿಸಿ ಕಷ್ಟದ ಮೂಸೆಯಲ್ಲಿ ಹಾದು ಬಂದ ಜೀವವೊಂದು ಹಟದಿಂದ ದುಡಿದು ಪರೀಕ್ಷೆಯನ್ನು ಪಾಸಾಗಿ, ಅಮೆರಿಕೆಯಲ್ಲಿ ಭಾರತದ ರಾಯಭಾರಿಯಾಗಿ, ಉಪರಾಷ್ಟ್ರಪತಿಯಾಗಿ ಕೊನೆಗೆ ರಾಷ್ಟ್ರಪತಿ ನಾರಾಯಣನ್ ಆಗಿದ್ದು ಎತ್ತಿಂದೆತ್ತ ಪಯಣ? ಆ ಜೀವ ಕಷ್ಟಪಡುತ್ತಿದ್ದಾಗ, ಬದುಕಿನ ಸ್ಥಿರತೆಗೆ ತಡಬಡಿಸುತ್ತಿದ್ದಾಗ ವಿಧಿ ಅದೆಷ್ಟು ತೊಂದರೆ ನೀಡಿತು ಎಂದು ಎನ್ನಿಸುತ್ತದಲ್ಲವೇ? ಆದರೆ ಆ ದೊಡ್ಡ ಚೇತನದ ಪಾಕವಾದದ್ದು ಆ ಬಡತನದ ಬೆಂಕಿಯಲ್ಲೇ.

ಆರು ವರ್ಷದ ಪುಟ್ಟ ಹುಡುಗಿಗೆ ಪೋಲಿಯೋದ ಭಾರೀ ಆಘಾತ. ಎರಡೂ ಕಾಲುಗಳು ಬಲಿ. ನಡೆಯುವುದಂತೂ ದೂರ, ಆಕೆ ಹಾಸಿಗೆಯಲ್ಲಿ ಕುಳಿತುಕೊಳ್ಳಲೂ ಸಾಧ್ಯವಿಲ್ಲ ಎಂದು ವೈದ್ಯರು ತೀರ್ಪುಕೊಟ್ಟರು. ಎರಡೂ ಕಾಲುಗಳಿಗೆ ಅಲ್ಯೂಮಿನಿಯಂ ಕ್ಯಾಲಿಪರ್‌ಗಳನ್ನು ತೊಡಿಸಿದರು. ಹುಡುಗಿಯ ಬದುಕೆಲ್ಲ ಹಾಸಿಗೆಯಲ್ಲೇ ಎಂದು ತಂದೆ-ತಾಯಿಯರು ಮರುಗಿದರು. ಆದರೆ ಆ ಹುಡುಗಿ ಹಟದಿಂದ ಎರಡು ವರ್ಷ ಸತತವಾಗಿ ಪ್ರಯತ್ನಿಸಿ ತನ್ನ ಕಾಲಮೇಲೆ ಎದ್ದು ನಿಂತಳು. ನಂತರ ಶಾಲೆಗೆ ಸೇರಿ ಛಲದಿಂದ ನಡೆದು ಮತ್ತೆ ಓಡಿ ಶಾಲೆಯ ಅತ್ಯಂತ ವೇಗದ ಓಟಗಾರ್ತಿಯಾದಳು. ಬೆರಗಾದ ಪಾಲಕರು, ಶಿಕ್ಷಕರು ಆಕೆಗೆ ವಿಶೇಷ ತರಬೇತಿ ಕೊಡಿಸಿದಾಗ ಅಮೆರಿಕೆಯ ಅತ್ಯಂತ ವೇಗದ ಓಟಗಾರ್ತಿ ಎಂದು ಹೆಸರು ಪಡೆದು ಒಲಿಂಪಿಕ್ಸ್‌ನಲ್ಲಿ ಮೂರು ಓಟಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದು ಪ್ರಪಂಚದ ವೇಗದ ಓಟಗಾರ್ತಿ ಎನಿಸಿದಳು. ಅವಳ ಹೆಸರು ವಿಲ್ಮಾ ರುಡಾಲ್ಫ್. ಆರು ವರ್ಷಕ್ಕೆ ಏನೂ ಮಾಡಲು ಸಾಧ್ಯವಿಲ್ಲವೆಂಬಂಥವಳು ಮುಂದೆ ಹತ್ತು ವರ್ಷಗಳಲ್ಲಿ ಜಗದ್‍ವಿಖ್ಯಾತಳಾದಳು. ಅವಳ ಈ ಯಶೋಗಾಥೆ ಸುಲಭವಾಯಿತೆ? ಅದೆಷ್ಟು ತಾಪ, ಸಂಕಟಪಟ್ಟಿತ್ತೋ, ಆ ಜೀವ! ಆಕೆ ಸಂಕಟಪಡುವಾಗ ಅದನ್ನು ಕಂಡ ಜನ ದೈವವನ್ನು ದೂಷಿಸಿದ್ದಿರಬಹುದು, ಆಕ್ಷೇಪಣೆ ಮಾಡಿದ್ದಿರಬಹುದು. ಬಹುಶಃ ಆಕೆ ಪಟ್ಟ ತಾಪವೇ ಯಶಸ್ಸಿನ ಮೆಟ್ಟಿಲಾಗಿರಬೇಕು.

ಕನ್ನಡಕ್ಕೊಬ್ಬನೇ ಕೈಲಾಸಂ ಎಂದು ಹೇಳಿಸಿಕೊಳ್ಳುವ ಮಟ್ಟಿಗೆ ದೈತ್ಯ ಪ್ರತಿಭೆ ಇದ್ದ ಟಿ.ಪಿ. ಕೈಲಾಸಂರ ವೈಯಕ್ತಿಕ ಬದುಕು ಅಸ್ತವ್ಯಸ್ತವಾಗಿತ್ತು. ಅದನ್ನು ಕಂಡು ಅನೇಕರು ಇಂಥ ಪ್ರತಿಭೆ ಅದೇಕೆ ಹೀಗೆ ವ್ಯಯವಾಗುತ್ತಿದೆಯೋ ಎಂದು ಆಕ್ಷೇಪಣೆ ಮಾಡಿದ್ದರಂತೆ. ಆದರೆ ಡಿ.ವಿ.ಜಿಯವರು ಮಾತ್ರ ಕೈಲಾಸಂರವರ ಬಗ್ಗೆ ಅತ್ಯಂತ ಮಾರ್ಮಿಕವಾಗಿ ಬರೆಯುತ್ತ ‘ಯಾವ ಮರಕ್ಕೆ ಯಾವ ಗೊಬ್ಬರ ಬೇಕೋ?' ಎಂದಿದ್ದರು. ಅಂತಹ ಪ್ರತಿಭೆಗೆ ಅಂತಹುದೇ ವಾತಾವರಣ ಬೇಕಿತ್ತೋ ಏನೋ? ಅದಕ್ಕೇ ಈ ಕಗ್ಗ ಹೇಳುತ್ತದೆ, 'ಯಾವ ಬೇಳೆ ಬೇಯಲು ಅದಾವ ನೀರು ಬೇಕೋ ತಿಳಿಯದು'. ವ್ಯಕ್ತಿಯ ಉತ್ಥಾನದ ಹಂತದಲ್ಲಿ ಕಾಣಬರುವ ಸಂಕಟ, ಒದ್ದಾಟಗಳನ್ನು ಕಂಡು ಜನ ಅನೇಕ ವ್ಯಾಖ್ಯಾನಗಳನ್ನು ಮಾಡುವುದುಂಟು. ಆದರೆ ಆ ಸಂಕಟ, ತಳಮಳಗಳೇ ಸಾಧನೆಯ ವೇದಿಕೆಗಳು ಎಂದು ತಿಳಿಯುವುದು ನಂತರವೇ. ಇದು ದೈವದ ಗುಟ್ಟು, ಮೇಲ್ನೋಟಕ್ಕೆ ಅರ್ಥವಾಗದ್ದು.

Post Comments (+)