ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರುಷ ವೈಪರೀತ್ಯಕ್ಕೆ ಅಂಕುಶ

Last Updated 25 ಜುಲೈ 2019, 20:04 IST
ಅಕ್ಷರ ಗಾತ್ರ

ಮಾನುಷ್ಯಚರಿತೆಯಚ್ಛಿನ್ನವಾಹಿನಿ ಸಾಗ |
ಲಾನುಪೂವ್ರ್ಯದ ಕರ್ಮಋಣಶೇಷವಿನಿತು ||
ತಾನಿರಲೆಬೇಕಲ್ತೆ ಪೌರುಷ ಸ್ಪರ್ಧನೆಗೆ |
ಆನೆಗಂಕುಶದಂತೆ – ಮಂಕುತಿಮ್ಮ || 163 ||

ಪದ-ಅರ್ಥ: ಮಾನುಷ್ಯಚರಿತೆಯಚ್ಛಿನ್ನವಾಹಿನಿ=ಮಾನುಷ್ಯ (ಮನುಷ್ಯನ)+ಚರಿತೆ+ಅಚ್ಛಿನ್ನವಾಹಿನಿ=
ಅವಿಚ್ಛಿನ್ನವಾದ ಪ್ರವಾಹ, ಸಾಗಲಾನುಪೂವ್ರ್ಯದ=ಸಾಗಲು+ಅನುಪೂವ್ರ್ಯದ(ಹಿಂದಿನಿಂದ ಬಂದ), ಆನೆಗಂಕುಶದಂತೆ=ಆನೆಗೆ+ಅಂಕುಶದಂತೆ.

ವಾಚ್ಯಾರ್ಥ: ಮನುಷ್ಯನ ಇತಿಹಾಸ ಒಂದು ಅವಿಚ್ಛಿನ್ನವಾದ ಪ್ರವಾಹವಿದ್ದಂತೆ. ಅದರ ಮುಂದುವರಿಕೆಗೆ ಮನುಷ್ಯನ ಕರ್ಮ, ಋಣಶೇಷಗಳೂ ಕಾರಣ. ಈ ಪ್ರವಾಹದ ಬೆಳವಣಿಗೆಯಾಗುವುದು ಮನುಷ್ಯನ ಪೌರುಷ, ಶಕ್ತಿಯಿಂದ. ಆದರೆ ಈ ಪುರುಷ ಪ್ರಯತ್ನಕ್ಕೆ, ಆನೆಗೆ ಅಂಕುಶವಿರುವಂತೆ, ವಿಧಿ ಅದನ್ನು ನಿಗ್ರಹಿಸುತ್ತದೆ.

ವಿವರಣೆ: ಮಾನವ ಇತಿಹಾಸವೆಂದರೆ ಮನುಷ್ಯರ ಸಾಧನೆಗಳ, ಸೋಲುಗಳ ದಾಖಲೆ. ಮನುಷ್ಯ ಎಂಬ ಪ್ರಾಣಿ ಭೂಮಿಗೆ ಬಂದಂದಿನಿಂದ ಅವನ ಸಾಧನೆಯೆಡೆಗಿನ ತುಡಿತ ನಡೆದೇ ಇದೆ. ಒಂದು ಸಾಧನೆ ಮತ್ತೊಂದಕ್ಕೆ ಪ್ರೇರಕ. ಅಂತೆಯೇ ಒಂದು ಸೋಲು ಮತ್ತೊಂದು ಪ್ರಯತ್ನದೆಡೆಗೆ ಮುಖ ಚಾಚುವಂತೆ ಮಾಡುತ್ತದೆ. ಅಬ್ರಾಹಂ ಲಿಂಕನ್‍ರ ಬದುಕು ಸೋಲಿನ ಸರಮಾಲೆ. ಆದರೆ ಪ್ರಯತ್ನದಿಂದ ಅವರು ವಿಮುಖರಾಗದೆ ದುಡಿದು ಕೊನೆಗೆ ಅತ್ಯಂತ ಯಶಸ್ವಿ, ಜನಪ್ರಿಯ ರಾಷ್ಟ್ರಪತಿಗಳಾದರು. ಹೀಗೆ ಪ್ರಯತ್ನ-ಸೋಲು-ಸಾಧನೆಗಳ ಪರಂಪರೆ ಸತತವಾಗಿ ಮುಂದುವರೆಯುತ್ತ ಒಂದು ಅವಿಚ್ಛಿನ್ನ ಪ್ರವಾಹವಾಗಿದೆ. ಇದರೊಂದಿಗೆ ಮನುಷ್ಯನ ಕರ್ಮ, ಋಣಶೇಷಗಳೂ ಕಾರ್ಯ ಮಾಡುತ್ತವೆ. ಅತ್ಯಂತ ಪರಾಕ್ರಮಿಯಾಗಿದ್ದ, ಧರ್ಮಿಷ್ಠನಾಗಿದ್ದ ನಹುಷ ಚಕ್ರವರ್ತಿ ಇಂದ್ರನನ್ನು ಗೆದ್ದು ಸಂಭ್ರಮಿಸಿದ್ದೇನೋ ಸರಿಯೆ. ಆದರೆ ಇಂದ್ರನ ಹೆಂಡತಿಯನ್ನು ಪಡೆಯಲು ಮಾಡಿದ ಪ್ರಯತ್ನ, ಅಹಂಕಾರ ಮದದಿಂದ ಋಷಿಗಳನ್ನು ಒದ್ದು ಅವರ ಶಾಪಕ್ಕೆ ಗುರಿಯಾಗಿ, ಇಂದ್ರಸ್ಥಾನದಲ್ಲಿ ಮಂಡಿಸಬೇಕಾದವನು, ಸರ್ಪವಾಗಿ ಕಾಡಿನಲ್ಲಿ ಬಿದ್ದು, ಶಾಪನಿವಾರಣೆಗಾಗಿ ಶತಮಾನಗಳವರೆಗೆ ಕಾದಿದ್ದು ಅವನ ಕರ್ಮ ಅಥವಾ ಋಣವಿಶೇಷವೆನ್ನದೆ ಗತಿಯಿಲ್ಲ. ಹೀಗೆ ಮನುಷ್ಯನ ಇತಿಹಾಸದ ಮುಂದುವರಿಕೆಗೆ ಇವುಗಳೂ ಕಾರಣವಾಗುತ್ತವೆ. ಹಾಗಾದರೆ ಇಲ್ಲಿ ವಿಧಿಯ ಪಾತ್ರವೇನು? ಕೆಲವೊಮ್ಮೆ ಮನುಷ್ಯ, ಸಾಧನೆಯ, ಮಹತ್ವಾಕಾಂಕ್ಷೆಯ ಭರದಲ್ಲಿ ಮಾನವತೆಯನ್ನು, ಧರ್ಮವನ್ನು ಮರೆತು ಮುನ್ನುಗ್ಗುತ್ತಾನೆ. ಅವನ ನಿಗ್ರಹವಾಗದಿದ್ದರೆ ಮಾನವಕುಲಕ್ಕೇ ಅಪಚಾರವಾಗುವ ಸಂದರ್ಭ ಬರುತ್ತದೆ. ಸೈನ್ಯದಲ್ಲಿ ಕೇವಲ ಸಾರ್ಜಂಟ್ ಆಗಿದ್ದ, ಹೃದಯದಲ್ಲಿ ಯಹೂದ್ಯರ ಬಗ್ಗೆ ದ್ವೇಷ ತುಂಬಿಕೊಂಡಿದ್ದ ತರುಣ, ಇಡೀ ಜಗತ್ತನ್ನೇ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಮಹಾಯುದ್ಧಕ್ಕೆ ಕಾರಣನಾಗಿ, ಲಕ್ಷಾಂತರ ಜನರ ಮಾರಣಹೋಮ ನಡೆಸಿದ ಹಿಟ್ಲರ್ ನನ್ನು ವಿಧಿ ನಿಗ್ರಹಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿತು. ಹಾಗಾದರೆ ವಿಧಿ ಈ ಕಾರ್ಯವನ್ನು ಮೊದಲೇ ಏಕೆ ಮಾಡಲಿಲ್ಲ? ವಿಧಿ, ಪೌರುಷಕ್ಕೆ ಅವಕಾಶ ನೀಡುತ್ತದೆ. ಪೌರುಷ, ಧರ್ಮದ ಮಿತಿಯನ್ನು ಮೀರಿದಾಗ ಆನೆಯನ್ನು ಅಂಕುಶದಿಂದ ನಿಗ್ರಹಿಸುವಂತೆ, ವಿಧಿ ಪೌರುಷಸ್ಪರ್ಧೆಯನ್ನು ಹದ್ದಿನಲ್ಲಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT