ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರು ಹಿತವರು ನಿನಗೆ ?

Last Updated 29 ಜುಲೈ 2019, 20:05 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಹತ್ತಿರದ ಹಳ್ಳಿಯಲ್ಲಿ ಹುಟ್ಟಿ, ಬೆಳೆದು ದರೋಡೆಕೋರನಾದ. ಐದುನೂರು ಕಳ್ಳರಿಗೆ ಸರದಾರನಾದ. ಹೆದ್ದಾರಿಯಲ್ಲಿ ಪ್ರವಾಸಮಾಡುವವರನ್ನು ಲೂಟಿ ಮಾಡುತ್ತಿದ್ದ. ಪ್ರವಾಸಿಗರು ಸಿಗದಿದ್ದರೆ ಹತ್ತಿರದ ಮನೆಗಳನ್ನು ದರೋಡೆಮಾಡಿ ತನ್ನ ಜೀವನವನ್ನು ಸಾಗಿಸುತ್ತಿದ್ದ.

ಈ ಸಮಯದಲ್ಲಿ ವಾರಾಣಸಿಯ ಒಬ್ಬ ಗೃಹಸ್ಥ ದೂರದ ಹಳ್ಳಿಯ ಸ್ನೇಹಿತನಿಗೆ ಸಾವಿರ ಕಾರ್ಷಾಪಣ ಹಣವನ್ನು ಕೊಟ್ಟಿದ್ದ. ಹಣವನ್ನು ಮರಳಿ ಪಡೆಯದೆ ತೀರಿಹೋದ. ಅವನ ಹೆಂಡತಿಗೂ ತುಂಬ ಅನಾರೋಗ್ಯವಾಗಿ ಬದುಕುವುದಿಲ್ಲ ಎನ್ನುವಂತಾಯಿತು. ಆಗ ಅಕೆ ತನ್ನ ಮಗನನ್ನು ಕರೆದು, “ಮಗೂ, ಇಂತಹ ಹಳ್ಳಿಯ ಇಂಥವನೊಬ್ಬ ನಿನ್ನ ತಂದೆಯ ಸ್ನೇಹಿತನಿದ್ದಾನೆ. ಅವನು ಸಾವಿರ ಕಾರ್ಷಾಪಣಗಳನ್ನು ಪಡೆದುಕೊಂಡು ಹೋಗಿ ಮರಳಿಕೊಟ್ಟಿಲ್ಲ. ನಾನೂ ತೀರಿಹೋದರೆ ಅದು ನಿನಗೆ ಸಿಕ್ಕುವುದಿಲ್ಲ. ಆದ್ದರಿಂದ ಅಲ್ಲಿಗೆ ಹೋಗಿ ಹಣವನ್ನು ಪಡೆದು ಬಾ” ಎಂದು ಹೇಳಿ ಕಳುಹಿಸಿದಳು.

ತರುಣ ಹೋಗಿ ಹಣವನ್ನು ಪಡೆದು ಮರಳಿ ವಾರಣಾಸಿಗೆ ಬರುತ್ತಿದ್ದ. ಅವನು ಬರುವ ಹೆದ್ದಾರಿಯಲ್ಲೇ ಬೋಧಿಸತ್ವ ದರೋಡೆ ಮಾಡಲು ಕಾಯು
ತ್ತಿದ್ದ. ಮಗ ಹಣ ತರಲು ಹೋದ ದಿನವೇ ಅವನ ತಾಯಿ ತೀರಿಹೋದಳು. ಮಗನ ಬಗ್ಗೆ ಅಷ್ಟು ಆಸೆ ಇಟ್ಟುಕೊಂಡಿದ್ದವಳು ಅದೃಶ್ಯವಾಗಿ ಅವನನ್ನೇ ಹಿಂಬಾಲಿಸುತ್ತಿದ್ದಳು. ದರೋಡೆಕೋರರು ಕಾಯುತ್ತಿರುವುದನ್ನು ತಿಳಿದು ಮಗನನ್ನು ರಕ್ಷಿಸಲು ಒಂದು ನರಿಯ ರೂಪವನ್ನು ಧರಿಸಿ ಮಗನ ಮುಂದೆ ಸುಳಿದಾಡಿ “ಮುಂದೆ ಹೋಗಬೇಡ, ದರೋಡೆಕೋರರಿದ್ದಾರೆ. ನಿನ್ನ ಹಣವನ್ನು ಕಿತ್ತುಕೊಳ್ಳುತ್ತಾರೆ” ಎಂದು ಕಿರಿಚಾಡಿತು. ಅದರ ಮಾತು ಅವನಿಗೆ ಅರ್ಥವಾಗದೆ ಈ ಅಪಶಕುನದ ನರಿ ನನ್ನ ಹಾದಿಗೆ ತೊಂದರೆ ಮಾಡುತ್ತದೆ ಎಂದು ಕಲ್ಲಿನಿಂದ ಅದಕ್ಕೆ ಹೊಡೆದು, ಕೋಲಿನಿಂದ ತಿವಿದು ಓಡಿಸಿಬಿಟ್ಟ. ಅಲ್ಲೊಂದು ಮರದ ಮೇಲೆ ಕುಳಿತಿದ್ದ ಮರಕುಟಿಗ ಪಕ್ಷಿ ಇವನ ಕೈಯಲ್ಲಿದ್ದ ಹಣವನ್ನು ಕಂಡು ದರೋಡೆಕೋರರ ಮುಂದೆ ಹಾರಿ ಬಂದು, “ಈ ತರುಣನ ಹತ್ತಿರ ಸಾವಿರ ಹಣವಿದೆ. ಅವನನ್ನು ಕೊಂದು ಹಣವನ್ನು ವಶಪಡಿಸಿಕೊಳ್ಳಿ” ಎಂದು ಕೂಗತೊಡಗಿತು. ಪಾಪ! ತರುಣ ಆ ಪಕ್ಷಿಯನ್ನು ಶುಭಶಕುನದ ಪಕ್ಷಿ ಎಂದುಕೊಂಡು, “ನಿನ್ನ ದರ್ಶನದಿಂದ ನನ್ನ ಮಂಗಳವಾದೀತು. ನನಗೆ ಮಾರ್ಗದರ್ಶನ ಮಾಡು” ಎಂದು ಬೇಡಿಕೊಂಡ.

ಬೋಧಿಸತ್ವನಿಗೆ ಎಲ್ಲ ಪಶು-ಪಕ್ಷಿಗಳ ಭಾಷೆ ತಿಳಿಯುತ್ತಿತ್ತು. ಅವನಿಗೆ ತರುಣನ ಬಗ್ಗೆ ಮರುಕವಾಯಿತು. ತೀರಿಹೋದ ತಾಯಿ ನರಿಯ ರೂಪದಲ್ಲಿ ಬಂದು ಅವನನ್ನು ರಕ್ಷಿಸಲು ಪ್ರಯತ್ನ ಮಾಡುತ್ತಿದ್ದರೆ ಈತ ಅದನ್ನು ಅಪಶಕುನವೆಂದು ಭಾವಿಸಿ ಹೊಡೆಯುತ್ತಾನೆ. ಅವನನ್ನು ಲೂಟಿಮಾಡಿ, ಕೊಂದುಬಿಡಿ ಎಂದು ನಮಗೆ ಹೇಳುವ ನೀಚ ಮರಕುಟಿಗವನ್ನು ಶುಭಶಕುನದ ಪಕ್ಷಿ ಎಂದು ಭಾವಿಸಿ ಕೈಮುಗಿಯುತ್ತಾನೆ. ಇವನು ಮೂರ್ಖ ಎಂದು ತಿಳಿದು ತರುಣನನ್ನು ಹತ್ತಿರಕ್ಕೆ ಕರೆದು ಕೇಳಿದ, “ನಿನ್ನೂರು ಯಾವುದು?”
“ವಾರಾಣಸಿ”
“ಎಲ್ಲಿಗೆ ಹೋಗಿದ್ದೆ?”
“ನನ್ನ ದಿವಂಗತ ತಂದೆ ಸ್ನೇಹಿತನಿಗೆ ಕೊಟ್ಟಿದ್ದ ಹಣವನ್ನು ಮರಳಿ ಪಡೆಯಲು ಹೋಗಿದ್ದೆ. ಅದನ್ನು ಊರಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ”
“ನಿನ್ನ ತಾಯಿ ಹೇಗಿದ್ದಾರೆ ಗೊತ್ತೋ?”
“ಇಲ್ಲ, ನಾನು ಹೊರಡುವಾಗ ತುಂಬ ಅನಾರೋಗ್ಯವಾಗಿತ್ತು”
“ನೀನೊಬ್ಬ ಮೂರ್ಖ. ನೀನು ಹೊರಟ ದಿನವೇ ಆಕೆ ತೀರಿಕೊಂಡು, ಪುತ್ರ ಮೋಹದಿಂದ ನಿನ್ನನ್ನು ಹಿಂಬಾಲಿಸಿ ಬಂದು, ನಮ್ಮಿಂದ ನಿನ್ನನ್ನು ಪಾರುಮಾಡಲು ನರಿ ರೂಪದಲ್ಲಿ ಬಂದು ದಾರಿಯನ್ನು ಅಡ್ಡಗಟ್ಟಿದಳು. ನೀನು ಆಕೆಯನ್ನು ಹೊಡೆದಟ್ಟಿದೆ. ಆ ನೀಚ ಮರಕುಟಿಗ ಪಕ್ಷಿ ನಿನ್ನನ್ನು ಕೊಲ್ಲಬೇಕೆಂದು ನಮಗೆ ಹೇಳುತ್ತಿತ್ತು. ನೀನು ಅದನ್ನು ಶುಭಶಕುನವೆಂದು ನಮಸ್ಕರಿಸಿದೆ. ಇನ್ನು ಮುಂದಾದರೂ ಜನರನ್ನು ಸರಿಯಾಗಿ ತಿಳಿದುಕೊಂಡು ಬದುಕು” ಎಂದು ಹೇಳಿ ಅವನ ಹಣದೊಂದಿಗೆ ತನ್ನದೊಂದಿಷ್ಟನ್ನು ಸೇರಿಸಿ ಕೊಟ್ಟ ಕಳುಹಿಸಿದ.
ನಮ್ಮ ಜೀವನದ ಯಶಸ್ಸು ತೀರ್ಮಾನವಾಗುವುದು ನಮ್ಮ ಈ ತಿಳುವಳಿಕೆಯಿಂದ. ಯಾರು ನಮಗೆ ಹಿತವರು, ಯಾರು ಅಹಿತರು ಎಂಬುದನ್ನು ಚೆನ್ನಾಗಿ ಪರೀಕ್ಷೆ ಮಾಡಿ ವ್ಯವಹರಿಸುವುದು ಕ್ಷೇಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT