ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸತು ಹಳತಾಗುವ ಪರಿ

Last Updated 30 ಜುಲೈ 2019, 20:08 IST
ಅಕ್ಷರ ಗಾತ್ರ

ಹೊಸಹೊಸದು ತಾನಾಗುತಿರ್ದೊಡಂ ತನ್ನಯ |
ಪ್ರಸವ ಪ್ರವಾಹ ಭೂಮಿಗಳ ಹಳತನದಿಂ ||
ನಸುಸೋಂಕು ವಾಸನೆಯ ಪೊನಲೊಂದಬೇಕಲ್ತೆ ? |
ಹೊಸದು ಹಳದಾಗದೇ – ಮಂಕುತಿಮ್ಮ || 165 ||

ಪದ-ಅರ್ಥ: ತಾನಾಗುತಿರ್ದೊಡಂ=ತಾನು+ಆಗುರ್ತಿದೊಡಂ(ಆಗುತ್ತಿದ್ದರೂ), ಪೊನಲೊಂದಬೇಕಲ್ತೆ=ಪೊನಲ್(ಹೊಳೆ)+ಹೊಂದಬೇಕಲ್ತೆ(ಹೊಂದಬೇಕಲ್ಲವೆ)

ವಾಚ್ಯಾರ್ಥ: ಹೊಳೆ ತಾನು ಹೊಸಹೊಸದಾಗುತ್ತಿದ್ದರೂ ತನ್ನ ಹುಟ್ಟು, ಪ್ರವಾಹ ಹಾಗೂ ಭೂಮಿಗಳ ಹಳೆಯತನಗಳಿಂದ ಅದರ ಪ್ರವಾಹಕ್ಕೆ ಕೊಂಚ ಹಳೆಯ ವಾಸನೆ ಬಂದೇ ತೀರುತ್ತದಲ್ಲವೆ? ಆದ್ದರಿಂದ ಇಂದು ಹೊಸದಾದದ್ದು ನಾಳೆ ಹಳೆಯದಾಗದೇ?

ವಿವರಣೆ: ಒಬ್ಬ ಮನುಷ್ಯನ ಇಂದಿನ ಬದುಕಿಗೆ, ಅವನ ನಡವಳಿಕೆಗೆ ಅವನ ಹಿಂದಿನ ಜೀವನ ಬಹುಪಾಲು ಕಾರಣವಾಗುತ್ತದೆ. ಅವನು ಮನೆತನದ ಪೂರ್ವಜರಿಂದ ಪಡೆದ ವಂಶವಾಹಿನಿಗಳು, ಬಾಲ್ಯದ ಅನುಭವಗಳು, ಪಡೆದ ಶಿಕ್ಷಣ, ಅವನ ಜೊತೆಗಿದ್ದ ಜನರ ಪ್ರಭಾವ ಇವೆಲ್ಲ ಅವನ ಇಂದಿನ ನಡೆಗೆ ತಳಹದಿಯಾಗಿವೆ. ಇಂದು ಅವನು ಹೊಸ ಮನುಷ್ಯ. ಆದರೆ ಅವನನ್ನು ನಿರ್ಮಿಸಿದ್ದು ಅವನ ಹಳೆಯ ಅನುಭವಗಳು.

ಡಾ. ಅಬ್ದುಲ್ ಕಲಾಂ ಯಾವಾಗಲೂ ತಮ್ಮ ನಡೆಯ ಬಗ್ಗೆ ತುಂಬ ಜಾಗರೂಕರಾಗಿದ್ದವರು. ಯಾವುದೇ ಕಾರ್ಯಕ್ರಮಕ್ಕೆ ಹೋದರೆ ಅಲ್ಲಿಯ ಯೋಜಕರು ನೆನಪಿನ ಕಾಣಿಕೆಗಳನ್ನು, ಮತ್ತೇನಾದರೂ ವಸ್ತುಗಳನ್ನು ಕೊಟ್ಟರೆ ಅವು ತಮ್ಮ ಸ್ವಂತ ಜೀವನದಲ್ಲಿ ಬರದಂತೆ ತುಂಬ ಎಚ್ಚರವಹಿಸಿ ತಮ್ಮ ಸಹಾಯಕರಿಗೆ ನಿರ್ದೇಶನಮಾಡುತ್ತಿದ್ದರು. ಅದು ಕೆಲವೊಮ್ಮೆ ಅತಿರೇಕವೆನ್ನುವಷ್ಟು ಕಾಣುತ್ತಿತ್ತು. ಅದರ ಬಗ್ಗೆ ನಾನು ಅವರನ್ನು ಕೇಳಿದಾಗ ಅವರ ಉತ್ತರ ನನ್ನನ್ನು ಬೆರಗಾಗಿಸಿತ್ತು. ಅವರು ಆರೆಂಟು ವರ್ಷದ ಹುಡುಗನಾಗಿದ್ದಾಗ ಅವರಣ್ಣ, ರಾಮೇಶ್ವರಂ ಕಾರ್ಪೋರೇಟರ್ ಆಗಿದ್ದರಂತೆ.

ಒಂದು ದಿನ ಅವರು ಮನೆಯಲ್ಲಿ ಇಲ್ಲದಾಗ ಯಾರೋ ಬಂದು ಬಾಲಕ ಕಲಾಂ ಕೈಯಲ್ಲಿ ಒಂದು ಪೊಟ್ಟಣ ಕೊಟ್ಟು ಹೋದರಂತೆ. ಅಣ್ಣ ಬಂದ ಮೇಲೆ ಅದನ್ನು ಅವರಿಗೆ ಕಲಾಂ ಕೊಟ್ಟರು. ಬಿಚ್ಚಿ ನೋಡಿದರೆ ಒಳಗೆ ಎರಡು ಬೆಳ್ಳಿಯ ಬಟ್ಟಲುಗಳು! ಇವರನ್ನು ಎಂದೂ ಗದರಿಸದ ಅಣ್ಣ, ಅಂದು ತಮ್ಮನ ಕೆನ್ನೆಗೆ ಎರಡು ಬಲವಾದ ಏಟುಗಳನ್ನು ಕೊಟ್ಟು ಹೇಳಿದರಂತೆ, “ನನಗೆ ಭಗವಂತ ಒಂದು ಸ್ಥಾನವನ್ನು ಕೊಟ್ಟದ್ದು ಸಮಾಜಸೇವೆ ಮಾಡಲಿಕ್ಕೆ. ಅದರಿಂದ ಏನಾದರೂ ಅಪೇಕ್ಷೆ ಮಾಡಿದರೆ ದೇವರಿಗೆ ದ್ರೋಹ ಬಗೆದಂತೆ. ಇದನ್ನು ನೀನು ನೆನಪಿಡು. ಮುಂದೆ ನಿನಗೆ ದೊಡ್ಡ ಸ್ಥಾನ ದೊರೆತಾಗ ಅದರಿಂದ ಯಾವ ಪ್ರತಿಫಲವನ್ನು ಬಯಸದೆ, ಆ ಸ್ಥಾನ ಭಗವಂತನ ಅನುಗ್ರಹ ಎಂದು ಭಾವಿಸು”.

ಈ ಮಾತು ಬಾಲಕ ಕಲಾಂ ಮನಸ್ಸಿನಲ್ಲಿ ಆಳವಾಗಿ ಕುಳಿತಿತು. ಅವರು ರಾಷ್ಟ್ರಪತಿಗಳಾದಾಗಲೂ ಅದೇ ಮಾತು ಅವರಲ್ಲಿ ಅಪರಿಗ್ರಹವನ್ನು ತಂದಿತ್ತು. ಆ ಬಾಲ್ಯದ ಪಾಠ ಕೊನೆಯವರೆಗೂ ಉಳಿದಿತ್ತು. ಅಂದರೆ ಹೊಸ ಕಲಾಂರಲ್ಲಿ ಹಳೆಯ ಪಾಠದ ವಾಸನೆ!

ಒಬ್ಬ ಮನುಷ್ಯನ ಜೀವನದಲ್ಲೇ ಹೀಗೆ ಹಳೆಯ ಪಾಠ, ನೀತಿ, ಮೌಲ್ಯಗಳು ಸದಾಕಾಲ ಕಾಣುತ್ತಿದ್ದರೆ ಪ್ರಪಂಚದ ವಿಷಯದಲ್ಲಿ ಹೇಗಾಗಬೇಕು? ತಾವು ಕಂಡಿದ್ದೀರಿ, ಒಂದು ಬಾವಿಯ ನೀರು ತುಂಬ ಸಿಹಿ, ಮತ್ತೊಂದು ಬಾವಿಯ ನೀರು ತುಂಬ ಉಪ್ಪು. ನೀರಿಗೆ ಯಾವುದೇ ಬಣ್ಣವಿಲ್ಲ, ವಾಸನೆಯಿಲ್ಲ, ರುಚಿಯಿಲ್ಲ. ನೀರಿಗೆ ವಾಸನೆ, ರುಚಿ ಬಂದದ್ದು ಅದರೊಂದಿಗೆ ಬಂದ ಲವಣಗಳಿಂದ, ಧಾತುಗಳಿಂದ, ಮಣ್ಣಿನ ವಾಸನೆಯಿಂದ. ಅಸಂಖ್ಯ ಕೋಟಿ ವರ್ಷಗಳಿಂದ ಇರುವ ಈ ಹಳೆಯ ಪ್ರಪಂಚದಲ್ಲಿ ಅದರ ಹುಟ್ಟಿನಿಂದ, ಬೆಳವಣಿಗೆಯಿಂದ ಬಂದ ವಾಸನೆಗಳು ಇಂದಿನ ಪ್ರಪಂಚವನ್ನು ಸೋಂಕಿರಲೇಬೇಕಲ್ಲ? ಹಿಂದಿನ ಚಿಂತನೆಗಳು, ಅವಿಷ್ಕಾರಗಳು, ಭೌತಿಕ ಬದಲಾವಣೆಗಳ ಆಧಾರದ ಮೇಲೆಯೇ ಇಂದಿನ ಪ್ರಪಂಚ ನಿಂತಿದ್ದಲ್ಲವೆ? ಆದರೆ ಒಂದು ಮಾತು, ಹಿಂದಿನದು ಹಳತಾಗಿ ಇಂದು ಹೊಸದು ಬಂದಂತೆ, ಇಂದಿನದು ನಾಳೆ ಹಳತಾಗಿ ಮತ್ತೊಂದು ಹೊಸದು ಬರುತ್ತದಲ್ಲ! ಅದನ್ನೇ ಕಗ್ಗ ಸುಂದರವಾಗಿ ‘ಹೊಸದು ಹಳದಾಗದೇ?’ ಎಂದು ಉದ್ಗರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT