ಭಾನುವಾರ, ಆಗಸ್ಟ್ 25, 2019
20 °C

ಅನ್ನದ ಋಣ

ಗುರುರಾಜ ಕರಜಗಿ
Published:
Updated:

ಇಂದು ಮದುವೆಯ ಹಬ್ಬ, ನಾಳೆ ವೈಕುಂಠ ತಿಥಿ |
ಇಂದು ಮೃಷ್ಟಾನ್ನ ಸುಖ, ನಾಳೆ ಭಿಕ್ಷಾನ್ನ ||
ಇಂದು ಬರಿಯುಪವಾಸ, ನಾಳೆ ಪಾರಣೆ-ಯಿಂತು |
ಸಂದಿರುವುದನ್ನ ಋಣ –ಮಂಕುತಿಮ್ಮ ||171||

ಪದ-ಅರ್ಥ: ಮೃಷ್ಟಾನ್ನಸುಖ=ಮೃಷ್ಟಾನ್ನ (ಶ್ರೀಮಂತಿಕೆಯ ಊಟ)+ ಸುಖ, ಸಂದಿರುವುದನ್ನ= ಸಂದಿರುವುದು(ದೊರಕಿರುವುದು)+ಅನ್ನ

ವಾಚ್ಯಾರ್ಥ: ಇಂದು ಸಂಭ್ರಮದ ಮದುವೆಯ ಹಬ್ಬವಾದರೆ ನಾಳೆ ದುಃಖದ ತಿಥಿ, ಇಂದು ಸಮೀಚೀನವಾದ ಭೋಜನದ ಸುಖ, ನಾಳೆ ಮತ್ತೆ ಭಿಕ್ಷಾಪಾತ್ರೆ. ಇಂದು ಪೂರ್ತಿ ಉಪವಾಸ, ನಾಳೆ ಊಟದ ಭರವಸೆ. ಹೀಗೆ ದೊರೆಯುವುದು ಅನ್ನದ ಋಣ.

ವಿವರಣೆ: ಬದುಕೊಂದು ಅತ್ಯಾಶ್ಚರ್ಯಗಳ ಸರಮಾಲೆ. ಇಂದು ಹೀಗೆ ಇದ್ದದ್ದು, ನಾಳೆಯೂ ಹೀಗೆಯೇ ಇದ್ದೀತು ಎಂದು ಹೇಳುವುದು ಸಾಧ್ಯವಿಲ್ಲ. ಜೀವನ ಜೋಕಾಲಿಯಲ್ಲಿ ಮೇಲೆ ಹೋದವರೆಷ್ಟೋ, ಕೆಳಗೆ ಇಳಿದವರೆಷ್ಟೋ. ನಮ್ಮ ಅನ್ನದ ಋಣ ನಮ್ಮನ್ನು ಎಲ್ಲೆಲ್ಲಿಗೆ ಕರೆದೊಯ್ಯುತ್ತದೋ ತಿಳಿಯದು. ಮರುದಿನ ರಾಜ್ಯಾಭಿಷೇಕವಾಗುತ್ತದೆಂದು ತಿಳಿದು ಹಿರಿಯರಿಗೆ ವಂದಿಸಿ ಸಿದ್ಧನಾಗಿದ್ದ ಶ್ರೀರಾಮ ಮರುದಿನವೇ ಕಾಡಿಗೆ ಹೋಗಬೇಕಾದದ್ದು ವಿಪರ್ಯಾಸ. ಊಟಕ್ಕೆ ದಿಕ್ಕಿಲ್ಲದ ಮನುಷ್ಯನೊಬ್ಬ ಭಿಕ್ಷೆ ಬೇಡುವಾಗ ದಾನಿಯೊಬ್ಬ ಎರಡು ಲಾಟರಿ ಟಿಕೆಟ್ಟು ತೆಗೆದುಕೊಂಡು ಒಂದದ್ದು ತಾನು ಇಟ್ಟುಕೊಂಡು ಮತ್ತೊಂದನ್ನು ಇವನ ತಟ್ಟೆಗೆ ಹಾಕಿ, ನಿನ್ನ ದೈವ ಹೇಗಿದೆಯೋ ನೋಡು ಎಂದು ತಮಾಷೆಯಿಂದ ಹೇಳಿದ್ದ. ಮರುದಿನ ಆ ಟಿಕೆಟ್ಟಿಗೇ ಒಂದು ಕೋಟಿ ರೂಪಾಯಿ ಲಾಟರಿ ಹತ್ತಿ ಆತ ಶ್ರೀಮಂತನಾಗಿ, ವ್ಯಾಪಾರ ಮಾಡಿ ಮತ್ತಷ್ಟು ಹಣ ಗಳಿಸಿ, ತನಗೆ ಒಂದು ದಿನ ಲಾಟರಿ ಟಿಕೆಟ್ಟು ಕೊಟ್ಟವನನ್ನೇ ಕೆಲಸಕ್ಕೆ ನಿಯಮಿಸಿಕೊಂಡ ಪ್ರಕರಣ ಕಟ್ಟು ಕಥೆಗಿಂತ ರೋಚಕವಾದದ್ದು.

ಸುಖವೇ ಶಾಶ್ವತ ಎಂದು ಭಾವಿಸಿದ್ದ ವ್ಯಕ್ತಿ ದರಿದ್ರತೆಯ ಕೂಪಕ್ಕೆ ಬಿದ್ದದ್ದು, ನಿರಾಸೆಯಲ್ಲಿ ಬದುಕಿನ ಆಸಕ್ತಿಯನ್ನೇ ಕಳೆದುಕೊಂಡ ವ್ಯಕ್ತಿ ಸುಖದ ಸುಪ್ಪತ್ತಿಗೆಯನ್ನೇರಿದ ಅನೇಕ ಕಥೆಗಳು ನಮ್ಮ ಮುಂದಿವೆ. ಪ್ರತಿಯೊಂದು ಅಗುಳಿನ ಮೇಲೆ ತಿನ್ನುವವನ ಹೆಸರನ್ನು ಬರೆಯಲಾಗಿದೆ ಎಂಬ ಮಾತಿದೆ. ಅಂದರೆ ಯಾರು, ಯಾವಾಗ, ಯಾವುದನ್ನು ಅನುಭವಿಸಬೇಕೋ, ಅದು ಪೂರ್ವ ನಿರ್ಧಾರಿತವಾಗಿದೆ. ಅದರ ಅರಿವಿಲ್ಲದೆ ನಾವು ಯೋಜನೆಗಳನ್ನು ಹಾಕಿಕೊಂಡು ಕನಸು ಕಾಣುತ್ತೇವೆ. ಆದರೆ ಈ ಬದುಕು ಅನಿಶ್ಚಿತತೆಯದು. ಯಾವಾಗ ಏನಾದೀತು ಎಂಬುದನ್ನು ಪೂರ್ವಭಾವಿಯಾಗಿ ತಿಳಿಯುವುದು ಕಷ್ಟ. ಅದನ್ನೇ ಕಗ್ಗ ಹೇಳುತ್ತದೆ. ಇಂದು ಸಂಭ್ರಮದ ದಿನ, ಮದುವೆಯ ಸಂತಸ ಉಕ್ಕಿ ಹರಿಯುತ್ತಿದೆ. ಮರುದಿನ ಸೂತಕದ ಮನೆಯಾಗಬಹುದು. ಇಂದು ಸಮೃದ್ಧಿಯ ಊಟ ದೊರೆಯಬಹುದು ಆದರೆ ನಾಳೆ ಭಿಕ್ಷಾನ್ನವೇ ಗತಿಯಾಗಬಹುದು. ಇಂದು ಹೊಟ್ಟೆಗೆ ಅನ್ನವೇ ದೊರೆಯದೆ ಉಪವಾಸವೇ, ಆದರೆ ಮರುದಿನ ಊಟಕ್ಕೆ ಅವಕಾಶ ದೊರೆತೀತು. ಮನುಷ್ಯನ ಅನ್ನದ ಋಣ ಇರುವುದು ಹೀಗೆಯೇ.

ಏನೀ ಕಗ್ಗದ ಸಂದೇಶ? ಏನಾಗುತ್ತದೋ ತಿಳಿದಿಲ್ಲ. ಆದ್ದರಿಂದ ಸಮುದ್ರದ ತೆರೆಗಳ ಮೇಲೆ ಬಿದ್ದ ಬೆಂಡಿನಂತೆ ಅವು ಒಯ್ದಲ್ಲಿ ಹೋಗುವುದೇ ನಮ್ಮ ಬದುಕೇ? ಕಗ್ಗ ತಿಳಿ ಹೇಳುವುದು ಇಷ್ಟು. ಎಂಥ ಪ್ರಸಂಗವೇ ಬರಲಿ, ಶುಭವಾಗಲಿ, ಅಶುಭವಾಗಲಿ, ಸಂತೋಷವಾಗಲಿ, ಕಷ್ಟವಾಗಲಿ ನಮ್ಮ ಮನಸ್ಸನ್ನು ಹದಗೊಳಿಸಿ ಇಟ್ಟುಕೊಳ್ಳಬೇಕು. ಅದು ಸ್ಥಿರವಾಗಿದ್ದಲ್ಲಿ ಯಾವ ಸ್ಥಿತಿಯೂ ನಮ್ಮನ್ನು ಕಂಗೆಡಿಸುವುದಿಲ್ಲ.

Post Comments (+)