ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ರಾಜನಿಷ್ಠೆ

Last Updated 16 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ಕಾಗೆಯಾಗಿ ಹುಟ್ಟಿದ್ದ. ಬೆಳೆದು, ಅತ್ಯಂತ ಬಲಿಷ್ಠನಾಗಿ ಎಂಬತ್ತು ಸಾವಿರ ಕಾಗೆಗಳಿಗೆ ರಾಜನಾಗಿದ್ದ. ಅವನ ಹೆಸರು ಸುಪತ್ತ. ಅವನ ಪಟ್ಟಮಹಿಷಿಯ ಹೆಸರು ಸುಫಸ್ಸಾ. ರಾಜನ ಸೇನಾಪತಿ ಮಹಾಶೂರ, ಅತ್ಯಂತ ಪ್ರಾಮಾಣಿಕ. ಅವನ ಹೆಸರು ಸುಮುಖ. ಅವನು ತನ್ನ ಎಂಬತ್ತು ಸಾವಿರ ಕಾಗೆಗಳ ಸೇನೆಯನ್ನು ವಾರಾಣಸಿಯ ಸುತ್ತಮುತ್ತ ವ್ಯವಸ್ಥಿತವಾಗಿ ನಿಲ್ಲಿಸಿ ಅವುಗಳಿಗೆ ಸರಿಯಾಗಿ ತರಬೇತಿ ಕೊಡುತ್ತಿದ್ದ.

ಒಂದು ದಿನ ಕಾಕರಾಜ ತನ್ನ ಹೆಂಡತಿಯೊಂದಿಗೆ ಹಾರುತ್ತ ರಾಜನ ಭೋಜನಶಾಲೆಯ ಮೇಲೆ ಬಂದ. ಆಗ ರಾಜ ರಾಣಿಯರು ಊಟ ಮಾಡುತ್ತಿದ್ದರು. ಸುಫಸ್ಸಾ ರಾಜಪರಿವಾರದವರು ಊಟಮಾಡುವ ಆಹಾರವನ್ನು ನೋಡಿದಳು. ಅದರಲ್ಲೂ ಅವರು ತಿನ್ನುತ್ತಿದ್ದ ಮೀನಿನ ಭಕ್ಷ ಬಹಳ ಇಷ್ಟವಾಯಿತು. ಆಕೆಗೆ ಅದನ್ನು ತಿನ್ನಲೇಬೇಕೆಂಬ ಆಸೆಯಾಯಿತು. ಮರುದಿನ ಆಕೆ ಮಂಕಾಗಿ, ಊಟಮಾಡದೆ ಕುಳಿತಾಗ ರಾಜ ಸುಪತ್ತ ಕಾರಣ ಕೇಳಿದ. ಆಕೆ ಹೇಳಿದಳು, “ನನಗೆ ವಾರಾಣಸಿಯ ರಾಜ ಮಾಡುವ ಊಟ ಮಾಡಲು ಆಸೆಯಾಗಿದೆ. ಅದರಲ್ಲೂ ಆ ಮೀನಿನ ತಿಂಡಿಯನ್ನು ತಿನ್ನದೆ ಬದುಕಲಾರೆ. ನಾನು ಬೇರೆ ಯಾವ ಊಟವನ್ನು ಮಾಡಲಾರೆ”. ಸುಪತ್ತ ಹೇಳಿದ, “ಅದು ರಾಜನ ಅರಮನೆ. ಆತನಿಗೆ ಏನು ಬೇಕಾದರೂ ಸಿಕ್ಕೀತು. ನಮಗೆ ರಾಜನ ಆಹಾರ ಹೇಗೆ ಸಿಕ್ಕೀತು? ಅದು ನನ್ನ ಶಕ್ತಿಯನ್ನು ಮೀರಿದ್ದು”. ರಾಣಿ ಕಾಗೆ, “ಹಾಗಾದರೆ ನಾನು ಉಪವಾಸ ಬಿದ್ದು ಸತ್ತು ಹೋಗುತ್ತೇನೆ” ಎಂದಿತು. ಇದನ್ನು ಕೇಳುತ್ತಿದ್ದ ಸೇನಾಪತಿ ಸುಮುಖ ಹೇಳಿದ, “ಸ್ವಾಮಿ, ಚಿಂತೆ ಮಾಡಬೇಡಿ. ರಾಣಿಯವರು ಬಯಸಿದ ರಾಜಭೋಜನ ನಾಳೆಯೇ ಸಿಗುತ್ತದೆ. ಅದನ್ನು ತರುವುದು ನನ್ನ ಜವಾಬ್ದಾರಿ”.

ಸುಮುಖ ತನ್ನ ಸೈನಿಕರನ್ನು ಕರೆದ. ಅದರಲ್ಲಿ ಕೆಲವರು ತುಂಬ ಧೈರ್ಯವಂತರು ಅವರ ಸಣ್ಣ ಸಣ್ಣ ಗುಂಪುಗಳನ್ನಾಗಿ ಮಾಡಿ ರಾಜನ ಅರಮನೆಯ ಸುತ್ತ ನಿಲ್ಲಿಸಿದ. ತನ್ನ ಅತ್ಯಂತ ನೆಚ್ಚಿನ ಭಂಟರಾದ ಎಂಟು ಕಾಗೆಗಳನ್ನು ಜೊತೆಯಲ್ಲಿ ಕರೆದುಕೊಂಡು ಅಡುಗೆ ಮನೆಯ ಛಾವಣಿಯ ಮೇಲೆ ಕುಳಿತ.

“ಸರಿಯಾಗಿ ಕೇಳಿಸಿಕೊಳ್ಳಿ. ನಾಳೆ ಅಡುಗೆ ಮನೆಯಿಂದ ಸೇವಕರು ಆಹಾರವನ್ನು ಇದೇ ಮಾರ್ಗವಾಗಿ ಒಯ್ಯುತ್ತಾರೆ. ನಾನು ನೇರವಾಗಿ ಹೋಗಿ ಆಹಾರ ಹೊತ್ತಿರುವ ಸೇವಕನನ್ನು ಕುಕ್ಕಿ ಗಾಬರಿಮಾಡಿ, ಆಹಾರವನ್ನು ಕೆಳಗೆ ಬೀಳಿಸಿಬಿಡುತ್ತೇನೆ. ಆಗ ಸೈನಿಕರಿಂದ ನನ್ನ ಪ್ರಾಣ ಹೋಗಬಹುದು. ನೀವು ಚಿಂತೆಮಾಡಬೇಡಿ. ಕೆಳಗೆ ಬಿದ್ದ ಆಹಾರವನ್ನು ರಾಜ ಊಟ ಮಾಡಲಾರ. ಬಿದ್ದ ಆಹಾರವನ್ನು ಈ ಪುಟ್ಟ ಚೀಲದಲ್ಲಿ ತುಂಬಿಕೊಂಡು ಹಾರಿಹೋಗಿ ರಾಣಿಗೆ ಕೊಡಿ. ಸೇನಾಪತಿ ಎಲ್ಲಿ ಎಂದು ರಾಜ ಕೇಳಿದರೆ ಹಿಂದೆ ಬರುತ್ತಿದ್ದಾನೆ ಎಂದು ಹೇಳಿ ಅವರು ತೃಪ್ತಿಯಾಗಿ ಊಟ ಮಾಡುವವರೆಗೂ ನನ್ನ ಸಾವಿನ ಸುದ್ದಿ ಹೇಳಬೇಡಿ” ಎಂದು ತಿಳಿಸಿತು.

ಸೇವಕ ಆಹಾರವನ್ನು ಹೊತ್ತು ತರುವಾಗ ಯೋಜನೆಯಂತೆ ಸುಮುಖ ಹೋಗಿ ಅವನ ಮೂಗನ್ನು ಬಲವಾಗಿ ಕಚ್ಚಿಬಿಟ್ಟಿತು. ಆತ ಗಾಬರಿಯಾಗಿ ಪಾತ್ರೆಯನ್ನು ಕೆಳಗೆ ಬೀಳಿಸಿದ. ತಕ್ಷಣ ಉಳಿದ ಕಾಗೆಗಳು ಆಹಾರವನ್ನು ತುಂಬಿಕೊಂಡು ಹಾರಿದವು. ಸೈನಿಕನೊಬ್ಬ ಸುಮುಖನನ್ನು ಬಿಗಿಯಾಗಿ ಹಿಡಿದು ರಾಜನ ಬಳಿಗೆ ಕರೆತಂದ. ರಾಜ ಕೇಳಿದ, “ಏಕೆ ಹೀಗೆ ಮಾಡಿದೆ? ನಿನ್ನ ಪ್ರಾಣವೇ ಹೋಗಬಹುದಿತ್ತಲ್ಲ?” ಸುಮುಖ ಹೇಳಿದ “ಸ್ವಾಮಿ, ನಾನು ರಾಜನ ಸೇನಾಪತಿ. ರಾಣಿಗೆ ನೀವು ಮಾಡುವ ಊಟ ಇಷ್ಟವಾಯಿತು. ಯಜಮಾನನ ಇಚ್ಛೆಯನ್ನು ಪೂರೈಸುವುದು ನನ್ನ ಕರ್ತವ್ಯ. ಅದಕ್ಕೆ ಪ್ರಾಣ ಹೋದರೂ ಸರಿ ಎಂದು ಹೀಗೆ ಯೋಜನೆ ಮಾಡಿದೆ”. ರಾಜ ಆಶ್ಚರ್ಯ ಪಟ್ಟ, ಸಂತೋಷವೂ ಆಯಿತು. ಹೀಗೆ ದೊರೆಗಾಗಿ ಪ್ರಾಣಕೊಡುವ ಮನುಷ್ಯರೇ ಅಪರೂಪ. ಹಣ, ಗ್ರಾಮಗಳನ್ನು ಕೊಟ್ಟರೂ ಜೀವವನ್ನೇ ಕೊಡುವಂಥ ಆತ್ಮೀಯರು ದೊರಕಲಾರರು. ಒಂದು ಕಾಗೆಗೆ ಈ ಮಟ್ಟದ ರಾಜಭಕ್ತಿ ಇರುವುದು ಅದ್ಭುತ ಎಂದುಕೊಂಡು ಅದಕ್ಕೆ ಸನ್ಮಾನ ಮಾಡಿಕಳುಹಿಸಿದ. ಮರುದಿನದಿಂದ ವಾರಣಾಸಿಯ ಎಲ್ಲ ಕಾಗೆಗಳಿಗೆ ತಾನು ಮಾಡುವ ಊಟವನ್ನೇ ಕೊಡುವಂತೆ ವ್ಯವಸ್ಥೆಮಾಡಿದ.

ರಾಜಭಕ್ತಿ, ನಿಷ್ಠೆ ಅಪರೂಪದ ಗುಣಗಳು. ಅವು ವ್ಯಕ್ತಿಯನ್ನು ಶ್ರೇಷ್ಠತೆಯ ಕಡೆಗೆ ಕರೆದೊಯ್ಯುತ್ತವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT