ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಧುಗಳ ಕೃಪೆ

Last Updated 18 ಆಗಸ್ಟ್ 2019, 20:12 IST
ಅಕ್ಷರ ಗಾತ್ರ

ಬಂಧುಬಳಗವುಮಂತಕನ ಚಮುವೊ, ಛದ್ಮಚಮು |
ದಂದುಗದ ಬಾಗಿನಗಳವರ ನಲುಮೆಗಳು ||
ಕುಂದಿಪ್ಪುವಾತ್ಮನನವರ್ಗಳುಪಕಾರಗಳು |
ಮಂದಿಗಾಗದಿರು ಬಲಿ - ಮಂಕುತಿಮ್ಮ || 173 ||

ಪದ-ಅರ್ಥ: ಬಂಧುಬಳಗವುಮಂತಕನ=ಬಂಧುಬಳಗವು+ಅಂತಕನ(ಯಮನ), ಚಮು=ಸೈನ್ಯ, ಛದ್ಮಚಮು=ಛದ್ಮ(ಮಾರುವೇಷದ)+ಚಮು, ದಂದುಗ=ಕಷ್ಟ, ಬಾಗಿನಗಳವರ=ಬಾಗಿನಗಳು (ಕಾಣಿಕೆಗಳು)+ಅವರ,ಕಂದಿಪ್ಪುವಾತ್ಮನನವರ್ಗಳುಪಕಾರಗಳು=ಕಂದಿಪ್ಪುವು (ಕುಂದಿಸುವುವು)+
ಆತ್ಮನನ್ನು+ಅವರ್ಗಳ(ಅವರುಗಳ)+ಉಪಕಾರಗಳು, ಮಂದಿಗಾಗದಿರು=ಮಂದಿಗೆ+ಆಗದಿರು.

ವಾಚ್ಯಾರ್ಥ: ನಮ್ಮ ಬಂಧುಬಳಗಗಳು ಯಮನ ಸೈನ್ಯ, ಅದೂ ಮಾರುವೇಷದ ಸೈನ್ಯ. ಅವರ ಪ್ರೀತಿಯ ಕಾಣಿಕೆಗಳೆಂದರೆ ಕಷ್ಟ, ಕೋಟಲೆಗಳು. ಆತ್ಮಶಕ್ತಿಯನ್ನು ಕುಂದಿಸುವುದೇ ಅವುಗಳು ಮಾಡುವ ಉಪಕಾರಗಳು. ಆ ಮಂದಿಗೆ ಬಲಿಯಾಗದಿರು.

ವಿವರಣೆ: ಬಂಧುಗಳು ಮತ್ತು ಬಳಗದವರು ಒಂದು ರೀತಿಯಲ್ಲಿ ಯಮನ ಸೈನ್ಯವಿದ್ದಂತೆ ಯಮ ಒಂದೇ ಸಲ ಪ್ರಾಣ ತೆಗೆದುಕೊಂಡು ಹೋಗುತ್ತಾನೆ ಆದರೆ ಬಂಧುಗಳು ತಮ್ಮ ಪ್ರೇಮದಿಂದ, ಅಪೇಕ್ಷೆಗಳಿಂದ, ಕಾಟಗಳಿಂದ ಕ್ಷಣ
ಕ್ಷಣವೂ ಪ್ರಾಣ ಹೀರುತ್ತಾರೆ. ಅದಕ್ಕೇ ಅದನ್ನು ಅಂತಕನ ಚಮು ಅಂದರೆ ಯಮನ ಸೈನ್ಯ ಎಂದು ಕರೆದದ್ದು. ಸೈನ್ಯ ಎದುರು ಬಂದರೆ ಹೇಗಾದರೂ ಹೋರಾಡಬಹುದು ಎಂದುಕೊಂಡರೆ ಅದು ಕಣ್ಣಿಗೆ ಕಾಣುವ ಸೈನ್ಯವಲ್ಲ, ಮಾರುವೇಷದಿಂದ, ಆಕರ್ಷಕವಾದ ಸ್ನೇಹದ ರೂಪದಲ್ಲಿ ಬರುವ ಯಮನ ಸೈನ್ಯ. ಅವರ ಪ್ರೇಮದ ಕಾಣಿಕೆಗಳೆಂದರೆ ಅವರು ನೀಡುವ ಕಷ್ಟಗಳು, ಕೋಟಲೆಗಳು.

ದಾಸರು ಇದನ್ನು ತುಂಬ ಚೆನ್ನಾಗಿ ಹೇಳುತ್ತಾರೆ. ತಾಯಿಯನು ಕೊಡು ಎಂದು ಬೇಡಲೇ? ಧ್ರುವನಿಗೆ ತಾಯಿ ಸುರುಚಿ ಏನು ಕೊಟ್ಟಳು? ತಂದೆಯನ್ನು ಬೇಡಲೇ? ತಂದೆ ಹಿರಣ್ಯಕಶಿಪು ಪ್ರಲ್ಹಾದನಿಗೆ ಮಾಡಿದ್ದೇನು? ತಮ್ಮನನ್ನು ಬೇಡಬೇಕೆಂದರೆ ವಾಲಿಗೆ ತಮ್ಮ ಸುಗ್ರೀವನೇನು ಕೊಟ್ಟ? ಮಕ್ಕಳನ್ನು ಕೊಡು ಎಂದು ಬೇಡಲೇ? ನೂರು ಜನ ಮಕ್ಕಳು ಕೌರವರು ತಂದೆ ದಶರಥನಿಗೆ ಎಷ್ಟು ಸುಖ ಕೊಟ್ಟರು?

ಹೀಗೆಂದರೆ ಬಂಧುಗಳೆಂದರೆ ಕೇವಲ ತೊಂದರೆ ತಾಪತ್ರಯಗಳೆಂದಲ್ಲ. ನಿಮ್ಮ ಬಂಧುಬಳಗದವರು ತುಂಬ ಒಳ್ಳೆಯವರೆ, ತುಂಬ ಪ್ರೀತಿಯುಳ್ಳವರೇ ಎಂದು ಭಾವಿಸಿಕೊಳ್ಳಿ. ಆಗ ಏನಾಗುತ್ತದೆ? ನಿಮ್ಮ ಅವರ ಬಾಂಧವ್ಯ ತುಂಬ ಗಟ್ಟಿಯಾಗುತ್ತ ಹೋಗುತ್ತದೆ. ಇದು ಮೋಹಕ್ಕೆ ಕಾರಣವಾಗುತ್ತದೆ. ಹೆಚ್ಚಿನ ಮೋಹ, ಹೆಚ್ಚಿನ ದು:ಖಕ್ಕೇ ಕಾರಣವಾಗುತ್ತದೆ. ಮೋಹದ ಬಂಧ ವ್ಯಕ್ತಿಗಳನ್ನು ಋಣಕ್ಕೆ ಗುರಿ ಮಾಡುತ್ತದೆ. ಆ ಋಣ ತೀರಿಸಲು ಪ್ರಯತ್ನ. ಈ ಜನ್ಮದಲ್ಲಿ ಸಾಧ್ಯವಾಗದಿದ್ದರೆ ಮರು ಜನ್ಮಕ್ಕೆ ಆಹ್ವಾನ. ಹೀಗೆ ಇದರ ಉಪಟಳ ನಡೆಯುತ್ತಲೇ ಇರುತ್ತದೆ. ಹೀಗೆ ಅವರ ಉಪಕಾರಗಳು ಆತ್ಮಶಕ್ತಿಯನ್ನು ಕುಂದಿಸುತ್ತವೆ.

ಹಾಗಾದರೆ ಪರಿಹಾರವೇನು? ಕಗ್ಗ ಹೇಳುತ್ತದೆ, ನೀನು ಮಂದಿಗೆ ಬಲಿಯಾಗದಿರು. ಅಂದರೆ ಎಷ್ಟು ಸಾಧ್ಯವಿದ್ದ ಮಟ್ಟಿಗೆ ಋಣಬಾಧೆಯನ್ನು ಕಡಿಮೆಮಾಡಿಕೊಳ್ಳುವ ದಿಶೆಯಲ್ಲಿ ಬಂಧುಗಳಿಂದ ಏನನ್ನು ಅಪೇಕ್ಷಿಸದೆ, ಎಲ್ಲರಿಗೂ ಒಳ್ಳೆಯದೇ ಬಯಸುತ್ತ ಬದುಕಿ ಜೀವನ ಸಾಗಿಸುವುದು ನಮಗಿರುವ ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT