ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಥ್ಯಾಪ್ರಶಂಸೆ

Last Updated 19 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಭಗವಾನ್ ಬುದ್ಧನ ಜನಪ್ರಿಯತೆ ತುಂಬ ಹೆಚ್ಚಾಗುತ್ತಿತ್ತು. ಜನ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅವನ ಅನುಯಾಯಿಗಳಾಗುತ್ತಿದ್ದರು. ಇದನ್ನು ಕಂಡು ಬುದ್ಧನ ಸಂಬಂಧಿಯೂ, ಅವನಲ್ಲಿ ಅಸೂಯಾಪರನೂ ಆದ ದೇವದತ್ತನಿಗೆ ಬಹಳ ಸಂಕಟವಾಗುತ್ತಿತ್ತು. ಹೇಗಾದರೂ ಮಾಡಿ ಬುದ್ಧನಿಗೆ ತೊಂದರೆಕೊಡಬೇಕೆಂಬ ಅವನ ಪ್ರತಿಯೊಂದು ನಡೆ ವಿಫಲವಾಗುತ್ತಿತ್ತು. ಈಗ ಅವನಿಗೆ ಗೌರವ ನೀಡುವವರು, ಸತ್ಕಾರ ಮಾಡುವವರು ತುಂಬ ಕಡಿಮೆಯಾಗುತ್ತಿದ್ದರು. ಹೇಗಾದರೂ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ಪ್ರಯತ್ನ ಮಾಡುತ್ತಿದ್ದ. ಈ ಸಮಯದಲ್ಲಿ ಅವನಿಗೆ ಕೋಕಾಲಿಕನೆಂಬ ವ್ಯಕ್ತಿಯ ಪರಿಚಯವಾಯಿತು. ಆತ ತುಂಬ ಆಕರ್ಷಕವಾಗಿ ಮಾತನಾಡಬಲ್ಲವನಾಗಿದ್ದ. ಇಬ್ಬರೂ ಸೇರಿ ಮಾತನಾಡಿಕೊಂಡು ಪರಸ್ಪರ ಪ್ರಯೋಜನಮಾಡಿಕೊಳ್ಳಬೇಕೆಂದು ತೀರ್ಮಾನಿಸಿದರು.

ಕೋಕಾಲಿಕ ಬೇರೆ ಬೇರೆ ಗೃಹಸ್ಥರ ಮನೆಗೆ ಹೋಗುತ್ತಿದ್ದ. ಅವರ ಮುಂದೆ ದೇವದತ್ತನನ್ನು ಹೊಗಳಿ ಹಾಡಿ ದೇವದತ್ತ ಸ್ಥವಿರ ಮಹಾಸಮ್ಮತ ಪರಂಪರೆಯಲ್ಲಿ ಬೆಳೆದವನು, ಆತ ಹುಟ್ಟಿದ್ದು ಓಕಾಕ ರಾಜವಂಶದಲ್ಲಿ. ಅವನು ತ್ರಿಪಿಟಕಕ್ಕೆ ಅಧಿಕಾರಿಯಾಗಿದ್ದಾನೆ. ಅವನು ಧ್ಯಾನವನ್ನು, ಜ್ಞಾನವನ್ನು ಕರಗತಮಾಡಿಕೊಂಡಿದ್ದಾನೆ. ಅವನ ಹಾಗೆ ಧರ್ಮಕಥನ ಮಾಡುವವರು ಯಾರೂ ಇಲ್ಲ. ಈ ಗೌತಮ ಬುದ್ಧ ಮಾಡುವುದು ಬರೀ ನಾಟಕ. ಅವನಿಗೆ ಧ್ಯಾನದ ಆಳ ಗೊತ್ತಿಲ್ಲ ಎಂದು ದೇವದತ್ತನ ಪ್ರಶಂಸೆ ಮಾಡುತ್ತ, ಇಂಥ ಜ್ಞಾನಿಗೆ ನೀವು ಸತ್ಕಾರಮಾಡಬೇಕು ಎಂದು ಹೇಳುತ್ತ ಓಡಾಡುತ್ತಿದ್ದ. ಅತ್ತ ದೇವದತ್ತನೂ ತಾನು ಹೋದಲ್ಲೆಲ್ಲ ಕೋಕಾಲಿಕ ಅತ್ಯಂತ ಶ್ರೇಷ್ಠವಾದ ಬ್ರಾಹ್ಮಣ ಕುಲದಲ್ಲಿ ಹುಟ್ಟಿದವನು, ಆಗಲೇ ಪ್ರವ್ರಜಿತನಾಗಿದ್ದಾನೆ, ಅವನಷ್ಟು ಶಾಸ್ತ್ರಗಳನ್ನು ತಿಳಿದವರು ಯಾರೂ ಇಲ್ಲ, ಅವನಂತೆ ಪ್ರವಚನ ನೀಡುವವರು ದೊರೆಯುವುದು ಅಸಾಧ್ಯ, ಅಂಥವರಿಗೆ ನೀವು ಮನ್ನಣೆ ಕೊಡಬೇಕು ಎಂದು ಹೇಳುತ್ತಿದ್ದ.

ಇದನ್ನು ಕಂಡು ಭಿಕ್ಷುಗಳು ಇವರಿಬ್ಬರ ನಡತೆಯನ್ನು ಬುದ್ಧನ ಗಮನಕ್ಕೆ ತಂದರು. ಆಗ ಬುದ್ಧ ನಕ್ಕು ಪುಟ್ಟ ಕಥೆ ಹೇಳಿದ. ಹಿಂದೆ ತಾನು ಒಂದು ಜನ್ಮದಲ್ಲಿ ವೃಕ್ಷದೇವತೆಯಾಗಿದ್ದಾಗ ಒಂದು ಕಾಗೆ ನೇರಿಳೆಹಣ್ಣಿನ ಮರದ ಕೊಂಬೆಯ ಮೇಲೆ ಕುಳಿತಿತ್ತು. ಪಕ್ವವಾದ ಹಣ್ಣುಗಳನ್ನು ತಿಂದು ಸಂತೋಷವಾಗಿತ್ತು. ಆಗ ಅಲ್ಲಿಗೆ ಒಂದು ನರಿ ಬಂದಿತು. ಮರದ ಮೇಲಿದ್ದ ಕಾಗೆಯನ್ನು ಹಾಗೂ ಹಣ್ಣುಗಳನ್ನು ನೋಡಿ, “ನೇರಿಳೆ ಮರದ ಮೇಲೆ ಕುಳಿತು ಕೋಗಿಲೆಯಂತೆ ಹಾಡುವ ಅತ್ಯಂತ ಮಧುರ ಶಬ್ದದ, ಈ ಸರ್ವಶ್ರೇಷ್ಠ ಪಕ್ಷಿ ಯಾವುದು?” ಎಂದು ಕೇಳಿತು. ಇದು ನಾಟಕದ ಮಾತು, ಮೋಸದ ಪ್ರಶಂಸೆ. ಇದನ್ನು ಕೇಳಿ ಸಂತೋಷಪಟ್ಟ ಕಾಗೆ ಹೇಳಿತು, “ಒಬ್ಬ ಶ್ರೇಷ್ಠ ವ್ಯಕ್ತಿಗೇ ಮತ್ತೊಬ್ಬ ವ್ಯಕ್ತಿಯ ಶ್ರೇಷ್ಠತೆ ತಿಳಿಯುತ್ತದೆ. ಹುಲಿಯ ಮರಿಯಂತೆ ಬಣ್ಣ ಹೊಂದಿದ ಸ್ನೇಹಿತನೇ, ನಿನ್ನಂತಹ ಅಸಾಮಾನ್ಯ ಪ್ರಾಣಿಗೆ ನಾನು ಈ ಮರದ ಅತ್ಯಂತ ರುಚಿಯಾದ ಹಣ್ಣುಗಳನ್ನು ಕೊಡುತ್ತೇನೆ” ಎಂದು ಥಕಥಕನೆ ಕೊಂಬೆಯ ಮೇಲೆ ಕುಳಿತು, ಹಾರಾಡಿ ಎಲೆಗಳನ್ನು ಅಲುಗಾಡಿಸಿ ಹಣ್ಣುಗಳನ್ನು ಉದುರಿಸಿತು. ಇವರಿಬ್ಬರೂ ಒಬ್ಬರನ್ನೊಬ್ಬರು ಮಿಥ್ಯಾ ಪ್ರಶಂಸೆ ಮಾಡುವುದನ್ನು ಕಂಡು ವೃಕ್ಷದೇವತಗೆ ವಿಪರೀತ ಕೋಪ ಬಂದಿತು. “ಈ ಮೋಸಗಾರರನ್ನು ಆಗಿನಿಂದ ನೋಡುತ್ತಿದ್ದೇನೆ. ಒಂದು ಕೊಳಕನ್ನು ತಿನ್ನುವ ಕಾಗೆ ಮತ್ತೊಂದು ಹೆಣ ತಿನ್ನುವ ನರಿ. ಎರಡೂ ತಮ್ಮ ತಮ್ಮನ್ನು ಸುಮ್ಮಸುಮ್ಮನೆ ಹೊಗಳಿಕೊಳ್ಳುತ್ತಿವೆ” ಎಂದು ತನ್ನ ಭಯಂಕರ ರೂಪವನ್ನು ತೋರಿಸಿ ಓಡಿಸಿಬಿಟ್ಟಿತು.

ಬುದ್ಧ ಹೇಳಿದ, “ಈ ದೇವದತ್ತ ಮತ್ತು ಕೋಕಾಲಿಕ ಇವರೂ ಆ ಪ್ರಾಣಿಗಳಂತೆ. ಅವರನ್ನು ದೇವತೆಗಳೇ ಹೆದರಿಸಿ ಬುದ್ಧಿ ಕಲಿಸುತ್ತಾರೆ ಬಿಡಿ”. ಇಂದಿಗೂ ಹೀಗೆ ಮಿಥ್ಯಾಪ್ರಶಂಸೆ ಮಾಡುವವರನ್ನು ಕಂಡಾಗ ಈ ಕಥೆ ನೆನಪಾಗುತ್ತದೆ ಮತ್ತು ದೇವತೆಗಳು ಇವರಿಗೂ ಎಂದು ಬುದ್ಧಿ ಕಲಿಸುತ್ತಾರೆ ಎಂಬ ಕುತೂಹಲ ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT