ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಧ ಮುರಿಯುವ ಅಹಂಕಾರ

Last Updated 20 ಆಗಸ್ಟ್ 2019, 20:18 IST
ಅಕ್ಷರ ಗಾತ್ರ

ತಂದೆ ಮಕ್ಕಳಿಗೆ ಹದಗೆಟ್ಟುದನು ಕಾಣೆಯಾ? !
ಹೊಂದಿರುವರವರ್ ಅಹಂತೆಯು ಮೊಳೆಯುವನಕ ||
ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ ? |
ಬಂಧ ಮುರಿವುದು ಬಳಿಕ – ಮಂಕುತಿಮ್ಮ || 174 ||

ಪದ-ಅರ್ಥ: ಹೊಂದಿರುವರವರ್=ಹೊಂದಿರುವರು+ಅವರವರ, ಅಹಂತೆ=ಅಹಂಕಾರ, ನಾನೆಂಬುದೆದ್ದುನಿಲೆ=ನಾನು+ಎಂಬುದು+ಎದ್ದುನಿಲೆ
ವಾಚ್ಯಾರ್ಥ: ತಂದೆ ಮಕ್ಕಳ ನಡುವಿನ ಬಾಂಧವ್ಯದ ಹದಕೆಟ್ಟುದನ್ನು ಕಂಡಿಲ್ಲವೇ? ಅವರವರ ಅಹಂಕಾರ ಎದ್ದು ನಿಲ್ಲುವವರೆಗೆ ಬಂಧ. ಒಂದು ಸಲ ಅಹಂಕಾರ ಎದ್ದು ನಿಂತ ಮೇಲೆ ತಂದೆಯಾರು, ಮಕ್ಕಳಾರು? ನಂತರ ಬಂಧ ಮುರಿಯುತ್ತದೆ.

ವಿವರಣೆ: ಗ್ರೀಕ್ ಪುರಾಣದಲ್ಲಿ ಕ್ರೋನಸ್ ಎಂಬ ಒಬ್ಬ ರಾಜ. ಆತ ಅತ್ಯಂತ ಬಲಾಢ್ಯನಾದವನು. ಆತ ತುಂಬ ಮಹಾತ್ವಾಕಾಂಕ್ಷಿ ಕೂಡ. ತಾನು ಬಲುಬೇಗ ರಾಜನಾಗಿ ಸೃಷ್ಟಿಗೆಲ್ಲ ಒಡೆಯನಾಗಬೇಕೆಂಬ ಆತುರ. ಅದಕ್ಕೆ ಅವನೇನು ಮಾಡಿದ ಗೊತ್ತೇ? ತನ್ನ ತಂದೆ ಯುರೇನಸ್‍ನನ್ನು ತಾನೇ ಕೊಂದು ಪಟ್ಟಕ್ಕೇರಿದ. ಪಟ್ಟಕ್ಕೇರಿದ ಮೇಲೆ ಇನ್ನೊಂದು ಭಯ ಕಾಡತೊಡಗಿತು. ತಾನು ಹೇಗೆ ತನ್ನ ತಂದೆಯನ್ನು ಕೊಂದು ಅಧಿಕಾರಕ್ಕೆ ಬಂದನೋ ಹಾಗೆಯೇ ತನ್ನ ಮಕ್ಕಳೂ ತನ್ನನ್ನು ಕೊಂದುಬಿಡಬಹುದಲ್ಲ? ಅದಕ್ಕೆ ಅವನು ತನಗೆ ಮಗು ಹುಟ್ಟಿದ ತಕ್ಷಣ ಕೊಂದು ಹಾಕುತ್ತಿದ್ದ. ಅವನ ಹೆಂಡತಿ ರಿಯಾ ಬುದ್ಧಿವಂತೆ. ಗಂಡನಿಗೆ ದೊರೆಯದಂತೆ ಒಬ್ಬ ಮಗನನ್ನು ದೂರದಲ್ಲಿಟ್ಟು ಬೆಳೆಸಿದಳು. ಅವನ ಹೆಸರು ಝೀಯಸ್. ಆ ಮಗ ಅತ್ಯಂತ ಪರಾಕ್ರಮಶಾಲಿಯಾಗಿ ಬೆಳೆದ. ಅವನು ದೊಡ್ಡವನಾದ ಮೇಲೆ ತಂದೆ ಕ್ರೋನಸ್‍ನನ್ನು ಜೈಲಿನಲ್ಲಿಟ್ಟು ತಾನೇ ರಾಜನಾದ. ಎಲ್ಲಿದೆ ತಂದೆ ಮಕ್ಕಳ ನಡುವಿನ ಆತ್ಮೀಯ ಬಂಧ? ಅಧಿಕಾರ, ಅಹಂಕಾರಗಳೇ ತಲೆಎತ್ತಿ ಮೆರೆದಾಗ ಮಾನವೀಯ ಸಂಬಂಧಗಳು ಕರಗಿಹೋಗುತ್ತವೆ.

ಭಾರತೀಯ ಪುರಾಣಗಳಲ್ಲೂ ಇದೇ ತರಹದ ಸಂದರ್ಭಗಳು ಬರುತ್ತವೆ. ಪರಶಿವ ಕೋಪದಿಂದ ತನ್ನ ಪುತ್ರ ಗಣಪತಿಯ ಶಿರಚ್ಛೇದ ಮಾಡಲಿಲ್ಲವೇ? ಖಾಂಡವವನದ ದಹನಕಾರ್ಯದಲ್ಲಿ ಮಗ ಅರ್ಜುನ ತಂದೆ ಇಂದ್ರನೊಡನೆ ಹೋರಾಡುವ ಪ್ರಸಂಗ ಬಂದಿತಲ್ಲ. ತನ್ನನ್ನು ದೇವರೆಂದು ಮಗ ಒಪ್ಪಲಿಲ್ಲವೆಂಬ ಕೋಪದಿಂದ ತಂದೆ ಹಿರಣ್ಯಕಶಿಪು ಮಗ ಪ್ರಲ್ಹಾದನನ್ನು ಕೊಲ್ಲಲು ಪ್ರಯತ್ನಿಸಲಿಲ್ಲವೇ? ವಿಧಿಯ ಕೈವಾಡ ನೋಡಿ, ಶ್ರೀರಾಮ ತನ್ನ ಮಕ್ಕಳು ಲವ, ಕುಶರೊಂದಿಗೇ ಹೋರಾಡಬೇಕಾಯಿತು.
ಬಹುಪಾಲು ಸಂದರ್ಭಗಳಲ್ಲಿ ತಂದೆ-ಮಕ್ಕಳ ನಡುವಿನ ಅತ್ಯಂತ ಒಲವಿನ ಬಂಧಕ್ಕೆ ಧಕ್ಕೆಯಾಗುವುದು ಅಹಂಕಾರದ ಪ್ರವೇಶದಿಂದ. ಕಗ್ಗ ಹೇಳುತ್ತದೆ, ಈ ಪವಿತ್ರ ಬಂಧ, ಅಹಂಕಾರ ಮೊಳೆಯುವವರೆಗೆ ಸರಿಯಾಗಿರುತ್ತದೆ. ಆದರೆ ಯಾವಾಗ ನಾನು, ನನ್ನದು ಎಂಬ ಅಹಂಕಾರ ಎದ್ದು ನಿಂತತೋ ಆಗ ತಂದೆ ಯಾರು, ಮಗ ಯಾರು? ಆಗ ಬಾಂಧವ್ಯ ಮುರಿದು ಹೋಗುತ್ತದೆ.

ಇದು ಕೇವಲ ತಂದೆ-ಮಕ್ಕಳ ಸಂಬಂಧಕ್ಕೆ ಮಾತ್ರ ಅನ್ವಯಿಸುವುದಲ್ಲ. ಎಲ್ಲ ಮಾನವ ಸಂಬಂಧಗಳಿಗೆ ಆಗುವಂಥದ್ದು. ದಶಕಗಳ ಸ್ನೇಹ ಒಂದು ಕ್ಷಣದ ಗರ್ವದಲ್ಲಿ ಕರಗಿ ಹೋಗುತ್ತದೆ. ಎಲ್ಲಿ ಅಹಂತೆ ಮೊಳೆಯಿತೋ ಅಲ್ಲಿ ಸಂಬಂಧಗಳ ನಾಶವಾಗುತ್ತದೆ. ಸಾಹಚರ್ಯ ಬಹುಕಾಲ ಸಂತೋಷಕರವಾಗಿರಬೇಕೆಂದರೆ ಅಲ್ಲಿ ಅಹಂಕಾರದ ಪ್ರವೇಶವಾಗದಂತೆ ನೋಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT