ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಹಸಿತದ ಕೊಲೆ

Last Updated 27 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಬಂಧುವುಂ ಮಿತ್ರನುಂ ಭೃತ್ಯನುಂ ಶತ್ರುವೊಲೆ |

ದಂಡಧರನೋಲಗಕೆ ನಿನ್ನ ನೆಳೆವವರೋ ||

ಅಂದದೊಡವೆಯ ಮೊನೆಗಳಿಂದೆದೆಯನೊತ್ತುವಾ |

ಮಂದಹಸಿತದ ಕೊಲೆಯೊ – ಮಂಕುತಿಮ್ಮ || 177 ||

ಪದ-ಅರ್ಥ: ಭೃತ್ಯ=ಸೇವಕ, ದಂಡಧರನೋಲಗಕೆ= ದಂಡಧರನ (ಯಮನ)+ಓಲಗಕೆ(ದರ್ಬಾರಿಗೆ), ಮೊನೆಗಳಿಂದೆದೆಯನೊತ್ತುವಾ =ಮೊನೆಗಳಿಂದ+ಎದೆಯನು+ಒತ್ತುವ, ಮಂದಹಸಿತ=ಮಂದಹಾಸ, ಮೆಲುವಾದ ನಗು.

ವಾಚ್ಯಾರ್ಥ: ಬಂಧು, ಮಿತ್ರ ಸೇವಕರೆಲ್ಲರೂ ಶತ್ರುಗಳಂತೆ ನಿನ್ನನ್ನು ಯಮನ ದರ್ಬಾರಿಗೆ ಎಳೆದೊಯ್ಯುತ್ತಾರೆ. ಸುಂದರವಾದ ಆಭರಣ ತನ್ನ ಚೂಪಾದ ತುದಿಗಳಿಂದ ಎದೆಯನ್ನು ಒತ್ತುತ್ತ ನೋವು, ಗಾಯವನ್ನುಂಟು ಮಾಡುವಂತೆ ಇದು ಮಂದಹಾಸದೊಂದಿಗೆ ಕೊಲೆ ಮಾಡುವ ತಂತ್ರ.

ವಿವರಣೆ: ನಮಗಿರುವ ಸಾಮಾನ್ಯ ನಂಬಿಕೆಯೆಂದರೆ ನಮ್ಮ ಬಂಧುಗಳು, ಸ್ನೇಹಿತರು, ಸೇವಕರು ನಮಗೆ ಒಳ್ಳೆಯದನ್ನೇ ಮಾಡುತ್ತಾರೆ, ಸಂತೋಷವನ್ನು ನೀಡುತ್ತಾರೆ, ಆದರೆ ಶತ್ರುಗಳು ನಮಗೆ ತೊಂದರೆಯನ್ನೇ ಉಂಟು ಮಾಡುತ್ತಾರೆ. ಆದರೆ ಸ್ವಲ್ಪ ಆಲೋಚನೆ ಮಾಡಿ ನೋಡಿದರೆ ಅವರಿಬ್ಬರಲ್ಲಿ ಬಹಳ ವ್ಯತ್ಯಾಸವಿಲ್ಲ. ಮಕ್ಕಳಿಲ್ಲ ಎಂದು ಊರೂರು ಅಲೆದು ಹರಕೆ ಹೊತ್ತದ್ದೇನು! ನೋವು ತಿಂದದ್ದೇನು! ಮಗು ಹುಟ್ಟಿದ ಮೇಲೆ ಅದರ ಆರೋಗ್ಯದ ಚಿಂತೆ, ಶಿಕ್ಷಣದ ಚಿಂತೆ, ಕೆಲಸದ ಚಿಂತೆ, ಮದುವೆಯ ಚಿಂತೆ ಮತ್ತೆ ಮದುವೆಯಾದ ಮೇಲೆ ದೂರ ಹೊರಟುಹೋದ ಚಿಂತೆ. ನಿಜವಾಗಿಯೂ ಯೋಚನೆ ಮಾಡಿ, ಯಾವುದಾದರೂ ಒಬ್ಬ ವೈರಿ ನಿಮಗೆ ಇಷ್ಟು ದೀರ್ಘಕಾಲ ಚಿಂತೆ ಕೊಟ್ಟದ್ದುಂಟೇ? ಇದು ಪ್ರೀತಿಯಿಂದ, ಪ್ರೀತಿಗಾಗಿ ಉಂಡ ನೋವು.

ಕೆಲವೊಮ್ಮೆ ಪರಿವಾರದಲ್ಲಿ, ಸ್ನೇಹಿತರಿಗೆ ಯಾವುದೋ ತೊಂದರೆಯೋ ಅಥವಾ ಅನಾರೋಗ್ಯವೋ ಕಾಡಬಹುದು. ಆಗ ಅದು ನಮ್ಮದೇ ತೊಂದರೆಯೆಂದು ಕಷ್ಟಪಟ್ಟದ್ದು ನೆನಪಿದೆಯೋ? ಆ ಕಷ್ಟ ಪ್ರಸಂಗದಿಂದ ಹೊರಬರುವವರೆಗೆ ಪಟ್ಟ ನೋವು, ತೊಂದರೆಗಳಿಗೆ ಲೆಕ್ಕವಿದೆಯೇ? ಇದೂ ಕೂಡ ನಮ್ಮವರಿಂದಲೇ ಆತ ಪರಿತಾಪ.

ಇನ್ನು ಶತ್ರುಗಳು. ಯಾವುದೋ ಕೋಪದಿಂದ, ಹಟದಿಂದ, ದ್ವೇಷದಿಂದ ನಮ್ಮ ಬದುಕನ್ನೇ ನರಕವಾಗಿಸುತ್ತಾರೆ. ನಿಮ್ಮನ್ನು ತೊಂದರೆಗೆ ಸಿಲುಕಿಸಿ, ಕೋರ್ಟಿಗೆ ಎಳೆದು, ಹಣ ಖರ್ಚುಮಾಡಿಸಿ ದಿಕ್ಕುಗೆಡಿಸಿ ಬಿಡುತ್ತಾರೆ. ಬದುಕೇ ಸಾಕೆನಿಸಿಬಿಡುತ್ತದೆ. ಪ್ರತಿಯೊಂದು ನೋವು, ಸಂಕಟ ನಮ್ಮ ಸಂತೋಷದ ಆಯುಷ್ಯವನ್ನು ಕಡಿಮೆಮಾಡುತ್ತದೆ. ಅದನ್ನೇ ಕಗ್ಗ ಕಾವ್ಯಾತ್ಮಕವಾಗಿ, ‘ದಂಡಧರನೋಲಗಕೆ‘ ಎಂದರೆ ಯಮಲೋಕಕ್ಕೆ ನಮ್ಮನ್ನು ಎಳೆಯುತ್ತಾರೆ ಎನ್ನುತ್ತದೆ. ಸುಖವೂ ಒಂದು ಬಂಧ, ದುಃಖವೂ ಬಂಧವೇ. ಎರಡೂ ನಮ್ಮನ್ನು ಹಿಡಿದೆಳೆದು ಹಣ್ಣು ಮಾಡುತ್ತವೆ.

ಹೆಣ್ಣುಮಗಳೊಬ್ಬಳು ಆಸೆಯಿಂದ ಬಹುಸುಂದರವಾದ ಹಾರವೊಂದನ್ನು ಮಾಡಿಸಿ ಹಾಕಿಕೊಂಡಿದ್ದಳು. ಅದು ಅಪರೂಪದ ವಿನ್ಯಾಸ. ಸೂರ್ಯನ ಕಿರಣಗಳಂತೆ ಅದರ ಪದಕದ ರೂಪ. ಹಾಕಿಕೊಂಡ ಕೆಲವು ಕ್ಷಣ ತುಂಬ ಚೆನ್ನಾಗಿತ್ತು. ಆದರೆ ಸಮಯ ಹೋದಂತೆ ಪದಕದ ಕಿರಣಗಳಂತೆ ತೋರುವ ಬಂಗಾರದ ಚಾಚುಗಳು ಎದೆಯನ್ನು ಚುಚ್ಚಿ ಗಾಸಿ ಮಾಡಿ, ಗಾಯಮಾಡಿ, ಗಂಟಾಗುವಂತೆ ಆಯಿತು. ಬಂಗಾರದ ಒಡವೆಯ ಆಸೆ ಬಿಡುವುದಿಲ್ಲ, ಅದನ್ನು ಬಿಡದ ಹೊರತು ಗಾಯ ಮಾಯುವುದಿಲ್ಲ. ಇದೇ ಮಂದಹಸಿತದ ಕೊಲೆ. ಅಂದರೆ ನೋಡುವುದಕ್ಕೆ ಸುಂದರವಾಗಿ, ಅಪ್ಯಾಯಮಾನವಾಗಿದ್ದುದು ನಮಗರಿವಿಲ್ಲದ ಹಾಗೆ ನೋವುಂಟುಮಾಡುತ್ತದೆ, ಪ್ರಾಣ ಹೀರುತ್ತದೆ. ನಮ್ಮ ಬದುಕಿನ-ಪ್ರಿಯವಾದವರ, ಅಪ್ರಿಯವಾದವರ - ಬಂಧಗಳು ಕೂಡ ಮಂದಹಸಿತದ ಕೊಲೆಗಳೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT