ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರದೇಶದಲ್ಲಿ ಬದುಕುವ ಪರಿ

362
Last Updated 5 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಒಂದಾನೊಂದು ಕಾಲದಲ್ಲಿ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿರುವಾಗ ಹಿಮಾಲಯದ ದದ್ದರ ಪರ್ವತ ಶ್ರೇಣಿಗಳಲ್ಲಿ ದದ್ದರವೆಂಬ ಜಾತಿಯ ಅತ್ಯಂತ ವಿಷಪೂರಿತವಾದ ಮತ್ತು ಬಹು ದೊಡ್ಡ ಗಾತ್ರದ ಸರ್ಪಗಳ ನಿವಾಸವಿತ್ತು.

ಈ ರಾಜ್ಯದ ರಾಜನಿಗೆ ಇಬ್ಬರು ಮಕ್ಕಳು. ದೊಡ್ಡವನ ಹೆಸರು ಮಹಾದದ್ದರ. ಬೋಧಿಸತ್ವನೇ ಮಹಾ ದದ್ದರನಾಗಿ ಹುಟ್ಟಿದ್ದು. ಅವನಿಗೊಬ್ಬ ತಮ್ಮ. ಅವನ ಹೆಸರು ಚೂಳದದ್ದರ. ಆತ ಮಹಾಕೋಪಿಷ್ಠ. ಅವನು ಕೋಪದಲ್ಲಿ ಯಾವಾಗ, ಏನು ಮಾಡಿಬಿಡುತ್ತಾನೋ ಎಂಬುದನ್ನು ಹೇಳುವುದು ಸಾಧ್ಯವಿರಲಿಲ್ಲ. ತಂದೆಗೆ ಅವನನ್ನು ತಿದ್ದುವುದು ಕಷ್ಟವಾಗಿತ್ತು.

ಅವನ ಕಠೋರ ಸ್ವಭಾವ ಎಲ್ಲರನ್ನೂ ತೊಂದರೆಗೆ ಒಳಮಾಡುತ್ತಿತ್ತು. ಕಾರಣವಿಲ್ಲದೆ ಪುಟ್ಟ ನಾಗಗಳನ್ನು ಹೊಡೆಯುತ್ತ ಹಿಂಸಿಸುತ್ತಿದ್ದಾಗ ಅವು ತುಂಬ ತಾಳ್ಮೆಯಿಂದ ಅದನ್ನು ಸಹಿಸಿಕೊಂಡವು. ಕೊನೆಗೆ ತಡೆಯುವುದು ಸಾಧ್ಯವೇ ಇಲ್ಲವೆಂದಾಗ ಅವರೆಲ್ಲ ಸೇರಿ ರಾಜನಿಗೆ ದೂರು ಕೊಟ್ಟರು. ಅನ್ಯಗತಿಯಿಲ್ಲದೆ ರಾಜ ತನ್ನ ಕಿರಿಯ ಮಗನಿಗೆ ರಾಜ್ಯದಿಂದ ಹೊರಗೆ ಹೋಗುವಂತೆ ಆಜ್ಞೆ ಮಾಡಿದ.

ಆದರೆ, ಅಣ್ಣನಾದ ಮಹಾದದ್ದರ ತಮ್ಮನ ಪರ ತಂದೆಯನ್ನು ಪ್ರಾರ್ಥಿಸಿದ. ಅವನಿಗೊಂದು ಅವಕಾಶ ಕೊಡಬೇಕೆಂದು ಬೇಡಿಕೊಂಡ. ಅವನ ಮಾತನ್ನು ಮನ್ನಿಸಿ ರಾಜ ತನ್ನ ಸಣ್ಣ ಮಗನಿಗೆ ಕ್ಷಮೆ ನೀಡಿ ತನ್ನ ಆಜ್ಞೆಯನ್ನು ಹಿಂದಕ್ಕೆ ಪಡೆದುಕೊಂಡ. ಆದರೆ, ತಮ್ಮನ ಉಗ್ರತೆ ಕಡಿಮೆಯಾಗಲಿಲ್ಲ. ಮತ್ತೂ ಅವನ ನಡವಳಿಕೆ ಹಾಗೆಯೇ ಉಳಿದಾಗ ರಾಜ ಮತ್ತೊಮ್ಮೆ ಅವನಿಗೆ ದೇಶ ತ್ಯಾಗ ಮಾಡುವಂತೆ ಆಜ್ಞೆ ಮಾಡಿದ. ಅಣ್ಣನಾದ ಮಹಾದದ್ದರ ತಮ್ಮನಿಗೆ ಸ್ವಲ್ಪ ಬುದ್ಧಿ ಹೇಳಿ ಮತ್ತೆ ತಂದೆಯನ್ನು ಕಾಡಿ, ಬೇಡಿ ಗಡೀಪಾರು ಆಜ್ಞೆಯನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಮಾಡಿದ.

ತಮ್ಮ ಸ್ವಲ್ಪ ಕಾಲ ಮೃದುವಾದಂತೆ ಕಂಡರೂ ಮತ್ತೆ ಅವನ ಸಿಟ್ಟು, ಸೆಡವುಗಳು ಸೆಟೆದು ನಿಂತು ಪ್ರಜೆಗಳಿಗೆ ತುಂಬ ತೊಂದರೆಯಾಗತೊಡಗಿತು. ರಾಜನಿಗೆ ಈ ಬಾರಿ ತಡೆಯಲಾಗಲಿಲ್ಲ. ಅವನಿಗೆ ದೊಡ್ಡ ಮಗನ ಬಗ್ಗೆಯೂ ಕೋಪ ಬಂದಿತು. ಎರಡು ಬಾರಿ ಅನಾಚಾರಿಯಾದ ತಮ್ಮನನ್ನು ರಕ್ಷಿಸಿದ್ದಕ್ಕೆ ಅಸಮಾಧಾನದಿಂದ ಇಬ್ಬರನ್ನೂ ದೇಶದಿಂದ ಹೊರಗೆ ಹಾಕುವಂತೆ ಆಜ್ಞೆ ಮಾಡಿದ. ಅದು ಅಷ್ಟೇ ಅಲ್ಲ, ಅವರಿಬ್ಬರೂ ಹಿಮಾಲಯ ಪ್ರದೇಶವನ್ನು ಬಿಟ್ಟು ದೂರದ ವಾರಾಣಸಿಯಲ್ಲಿ ದುರ್ಗಂಧ ಬೀರುವ ದೊಡ್ಡ ಕಸದ ರಾಶಿಯಲ್ಲಿ ಮೂರು ವರ್ಷಗಳ ಕಾಲ ಬದುಕುವಂತೆ ಶಿಕ್ಷೆ ವಿಧಿಸಿದ.

ಅನಿವಾರ್ಯವಾಗಿ ಅಣ್ಣತಮ್ಮಂದಿರಿಬ್ಬರೂ ದೂರದ ವಾರಾಣಸಿಯನ್ನು ಸೇರಿ ಕಸದ ರಾಶಿಯಲ್ಲಿ ಮನೆ ಮಾಡಿದರು. ರಾಜಭವನದಲ್ಲಿ ಸಂತೋಷವಾಗಿದ್ದ ರಾಜಕುಮಾರರಿಗೆ ಕಸದ ರಾಶಿಯಲ್ಲಿ ಬದುಕುವುದು ಸುಲಭವಾಗಿರಲಿಲ್ಲ. ತಮ್ಮ ಆಹಾರವನ್ನು ಕಸದ ರಾಶಿಯಲ್ಲೇ ಹುಡುಕಿಕೊಳ್ಳಬೇಕಿತ್ತು. ಕುಡಿಯುವ ನೀರು ಕೂಡ ಕಸದಿಂದ ಸೋಸಿ ಕೆಳಗೆ ಬಂದ ದ್ರವವೇ ಆಗಿತ್ತು.

ಕಸದ ಗುಡ್ಡೆಯಲ್ಲಿ ಓಡಾಡುವ ಈ ಹಾವುಗಳನ್ನು ಕಂಡ ಸುತ್ತಮುತ್ತಲಿನ ಹುಡುಗರು ಕಲ್ಲು ಎಸೆಯುತ್ತಿದ್ದರು, ಕಟ್ಟಿಗೆಯ ತುಂಡುಗಳಿಂದ ಹೊಡೆಯಲು ನೋಡುತ್ತಿದ್ದರು. ಈ ಹಾವುಗಳ ದಪ್ಪ ತಲೆಗಳನ್ನು ನೋಡಿ ಇವು ಎಂತಹ ನೀರು ಹಾವುಗಳು ಎಂದು ಆಶ್ಚರ್ಯ ಪಡುತ್ತಿದ್ದರು. ಇವು ವಿಷರಹಿತವಾದ ಕೇವಲ ಕಪ್ಪೆಗಳನ್ನು ತಿನ್ನುವ ಹಾವುಗಳು ಎಂದು ಜನ ಎಂದಾಗ ತಮ್ಮ ಚೂಳದದ್ದರ ಕೋಪದಿಂದ ಕುದಿದುಹೋದ.

ನಮ್ಮಂತಹ ವಿಷಪೂರಿತ ಹಾವುಗಳು ಎಲ್ಲಿಯೂ ಇಲ್ಲ, ಹೀಗಿರುವಾಗ ಇವರು ನಮ್ಮನ್ನು ನೀರು ಹಾವು ಎಂದು ಕರೆದು ಅಪಮಾನ ಮಾಡುತ್ತಾರೆ. ಅವರೆನ್ನೆಲ್ಲ ಕಚ್ಚಿ ಸಾಯಿಸಿಬಿಡಲೇ ಎಂದು ಕೇಳಿದ. ಆಗ ಅಣ್ಣ ಹೇಳಿದ, ’ತಮ್ಮ, ತನ್ನ ದೇಶದಿಂದ ಅನ್ಯದೇಶಕ್ಕೆ ಬಂದ ವ್ಯಕ್ತಿ ತನ್ನ ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಅಪರಿಚಿತರ ಮಧ್ಯೆ ಇರುವಾಗ ಸಹನೆಯನ್ನು ಕಳೆದುಕೊಳ್ಳಬಾರದು. ಅತ್ಯಂತ ಶಕ್ತಿವಂತನಾದ ಬುದ್ಧಿವಂತನೂ ವಿದೇಶದಲ್ಲಿದ್ದಾಗ ಅಲ್ಲಿಯ ದಾಸರು ಮಾಡಿದ ಅಪಮಾನವನ್ನು ಕ್ಷಮಿಸಬೇಕು’.

ತಮ್ಮ ಕೋಪವನ್ನು ಅಡಗಿಸಿಕೊಂಡು ಸಾತ್ವಿಕನಾದ. ಶಿಕ್ಷೆಯ ಅವಧಿ ಮುಗಿದ ನಂತರ ಇಬ್ಬರೂ ತಮ್ಮದೇಶವನ್ನು ಸೇರಿ ಅಭಿಮಾನರಹಿತರಾಗಿ ಬಾಳಿದರು. ಪರದೇಶದಲ್ಲಿ, ಅಪರಿಚಿತರಲ್ಲಿ ಅಹಂಕಾರದ ನಡೆತರವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT