ಸೋಮವಾರ, ಡಿಸೆಂಬರ್ 16, 2019
17 °C

ಸೇವೆಯ ಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಒಂದು ವೃಕ್ಷ ದೇವತೆಯಾಗಿ ಜನ್ಮ ತಾಳಿದ್ದ. ವಾರಾಣಸಿಯಿಂದ ಸ್ವಲ್ಪ ದೂರದಲ್ಲಿ ಒಂದು ಗ್ರಾಮದ ಬದಿಯಲ್ಲಿ ಆತ ಒಂದು ಮುತ್ತುಗದ ಮರವಾಗಿದ್ದ. ಆ ದಿನಗಳಲ್ಲಿ ಜನರು ವೃಕ್ಷಗಳನ್ನು ಪೂಜಿಸುತ್ತಿದ್ದರು. ತಾವು ಆರಾಧಿಸುವ ಮರಕ್ಕೆ ಬಲಿಯನ್ನು ನೀಡಿ, ನೈವೇದ್ಯವನ್ನು ಅರ್ಪಿಸುತ್ತಿದ್ದರು.

ಒಬ್ಬ ದರಿದ್ರ ಬ್ರಾಹ್ಮಣ ಈ ಮುತ್ತುಗದ ಮರವನ್ನು ತನ್ನ ದೇವತೆಯನ್ನಾಗಿ ಆರಿಸಿಕೊಂಡ. ಸ್ವಲ್ಪ ಎತ್ತರದ ಸ್ಥಳದಲ್ಲಿ ನಿಂತಿದ್ದ, ಅಗಲವಾದ ಎಲೆಗಳನ್ನು ಹೊಂದಿ ವಿಶಾಲವಾಗಿ ಹರಡಿದ್ದ ಈ ಮರದ ಬುಡದಲ್ಲಿ ನೆಲವನ್ನು ಸಮ ಮಾಡಿದ. ನೀರು ನಿಲ್ಲುವಂತೆ ಪಾತಿ ಮಾಡಿದ. ಒಣ ಎಲೆಗಳನ್ನು, ಗೊಬ್ಬರವನ್ನು ತಂದು ಹಾಕಿದ. ಒಂದು ದಿನವೂ ತಪ್ಪದೆ ನೀರು ಹಾಕಿದ. ನಂತರ ಪ್ರತಿದಿನ ಅಲ್ಲಿಗೆ ಬಂದು ಹೂವು-ಗಂಧಗಳನ್ನು ಅರ್ಪಿಸಿ, ಧೂಪಾರತಿ ಮಾಡುತ್ತಿದ್ದ. ಇದಿಷ್ಟೇ ಅಲ್ಲ ನಿತ್ಯ ರಾತ್ರಿಯ ಹೊತ್ತಿಗೆ ಮರದ ಹತ್ತಿರ ಬಂದು ದೀಪವನ್ನು ಹಚ್ಚಿಟ್ಟು ನಮಸ್ಕಾರ ಮಾಡಿ, ‘ನನ್ನ ಪ್ರಿಯ ವೃಕ್ಷದೇವತೆ ಸುಖವಾಗಿ ನಿದ್ರೆಮಾಡು’ ಎಂದು ಹೇಳಿ ಮನೆಗೆ ಹೋಗುತ್ತಿದ್ದ. ಮರುದಿನ ಬೆಳಿಗ್ಗೆ ಸ್ನಾನ ಮಾಡಿ ಮರದ ಬಳಿಗೆ ಬಂದು ಪೂಜೆ ಮಾಡಿ, ‘ನನ್ನ ದೈವವಾದ ವೃಕ್ಷದೇವತೆಯೇ, ನಿನ್ನೆ ರಾತ್ರಿ ಸುಖವಾದ ನಿದ್ರೆ ಬಂತೇ?’ ಎಂದು ಕೇಳುತ್ತಿದ್ದ.

ಇದೇ ರೀತಿ ಒಂದು ವರ್ಷಕಾಲ ನಡೆಯಿತು. ವೃಕ್ಷ ದೇವತೆಗೆ ಸಂತೋಷ, ಆಶ್ಚರ್ಯಗಳೆರಡೂ ಆಗಿದ್ದವು. ಈ ಬ್ರಾಹ್ಮಣ ನನ್ನನ್ನು ಇಷ್ಟು ಪ್ರೀತಿಯಿಂದ, ಗೌರವದಿಂದ ಕಾಣುತ್ತಾನೆ. ಅವನಿಗೆ ಯಾವ ಅಪೇಕ್ಷೆ ಇದೆಯೋ ತಿಳಿಯದು. ಅದನ್ನು ತಿಳಿದು ಅವನ ಅಪೇಕ್ಷೆಯನ್ನು ಪೂರೈಸಬೇಕು ಎಂದು ವೃಕ್ಷ ದೇವತೆ ತೀರ್ಮಾನಿಸಿ ಮರುದಿನ ಬ್ರಾಹ್ಮಣ ಪೂಜೆಗೆ ಬಂದಾಗ ಅಲ್ಲಿಗೆ ಒಬ್ಬ ವೃದ್ಧ ಬ್ರಾಹ್ಮಣನ ರೂಪದಲ್ಲಿ ಬಂದಿತು. ‘ಅಯ್ಯಾ ಬ್ರಾಹ್ಮಣ, ನೀನು ವೃಕ್ಷವನ್ನು ಪರಿಪರಿಯಾಗಿ ಸೇವಿಸುತ್ತೀ. ಪ್ರತಿಕ್ರಿಯೆಯನ್ನು ನೀಡದ ಮರಕ್ಕೆ, ಮನುಷ್ಯರಿಗೆ ಕೇಳಿದಂತೆ ದಿನವೂ - ಸುಖವಾಗಿ ನಿದ್ರಿಸು ಎಂದು ಹೇಳಿ ಮತ್ತೆ ಮರುದಿನ - ಸುಖ ನಿದ್ರೆ ಬಂತೇ? ಎಂದು ಕೇಳುತ್ತೀಯಲ್ಲ, ಇದಕ್ಕೆ ಕಾರಣವೇನು? ಮರದಿಂದ ನಿನ್ನ ಅಪೇಕ್ಷೆ ಏನಾದರೂ ಉಂಟೇ?’ ಎಂದು ಕೇಳಿದ ವೃದ್ಧ ಬ್ರಾಹ್ಮಣ. ಅದಕ್ಕೆ ದರಿದ್ರ ಬ್ರಾಹ್ಮಣ ಹೇಳಿದ, ‘ಸ್ವಾಮೀ, ಇದೊಂದು ವಿಶೇಷವಾದ ವೃಕ್ಷದೇವತೆ. ಅದು ಎತ್ತರದಲ್ಲಿದೆ, ಅದರ ಎಲೆಗಳು ತುಂಬ ಅಗಲವಾಗಿವೆ. ಆದ್ದರಿಂದ ದೇವತೆಗಳ ವಾಸಕ್ಕೆ ಅತ್ಯಂತ ತಕ್ಕುದಾಗಿದೆ. ಖಂಡಿತವಾಗಿಯೂ ಅದರಲ್ಲಿ ದೇವತೆಗಳಿದ್ದಾರೆ. ನನ್ನ ಬಡತನದ ಕಷ್ಟಗಳನ್ನು ಅವರ ಮುಂದಲ್ಲದೆ ಮತ್ತಾರ ಮುಂದೆ ಹೇಳಿಕೊಳ್ಳಲಿ? ಅವರೇ ನನಗೆ ದಿಕ್ಕು, ದೈವ ಎಲ್ಲವೂ’.

ಇದನ್ನು ಕೇಳಿದ ವೃಕ್ಷದೇವತೆ ತುಂಬ ಸಂತೋಷ ಹೊಂದಿ ಆಕಾಶದಿಂದ ಗಂಭೀರವಾದ ಧ್ವನಿಯಲ್ಲಿ ಹೇಳಿತು, ‘ಬ್ರಾಹ್ಮಣ, ನಿನ್ನ ವಿನಯಶೀಲತೆಯನ್ನು, ಪ್ರಾಮಾಣಿಕತೆಯನ್ನು ಮೆಚ್ಚಿದ್ದೇನೆ. ನಿನ್ನ ಜೀವನ ಪರ್ಯಂತ ಸಾಕಾಗುವಷ್ಟು ಧನವನ್ನು ನಿನ್ನ ಮನೆಗೆ ಕಳುಹಿಸಿದ್ದೇನೆ. ನೀನು ನಿನ್ನ ಹೆಂಡತಿ ಮಕ್ಕಳೊಡನೆ ಸುಖವಾಗಿ ಜೀವನ ಮಾಡು’. ಬಡ ಬ್ರಾಹ್ಮಣ ಮನೆಮುಟ್ಟುವುದರಲ್ಲಿ ಬಡವನಾಗಿರಲಿಲ್ಲ, ವೃಕ್ಷ ದೇವತೆಯ ಕೃಪೆಯಿಂದ ಶ್ರೀಮಂತನಾಗಿದ್ದ.

ಯಾವ ಸೇವೆಯೂ ವ್ಯರ್ಥವಾಗುವುದಿಲ್ಲ. ಮನುಷ್ಯರಿಗೆ ಮಾಡಿದ ಸೇವೆಯೇ ಫಲ ಕೊಡುವುದಾದರೆ ದೇವತೆಗಳಿಗೆ ಮಾಡಿದ ಸೇವೆ ಖಂಡಿತವಾಗಿ ದೀರ್ಘಕಾಲದ ಸಂತೋಷವನ್ನೇ ಕೊಡುತ್ತದೆ. 

ಪ್ರತಿಕ್ರಿಯಿಸಿ (+)