ಬುಧವಾರ, ನವೆಂಬರ್ 20, 2019
24 °C

ಅತಿಯಾಗದ ಬದುಕಿನ ದೃಷ್ಟಿ

Published:
Updated:

ನೋಡುನೋಡುತ ಲೋಕಸಹವಾಸ ಸಾಕಹುದು |
ಬಾಡುತಿಹ ಹೂಮಾಲೆ ಗೂಢವಿಹ ಕಜ್ಜಿ ||
ತೋಡದಿರು ಬಾಳ್ವೆಯಾಳವನು, ಮೇಲ್ಮೇಲೆ ನೀ |
ನೋಡಾಡು ಹಗುರದಿಂ – ಮಂಕುತಿಮ್ಮ || 184 ||

ಪದ-ಅರ್ಥ: ಕಜ್ಜಿ=ಹುಣ್ಣು, ವೃಣ, ತೋಡದಿರು=ಕೆದಕದಿರು,
ಕೆದರದಿರು, ಬಾಳ್ವೆಯಾಳವನು=ಬಾಳ್ವೆಯ(ಬದುಕಿನ)+ಆಳವನು, ನೀನೋಡಾಡು=ನೀನು+ಓಡಾಡು
ವಾಚ್ಯಾರ್ಥ: ನೋಡುತ್ತಿದ್ದಂತೆಯೇ ಈ ಲೋಕದ ಸಹವಾಸ ಸಾಕು ಎನ್ನಿಸಿಬಿಡುತ್ತದೆ. ಈ ಲೋಕ ಒಂದು ಬಾಡುತ್ತಿರುವ ಹೂಮಾಲೆ, ಚರ್ಮದಾಳದಲ್ಲಿ ಕೆಣಕುತ್ತಿರುವ ಹುಣ್ಣು. ಅದಕ್ಕೆ ಬಾಳುವೆಯ ಆಳವನ್ನು ಕೆದಕಬೇಡ. ಮೇಲೆ ಮೇಲೆಯೇ ಹಗುರವಾಗಿ ಓಡಾಡು.

ವಿವರಣೆ: ಲೋಕವನ್ನು ನೋಡುತ್ತಿದ್ದಂತೆ, ಅದರ ಆಡಂಬರವನ್ನು, ಅಲ್ಲಿಯ ಅವ್ಯವಸ್ಥೆಯನ್ನು, ಅನ್ಯಾಯ, ಅಪಚಾರಗಳನ್ನು ನೋಡಿ ಇದರ ಸಹವಾಸವೇ ಸಾಕು ಎನ್ನಿಸುವುದುಂಟು. ಈ ಜಗತ್ತು ಹೇಗಿದೆ ಎನ್ನುವುದಕ್ಕೆ ಕಗ್ಗ ಎರಡು ಉಪಮೆಗಳನ್ನು ನೀಡುತ್ತದೆ. ಮೊದಲನೆಯದು ಬಾಡುತ್ತಿರುವ ಹೂವಿನ ಮಾಲೆ. ಇದು ತುಂಬ ಸಮರ್ಪಕವಾದದ್ದು. ಬೆಳಿಗ್ಗೆ ಬಿಡಿಸಿರುವ ಹೂವು ಅತ್ಯಂತ ಸುಂದರವಾದದ್ದು, ಸುವಾಸನೆಯಿಂದ ಕೂಡಿದ್ದು. ಅದರ ಮಾಲೆ ತುಂಬ ಸಂತೋಷ ಕೊಡುವಂತಹದ್ದು. ಆ ಮಾಲೆಯನ್ನು ಒಂದೆಡೆಗೆ ತೂಗುಹಾಕಿ ಬಿಟ್ಟು ಬಿಡಿ. ನಾಲ್ಕಾರು ತಾಸು ಅದರ ಸುಗಂಧ ಸುತ್ತಲಿನ ಪ್ರದೇಶವನ್ನೆಲ್ಲ ಆವರಿಸಿಕೊಳ್ಳುತ್ತದೆ, ಮನಸ್ಸನ್ನು ಪ್ರಫುಲ್ಲವನ್ನಾಗಿ ಮಾಡುತ್ತದೆ. ಆದರೆ ಆರೆಂಟು ತಾಸುಗಳ ನಂತರ ಮಾಲೆಯಲ್ಲಿದ್ದ ಹೂವುಗಳು ಬಾಡತೊಡಗುತ್ತವೆ, ಬಣ್ಣ ಕಪ್ಪಗಾಗತೊಡಗುತ್ತದೆ. ಸುಗಂಧ ವಾಸನೆ ಕಳೆದು ಹೋಗಿ ಘಾಟು ವಾಸನೆ ಬರತೊಡಗುತ್ತದೆ. ಮುಂದೆ ನಾಲ್ಕು ತಾಸಿನಲ್ಲಿ ಅದೊಂದು ಕಸವಾಗಿ ಮೊದಲಿನ ಸೌಂದರ್ಯದ ವಸ್ತು ಇದೇನೆ ಎಂದು ಅಚ್ಚರಿಪಡುವಂತೆ ಆಗುತ್ತದೆ. ಪ್ರಪಂಚವೂ ಹಾಗೆಯೇ. ಬಾಲ್ಯದಲ್ಲಿ ಯಾವ ಜವಾಬ್ದಾರಿಯೂ ಇಲ್ಲದೆ ಸಂತೋಷವಾಗಿ ಕಳೆದಾಗ ಪ್ರಪಂಚ ತುಂಬ ಸುಂದರವಾಗಿ ಕಾಣುತ್ತದೆ. ನಾವು ಬೆಳೆದಂತೆ ಪ್ರಪಂಚದ ಉಳಿದ ಮುಖಗಳ, ಉಗ್ರ ಸ್ವಭಾವದ ಪರಿಚಯವಾಗಿ ಮನಸ್ಸು ವ್ಯಗ್ರವಾಗುತ್ತದೆ. ಮತ್ತು ವಯಸ್ಸಾಗುತ್ತ ಬಂದಂತೆ ಜನರ ಸಣ್ಣತನ, ಭ್ರಷ್ಟಾಚಾರ, ಪ್ರಕೃತಿ ವಿಕೋಪಗಳು, ಜೊತೆಗಾರರ ಮರಣ ಇವನ್ನೆಲ್ಲ ಕಂಡು ಸಾಕಪ್ಪಾ ಬದುಕು ಎನ್ನಿಸುವುದು ಸಹಜ. ಇದೂ ಹೂಮಾಲೆಯ ಪರಿಯೇ ಅಲ್ಲವೆ?

ಇನ್ನೊಂದು ಉಪಮೆ-ಗೂಢವಾಗಿರುವ ಕಜ್ಜಿ. ಅದೊಂದು ಚರ್ಮದ ಆಳದಲ್ಲಿ ಆಗಿರುವ ವೃಣ. ಕೈಯಾಡಿಸೋಣವೆಂದರೆ ಸಿಕ್ಕದು ಆದರೆ ತುರಿಕೆ ನಿಲ್ಲದು. ಅಂದರೆ ಅದರ ಮೂಲ ತಿಳಿಯದು ಆದರೆ ತೊಂದರೆ ತಪ್ಪದು. ಜಗತ್ತಿನದೂ ಅದೇ ವಿಷಯ. ಅದರ ಮೂಲ ನಮ್ಮ ಕೈಗೆ ಸಿಕ್ಕುವುದಿಲ್ಲ ಆದರೆ ತೊಂದರೆ ತಪ್ಪುವುದಿಲ್ಲ.

ಕಗ್ಗ ಹೇಳುತ್ತದೆ ಒಂದು ಕಿವಿಮಾತನ್ನು, ಈ ಬಾಳುವೆಯ ಆಳವನ್ನು ಕೆದಕಲು ಹೋಗಬೇಡ. ಚರ್ಮದ ಆಳದಲ್ಲಿದ್ದ ಹುಣ್ಣನ್ನು ಕೆದಕುತ್ತ ಹೋದರೆ ಅದು ಇನ್ನಷ್ಟು ದೊಡ್ಡ ವೃಣವಾಗಿ ಕಾಡುತ್ತದೆ. ಅದಕ್ಕೆ ಬಾಳುವೆ ವಿಷಯದಲ್ಲಿ ಪ್ರತಿಯೊಂದಕ್ಕೂ ಆಳದಲ್ಲಿ ಹುಡುಕಿ, ಹುಡುಕಿ ನೋಡದೆ ಹಗರುವಾಗಿ ಮೇಲೆ ಮೇಲೆಯೇ ಸಂತೋಷಪಡುತ್ತ ಬದುಕು ಎನ್ನುತ್ತದೆ ಕಗ್ಗ. ಹೀಗೆಂದರೆ ಬದುಕನ್ನು ಆಳವಾಗಿ, ಗಂಭೀರವಾಗಿ ತೆಗೆದುಕೊಳ್ಳಬಾರದೆಂದಲ್ಲ. ಯಾವುದೂ ಅತಿಯಾಗಬಾರದು, ಮಿತಿಯಲ್ಲಿರಬೇಕು.

ಪ್ರತಿಕ್ರಿಯಿಸಿ (+)