ಗುರುವಾರ , ನವೆಂಬರ್ 14, 2019
19 °C

ಕೃತಘ್ನರಿಂದ ದೂರ

ಗುರುರಾಜ ಕರಜಗಿ
Published:
Updated:

ಹಿಂದೆ ಬ್ರಹ್ಮದತ್ತ ವಾರಣಾಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಮರಕುಟಿಗ ಪಕ್ಷಿಯ ಹೊಟ್ಟೆಯಲ್ಲಿ ಹುಟ್ಟಿ ಹಿಮಾಲಯದ ತಪ್ಪಲು ಪ್ರದೇಶದಲ್ಲಿ ವಾಸವಾಗಿದ್ದ. ದಿನ ಕಳೆದಂತೆ ದೊಡ್ಡ ಪಕ್ಷಿಯಾಗಿ ಪಕ್ಷಿ ಸಂಕುಲದ ನಾಯಕನಾದ. ಆತ ಚಾಕಚಕ್ಯತೆಯಿಂದ ಮರವನ್ನು ಕುಕ್ಕಿ ಪೊಳ್ಳುಮಾಡುವುದು ಎಲ್ಲ ಪಕ್ಷಿಗಳಿಗೆ ಕೌತುಕದ ವಿಷಯವಾಗಿತ್ತು.

ಒಮ್ಮೆ ಕಾಡಿನ ರಾಜ ಸಿಂಹ ಒಂದು ದೊಡ್ಡ ಎಮ್ಮೆಯನ್ನು ಹೊಡೆದು ಅವಸರವಸರವಾಗಿ ಮಾಂಸ ತಿನ್ನುವಾಗ ಒಂದು ಮೂಳೆ ಗಂಟಲಲ್ಲಿ ಸಿಕ್ಕಿಕೊಂಡಿತು. ಅದನ್ನು ಒಳಗೆ ನುಂಗಲೂ ಆಗಲಿಲ್ಲ, ಹೊರಗೆ ಉಗುಳಲೂ ಆಗಲಿಲ್ಲ. ಗಂಟಲಿನ ಎರಡು ಭಾಗದಲ್ಲೂ ಮೂಳೆ ಚುಚ್ಚಿಕೊಂಡು ರಕ್ತ ಸೋರಿ ಹುಣ್ಣಾಯಿತು. ಅದರಿಂದ ಗಂಟಲು ಊದಿಕೊಂಡಿತು. ಸಿಂಹಕ್ಕೆ ತಿನ್ನುವುದಿರಲಿ, ನೀರು ಕುಡಿಯುವುದೂ ಕಷ್ಟವಾಯಿತು. ಏನೂ ತಿನ್ನುವುದೇ ಅಸಾಧ್ಯವೆಂದಾಗ ಬೇಟೆಯಾಡುವುದಾದರೂ ಏಕೆ ಎಂದುಕೊಂಡು ಸಿಂಹ ಮರದ ಕೆಳಗೇ ಮಲಗಿಬಿಟ್ಟಿತ್ತು. ನಿದ್ರೆ ಬಾರದೆ ನರಳುತ್ತ, ಹೊರಳಾಡುತ್ತ ಇತ್ತು.

ಮರದ ಕೊಂಬೆಯ ಮೇಲೆ ಮರಕುಟಿಕ ಪಕ್ಷಿ ಇದರ ಕಷ್ಟವನ್ನು ಸ್ವಲ್ಪ ಕಾಲ ಗಮನಿಸಿತು. ಸಿಂಹಕ್ಕೆ ಅನಾರೋಗ್ಯವಾಗಿರಬೇಕು, ಇಲ್ಲದೆ ಹೋದರೆ ಮೂರು ದಿನಗಳಿಂದ ಬೇಟೆಯಾಡದೆ, ಹೀಗೆ ಮಲಗಿಕೊಳ್ಳುತ್ತಿರಲಿಲ್ಲ, ಅದನ್ನು ವಿಚಾರಿಸಬೇಕು ಎಂದುಕೊಂಡು ಮರದ ಮೇಲಿಂದಲೇ ಕೂಗಿತು, ‘ಮಿತ್ರ, ನಿನಗೆ ಅನಾರೋಗ್ಯವಾಗಿದೆಯೇ? ಮತ್ತೇನಾದರೂ ತೊಂದರೆ ಇದೆಯೇ? ನನ್ನಿಂದ ಏನಾದರೂ ಸಹಾಯ ಬೇಕಾದರೆ ಹೇಳು‘ ಸಿಂಹ ತಲೆ ಎತ್ತಿ ನೋಡಿ ತನ್ನ ಗಂಟಲಿನಲ್ಲಿ ಮೂಳೆ ಸಿಕ್ಕುಹಾಕಿಕೊಂಡದ್ದು, ಹುಣ್ಣಾದದ್ದು ಎಲ್ಲವನ್ನು ಹೇಳುವಾಗ ಅದರ ಕಣ್ಣಲ್ಲಿ ನೀರು ಹನಿಯಿತು. ಅದನ್ನು ಕೇಳಿ ಪಕ್ಷಿ ಕನಿಕರದಿಂದ, ‘ಮಿತ್ರಾ, ನಾನು ನಿನಗೆ ಸಹಾಯ ಮಾಡಬಲ್ಲೆ. ನೀನು ದೀರ್ಘವಾಗಿ ಒಂದು ನಿಮಿಷ ಬಾಯಿ ತೆರೆದರೆ ನಾನು ನನ್ನ ಉದ್ದವಾದ ಕೊಕ್ಕಿನಿಂದ ಮೂಳೆಯನ್ನು ಹೊರಕ್ಕೆ ತೆಗೆದುಬಿಡುತ್ತೇನೆ. ಆದರೆ ನಿನ್ನ ಬಗ್ಗೆ ನನಗೆ ಭಯ. ನಾನು ನಿನ್ನ ಬಾಯೊಳಗೆ ಹೋಗಿ ಮೂಳೆಯನ್ನು ತೆಗೆದಾದ ಮೇಲೆ ನನ್ನನ್ನೇ ತಿಂದುಬಿಟ್ಟರೆ ಏನು ಗತಿ?’ ಎಂದು ಕೇಳಿತು. ಆಗ ಸಿಂಹ, ‘ಭಯಪಡಬೇಡ ಮಿತ್ರ. ನೀನು ಮಾಡುತ್ತಿರುವುದು ನನ್ನನ್ನು ಉಳಿಸುವುದಕ್ಕಾಗಿ. ಹೀಗೆ ನನಗೆ ಸಹಾಯ ಮಾಡಿದ ಸ್ನೇಹಿತನಿಗೆ ನಾನು ಅನ್ಯಾಯ ಮಾಡುತ್ತೇನೆಯೇ? ದಯವಿಟ್ಟು ನನ್ನ ಪ್ರಾಣವನ್ನು ಉಳಿಸು” ಎಂದು ಬೇಡಿತು.
‘ಹಾಗಾದರೆ ನೀನು ಅಂಗಾತವಾಗಿ ಮಲಗಿ, ಅಗಲವಾಗಿ ಬಾಯಿ ತೆರೆ‘ ಎಂದು ಹೇಳಿತು ಪಕ್ಷಿ. ಸಿಂಹ ಆಶ್ವಾಸನೆ ಕೊಟ್ಟಿದ್ದರೂ ನಾನು ನನ್ನ ಎಚ್ಚರದಲ್ಲಿರಬೇಕೆಂದು ಜಾಣ ಪಕ್ಷಿ ಸಿಂಹದ ತೆರೆದ ಬಾಯಿಯಲ್ಲಿ ಮೇಲಿನ ಮತ್ತು ಕೆಳಗಿನ ದವಡೆಯ ಮಧ್ಯ ಒಂದು ದಪ್ಪನಾದ ಕಡ್ಡಿಯನ್ನು ಸಿಕ್ಕಿಸಿ ಬಾಯಿ ಮುಚ್ಚದಂತೆ ಮಾಡಿತು. ನಂತರ ಧೈರ್ಯದಿಂದ ಸಿಂಹದ ಬಾಯಿಯನ್ನು ಪ್ರವೇಶಿಸಿ ಅಡ್ಡ ಸಿಕ್ಕಿಕೊಂಡಿದ್ದ ಮೂಳೆಯನ್ನು ಹಿಡಿದು ಹೊರಗೆಸೆದು, ಹೊರಗೆ ಬರುವಾಗ ಅಡ್ಡ ಇಟ್ಟಿದ್ದ ಕಡ್ಡಿಯನ್ನು ತೆಗೆದು ಹೊರಗೆ ಹಾರಿತು. ಮುಂದೆ ಸಿಂಹ ಸಂಪೂರ್ಣವಾಗಿ ಆರೋಗ್ಯವನ್ನು ಹೊಂದಿತು.

ಮುಂದೆ ಒಂದು ದಿನ ಸಿಂಹದ ಬಳಿಗೆ ಬಂದ ಪಕ್ಷಿ, ‘ಮಿತ್ರಾ, ನಾನು ನಿನಗೆ ಯಥಾಶಕ್ತಿ ಸಹಾಯ ಮಾಡಿದ್ದೆ. ಈಗ ನೀನು ತಿಂದ ಪ್ರಾಣಿಯ ಮಾಂಸದಲ್ಲಿ ನನಗೂ ಕೊಂಚ ಕೊಡುತ್ತೀಯಾ?‘ ಎಂದು ಕೇಳಿತು. ಆಗ ಸಿಂಹ, ‘ಹಿಂದಿನದನ್ನು ಬಿಡು. ನಿನ್ನ ಜೀವ ತೆಗೆಯದೆ ಬಿಟ್ಟಿದ್ದಕ್ಕೆ ಸಂತೋಷಪಡು” ಎಂದಿತು. ಆಗ ಬೋಧಿಸತ್ವ ಪಕ್ಷಿ ಹೇಳಿತು, “ಕೃತಘ್ನರಿಗೆ, ಪ್ರತ್ಯುಪಕಾರ ಮಾಡದವರಿಗೆ, ಮಿತ್ರಧರ್ಮ ತೋರಿಸದವರಿಗೆ ಏನು ಮಾಡಬೇಕು ಗೊತ್ತೇ? ಅವರ ಬಗ್ಗೆ ಕೆಟ್ಟ ಮಾತನಾಡದೆ, ಅವರ ಬಗ್ಗೆ ಅಸೂಯೆ ತೋರಿಸದೆ, ಆದಷ್ಟು ಬೇಗ ಅವರಿಂದ ದೂರ ಹೋಗಿ ಬಿಡಬೇಕು‘. ಈ ಮಾತು ಎರಡೂವರೆ ಸಾವಿರ ವರ್ಷಗಳ ನಂತರವೂ ಹೊಂದುತ್ತದೆ. ಅದರಲ್ಲೂ ಕೃತಘ್ನರು ಬಲಶಾಲಿಯಾಗಿದ್ದರೆ ಅವರಿಂದ ದೂರವಿದ್ದಷ್ಟೂ ಕ್ಷೇಮ.

ಪ್ರತಿಕ್ರಿಯಿಸಿ (+)