ಸೋಮವಾರ, ಡಿಸೆಂಬರ್ 9, 2019
17 °C

ಸಂಗಾತಿಯ ಅರಸುವಿಕೆ

ಗುರುರಾಜ ಕರಜಗಿ
Published:
Updated:

ನುಡಿಗಟ್ಟಿನಾಟದಕ್ಕರಚೀಟಿಯೊಟ್ಟಿನಲಿ |
ತಡಕಿ ನಾವಾಯ್ದಾಯ್ದು ನುಡಿ ಜೋಡಿಪಂತೆ ||
ಬಿಡಿ ಜೀವ ಸಂಗಾತಿಜೀವಗಳನರಸಿ ತಾಂ |
ಪಡೆದಂದು ಪೂರ್ಣವದು – ಮಂಕುತಿಮ್ಮ || 187 ||

ಪದ-ಅರ್ಥ: ನುಡಿಗಟ್ಟಿನಾಟದಕ್ಕರಚೀಟಿಯೊಟ್ಟಿನಲಿ=ನುಡಿಗಟ್ಟಿನ+ಆಟದ+ಅಕ್ಕರ+ಚೀಟಿ+ಒಟ್ಟಿನಲಿ, ತಡಕಿ=ಹುಡುಕಾಡಿ, ನಾವಾಯ್ದಾಯ್ದು=ನಾವು+ಆಯ್ದು+ಆಯ್ದು, ಜೋಡಿಪಂತೆ=ಜೋಡಿಸುವಂತೆ, ಸಂಗಾತಿಜೀವಗಳನರಸಿ=ಸಂಗಾತಿ+ಜೀವಗಳನು+ಅರಸಿ

ವಾಚ್ಯಾರ್ಥ: ನುಡಿಗಟ್ಟಿನ ಆಟವನ್ನು ಆಡುವಾಗ ಅಕ್ಷರಗಳ ಚೀಟಿಯ ಗುಂಪಿನಲ್ಲಿ ನಾವು ಹುಡುಕಾಡಿ, ಆಯ್ದು ಪದಗಳನ್ನು ಜೋಡಿಸುವಂತೆ, ಏಕಾಕಿಯಾದ ಜೀವ ತನಗೆ ಸರಿಯಾದ, ಸಂಗಾತಿಯಾದ ಜೀವಗಳನ್ನು ಹುಡುಕಿ ಪಡೆದಾಗ ಆ ಬದುಕು ಪೂರ್ಣವಾಗುತ್ತದೆ.

ವಿವರಣೆ: ನುಡಿಗಟ್ಟಿನ ಆಟ ಒಂದು ಸುಂದರವಾದ ಪದಬಂಧದ ಆಟ. ಅಕ್ಷರಗಳನ್ನು ಬರೆದ ಚೀಟಿಗಳ ಗುಂಪೊಂದನ್ನು ನಡುವೆ ಹಾಕಿ ಅದರ ಸುತ್ತಲೂ ಇಬ್ಬರೋ, ಮೂರ್ವರೋ ಕುಳಿತು ತಂತಮ್ಮ ಪಾಳಿಯಂತೆ ಗುಂಪಿನಲ್ಲಿ ಕೈ ಹಾಕಿ ಒಂದು ಚೀಟಿಯನ್ನು ಎತ್ತಿಕೊಳ್ಳುತ್ತಾರೆ. ಅದರಂತೆ ಉಳಿದವರೂ ಮಾಡುತ್ತಾರೆ. ಮತ್ತೊಂದು ಸರದಿಯಲ್ಲಿ ಮತ್ತೊಂದು ಚೀಟಿ. ಹೀಗೆ ಬಂದ ಚೀಟಿಗಳ ಅಕ್ಷರಗಳನ್ನು ಹೊಂದಿಸಿದಾಗ ಒಂದು ಪದವಾದರೆ ಗೆದ್ದಂತೆ. ಪದವಾಗಲು ಬೇಕಾದ ಅಕ್ಷರ ದೊರೆಯುವವರೆಗೆ ಹುಡುಕಾಟ ತಪ್ಪಿದ್ದಲ್ಲ. ಕೆಲವೊಂದು ಬಾರಿ ಸರಿಯಾದ ಅಕ್ಷರ ದೊರೆಯದೆ ಯಾವ ಪದವೂ ಆಗುವುದಿಲ್ಲ. ಇದೊಂದು ಕುತೂಹಲಕಾರಿಯಾದ, ಶೈಕ್ಷಣಿಕವಾಗಿ ಪ್ರಯೋಜನಕಾರಿಯಾದ ಆಟ.

ಕಗ್ಗ ಈ ಆಟವನ್ನು ಬದುಕಿಗೆ ಹೋಲಿಸುತ್ತದೆ. ನಾವು ಹೇಗೆ ಅಕ್ಷರಗಳ ಗುಂಪಿನಿಂದ ಹುಡುಕಿ, ಹುಡುಕಿ ಸರಿಯಾದ ಅಕ್ಷರಗಳನ್ನು ಪಡೆದು ಶಬ್ದಗಳನ್ನು ರಚಿಸುತ್ತೇವೋ ಹಾಗೆಯೇ ಏಕಾಕಿಯಾದ ಜೀವ ತನಗೆ ಹಿತವಾಗುವಂತಹ, ಸಂತೋಷದಾಯಕವಾಗುವಂತಹ ಮತ್ತೊಂದು ಜೀವವನ್ನು ಪ್ರಪಂಚದಲ್ಲಿ ಹುಡುಕಿಕೊಂಡು ಹೋಗುತ್ತದೆ. ಹಾಗೆ ಹಂಚಿಕೊಳ್ಳುವ ಮತ್ತೊಂದು ಜೀವ ದೊರೆತಾಗ ನೆಮ್ಮದಿಯಿಂದ ಪೂರ್ಣತೆಯನ್ನು ಹೊಂದುತ್ತದೆ.

ನಾವೆಲ್ಲರೂ ಹುಟ್ಟುವುದು ಏಕಾಕಿಯಾಗಿಯೇ. ಆದರೆ ಬೆಳೆದಂತೆ ನಮ್ಮ ಸ್ವಭಾವಕ್ಕೆ ಹೊಂದುವ, ನಮ್ಮ ಬೆಳವಣಿಗೆಗೆ ಪೂರಕವಾಗುವ ಜೀವಗಳನ್ನೇ ಹುಡುಕಿಕೊಳ್ಳುತ್ತೇವೆ. ನುಡಿಗಟ್ಟಿನ ಆಟದ ಅಕ್ಷರಗಳ ಗುಂಪಿನಂತೆ ಪ್ರಪಂಚದಲ್ಲಿ ಕೋಟ್ಯಾಂತರ ಜನರಿದ್ದಾರೆ. ಯಾರು, ಯಾರಿಗೆ, ಎಲ್ಲಿ, ಹೇಗೆ ಜೋಡಣೆಯಾದಾರು ಎಂಬುದನ್ನು ಹೇಳುವುದು ಅಸಾಧ್ಯ.

ಬಂಗಾಲದ ಯೋಗಿಯಾದ ಶ್ರೀ ಅರವಿಂದರಿಗೆ ಯೋಗದಲ್ಲಿ ಸಹಯೋಗಕ್ಕೆ ದೊರಕಿದ್ದು ಫ್ರಾನ್ಸ್ ದೇಶದಿಂದ ಬಂದ ಮಿರ್ರಾ. ಮುಂದೆ ಅವರೇ ‘ಮದರ್’ ಎಂದು ಕರೆಸಿಕೊಂಡು ಅಧ್ಯಾತ್ಮ ಗುರುಗಳಾದರು. ಎಲ್ಲಿಂದೆಲ್ಲಿಯ ಜೊತೆ! ಮಹಾರಾಷ್ಟ್ರದ ಬಡಕುಟುಂಬದಲ್ಲಿ ಜನಿಸಿ ವೈದ್ಯರಾದ ಡಾ. ದ್ವಾರಕಾನಾಥ್ ಕೋತನೀಸ್, ಪ್ರಧಾನಿ ನೆಹರೂ ಹಾಗೂ ಸುಭಾಸ್‍ಚಂದ್ರ ಬೋಸ್‍ರವರ ಕರೆಗೆ ಓಗೊಟ್ಟು ಇಲ್ಲಿಯ ಒಳ್ಳೆಯ ಕೆಲಸವನ್ನು ತ್ಯಜಿಸಿ ದಕ್ಷಿಣ ಚೀನಾದಲ್ಲಿ ರೋಗಗಳಿಂದ ನರಳುತ್ತಿದ್ದವರಿಗೆ ಆಸರೆಯಾಗಿ ಹೋಗಿ ನಾಲ್ಕು ವರ್ಷ ಹಗಲು ರಾತ್ರಿ ದುಡಿಯುತ್ತಿದ್ದಾಗ, ಕೊನೆಗೆ ಅಲ್ಲಿಯೇ ಮರಣವನ್ನುಪ್ಪುವಾಗ ಅವರ ಹೆಗೆಲೆಣೆಯಾಗಿ ಪತ್ನಿಯಾಗಿ ನಿಂತದ್ದು ಒಬ್ಬ ಚೀನೀ ಹುಡುಗಿ ಗ್ಯೋ ಕ್ಪಿಂಗ್‍ಲಾನ್.

ಹೀಗೆ ಬಿಡಿ ಜೀವಗಳು ತಮ್ಮ ಸಂಗಾತಿಗಳನ್ನು ಪ್ರಪಂಚದ ಮೂಲೆ ಮೂಲೆಗಳಲ್ಲಿ ಅರಸಿ, ಪಡೆದು ಧನ್ಯತೆಯನ್ನು ಗಳಿಸುತ್ತವೆ. 

ಪ್ರತಿಕ್ರಿಯಿಸಿ (+)