ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಳೆದುಬಿಡುವ ವಿಶ್ವ

Last Updated 23 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ರಸರುಚಿಗಳನು ಕಲಿಸಿ ಪಕ್ವಾನ್ನಗಳ ಪಚಿಸಿ |
ರಸನೆಯಲಿ ನೀರಿಳಿಸಿ ಬಿಸಿಯುಸಿರ ಬಿಡಿಸಿ ||
ದಶದಿಶೆಗಳಿಂ ಮುತ್ತಿ ಬರುವ ಪ್ರಕೃತಿಗದಾರು |
ವಶನಾಗದಿಹ ನರನು? – ಮಂಕುತಿಮ್ಮ || 188 ||

ಪದ-ಅರ್ಥ: ಪಚಿಸಿ= ಅಡುಗೆ ಮಾಡಿ, ರಸನೆ=ನಾಲಿಗೆ, ದಶದಿಶೆಗಳಿಂ=ದಶ(ಹತ್ತು)+ದಿಶೆಗಳು(ದಿಕ್ಕುಗಳಿಂದ), ಪ್ರಕೃತಿಗದಾರು=ಪ್ರಕೃತಿಗೆ+ಅದಾರು.

ವಾಚ್ಯಾರ್ಥ: ರಸವನ್ನು, ರುಚಿಯನ್ನು ನಮಗೆ ಕಲಿಸಿ, ಹೊಸಬಗೆಯ ಆಹಾರವನ್ನು ಅಡುಗೆ ಮಾಡಿಸಿ, ನಾಲಿಗೆಯಲ್ಲಿ ನೀರೂರಿಸಿ, ಅದಕ್ಕಾಗಿ ಹಾತೊರೆಯುವಂತೆ ಮಾಡಿ ಹತ್ತು ದಿಕ್ಕುಗಳಿಂದ ನುಗ್ಗಿ ಬರುವ ಈ ಪ್ರಕೃತಿಗೆ ವಶನಾಗದೇ ಇದ್ದಮನುಷ್ಯ ಯಾರಾದರೂ ಇದ್ದಾನೆಯೇ?

ವಿವರಣೆ: ಪುಟ್ಟ ಮಕ್ಕಳನ್ನು ಆಟಿಕೆಗಳನ್ನು ಮಾರುವ ಬಹುದೊಡ್ಡ ಅಂಗಡಿಗೆ ಕರೆದುಕೊಂಡು ಹೋದಾಗ ಏನಾಗಬಹುದು? ಎಲ್ಲಿ ನೋಡಿದಲ್ಲಿ ತುಂಬಿಕೊಂಡ ತರತರಹದ ಆಟಿಕೆಯ ವಸ್ತುಗಳನ್ನು ನೋಡಿದ ಮಗುವಿಗೆ ದಿಕ್ಕು ತಪ್ಪಿದಂತಾಗುವುದು ಸಹಜ. ಆ ಆಟಿಕೆ ಚೆನ್ನಾಗಿದೆಯೆಂದು ಆ ಕಡೆಗೆ ಓಡಿದರೆ, ಮತ್ತೊಂದೆಡೆಗೆ ಮತ್ತೊಂದು ವಸ್ತು ಮನಸೆಳೆಯುವುದು. ಒಂದನ್ನು ತೆಗೆದುಕೊಂಡರೆ ಇನ್ನೊಂದು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಅದನ್ನು, ಇದನ್ನು ಪಡೆಯಬೇಕೆಂಬ ಆಸೆ ಬಲವಾಗುತ್ತದೆ. ಯಾವುದನ್ನೂ ಬಿಡದೆ ಪಡೆಯಬೇಕೆಂಬ ಭ್ರಮೆ ಮೂಡುತ್ತದೆ.

ಈ ರಂಗುರಂಗಿನ ಪ್ರಪಂಚದಲ್ಲಿ ಮನುಷ್ಯರ ಅವಸ್ಥೆಯೂ ಹೀಗೆಯೇ. ಭಗವಂತನ ಲೀಲಾಸೃಷ್ಟಿಯಾದ ವಿಶ್ವ ಕಲ್ಪನಾತೀತವಾದ ಅದ್ಭುತ ಪ್ರಪಂಚ. ಅದೊಂದು ಕನಸಿನ ಹಂದರ. ಈ ಕನಸಿನಲ್ಲಿ ನಾನಾರೂಪಗಳು. ವಿಶ್ವ ನಮಗೆ ನಾನಾ ವೇಷಗಳನ್ನು ತೊಡಿಸಿ ಬೇರೆ ಬೇರೆ ರಂಗಸ್ಥಳಗಳಲ್ಲಿ ಕುಣಿದಾಡಿಸಿಬಿಡುತ್ತದೆ. ರಾಗರಸದಿಂದ ಮನುಷ್ಯ ಪ್ರಪಂಚದ ಬಂಧನಕ್ಕೆ ಒಳಗಾಗುತ್ತಾನೆ. ಅವನನ್ನು ಐದು ಪ್ರಬಲವಾದ ಹಗ್ಗಗಳು ಕಟ್ಟಿಹಾಕುತ್ತವೆ. ಅವು ಶಬ್ದ, ಸ್ಪರ್ಶ, ರಸ ಮತ್ತು ಗಂಧವೆಂಬ ಪಂಚ ವಿಷಯಗಳು. ಪ್ರಪಂಚ ಈ ಪಂಚ ವಿಷಯಗಳನ್ನು ನಿತ್ಯವೂ ಪರಿವರ್ತಿಸಿ, ಆಕರ್ಷಕವನ್ನಾಗಿಸಿ ಮನುಷ್ಯನ ಮುಂದೆ ಹಾಕಿ ಸೆಳೆಯುತ್ತದೆ. ಯಾವುದೋ ಶಬ್ದ, ಮಾತಿನ ರೂಪದಲ್ಲಿ ಬಂಧಿಸಿಬಿಡುತ್ತದೆ. ಮತ್ತೊಂದು ದೃಶ್ಯ, ರೂಪವಾಗಿ ಕಾಡುತ್ತದೆ. ಆ ರೂಪ ಬದುಕಿನ ರೂಪುರೇಷೆಯನ್ನು ಬದಲಿಸಿಬಿಡುತ್ತದೆ. ಇದರಂತೆಯೇ ಸ್ಪರ್ಶ, ರಸ, ಗಂಧಗಳು ಕೂಡ ವ್ಯಕ್ತಿಯನ್ನು ಈ ರಂಗಿನ ಪ್ರಪಂಚಕ್ಕೆ ಕಟ್ಟಿ ಹಾಕುತ್ತವೆ.

ಈ ಪ್ರಪಂಚ ಏನೇನು ಮಾಡಬಹುದೆಂಬುದನ್ನು ಕಗ್ಗ ಚೆನ್ನಾಗಿ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ. ಅದು ನಮಗೆ ರಸ ರುಚಿಗಳನ್ನು ಕಲಿಸುತ್ತದೆ, ಬಾಯಿಯಲ್ಲಿ ನೀರೂರುವಂತೆ ವಿಧವಿಧವಾದ ಪಕ್ವಾನ್ನವನ್ನು ಸಿದ್ಧಮಾಡುತ್ತದೆ. ಅದನ್ನು ತಕ್ಷಣ ಕೊಡದೆ ಕಾಯಿಸಿ, ಬಳಲಿಸಿ ಬಿಸಿಯುಸಿರು ಬಿಡಿಸುತ್ತದೆ. ಎಲ್ಲ ದಿಕ್ಕುಗಳಿಂದ, ವಿಧವಿಧವಾದ ರೀತಿಯಿಂದ ನಮ್ಮನ್ನು ಸೆಳೆದು ತನ್ನ ವಶಕ್ಕೆ ಈ ಪ್ರಪಂಚ ತೆಗೆದುಕೊಂಡು ಬಿಡುತ್ತದೆ. ಅದರಿಂದ ಪಾರಾಗುವುದು ಸಾಧ್ಯವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT