ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪದ ಶಿಕ್ಷೆ

ಬೆರಗಿನ ಬೆಳಕು
Last Updated 26 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಹಿಂದೆ ವಾರಾಣಸಿಯನ್ನು ಕಲಾಬು ಎಂಬ ರಾಜ ಆಳುತ್ತಿದ್ದ. ಆ ಸಮಯದಲ್ಲಿ ಬೋಧಿಸತ್ವ ಅತ್ಯಂತ ಶ್ರೀಮಂತನಾದ ಬ್ರಾಹ್ಮಣನ ಮನೆಯಲ್ಲಿ ಜನಿಸಿದ. ಮುಂದೆ ತಕ್ಷಶಿಲೆಗೆ ಹೋಗಿ ಸಕಲ ವಿದ್ಯೆಗಳನ್ನು ಕಲಿತುಬಂದ. ತಂದೆ-ತಾಯಿ ತೀರಿದ ಮೇಲೆ ತನ್ನ ಬಳಿಯಿದ್ದ ಅತುಳ ಐಶ್ವರ್ಯವನ್ನು ಎಲ್ಲರಿಗೂ ಹಂಚಿಬಿಟ್ಟು ಹಿಮಾಲಯಕ್ಕೆ ಹೋಗಿ ಪ್ರವ್ರಜಿತನಾಗಿ ಬರೀ ಗಡ್ಡೆ-ಗೆಣಸು, ಹಣ್ಣು-ಹಂಪಲುಗಳನ್ನು ತಿನ್ನುತ್ತ ಧ್ಯಾನದಲ್ಲಿ ಮಗ್ನನಾದ.

ಕೆಲವರ್ಷಗಳ ನಂತರ ತಿರುಗಾಡುತ್ತ ವಾರಾಣಸಿಗೆ ಬಂದ. ಇವನ ತೇಜಸ್ಸನ್ನು ಕಂಡ ಸೇನಾಪತಿ ಇವನನ್ನು ಗೌರವದಿಂದ ಕಂಡು ರಾಜೋದ್ಯಾನದಲ್ಲಿ ಇರಲು ವ್ಯವಸ್ಥೆ ಮಾಡಿದ. ಹೀಗಿರುವಾಗ ಒಂದು ದಿನ ಕಲಾಬು ರಾಜ ಉದ್ಯಾನದಲ್ಲಿ ವಿಲಾಸಿ ಕಾರ್ಯಕ್ರಮ ನಡೆಸಿದ. ಕುಡಿದು ಉನ್ನತ್ತನಾದ ರಾಜ ಅಲ್ಲಿಗೆ ಬಂದು ಸುಂದರವಾದ ಶಿಲಾ ವೇದಿಕೆ ಮೇಲೆ ಸಂಗೀತ ಕೇಳುತ್ತ ಕುಳಿತ. ಅವನ ಸುತ್ತಮುತ್ತ ಪ್ರಮತ್ತರಾದ ಸುಂದರ ತರುಣಿಯರು. ಆತ ಕುಡಿಯುತ್ತ ಮತ್ತೇರಿ ಒಬ್ಬ ತರುಣಿಯ ತೊಡೆಯ ಮೇಲೆ ತಲೆ ಇಟ್ಟು ಮಲಗಿಬಿಟ್ಟ. ಸಂಗೀತ, ನೃತ್ಯ ಮಾಡುತ್ತಿದ್ದವರು ರಾಜನಿಗೆ ಭಂಗವಾಗಬಾರದೆಂದು ಅಲ್ಲಿಂದ ಹೊರಟು ಉದ್ಯಾನದಲ್ಲಿ ಸುತ್ತಾಡುತ್ತಿದ್ದರು. ಅವರ ಕಣ್ಣಿಗೆ ಧ್ಯಾನಸ್ಥನಾದ ಬೋಧಿಸತ್ವ ಕಣ್ಣಿಗೆ ಬಿದ್ದ. ಮುಖದ ಮೇಲೆ ಪ್ರಸನ್ನತೆಯಿದ್ದ ಮುನಿಯನ್ನು ಕಂಡು ಅವರೆಲ್ಲ ಅವನ ಸುತ್ತ ನೆರೆದರು. ಯಾರ ತೊಡೆಯ ಮೇಲೆ ರಾಜ ಮಲಗಿದ್ದಾನೋ ಆಕೆ ಕೂಡ ಮುನಿಯನ್ನು ನೋಡಲು ತಿರುಗಿದಾಗ ತೊಡೆ ಅಲುಗಿ ರಾಜನಿಗೆ ಎಚ್ಚರವಾಯಿತು.

‘ಎಲ್ಲಿ ಹೋದರು ಹುಡುಗಿಯರೆಲ್ಲ?’ ಎಂದು ಗುಡುಗಿದ ರಾಜ.

‘ಸ್ವಾಮೀ ಎಲ್ಲರೂ ಆ ಪ್ರಸನ್ನ ಸನ್ಯಾಸಿಯನ್ನು ನೋಡಲು ಹೋಗಿದ್ದಾರೆ’ ಎಂದಳಾಕೆ.

ತನ್ನನ್ನು ಬಿಟ್ಟು ಆ ಸನ್ಯಾಸಿಯನ್ನು ನೋಡಲು ಹೋದರಲ್ಲ ಎಂದು ಕೋಪದಿಂದ ರಾಜ ಖಡ್ಗ ಹಿಡಿದು ಸನ್ಯಾಸಿಯನ್ನು ಕೊಲ್ಲಲು ನಡೆದ. ಆದರೆ ಸ್ತ್ರೀಯರೆಲ್ಲ ಅಡ್ಡ ಬಂದು ಕೊಲ್ಲದಂತೆ ಬೇಡಿಕೊಂಡರು. ರಾಜ ಕೇಳಿದ, ‘ನಾನು ನಿನ್ನನ್ನು ಹೊಡೆದು ಜೈಲಿನಲ್ಲಿ ಹಾಕಿದರೆ ಏನು ಮಾಡುತ್ತೀ?’

ಬೋಧಿಸತ್ವ ಮುಗುಳ್ನಕ್ಕು, ‘ಕ್ಷಮೆ, ನಾನು ಯಾವಾಗಲೂ ಕ್ಷಮೆ ನಂಬಿದವನು’ ಎಂದ. ತಕ್ಷಣ ರಾಜ ಸೈನಿಕರನ್ನು ಕರೆದು ‘ಈ ಸನ್ಯಾಸಿಗೆ ಮುಳ್ಳಿನ ಚಾವಟಿಯಿಂದ ಹೊಡೆಯಿರಿ’ ಎಂದು ಅಪ್ಪಣೆ ಮಾಡಿದ. ಅವರು ಬೋಧಿಸತ್ವನನ್ನು ಹೊಡೆದಾಗ ಮೈಮೇಲಿನ ಚರ್ಮ ಕಿತ್ತುಕೊಂಡು ರಕ್ತ ಸೋರತೊಡಗಿತು. ‘ಈಗ ಏನು ಹೇಳುತ್ತೀ?’ ಕೇಳಿದ ರಾಜ. ’ರಾಜ ನನ್ನದು ಕ್ಷಮೆಯೇ. ನೀನು ಚರ್ಮದಲ್ಲಿ ನನ್ನ ಕ್ಷಮೆಯನ್ನು ಕಾಣಲಾರೆ’ ಎಂದ ಬೋಧಿಸತ್ವ. ರಾಜನಿಗೆ ಕೋಪ ಏರಿತು. ಸೈನಿಕನಿಗೆ ಸನ್ಯಾಸಿಯ ಎರಡೂ ಕೈಗಳನ್ನು ಕತ್ತರಿಸಲು ಹೇಳಿದ. ಒಂದೇ ಹೊಡೆತಕ್ಕೆ ಸೈನಿಕ ಇವನ ಕೈಗಳನ್ನು ಕತ್ತರಿಸಿದ. ಬೋಧಿಸತ್ವ ಹೇಳಿದ, ‘ರಾಜಾ ನನ್ನ ಕ್ಷಮೆ ಕೈಗಳಲ್ಲಿಲ್ಲ’. ರಾಜ ಮತ್ತಷ್ಟು ಕೋಪದಿಂದ ಕಾಲುಗಳನ್ನು, ನಂತರ ಕಿವಿ, ಮೂಗು ಅನ್ನು ಕತ್ತರಿಸಲು ಹೇಳಿದ. ಸನ್ಯಾಸಿ ಮುಖದ ಮೇಲಿನ ಕಾಂತಿ ಕರಗಲಿಲ್ಲ. ‘ರಾಜಾ, ಕ್ಷಮೆ ನನ್ನ ಅಂಗಾಂಗಳಲ್ಲಿ ಇಲ್ಲ. ಹೃದಯದಲ್ಲಿ ಭದ್ರವಾಗಿದೆ” ಎಂದ ಬೋಧಿಸತ್ವ. ರಾಜ ಕ್ರೋಧದಿಂದ ಅವನ ಎದೆಗೆ ಜೋರಾಗಿ ಒದ್ದು ಹೊರಟುಬಿಟ್ಟ. ಕೈಕಾಲು, ಕಿವಿ, ಮೂಗುಗಳನ್ನು ಕಳೆದುಕೊಂಡು ರಕ್ತದ ಮುದ್ದೆಯಾಗಿದ್ದ ಬೋಧಿಸತ್ವನನ್ನು ಸೇನಾಪತಿ ಎತ್ತಿ ಮರದ ಕೆಳಗೆ ಕೂಡ್ರಿಸಿ ತಂಪು ಗಾಳಿ ಹಾಕುತ್ತಿದ್ದ. ಈ ಕಡೆಗೆ ರಾಜ ಉದ್ಯಾನ ದಾಟಿ ಹೊರಗೆ ಬಂದೊಡನೆ ಭೂಮಿ ಅಗಲವಾಗಿ ಸೀಳಿ ಒಳಗಿನಿಂದ ಕುದಿಕುದಿಯುವ ಲಾವಾರಸ ಹೊರಬಂದು ರಾಜನನ್ನು ಒಳಗೆ ಎಳೆದುಕೊಂಡುಬಿಟ್ಟಿತು. ಅವನು ಅತ್ಯಂತ ಕಠಿಣವಾದ ಅಗ್ನಿನರಕಕ್ಕೆ ಬಿದ್ದು ನರಳಿದ. ಬೋಧಿಸತ್ವ ದೇಹ ತೊರೆದು ಹೋದ.

ಕ್ರೂರಿಗಳು, ಅಹಂಕಾರಿಗಳು ಸಜ್ಜನರಿಗೆ ತೊಂದರೆಕೊಟ್ಟರೆ ಅವರು ಅದನ್ನು ದೊಡ್ಡ ಮನಸ್ಸಿನಿಂದ ಕ್ಷಮಿಸಬಹುದು. ಆದರೆ ಅವರು ಮಾಡಿದ ಕ್ರೌರ್ಯಕ್ಕೆದೈವ ಮತ್ತು ವಿಧಿ ನಾಲ್ಕು ಪಟ್ಟು ಶಿಕ್ಷೆ ನೀಡುತ್ತದೆ. ಅದನ್ನು ತಪ್ಪಿಸುವುದು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT