ಶುಕ್ರವಾರ, ಅಕ್ಟೋಬರ್ 18, 2019
24 °C

ಅಪ್ರಿಯವಾದ ಸತ್ಯ

ಗುರುರಾಜ ಕರಜಗಿ
Published:
Updated:

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವಒಬ್ಬ ಬ್ರಾಹ್ಮಣನ ಮಗನಾಗಿ ಹುಟ್ಟಿದ್ದ. ಅವನು ಬೆಳೆದಂತೆ ಬದುಕಿನ ಭೋಗಭಾಗ್ಯಗಳಿಗೆ ಬೇಸತ್ತು ಹಿಮಾಲಯಕ್ಕೆ ಹೋಗಿ ಋಷಿ ಪ್ರವ್ರಜ್ಯವನ್ನು ಸ್ವೀಕರಿಸಿದ. ಅಲ್ಲಿಯೇಧ್ಯಾನದಲ್ಲಿ ನಿಂತುಬಿಟ್ಟ.

ಈ ಸಮಯದಲ್ಲಿಒಂದು ದಿನ ವಾರಾಣಸಿಯ ರಾಜನಿಗೆ ಕನಸಿನಲ್ಲಿ ನರಕದಲ್ಲಿದ್ದ ಕೆಲವು ಜೀವಿಗಳ ನರಳಿಕೆ ಕೇಳಿಸಿತು. ಅವನಿಗೆ ಅದೊಂದು ಅಪಶಕುನವೆಂದೆನಿಸಿ ತಳಮಳಿಸಿದ. ಮರುದಿನ ಬೆಳಿಗ್ಗೆ ಬ್ರಾಹ್ಮಣರನ್ನು ಕರೆಸಿ ಅವರಿಗೆತನ್ನಕನಸನ್ನು ತಿಳಿಸಿ ಅದರ ಪರಿಣಾಮವೇನಾಗಬಹುದುಎಂದು ಕೇಳಿದ. ಅವರು ಈ ಕನಸು ಬಹಳ ಅಪಾಯಕಾರಿಯಾದದ್ದು, ರಾಜನಜೀವಕ್ಕೇಕುತ್ತುತರುವಂಥದ್ದು. ಅದರ ಪರಿಹಾರಕ್ಕಾಗಿಒಂದು ವಿಶೇಷವಾದ ಸರ್ವಚತುಷ್ಕಯಜ್ಞವನ್ನು ಮಾಡಬೇಕೆಂದು ತಿಳಿಸಿದರು. ಮೊದಲೇ ಹೆದರಿದ್ದರಾಜತನ್ನ ಮಂತ್ರಿಗಳಿಗೆ ಹೇಳಿ ಈ ಬ್ರಾಹ್ಮಣರಿಗೆಯಜ್ಞಕ್ಕಾಗಿ ಎಷ್ಟು ಬೇಕೋ ಅಷ್ಟು ಹಣಕೊಡಿ, ಅವರಿಗೆ ಏನು ಅನುಕೂಲಬೇಕೋ ಅದನ್ನು ಮಾಡಿಎಂದುಆಜ್ಞೆ ಮಾಡಿದ.

ಪುರೋಹಿತರು ದೊಡ್ಡಯಜ್ಞಕುಂಡವನ್ನು ನಿರ್ಮಾಣಮಾಡಿ, ಬಲಿ ನೀಡಲು ಸಾವಿರಾರು ಪ್ರಾಣಿಗಳನ್ನು ತರಿಸಿ ವಧಸ್ತಂಭಕ್ಕೆಕಟ್ಟಿದರು. ಆಗ ಹಿರಿಯ ಪುರೋಹಿತರ ಮಗ ಹೋಗಿ ಆಚಾರ್ಯರನ್ನು ಕೇಳಿದ, “ಬೇರೆ ಪ್ರಾಣಿಗಳನ್ನು ಕೊಂದರೆ, ಬಲಿ ಕೊಟ್ಟರೆ, ಮತ್ತೊಬ್ಬರಿಗೆ ಹೇಗೆ ಒಳ್ಳೆಯದಾದೀತು? ಯಾವ ಶಾಸ್ತ್ರದಲ್ಲಿಹೀಗೆ ಪ್ರಾಣಿ ಹಿಂಸೆಯನ್ನು ಹೇಳಿದೆ?”. ಹಿರಿಯಆಚಾರ್ಯ ಹೇಳಿದ, “ಶಾಸ್ತ್ರದಲ್ಲಿಇದೆಯೋಇಲ್ಲವೋ ಮುಖ್ಯವಲ್ಲ. ನಮಗೆ ತಿನ್ನಲು ಸಾಕಷ್ಟು ಆಹಾರ ಮತ್ತು ಬೇಕಾದಷ್ಟು ಹಣದೊರೆಯುತ್ತದೆ. ಇಂಥ ಅವಕಾಶಗಳು ಮೇಲಿಂದ ಮೇಲೆ ಬರುತ್ತಿದ್ದರೆ ನಾವೂ ಚೆನ್ನಾಗಿ ಬದುಕಬಹುದು. ಈ ವಿಷಯದಲ್ಲಿ ನೀನು ತಲೆಹಾಕಬೇಡ”. ಈ ಉತ್ತರದಿಂದ ಸಮಾಧಾನವಾಗದತರುಣಕೋಪದಿಂದಯಜ್ಞ ಮಂಟಪವನ್ನುತೊರೆದುಉದ್ಯಾನವನಕ್ಕೆ ಹೋಗಿ ಕುಳಿತ.

ತನ್ನಧ್ಯಾನಶಕ್ತಿಯಿಂದ ಇಷ್ಟು ಪ್ರಾಣಿಗಳ ಸಂಹಾರವಾಗುತ್ತಿರುವುದನ್ನುಕಂಡುತಾನೂಉದ್ಯಾನವನಕ್ಕೆ ಇಳಿದು ಬಂದ. ತರುಣನನ್ನುಕರೆದುಕೊಂಡುರಾಜನ ಬಳಿಗೆ ಹೋದ. ರಾಜತನ್ನಕನಸನ್ನು ವಿವರಿಸಿ ತನಗಾದಆತಂಕವನ್ನು ಹೇಳಿದ. ಆಗ ಬೋಧಿಸತ್ವ, “ಮಹಾರಾಜಾ, ನೀನು ಕೇಳಿಸಿಕೊಂಡದ್ದು ನರಕದಲ್ಲಿಒದ್ದಾಡುತ್ತಿರುವ ನಾಲ್ಕು ಜೀವಿಗಳ ನರಳಾಟ. ಈ ನಾಲ್ವರು ಪೂರ್ವಜನ್ಮದಲ್ಲಿ ಪರಸ್ತ್ರೀಯರೊಂದಿಗೆ ಅನೈತಿಕವಾಗಿ ನಡೆದುಕೊಂಡವರು. ಆ ಸ್ತ್ರೀಯರಿಗೆ ಚಿತ್ರಹಿಂಸೆಕೊಟ್ಟು ಪೀಡಿಸಿದವರು. ಅವರ ಶಾಪಗಳಿಂದಾಗಿ ಕುಂಭೀಪಾಕ ನರಕದಲ್ಲಿ ನರಳುತ್ತಿದ್ದಾರೆ, ಮುಕ್ತಿಗಾಗಿ ಬೇಡುತ್ತಿದ್ದಾರೆ. ಇದುಅವರ ಸಂಕಟ. ಆ ಕೂಗನ್ನು ಕೇಳಿದ ನಿನಗೆ ಯಾವಆಪತ್ತುಇಲ್ಲ. ಆದರೆ ಇಷ್ಟು ಪ್ರಮಾಣದ ಪ್ರಾಣಿಹಿಂಸೆಯನ್ನು ಮಾಡಿದರೆ ಮಾತ್ರ ನಿನಗೂ ನರಕತಪ್ಪದು”. “ಹಾಗಾದರೆ ಏನು ಮಾಡಲಿ ನಾನು?” ಎಂದು ಕೇಳಿದ ರಾಜನಿಗೆ, “ಪ್ರಾಣಿಗಳನ್ನೆಲ್ಲ ಬಿಡುಗಡೆ ಮಾಡು. ಎಂದಿಗೂ ಪ್ರಾಣಿಹಿಂಸೆ ಮಾಡಬೇಡ. ಯಜ್ಞ ನಡೆಯಲಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸು” ಎಂದು ಬೋಧಿಸಿದ ಬೋಧಿಸತ್ವ.

ರಾಜ ಪ್ರಾಣಿಹಿಂಸೆಯನ್ನು ಶಾಶ್ವತವಾಗಿ ನಿಲ್ಲಿಸಿದ. ಇದೊಂದು ಸುಂದರ ಬೋಧನೆ. ಯಾರದೋ ದುಃಖ ನಿವಾರಣೆಗೆ ಮತ್ತಾರಿಗೋ ದುಃಖ ಕೊಡುವುದು ಯಾವ ನೀತಿ?ಅಥವಾ ಯಾರ ಬಾಯಚಪಲಕ್ಕೋ, ರುಚಿಗೋಅಮಾಯಕವಾದ ಪ್ರಾಣಿಗಳನ್ನು ಬಲಿಕೊಡುವುದು ಹೇಗೆ ಸರಿಯಾದೀತು? ಬುದ್ಧ ಹೇಳಿದ ಎರಡೂವರೆ ಸಾವಿರ ವರ್ಷಗಳ ನಂತರವೂ ಈ ಕಾರ್ಯ ನಡೆದಿರುವುದು ಅಪ್ರಿಯವಾದರೂ ಸತ್ಯ.

Post Comments (+)