ಶುಕ್ರವಾರ, ಅಕ್ಟೋಬರ್ 18, 2019
24 °C

ಲೋಕದ ವ್ಯಸನ

ಗುರುರಾಜ ಕರಜಗಿ
Published:
Updated:

ಪೊಡೆಯುಣಿಸ ಮಿಗಹಕ್ಕಿ ಹುಳುಗಳಂದದಿ ನರನು |
ತಡಕುವನು; ತನ್ನಾತ್ಮದುಣಿಸ ಮರೆಯುವನು ||
ಒಡಲಿನಬ್ಬರವೇನು? ಆತುಮದ ನಾಣ್ಚೇನು? |
ಪೊಡವಿಗಿದೆ ದುಮ್ಮಾನ – ಮಂಕುತಿಮ್ಮ || 191 ||

ಪದ-ಅರ್ಥ: ಪೊಡೆಯುಣಿಸ=ಪೊಡೆಯ(ಹೊಟ್ಟೆಯ)+ಉಣಿಸು (ಆಹಾರ), ಮಿಗಹಕ್ಕಿಹುಳುಗಳಂದದಿ=ಮಿಗ(ಪ್ರಾಣಿ)+ಹಕ್ಕಿ+ಹುಳು
ಗಳಂದದಿ(ಹುಳುಗಳಂತೆ), ತಡಕುವನು=ಒದ್ದಾಡುವನು, ತನ್ನಾತ್ಮ ದುಣಿಸ=ತನ್ನ+ಆತ್ಮದ+ಉಣಿಸು(ಆಹಾರ), ಒಡಲಿನಬ್ಬರವೇನು=
ಒಡಲಿನ(ಹೊಟ್ಟೆಯ)+ಅಬ್ಬರವೇನು, ಆತುಮದ=ಅತ್ಮದ, ನಾಣ್ಚೇನು =ನಾಚಿಕೆಯೇನು, ಪೊಡವಿ=ಲೋಕ, ದುಮ್ಮಾನ=ಚಿಂತೆ, ದುಗುಡ, ವ್ಯಸನ.

ವಾಚ್ಯಾರ್ಥ: ಬೇರೆ ಪ್ರಾಣಿ, ಹಕ್ಕಿ ಹುಳುಗಳಂತೆ ಮನುಷ್ಯನೂ ತನ್ನ ಹೊಟ್ಟೆಯ ಹಸಿವನ್ನು ತಣಿಸಲು ಒದ್ದಾಡುತ್ತಾನೆ. ಆದರೆ ತನ್ನ ಆತ್ಮದ ಹಸಿವನ್ನು ಹಿಂಗಿಸಲು ಮರೆಯುತ್ತಾನೆ. ಹೊಟ್ಟೆಯ ಅಬ್ಬರ ಎಷ್ಟು ಹೆಚ್ಚೋ, ಆತ್ಮದ ನಾಚಿಕೆಯೂ ಹೆಚ್ಚು. ಇದೇ ಪ್ರಪಂಚದ ವ್ಯಸನ.

ವಿವರಣೆ: ಕನಕದಾಸರು ಹಾಡಿದರು, ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’. ಈ ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಜೀವಗಳು ಏನೆಲ್ಲ ಹರಸಾಹಸ ಮಾಡುತ್ತವಲ್ಲ! ಸುಳ್ಳುಹೇಳಿ, ನಾಟಕವಾಡಿ, ಮೋಸಮಾಡಿ ಗುದ್ದಾಡುವುದೆಲ್ಲ ಬರೀ ಈ ಹೊಟ್ಟೆಗಾಗಿಯೇ? ಪ್ರಸಿದ್ಧ ವಿಜ್ಞಾನಿ ಹಾಗೂ ವಿಜ್ಞಾನ ಲೇಖಕ ಐಸಾಕ್ ಅಸಿಮೋವ್ ತನ್ನ ಅತ್ಯಂತ ಶ್ರೇಷ್ಠ ಪುಸ್ತಕದ ಮುನ್ನುಡಿಯಲ್ಲಿ ಹೇಳುವ ಮಾತು ಅಘಾತಕಾರಿಯಾದದ್ದು. ‘ಬಹುಶಃ ಅರವತ್ತು ಲಕ್ಷ ಜನರಲ್ಲಿ ಒಬ್ಬರು ಮಾತ್ರ ಭೂಮಿಯಲ್ಲಿ ತಮ್ಮ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗುತ್ತಾರೆ, ಉಳಿದವರು ಹುಳುಗಳ ಹಾಗೆ ನಾಮಾವಶೇಷವಾಗಿ ಮರೆಯಾಗುತ್ತಾರೆ’. ಹೊಟ್ಟೆಯ ಊಳಿಗಕ್ಕಾಗಿಯೇ ಅಹರ್ನಿಶಿ ದುಡಿದು, ದಣಿದು ಮರೆಯಾಗಿ ಹೋಗುವ ಮನುಷ್ಯ ಬೇರೆ ಪ್ರಾಣಿ–ಪಕ್ಷಿ, ಹುಳುಗಳಿಗಿಂತ ಹೇಗೆ ಬೇರೆಯಾಗುತ್ತಾನೆ? ಬದುಕೆಲ್ಲ ಅನ್ನಕ್ಕಾಗಿ ಹೋರಾಟ, ತಡಕಾಟ. ಈ ಅನ್ನದ ಯುದ್ಧದಲ್ಲಿ ತನಗೊಂದು ಆತ್ಮವಿದೆ, ಅದಕ್ಕೂ ಒಂದು ಹಸಿವಿದೆ ಎನ್ನುವುದನ್ನೇ ಮರೆಯುತ್ತಾನೆ. ಆತ್ಮತೃಪ್ತಿಗಾಗಿ, ಅತ್ಮಜ್ಞಾನಕ್ಕಾಗಿ ಯಾವ ಪ್ರಯತ್ನವೂ ನಡೆಯುವುದಿಲ್ಲವಲ್ಲ! ಅಂದರೆ ದೇಹದ ಹಸಿವು ಕಣ್ಣಿಗೆ ಕುಕ್ಕುತ್ತದೆ, ಸೆಳೆಯುತ್ತದೆ. ಆದರೆ ಇದಕ್ಕಿಂತಲೂ ಮಿಗಿಲಾದ, ಶಾಶ್ವತವಾದ ಆತ್ಮವೆಂಬುದಿದೆ ಅದಕ್ಕೊಂದು ಹಸಿವಿದೆ ಎಂಬುದು ಗಮನಕ್ಕೆ ಬರುವುದಿಲ್ಲ. ಆತ್ಮದ ಹಸಿವನ್ನು ಹಿಂಗಿಸುವುದು ಹೇಗೆ? ಅದಕ್ಕೇನು ಮಾಡಬೇಕು? ಅದಕ್ಕೆ ಕನಕದಾಸರು ಆ ಕವನದಲ್ಲೇ ಉತ್ತರ ಕೊಟ್ಟಿದ್ದಾರೆ. ‘ಉನ್ನತ ಕಾಗಿನೆಲೆಯಾದಿಕೇಶವನ ಧ್ಯಾನವನ್ನು ಮನಮುಟ್ಟಿ ಮಾಡುವುದು ಮುಕ್ತಿಗಾಗಿ, ಆನಂದಕ್ಕಾಗಿ’. ಈ ಧ್ಯಾನ, ಆನಂದದ ಅಪೇಕ್ಷೆ, ಮುಕ್ತಿಯ ಚಿಂತನೆ ಅನ್ನದ ಒದ್ದಾಟವನ್ನು ಮೀರಿದ್ದು, ಉನ್ನತಮಟ್ಟದ್ದು.

ಆದರೆ ಹೊಟ್ಟೆಯನ್ನು ತುಂಬಿಸಿಕೊಳ್ಳುವ ಹೋರಾಟದ ಅಬ್ಬರ ಎಷ್ಟು ದೊಡ್ಡ ಪ್ರಮಾಣದ್ದೆಂದರೆ ಒಳಗಿರುವ ಆತ್ಮ ನಾಚಿ ಮುದುಡಿಕೊಳ್ಳುತ್ತದಂತೆ! ಅದನ್ನು ಕಗ್ಗ ಸುಂದರವಾಗಿ, ‘ಆತುಮದ ನಾಣ್ಚೇನು?’ ಎಂದು ಕೇಳುತ್ತದೆ. ಹೊಟ್ಟೆಗಿಲ್ಲದ ನಾಚಿಕೆ ಆತ್ಮಕ್ಕಿದೆ! ಅದೇ ಈ ಪ್ರಪಂಚದ ವ್ಯಸನ. ಇಲ್ಲಿ ಬದುಕಿರುವ ಎಲ್ಲರಿಗೂ ಹೊಟ್ಟೆಯ ಹಸಿವನ್ನು ಹಿಂಗಿಸಿಕೊಳ್ಳುವಷ್ಟೇ ಅತುರ. ಆತ್ಮದ ಹಸಿವನ್ನು ಹಿಂಗಿಸಿಕೊಳ್ಳಲು ಇದ್ದದ್ದರೆ ಪ್ರಪಂಚದ ಲಕ್ಷಣವೇ ಬೇರೆಯಾಗುತ್ತಿತ್ತು. ಬಹುಶಃ ಆ ಸುಂದರ ಪ್ರಪಂಚದಲ್ಲಿ ಮೋಸ, ತಟವಟ, ಅನ್ಯಾಯ, ದ್ವೇಷ, ಅಸೂಯೆಗಳಿಲ್ಲದೇ ಹೋಗುತ್ತಿತ್ತೇನೋ! ಹಾಗಾಗದೆ ಉಳಿದಿರುವುದೇ ಈ ಲೋಕದ ದುಮ್ಮಾನವಾಗಿದೆ.

Post Comments (+)