ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘೋರ ಪ್ರಾಣಿಗಳ ಆವಾಸ-ಮನಸ್ಸು

Last Updated 15 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ಕನಲ್ದ ಹುಲಿ ಕೆರಳ್ದ ಹರಿ ಮುಳ್‍ಕರಡಿ ಛಲನಾಗ |
ಅಣಕುಕಪಿ ಸೀಳ್ನಾಯಿ ಮೊದಲಾದ ಮೃಗದ ||
ಸೆಣಸುಮುಸಡಿಯ ಘೋರದುಷ್ಟ ಚೇಷ್ಟೆಗಳೆಲ್ಲ |
ವಣಗಿಹವು ನರಮನದಿ - ಮಂಕುತಿಮ್ಮ || 197 ||

ಪದ-ಅರ್ಥ: ಕನಲ್ದ=ಕೋಪಗೊಂಡ, ಕೆರಳ್ದ=ಕೆರಳಿದ, ಹರಿ=ಸಿಂಹ, ಛಲನಾಗ=ಹಟದ ಹಾವು, ಸೆಣಸುಮುಸುಡಿ=ಹೊಡೆದಾಟದ ಮುಖದ, ಅಣಗಿಹವು=ಅಡಗಿಕೊಂಡಿವೆ.

ವಾಚ್ಯಾರ್ಥ: ಕೋಪಗೊಂಡ ಹುಲಿ, ಕೆರಳಿದ ಸಿಂಹ, ಮುಳ್ಳುಕರಡಿ, ಛಲದಿಂದ ಬುಸುಗುಟ್ಟುವ ಸರ್ಪ, ಅಣಕಿಸುವ ಕೋತಿ, ಸೀಳುನಾಯಿ ಈ ಎಲ್ಲ ಪ್ರಾಣಿಗಳ ಹೋರಾಟದ ಮುಖದ ಕೆಟ್ಟ ಚೇಷ್ಟೆಗಳೆಲ್ಲ ಮನುಷ್ಯನ ಮನಸ್ಸಿನಲ್ಲಿ ಅಡಗಿವೆ.

ವಿವರಣೆ: ಮನುಷ್ಯನ ಮನಸ್ಸು ಹೀಗೆಯೇ ಎಂದು ಹೇಳುವುದು ಸಾಧ್ಯವಿಲ್ಲ. ಹಂಪಿಯ ಬಳಿಯ ಹೇಮಗಲ್ಲಿನಲ್ಲಿ ಬಹುಶಃ ಬದುಕಿದ್ದ ಹದಿನೇಳು ಅಥವಾ ಹದಿನೆಂಟನೆ ಶತಮಾನದ ಕಾಲದ ವಚನಕಾರ ಹೇಮಗಲ್ಲ ಹಂಪನ ವಚನವೊಂದು ಹೀಗಿದೆ.

ಉದಯವಾಯಿತೆಂದು ಉದರಕ್ಕೆ ಕುದಿವುದೀ ಮನ.
ರಾತ್ರಿಯಾದುದ ಕಂಡು ವಿಷಯಕ್ಕೆ ಕುದಿವುದೀ ಮನ.
ಉದಯ ಅಸ್ತಮಾನವೆಂಬ ಕಾನನದ ನಡುವೆ ಸಿಲುಕಿ,
ಸುತ್ತುತ್ತಿಪ್ಪುದು ಕಣ್ಗಾಣದಂಧಕನಂತೆ.
ಸದಾ ಚಣಚಣಕೊಂದೊಂದನೆಣಸಿನೆಣಸಿ ಕಾಡುದೀ
ಒಣಗುಮನ, ಜಣಗುಮನ, ಠಕ್ಕಮನ,
ಟುಕ್ಕಮನ, ಕೋಪಿಮನ, ಜಾಪಿಮನ.
ಜಾಪಿಮನದ ತಾಪಸದೊಳು ಸಿಲ್ಕಿ ನಾ ಪರದೇಶಿಯಾದೆನಯ್ಯಾ,
ಮನವೆಂಬ ಮಾರಿಗೆನ್ನನೊಪ್ಪಿಸದೆ ಕಾಯೊ ಕಾಯೊ ಕರುಣಾಳುವೆ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥ ಪ್ರಭುವೇ.

ಮನುಷ್ಯನ ಮನಸ್ಸು ಯಾವಾಗ ಏನನ್ನು ಬೇಡಿತು ಎಂಬುದು ಖಚಿತವಿಲ್ಲ. ಅದು ಯಾವ ಕ್ಷಣದಲ್ಲಿ ಕೆರಳೀತು, ಯಾವ ಕ್ಷಣದಲ್ಲಿ ಮರುಗೀತು, ತಲ್ಲಣಸೀತು, ಹೆದರೀತು, ಸಂತೋಷಿಸೀತು ಎಂಬುದನ್ನು ಹೇಳುವುದು ಅಸಾಧ್ಯ. ಒಂದೇ ಮನಸ್ಸು ಅದೆಷ್ಟು ಬಗೆಯಲ್ಲಿ ಕಂಡಿತಲ್ಲ! ಒಣಗುಮನ, ಜಣಗುಮನ, ಠಕ್ಕಮನ, ಟುಕ್ಕಮನ, ಕೋಪಿಮನ, ಜಾಪಿಮನ!!

ಪರಿಸ್ಥಿತಿಗೆ ಅನುಗುಣವಾಗಿ ಕ್ಷಣಾರ್ಧದಲ್ಲಿ ಬದಲಾಗುತ್ತದೆ ಮನಸ್ಸು. ದುರ್ಬಲರೊಡನೆ ವ್ಯವಹರಿಸುವಾಗ ಹುಲಿಯಂತೆ ಅಬ್ಬರಿಸುವ ಮನಸ್ಸು ನಮಗಿಂತ ಬಲಶಾಲಿಗಳನ್ನು ಕಂಡಾಗ ತಕ್ಷಣ ಬೆಕ್ಕಿನಂತೆ ದೀನವಾಗುತ್ತದೆ. ಸಿಂಹದಂತೆ ಗರ್ಜಿಸುವ ಮನಸ್ಸು ಮುಳ್ಳು ಕರಡಿಯಂತೆ ಯುದ್ಧಕ್ಕೆ ಸಿದ್ಧವಾಗುತ್ತದೆ. ಪ್ರಸಂಗ ಬಂದಾಗ ಸರ್ಪದಂತೆ ಛಲ ಸಾಧಿಸುತ್ತದೆ. ಮತ್ತೊಬ್ಬರನ್ನು ಅಣಿಕಿಸುವ ಕಪಿಯಂತೆ ಇರುವ ಮನಸ್ಸು ಸರಿಯಾದ ಸಂದರ್ಭದಲ್ಲಿ ಬೇಟೆನಾಯಿಯಂತೆ ಬೆನ್ನಟ್ಟುತ್ತದೆ.

ಅಂದರೆ ಮನುಷ್ಯನ ಮನಸ್ಸಿನಲ್ಲಿ ಈ ಎಲ್ಲ ಚಿತ್ರ, ವಿಚಿತ್ರ ಹಾಗೂ ಘೋರ ಮೃಗಗಳ ಎಲ್ಲ ದುಷ್ಟ ಚೇಷ್ಟೆಗಳು ಅವಿತುಕೊಂಡಿವೆ. ಯಾವಾಗ ಯಾವ ಗುಣ ಎದ್ದು ಬಂದೀತು, ಹೇಳುವುದು ಕಷ್ಟ. ಅದನ್ನು ನಿಗ್ರಹದಲ್ಲಿಟ್ಟುಕೊಳ್ಳುವುದೇ ಬಹುದೊಡ್ಡ ಸಾಧನೆ. ಈ ಮನಸ್ಸೇ ಬಂಧನಕ್ಕೂ, ಮೋಕ್ಷಕ್ಕೂ ಕಾರಣವಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT