ಮಂಗಳವಾರ, ನವೆಂಬರ್ 19, 2019
22 °C

ಆಸೆಗಳ ಮೊಳೆತ

ಗುರುರಾಜ ಕರಜಗಿ
Published:
Updated:

ಒಣಗಿ ಬೇಸಗೆಯಿಂದ ಮಣ್ಣಾಗಿ ಕಾಣದಿಹ |
ತೃಣ ಮೊಳೆಯುವುದು ಮರಳಿ ಹನಿಯೆರಡು ಬೇಳೆ ||
ಅಣಗಿರ್ದು ನರನಾಶೆಯಂತು ಕಷ್ಟದ ದಿನದಿ |
ಕುಣಿವುದನುಕೂಲ ಬರೆ – ಮಂಕುತಿಮ್ಮ || ೨೦೭ ||

ಪದ-ಅರ್ಥ: ಅಣಗಿರ್ದು=ಅಡಗಿದ್ದು, ಕುಣಿವುದನುಕೂಲ=ಕುಣಿವುದು+ಅನುಕೂಲ

ವಾಚ್ಯಾರ್ಥ: ಬೇಸಗೆಯ ಮಣ್ಣಲ್ಲಿ ಒಣಗಿ ಕಾಣದಿರುವ ಹುಲ್ಲುಕಡ್ಡಿ ಎರಡು ಹನಿ ಮಳೆ ಬಿದ್ದೊಡನೆ ಮೊಳೆತು ಬೆಳೆಯುತ್ತದೆ. ಅಂತೆಯೇ ಮನುಷ್ಯನ ಆಸೆಗಳು ಒಳಗೆ ಅಡಗಿಕೊಂಡು ಅನುಕೂಲ ಸ್ಥಿತಿ ಬಂದಾಗ ಎದ್ದು ಕುಣಿಯುತ್ತವೆ.

ವಿವರಣೆ: ನಾನು ಬೇಸಗೆಯಲ್ಲಿ ವಿಜಯಪುರ, ರಾಯಚೂರು, ಕಲಬುರ್ಗಿ ಪ್ರದೇಶಗಳಲ್ಲಿ ಪ್ರವಾಸ ಮಾಡುವಾಗ ನೋಡುತ್ತಿದ್ದೆ. ಇಡೀ ನಿಸರ್ಗ ಬೇಸಗೆಯ ಬಿಸಿಗೆ ಬಸವಳಿದು ಹೈರಾಣಾಗಿ ಕುಳಿತಂತೆ ತೋರುತ್ತಿತ್ತು. ಎಲ್ಲಿ ನೋಡಿದರೂ ಒಣ ನೆಲ. ಒಂದು ಚೂರೂ ಹಸಿರು ಕಾಣುತ್ತಿರಲಿಲ್ಲ. ಬಿಸಿ ಗಾಳಿ ಉಗ್ಗಿ ಬರುತ್ತಿತ್ತು. ಎಲ್ಲೆಡೆಯೂ ದೂಳು, ದೂಳು. ಮತ್ತೆ ಜುಲೈ, ಆಗಸ್ಟ ತಿಂಗಳುಗಳಲ್ಲಿ ಅಲ್ಲಿಗೆ ಹೋದರೆ ಪರಿಸ್ಥಿತಿಯೇ ಬೇರೆ. ಒಂದೆರಡು ಮಳೆ ಬಿದ್ದಿದೆ. ನೆಲಕ್ಕೆ ತೃಪ್ತಿಯಾಗಿದೆ ಎನ್ನುವಂತೆ ಹಸಿರು ಕಿತ್ತುಕೊಂಡು ನೆಲ ಬಿಟ್ಟು ಎದ್ದಿದೆ! ಯಾರು ಹಾಕಿದರು ಈ ಬೀಜಗಳನ್ನು ನೆಲದಲ್ಲಿ? ಬೇಸಗೆಯ ಮಣ್ಣಲ್ಲಿ ಬೀಜಗಳು ಅಡಗಿ ಕುಳಿತಿದ್ದವೆಂದು ಹೊಳೆದೇ ಇರಲಿಲ್ಲ. ಆಗ ಬೆಳೆಯುವುದಕ್ಕೆ ಸರಿಯಾದ ವಾತಾವರಣವಿಲ್ಲವೆಂಬುದನ್ನು ತಿಳಿದಿದ್ದ ಹುಲ್ಲಿನ ಬೀಜಗಳು ಬಿಸಿಲಿನ ಬೇಗೆಯನ್ನು ಸಹಿಸಿಕೊಂಡು ಮಣ್ಣಲ್ಲಿ ಮಣ್ಣಾಗಿ ಸುಮ್ಮನಿದ್ದವು. ಒಂದು ಮಳೆ ಬಂತೋ, ನೆಲದ ದಾಹ ಕೊಂಚ ಇಂಗಿತೋ, ಆ ಪಸೆಯನ್ನೇ ಹೀರಿಕೊಂಡು ಅಡಗಿದ್ದ ಬೀಜಗಳು ಮೊಳೆತು ಹಸಿರಾಗಿ ಹೊರಬಂದವು. ಅವು ಈ ಅವಕಾಶಕ್ಕಾಗಿಯೇ ಕಾಯುತ್ತಿದ್ದವು.

ಮನುಷ್ಯನ ಮನಸ್ಸೂ ಹೀಗೆಯೇ. ಅವನಲ್ಲೂ ಆಸೆಯ ಬೀಜಗಳು ಮನಸ್ಸಿನ ಆಳದಲ್ಲಿ ಕುಳಿತಿವೆ. ಹುಲ್ಲಿನ ಬೀಜಗಳಿಗೆ ಬೇಸಗೆ ಹೇಗೆ ಸಕಾಲವಲ್ಲವೋ ಹಾಗೆಯೇ ಕಷ್ಟದಕಾಲ ಮನುಷ್ಯನ ಆಸೆಗಳು ಮೊಳೆಯುವುದಕ್ಕೆ ಸಕಾಲವಲ್ಲ. ಅವನಲ್ಲಿ ಆಗ ಆಸೆಯ ಬೀಜಗಳು ಕನಸು ಕಾಣುತ್ತವೆ. ಅದನ್ನು ಪಡೆಯಬೇಕು, ಇದನ್ನು ಹೊಂದಬೇಕು, ಆ ಸೌಭಾಗ್ಯ ನನ್ನದಾಗಬೇಕು ಎಂದು ತಹತಹಿಸುತ್ತವೆ. ಆದರೆ ಪರಿಸ್ಥಿತಿ ವಿಪರೀತವಾಗಿರುವಾಗ ಅವು ಕನಸುಗಳಾಗಿಯೇ ಇರುತ್ತವೆ. ಬದುಕಿನಲ್ಲಿ ಯಾವಾಗಲೂ ಕಷ್ಟಗಳೇ ಇರುವುದು ಸಾಧ್ಯವಿಲ್ಲ. ತೃಪ್ತಿಯ ಕಾಲವೂ ಬರುತ್ತದೆ. ಆಗ ಅಡಗಿ ಕುಳಿತಿದ್ದ ಆಸೆಯ ಬೀಜಗಳು ಹೆಡೆಯೆತ್ತಿ ನಿಲ್ಲುತ್ತವೆ.

ನನಗೆ ಪರಿಚಯವಿದ್ದವಳೊಬ್ಬಳು ಚೆಂದದ ಹುಡುಗಿ. ಬುದ್ಧಿವಂತೆ. ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತಲೆಬಗ್ಗಿಸಿಕೊಂಡು, ಮಾತನಾಡದೆ ಓದಿದಳು, ಯಶಸ್ಸು ಪಡೆದಳು. ಆಕೆಯನ್ನು ಕಂಡರೆ ಯಾವುದರಲ್ಲೂ ಆಸಕ್ತಿ ಇಲ್ಲದಂತೆ ಕಾಣುತ್ತಿದ್ದಳು. ಏನನ್ನು ಅಪೇಕ್ಷೆ ಮಾಡದೆ ತನ್ನ ಗುರಿಯನ್ನು ಲಕ್ಷ್ಯದಲ್ಲಿಟ್ಟು ನಡೆದಳು. ಆಕೆಗೊಂದು ಒಳ್ಳೆಯ ಕೆಲಸ ದೊರೆಯಿತು. ಅಧಿಕಾರ, ಹಣ ಬೆನ್ನತ್ತಿ ಬಂದಿತು. ಆಕೆಯ ಲಕ್ಷಣವೇ ಬೇರೆಯಾಯಿತು. ಆಕೆಯ ಬದುಕಿನ ಶೈಲಿ ಅತ್ಯಂತ ಆಧುನಿಕವಾಗಿತ್ತು. ಒಬ್ಬ ಹೆಣ್ಣು ಮಗಳು ಏನೇನನ್ನು ಅಪೇಕ್ಷಿಸಬಹುದೊ ಅದೆಲ್ಲವನ್ನೂ ಬಾಚಿ, ಬಾಚಿ ತುಂಬಿಕೊಳ್ಳುತ್ತಿದ್ದಳು. ಯಾಕೆ ಹೀಗೆ ಎಂದು ಕೇಳಿದರೆ, “ನನಗೆ ಆಸೆಗಳಿರಲಿಲ್ಲವೆಂದಲ್ಲ. ಆದರೆ ಆಸೆಗಳನ್ನು ತೀರಿಸಿಕೊಳ್ಳಲು ಅವಕಾಶಗಳಿರಲಿಲ್ಲ. ಈಗ ಬಂದಿರುವ ಅವಕಾಶಗಳಲ್ಲಿ ಆ ಆಸೆಗಳನ್ನು ತೀರಿಸಿಕೊಳ್ಳಬಯುಸುತ್ತೇನೆ”.

ಕಗ್ಗದ ಮಾತು ಇದೇ. ಕಷ್ಟದ ದಿನಗಳಲ್ಲಿ ಒಣಗಿದ ಬೀಜಗಳಂತೆ ಅಡಗಿದ್ದ ಆಸೆಗಳು ಅನುಕೂಲಗಳು ಬಂದಾಗ ಮೇಲೆದ್ದು ಕುಣಿಯುತ್ತವೆ. ಕುಣಿಯಲಿ, ಆದರೆ ಒಂದು ಹದದಲ್ಲಿ, ಒಂದು ನಿಯಮದಲ್ಲಿ ಕುಣಿದರೆ ಕ್ಷೇಮ. ಇಲ್ಲವಾದರೆ ಸ್ವೇಚ್ಛೆಯಾಗಿಬಿಡುತ್ತದೆ. 

ಪ್ರತಿಕ್ರಿಯಿಸಿ (+)