ಮಂಗಳವಾರ, ನವೆಂಬರ್ 19, 2019
22 °C

ನ್ಯಾಯ ತೀರ್ಮಾನ

ಗುರುರಾಜ ಕರಜಗಿ
Published:
Updated:

ಬ್ರಹ್ಮದತ್ತ ಹಿಂದೆ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿರುವಾಗ ಬೋಧಿಸತ್ವ ಅವನ ನ್ಯಾಯ ಇಲಾಖೆಯ ಮಂತ್ರಿಯಾಗಿದ್ದ. ಆತ ಯಾವಾಗಲೂ ಶಾಂತವಾಗಿದ್ದುಕೊಂಡು, ಸರಿಯಾಗಿ ಆಲೋಚಿಸಿ ತೀರ್ಮಾನಗಳನ್ನು ಕೊಡುತ್ತಿದ್ದ. ಆದ್ದರಿಂದ ಅವನ ಮೇಲೆ ಎಲ್ಲರಿಗೂ ತುಂಬ ವಿಶ್ವಾಸ.

ಒಂದು ಸಲ ರಾಜನ ಪುರೋಹಿತ ತನ್ನ ಹೊಲಗಳು ಇದ್ದ ಹಳ್ಳಿಗೆ ಹೋಗುತ್ತಿದ್ದ. ಆತ ಪ್ರಯಾಣಿಸುತ್ತಿದ್ದುದು ಸುಂದರವಾದ ಕುದುರೆಯ ರಥ. ತಾನೇ ರಥ ನಡೆಸುತ್ತಿದ್ದ. ದಾರಿ ಇಕ್ಕಟ್ಟಿನದು ಮತ್ತು ತಗ್ಗು-ದಿನ್ನೆಯದು. ರಥದ ಕುಲುಕಾಟ ತುಂಬ ಹೆಚ್ಚಾಗಿತ್ತು. ಆಗ ದಾರಿಯಲ್ಲಿ ಎದುರಿಗೆ ಮೂರು-ನಾಲ್ಕು ಎತ್ತಿನ ಬಂಡಿಗಳು ಬಂದವು ಈ ಚಿಕ್ಕ ದಾರಿಯಲ್ಲಿ ಎರಡು ಗಾಡಿಗಳು ಎದುರುಬದುರಾಗಿ ಹೋಗುವುದು ತುಂಬ ಕಷ್ಟ.

ಈತ ರಾಜಪುರೋಹಿತನಲ್ಲವೆ? ಅಹಂಕಾರದಿಂದ ಕೂಗಿದ, ‘ನಿಮ್ಮ ಗಾಡಿಗಳನ್ನು ಬದಿಗೆ ಸರಿಸಿ. ನನ್ನ ರಥಕ್ಕೆ ದಾರಿ ಬಿಡಿ. ನಾನು ರಾಜಪುರೋಹಿತ’. ಎದುರಿನ ಗಾಡಿಗಳಲ್ಲಿ ಮುಂದೆ ಇದ್ದುದು ತೀರಾ ಹತ್ತಿರ ಬಂದಿದ್ದರಿಂದ ಬದಿಗೆ ಸರಿಯುವ ಅವಕಾಶವಿರಲಿಲ್ಲ. ಎರಡೂ ಬದಿಬದಿಗೆ ಬಂದಾಗ ಪುರೋಹಿತ ಕೋಪದಿಂದ ತನ್ನ ಬಾರುಕೋಲಿನಿಂದ ಮತ್ತೊಂದು ಬಂಡಿಯ ಅಚ್ಚಿಗೆ ಬಲವಾಗಿ ಹೊಡೆದ. ಅದು ತಿರುಗುತ್ತಿರುವ ಗಾಲಿಗೆ ಬಡಿದು ಮರಳಿ ಠಣ್ಣನೆ ಹಾರಿಬಂದು ಅವನ ಹಣೆಗೇ ಬಡಿಯಿತು. ಹಣೆಯ ಮೇಲೊಂದು ದೊಡ್ಡ ಗುಬುಟೆ ಎದ್ದಿತು. ‘ಈತ ಮರಳಿ ಅರಮನೆಗೆ ಬಂದು ಈ ರೈತರೆಲ್ಲ ಸೇರಿ ನನ್ನ ಮೇಲೆ ಬಿದ್ದು ಹೊಡೆದರು‘ ಎಂದು ರಾಜನಿಗೆ ಹೇಳಿ ಗುಬುಟೆಯನ್ನು ತೋರಿಸಿದ.

ರೈತರಿಗೆಲ್ಲ ಇಷ್ಟು ಅಹಂಕಾರವೇ? ರಾಜ ಪುರೋಹಿತನ ಮೇಲೆ ಕೈ ಮಾಡುವಷ್ಟು ಧೈರ್ಯ ಅವರಿಗೆ ಬಂತೆ? ಎಂದುಕೊಂಡು ರಾಜ ಆ ಎಲ್ಲ ರೈತರನ್ನು ಬಂಧಿಸಲು ಸೈನಿಕರಿಗೆ ಆಜ್ಞೆ ಮಾಡಿದ. ಅಷ್ಟೇ ಅಲ್ಲ, ಅವರ ಎಲ್ಲ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕುವಂತೆ ಅಪ್ಪಣೆ ನೀಡಿದ. ಈ ಎಲ್ಲ ಪ್ರಸಂಗವನ್ನು ನೋಡಿದ ಬೋಧಿಸತ್ವ ರಾಜನಿಗೆ ಹೇಳಿದ, ‘ರಾಜಾ, ತಾವು ಕೇಳಿದ್ದು ರಾಜಪುರೋಹಿತನ ಮಾತನ್ನು. ಇನ್ನೊಂದು ಪಕ್ಷವಾದ ರೈತರ ಮಾತುಗಳನ್ನು ಕೇಳಲೇ ಇಲ್ಲ. ಒಂದೇ ಬದಿಯ ವಾದವನ್ನು ಕೇಳಿ ತೀರ್ಮಾನ ನೀಡುವುದು ಸರಿಯಲ್ಲ. ಕೆಲವೊಮ್ಮೆ ಜನ ತಮ್ಮನ್ನು ತಾವೇ ಹೊಡೆದುಕೊಂಡು ವೈರಿಗಳು ಹೊಡೆದರು ಎಂದು ದೂರು ಕೊಡುವುದು ಅಪರೂಪವಲ್ಲ’, ಆಗ ರಾಜ, ‘ಹಾಗಾದರೆ ನೀನೇ ಇದರ ವಿಚಾರಣೆ ಮಾಡಿ ತೀರ್ಮಾನ ಕೊಡು’ ಎಂದ.

ಬೋಧಿಸತ್ವ ಘಟನೆ ನಡೆದ ಸ್ಥಳಕ್ಕೆ ಹೋದ, ರೈತರೊಂದಿಗೆ ಮಾತನಾಡಿದ. ಅವರು ನಡೆದದ್ದನ್ನು ನಡೆದಂತೆ ವಿವರಿಸಿದರು. ಅವರು ಹೇಳಿದ್ದರಲ್ಲಿ ಸತ್ಯವಿದೆ ಎನ್ನಿಸಿತು ಏಕೆಂದರೆ ಪುರೋಹಿತನ ಹಣೆಯ ಮೇಲೆ ಮಾತ್ರ ಒಂದೇ ಬುಗುಟೆ ಇದೆ. ರೈತರು ಅಷ್ಟು ಹೊಡೆದಿದ್ದರೆ ದೇಹದ ಬೇರೆ ಭಾಗದಲ್ಲೂ ಪೆಟ್ಟಾಗಿರಬೇಕಿತ್ತಲ್ಲ, ಬಟ್ಟೆಗಳು ಕೊಳೆಯಾಗಬೇಕಿತ್ತಲ್ಲ. ಇದಾವುದೂ ಇರದಿದ್ದರಿಂದ ಪುರೋಹಿತ ಸುಳ್ಳು ಹೇಳಿದ್ದಾನೆ ಎಂದು ತೀರ್ಮಾನಿಸಿ ರೈತರನ್ನು ಬಿಡುಗಡೆ ಮಾಡಿಸಿದ. ಸರಿಯಾದ ನ್ಯಾಯ ದೊರೆಕಿದ್ದಕ್ಕೆ ರಾಜನಿಗೂ ಸಂತೋಷವಾಯಿತು.

ಇದು ಜವಾಬ್ದಾರಿ ಸ್ಥಾನದಲ್ಲಿ ಇರುವವರ ಕರ್ತವ್ಯ. ಅವಸರ ಮಾಡದೆ ಎರಡೂ ಬದಿಯ ವಾದಗಳನ್ನು ಕೇಳಿಸಿಕೊಂಡು, ಸಾಕ್ಷಿಗಳಿಂದಲೂ ವಿವರಗಳನ್ನು ತಿಳಿದುಕೊಂಡು, ಯೋಚನೆ ಮಾಡಿ ತೀರ್ಮಾನ ಕೊಡಬೇಕು. ತಪ್ಪು ತೀರ್ಮಾನದಿಂದ ವ್ಯಕ್ತಿಗೆ ಅನ್ಯಾಯವಾಗುವುದರೊಂದಿಗೆ ಜನರಿಗೆ ನ್ಯಾಯ ವ್ಯವಸ್ಥೆಯಲ್ಲಿಯೇ ನಂಬಿಕೆ ಕಳೆದುಹೋಗುತ್ತದೆ. ಅದು ದೊಡ್ಡ ಅಪಾಯ.

ಪ್ರತಿಕ್ರಿಯಿಸಿ (+)