ಭಾನುವಾರ, ನವೆಂಬರ್ 17, 2019
24 °C

ಮನಸ್ಸು – ಕುದಿಯುವ ಕೊಪ್ಪರಿಗೆ

ಗುರುರಾಜ ಕರಜಗಿ
Published:
Updated:

ಬೆದಕಾಟ ಬದುಕೆಲ್ಲ; ಚಣಚಣವು ಹೊಸ ಹಸಿವು |
ಇದಕಾಗಿ ಅದಕಾಗಿ ಮತ್ತೊಂದಕಾಗಿ ||
ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ |
ಕುದಿಯುತಿಹುದಾವಗಂ – ಮಂಕುತಿಮ್ಮ || 208 ||

ಪದ-ಅರ್ಥ: ಬೆದಕಾಟ=ಹುಡುಕಾಟ, ಚಣಚಣವು=ಕ್ಷಣಕ್ಷಣವು, ಕುದಿಯುತಿಹುದಾವಗಂ=ಕುದಿಯುತಿಹುದು+ಆವಗಂ(ಯಾವಾಗಲೂ)
ವಾಚ್ಯಾರ್ಥ: ಬದುಕೆಲ್ಲ ಹುಡುಕಾಟವೇ ಆಯಿತು. ಪ್ರತಿಕ್ಷಣಕ್ಕೂ ಹೊಸ ಹಸಿವು. ಅಧಿಕಾರ, ಶ್ರೀಮಂತಿಕೆ, ಸಂತೋಷ, ಕೀರ್ತಿಗಳನ್ನು ನೆನೆದು ಮನಸ್ಸು ಇದಕ್ಕಾಗಿ, ಅದಕ್ಕಾಗಿ, ಮತ್ತೊಂದಕ್ಕಾಗಿ ಸತತವಾಗಿ ಕುದಿಯುತ್ತಲೇ ಇರುತ್ತದೆ.

ವಿವರಣೆ: ಎಲ್ಲರಿಗೂ ಬದುಕಿನಲ್ಲಿ ಸುಖ ಬೇಕು. ದು:ಖ ಎಂದಿಗೂ ಬರಬಾರದು. ಈ ಸುಖದ ಅರಸುವಿಕೆಗಾಗಿ ಜೀವನದುದ್ದುಕ್ಕೂ ಒದ್ದಾಟ. ಹೀಗೆ ಒದ್ದಾಟವೇ ಬದುಕಾಯಿತೆ ವಿನಾ ಸುಖ ದಕ್ಕಲಿಲ್ಲ. ನಾಳೆ ಸುಖ ಸಿಕ್ಕೀತು ಎಂದು ಇಂದು ಒದ್ದಾಟ. ಕಾಸು, ಕಾಸು ಕೂಡಿಟ್ಟರೆ ಮುಂದೊಂದು ದಿನ ಜಾಗ ಖರೀದಿಸಿ ನಮ್ಮದೊಂದು ಗೂಡು ಕಟ್ಟಿಕೊಳ್ಳಬಹುದೆಂದು ದಂಪತಿಗಳು ಹೊಟ್ಟೆ ಬಟ್ಟೆ ಕಟ್ಟಿ, ಯಾವ ಸುಖಕ್ಕಾಗಿಯೂ ಅಪೇಕ್ಷೆ ಪಡದೆ, ಮುಂಬರುವ ಸಂತೋಷಕ್ಕಾಗಿ ದುಡಿದರು.

ಇಪ್ಪತ್ತೈದು ವರ್ಷಗಳ ಕಾಲ ಬದುಕನ್ನು ಹೀಗೆಯೇ ಸವೆಸಿದ್ದಾಯಿತು. ಸೈಟೇನೋ ದೊರೆಯಿತು. ಮನೆ ಕಟ್ಟಲು ಹಣ ಬೇಕಲ್ಲ. ಮತ್ತೆ ಅದಕ್ಕಾಗಿ ಒದ್ದಾಟ. ಮನೆ ಕಟ್ಟಿದ್ದಾಯಿತು ಕೊನೆಗೆ. ಇನ್ನು ಆರಾಮವಾಗಿ ಸ್ವಂತ ಮನೆಯಲ್ಲಿ ಇರೋಣವೆಂದುಕೊಂಡಾಗ ಮಗನ ವ್ಯವಹಾರದಲ್ಲಿ ಏರುಪೇರಾಗಿ ಆತ ಜೈಲಿಗೆ ಹೋಗುವ ಸ್ಥಿತಿ ಬಂದಿತು. ಒಂದು ತಿಂಗಳಲ್ಲಿ ಹಣ ಕಟ್ಟದಿದ್ದರೆ ಆತ ಜೈಲುಪಾಲು. ಮನೆ ಮಾರಾಟವಾಯಿತು. ಮತ್ತೆ ಹೊರಟಸ್ಥಳಕ್ಕೇ ಮರಳಿ ಬಂದದ್ದಾಯಿತು.

ಎಲ್ಲವೂ ಚೆನ್ನಾಗಿದೆ ಎಂದರೆ ಸರಿಯಾದೀತೇ? ಎಲ್ಲವೂ ಚೆನ್ನಾಗಿದೆ ಎಂದು ಯಾರು ಎಂದುಕೊಳ್ಳುತ್ತಾರೆ? ಯಾವುದೋ ಕೊರಗು, ಯಾವುದೋ ಅಪೇಕ್ಷೆ ಅವರನ್ನು ತಿನ್ನುತ್ತದೆ. ಒಂದು ಆಸೆ ಪೂರೈಸಿದರೆ, ಮತ್ತೊಂದು ಧುತ್ತನೆ ಬಂದು ಮುಂದೆ ನಿಲ್ಲುತ್ತದೆ. ಮತ್ತೆ ಅದರ ಹಿಂದೆ ಓಟ. ಅಧಿಕಾರ ದೊರೆತಾಗ ಇಂದ್ರಪದವಿ ದೊರೆತಷ್ಟು ಸಂತೋಷ. ಆದರೆ ಅದು ಕೆಲಕಾಲ ಮಾತ್ರ. ಇದಕ್ಕಿಂತ ದೊಡ್ಡ ಅಧಿಕಾರ ಕೈ ಮಾಡಿ ಕರೆಯುತ್ತದೆ. ಇದ್ದ ಅಧಿಕಾರದ ಸೊಗಸು ಮರೆಯಾಗುತ್ತದೆ. ಹಣ ಎಷ್ಟಾದರೆ ಸಾಕು? ಜನ ಭರಾಟೆಯಿಂದ ಹಣ ಕೂಡಿಡುವುದನ್ನು, ಅದಕ್ಕಾಗಿ ತಹತಹಿಸುತ್ತಿರುವುದನ್ನು ಕಂಡರೆ ಈ ದಾಹ ಹಿಂಗುವುದು ಅಸಾಧ್ಯ ಎನ್ನಿಸುವುದಿಲ್ಲವೇ? ಸೊಗಸು ಎನ್ನುವುದೂ ಒಂದು ಮೃಗಜಲ. ಬೆನ್ನತ್ತಿ ಹೋದಷ್ಟು ದೂರ ಓಡುತ್ತದೆ.

ಇವು ಮೂರಕ್ಕಿಂತ ಹೆಚ್ಚು ತೀಕ್ಷ್ಣವಾದದ್ದು ಮತ್ತು ಹಾನಿಯನ್ನುಂಟು ಮಾಡುವುದು ಕೀರ್ತಿಗಾಗಿ ಮಾಡುವ ಒದ್ದಾಟ. ತನ್ನ ಹೆಸರು ಎಲ್ಲರಿಗೂ ತಿಳಿಯಬೇಕು, ಎಲ್ಲರೂ ತನ್ನನ್ನು ಗೌರವಿಸಬೇಕು. ತನ್ನ ಜನಮನ್ನಣೆ ಸದಾಕಾಲ ಇರಬೇಕು ಎಂದು ಒದ್ದಾಡುವ ಜನರನ್ನು ನಾವು ಕಂಡಿದ್ದೇವೆ. ಯಾರು ಕೀರ್ತಿಯ ಹಿಂದೆ ಓಡಿ ಹೋದರೋ ಅವರಿಗಾರಿಗೂ ಶಾಶ್ವತವಾದ ಕೀರ್ತಿ ಒದಗಲಿಲ್ಲ. ಯಾರು ತಮ್ಮ ಕರ್ತವ್ಯವನ್ನೇ ದೈವವೆಂದು ನಂಬಿ ಪರಿಶ್ರಮಿಸಿ ಕಾರ್ಯ ನಿರ್ವಹಿಸಿದರೋ ಅವರನ್ನು ಕೀರ್ತಿ ಬೆನ್ನತ್ತಿ ಬಂದು ಶಾಶ್ವತರನ್ನಾಗಿಸುತ್ತದೆ.

ಕಗ್ಗ ಹೇಳುವ ಮಾತು ಮಾರ್ಮಿಕವಾದದ್ದು. ಪ್ರತಿ ಕ್ಷಣವೂ ಹೊಸ ಆಸೆಯ ಹಸಿವನ್ನು ಹೊತ್ತು ಅಧಿಕಾರಕ್ಕಾಗಿ, ಹಣಕ್ಕಾಗಿ, ಸೊಗಸಿಗಾಗಿ, ಕೀರ್ತಿಗಾಗಿ ಒದ್ದಾಡುವ ಮನಸ್ಸು ಯಾವಾಗಲೂ ಕೊತಕೊತನೆ ಕುದಿಯುತ್ತಿರುವ ಕೊಪ್ಪರಿಗೆ. ಈ ಸುಖದ ಭ್ರಮೆಯಿಂದ ಪಾರಾಗಬೇಕು. ನಿಜವಾದ, ಶಾಂತವಾದ ಸುಖದತ್ತ ಸಾಗಬೇಕು.

ಪ್ರತಿಕ್ರಿಯಿಸಿ (+)