ಶುಕ್ರವಾರ, ಡಿಸೆಂಬರ್ 13, 2019
24 °C

ಆಸೆಗಳ ಕುಣಿಕೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‍ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು – ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು – ಮಂಕುತಿಮ್ಮ || 209 ||

ಪದ-ಅರ್ಥ: ಸಿಂಗ=ಸಿಂಹ, ಇನಿಸುಣಿಸು=ಇನಿಸು+ಉಣಿಸು, ಬೆದೆ=ಸಂಭೋಗದ ಆಸೆ, ಬೆದರು=ಭಯ, ಮನುಜನೆಂತನಿತರಿಂ=ಮನುಜನು+ಎಂತು+ಅನಿತರಿಂ(ಬೇರೆಯವರಿಂದ), ತೃಪ್ತಿವಡೆವನವಂಗೆ=ತೃಪ್ತಿವಡೆವನು(ತೃಪ್ತಿ ಪಡೆಯುವನು)+ಅವಂಗೆ (ಅವನಿಗೆ)

ವಾಚ್ಯಾರ್ಥ: ದನ, ಸಿಂಹ, ಹುಲಿ, ಹಕ್ಕಿ, ಹಾವು, ಮೀನಗಳೆಲ್ಲವುಗಳಿಗೂ ಒಂದಿಷ್ಟು ಆಹಾರ, ಕಾಮತೃಪ್ತಿಗಾಗಿ ಸಂಭೋಗ, ಬದುಕಿಗಾಗಿ ಹೆದರಿಕೆ ಇಷ್ಟಿದ್ದರೆ ಜೀವಿತ ಮುಗಿಯಿತು. ಆದರೆ ಇಷ್ಟರಿಂದಲೇ ಮನುಷ್ಯ ತೃಪ್ತಿ ಪಡೆಯುತ್ತಾನೆಯೇ? ಅವನಿಗೆ ಪ್ರತಿಕ್ಷಣವೂ ಹೊಸ ಹಸಿವು.

ವಿವರಣೆ: ಒಂದು ಪೂರ್ವಿಕರ ಮಾತಿದೆ.
ಆಹಾರ ನಿದ್ರಾ ಭಯ ಮೈಥುನಂಚ ಸಾಮಾನ್ಯ ಮೇತತ್ ಪಶುಭಿ: ನರಾಣಾಮ್|
ಧರ್ಮೋಹಿ ತೇಷಾಂ ಅಧಿಕೋ ವಿಶೇಷ: ಧರ್ಮೇಣ ಹೀನ: ಪಶುಭಿ: ಸಮಾನ: ||

ಆಹಾರ, ನಿದ್ರೆ, ಭಯ, ಸಂತಾನಪ್ರಾಪ್ತಿ ಇವು ಪ್ರಾಣಿಗಳು ಮತ್ತು ಮನುಷ್ಯರಲ್ಲಿ ಇರುವ ಸಮಾನ ಗುಣಗಳು. ಧರ್ಮಾಚರಣೆಯ ವಿಷಯದಲ್ಲಿ ಮಾತ್ರ ಮನುಷ್ಯ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ. ಧರ್ಮಹೀನನಾದ ಮನುಷ್ಯ ಪಶುವಿಗೆ ಸಮಾನ.

ಪಶು, ಪಕ್ಷಿಗಳ ಜೀವಿತಕ್ಕೆ ಬೇಕಾದದ್ದೇನು? ಕಾಲಕಾಲಕ್ಕೆ ಬದುಕಲು ಆಹಾರ, ಲೈಂಗಿಕ ತೃಪ್ತಿಗಾಗಿ ಗಂಡು-ಹೆಣ್ಣುಗಳ ಮಿಲನ, ಜೀವ ಉಳಿಸಿಕೊಳ್ಳುವ ಹೆದರಿಕೆ, ಇಷ್ಟಾದರೆ ಸಾಕು. ಅವುಗಳಿಗೆ ಈ ಬಯಕೆಗಳಾಚೆ ಯಾವ ಅಪೇಕ್ಷೆಗಳೂ ಇಲ್ಲ. ಹೇಗೋ ಹುಟ್ಟಿ, ಬದುಕು ಸವೆಯಿಸಿ ಒಂದು ದಿನ ಮರೆಯಾಗಿ ಹೋಗಿಬಿಡುವುವು. ಮನುಷ್ಯನಿಗೂ ಇವಿಷ್ಟೇ ಬಯಕೆಗಳಾದರೆ ಅವನೂ ಪಶು ಪಕ್ಷಿಗಳಿಗಿಂತ ಭಿನ್ನ ಹೇಗಾದಾನು?

ಆದರೆ ಮನುಷ್ಯ ಪ್ರಾಣಿಗೆ ಮಾತ್ರ ಇವಿಷ್ಟೇ ಆದರೆ ಸಾಲದು. ಅವನಿಗೆ ಬಯಕೆಗಳು ಸಾಲು ಸಾಲೇ ಇದೆ. ಅವನ ಹಸಿವು ಹಿಂಗಲಾರದ್ದು. ಒಂದಕ್ಕೆ ಅಪೇಕ್ಷೆ ಪಡುತ್ತಾನೆ. ಅದು ದೊರೆತ ಮರುಕ್ಷಣವೆ ಮತ್ತೊಂದರಾಸೆಗೆ ನೆಗೆತ. ಅದಕ್ಕೇ ಪುರಂದರದಾಸರು ಹಾಡಿದರು.

ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ
ಅಷ್ಟು ದೊರಕಿದರು ಮತ್ತಷ್ಟರಾಸೆ
ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ
ನಷ್ಟಜೀವನದಾಸೆ ಪುರಂದರ ವಿಠಲ

ಮನುಷ್ಯ ಬದುಕಿನುದ್ದಕ್ಕೂ ಹೊಸ ಹೊಸ ಜನರ, ವಸ್ತುಗಳ, ಚಿಂತನೆಗಳ ಸಂಗಮಾಡುತ್ತಾನೆ. ಈ ಸಂಗ ಹೊಸ ಆಸೆಗಳನ್ನು ಸೃಷ್ಟಿಸುತ್ತದೆ. ಜಗತ್ತಿನಲ್ಲಿ ವಿಷಯಗಳಿಗೆ ಕೊರತೆಯಿಲ್ಲ, ಆ ವಿಷಯಗಳು ಹುಟ್ಟಿಸುವ ಆಸೆಗಳಿಗೂ ಕೊನೆಯಿಲ್ಲ. ಹೀಗೆಯೇ ಆಸೆಗಳ ಬಳ್ಳಿ ಹುಟ್ಟುತ್ತ ಮನುಷ್ಯನನ್ನು ತನ್ನ ಕುಣಿಕೆಯಲ್ಲಿ ಕಟ್ಟಿ ಹಾಕುತ್ತದೆ. ಅದರಿಂದ ಮುಕ್ತನಾಗುವುದು ಬಲು ಕಷ್ಟ.

ಕಗ್ಗ ಹೇಳುವುದೂ ಇದನ್ನೇ. ಉಳಿದ ಪ್ರಾಣಿಗಳ ಆಸೆ ಮಿತ. ಆದರೆ ಮನುಷ್ಯನಿಗೆ ಕ್ಷಣಕ್ಷಣಕ್ಕೂ ಹೊಸ ಹೊಸ ಆಸೆಗಳು. ಆತನಿಗೆ ತೃಪ್ತಿ  ಬಂದೀತು ಹೇಗೆ? 

ಪ್ರತಿಕ್ರಿಯಿಸಿ (+)