ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗದ ಚಿಲುಮೆ

Last Updated 13 ನವೆಂಬರ್ 2019, 22:48 IST
ಅಕ್ಷರ ಗಾತ್ರ

ತಂಗಳುಣಿಸಾದೊಡಂ ಸಾಕೆನುವನುಪವಾಸಿ |
ಸಿಂಗಾರ ಸಂಗಾತಿ ಬೇಕುಂಡವನಿಗೆ ||
ಬಂಗಾರ ಪದವಿ ಪ್ರತಿಷ್ಠೆ ಬೇಕಾಬಳಿಕ |
ಹಿಂಗದಾಯೆದೆಚಿಲುಮೆ– ಮಂಕುತಿಮ್ಮ || 210 ||

ಪದ-ಅರ್ಥ: ತಂಗಳುಣಿಸಾದೊಡಂ= ತಂಗಳು+ಉಣಿಸು+
ಆದೊಡಂ, ಸಾಕೆನುವನುಪವಾಸಿ= ಸಾಕು+ಎನ್ನುವನು+ಉಪವಾಸಿ, ಬೇಕುಂಡವನಿಗೆ= ಬೇಕು+ಉಂಡವನಿಗೆ, ಹಿಂಗದಾಯೆದೆಚಿಲುಮೆ= ಹಿಂಗದು+ಆ+ಎದೆಚಿಲುಮೆ.

ವಾಚ್ಯಾರ್ಥ: ಉಪವಾಸ ಇದ್ದವನಿಗೆ ತಂಗಳು ಊಟವಿದ್ದರೂ ಸಾಕು ಎನ್ನುತ್ತಾನೆ. ಆದರೆ ಹೊಟ್ಟೆ ತುಂಬಿದವನಿಗೆ ಶೃಂಗಾರ, ಸಂಗಾತಿ ಬೇಕು. ನಂತರ ಬಂಗಾರ, ಪದವಿ, ಪ್ರತಿಷ್ಠೆಗಳು ಬೇಕು. ಅವನ ಎದೆಯಲ್ಲಿಯ ಆಸೆಗಳ ಚಿಲುಮೆ ಎಂದಿಗೂ ಬತ್ತಲಾರದು.

ವಿವರಣೆ: ಬಾಲ್ಯದಲ್ಲಿ ಮುಪ್ಪಿನ ಷಡಕ್ಷರಿ ಬರೆದ ತಿರುಕನ ಕನಸು ಪದ್ಯ ನನ್ನನ್ನು ಬಹಳವಾಗಿ ಕಾಡಿತ್ತು. ಎಂಥ ಸುಂದರ ಕಥೆ ಅದು! ಮುರುಕು ಧರ್ಮಶಾಲೆಯಲ್ಲಿ ಮಲಗಿದ್ದ ಭಿಕ್ಷುಕನ ಕನಸು ಅದ್ಭುತ. ತಾನು ರಾಜನಾದದ್ದು, ರಾಜಕನ್ಯೆಯರನ್ನು ಮದುವೆಯಾದದ್ದು, ಮಕ್ಕಳನ್ನು ಪಡೆದದ್ದು, ಚತುರಂಗ ಬಲವನ್ನು ಕಟ್ಟಿದ್ದು, ತನ್ನ ಮಕ್ಕಳಿಗೆ ಮದುವೆಯನ್ನು ಸಂಭ್ರಮದಿಂದ ಮಾಡಿದ್ದು, ನಂತರ ರಾಜ್ಯದ ಮದ, ಮಕ್ಕಳ ಮದ, ಹೆಣ್ಣಿನ ಮದ, ಉಕ್ಕಿ ಬಂದದ್ದು, ಎಲ್ಲವೂ ಕನಸಿನಲ್ಲಿಯೇ. ಶತ್ರುಗಳ ಭಯ ಬಂದಾಗ ಕನಸೆಲ್ಲ ಕರಗಿ ಹೋಗಿ ಮತ್ತೆ ವಾಸ್ತವಕ್ಕೆ ಇಳಿದಿದ್ದ ಭಿಕ್ಷುಕ.

ಕಥೆ ತುಂಬ ಸಾಂಕೇತಿಕವಾಗಿದೆ. ನಾವೆಲ್ಲ ಭಿಕ್ಷುಕರೇ. ಭಿಕ್ಷುಕ ಎಂದರೆ ಸದಾ ಕಾಲ ಮತ್ತೊಬ್ಬರಿಂದ ಬೇಡಿ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವವ. ಮನುಷ್ಯನೂ ಹಾಗೆಯೇ ಭಿಕ್ಷುಕ. ತನ್ನ ಅವಶ್ಯಕತೆಗಳಿಗೋಸ್ಕರ ಮತ್ತೊಬ್ಬರನ್ನು, ಇನ್ನೊಬ್ಬರನ್ನು, ಕೊನೆಗೆ ದೇವರನ್ನು ಕಾಡಿ, ಬೇಡಿ ಪಡೆದುಕೊಳ್ಳಲು ಶ್ರಮಿಸುತ್ತಾನೆ. ಒಂದು ಅಪೇಕ್ಷೆ ತೀರಿದೊಡನೆ ಸಂಭ್ರಮದಿಂದ ಬೀಗುತ್ತಾನೆ. ಅಷ್ಟರಲ್ಲಿ ಮತ್ತೊಂದು ಅಪೇಕ್ಷೆ ಬಾಗಿಲು ತಟ್ಟುತ್ತದೆ. ಮತ್ತೆ ಅದರ ತೀರಿಕೆಗಾಗಿ ಬೇಡಾಟ, ಕಾಡಾಟ.

ಈ ಅಪೇಕ್ಷೆಗಳು ಹಂತಹಂತವಾಗಿ ಮೇಲೇರುತ್ತ ಬರುತ್ತವೆ. ಹಸಿದು ಕಂಗಾಲಾದ ಮನುಷ್ಯ ಪ್ರಪಂಚದ ಅತ್ಯಂತ ಶಕ್ತಿಶಾಲಿ ದೇಶದ ರಾಷ್ಟ್ರಪತಿಯಾಗುವ ಅಪೇಕ್ಷೆಪಡುವುದಿಲ್ಲ. ಅವನ ಮೊದಲ ಆಸೆ ಹೊಟ್ಟೆ ತುಂಬುವಷ್ಟು ಅನ್ನ. ಅದು ತಂಗಳಾದರೂ ಸಾಕು, ಹೇಗಾದರೂ ಹೊಟ್ಟೆ ತುಂಬಿಕೊಳ್ಳಬೇಕು. ಹೊಟ್ಟೆ ತುಂಬುವವರೆಗೆ ಅನ್ನದ ಚಿಂತೆ. ಹೊಟ್ಟೆ ತುಂಬಿತೋ ಅದರ ಆಸೆ ನಿಂತು ಬೇರೆ ವಿಷಯಗಳ ಆಸೆ ಮೊಳೆಯುತ್ತದೆ. ಅವನಿಗೆ ಈಗ ಬಟ್ಟೆ, ಬರೆ, ಅಲಂಕಾರಗಳು ಈ ಎಲ್ಲ ಶೃಂಗಾರಗಳ ಆಸೆ. ಶೃಂಗಾರಗಳು ಕೈವಶವಾದೊಡನೆ ಜೊತೆಗೊಬ್ಬ ಸಂಗಾತಿ ಬೇಕು ಎನ್ನಿಸುತ್ತದೆ. ಅಲ್ಲಿಗೆ ಆಸೆ ನಿಂತಿತೇ? ಇಲ್ಲ, ಸಂಗಾತಿ ದೊರಕಿದ ಮೇಲೆ ಜೀವನದ ಭದ್ರತೆಗೆ ಬಂಗಾರ ಬೇಕು. ಭದ್ರತೆಯ ಭರವಸೆ ದೊರೆತ ಮೇಲೆ ಜನಮನ್ನಣೆಯ ದಾಹ. ಅದಕ್ಕಾಗಿ ಪದವಿಗಳು ಬೇಕು, ಪ್ರತಿಷ್ಠೆ ಬೇಕು. ಹೀಗೆ ಬೇಕುಗಳ ಸರಮಾಲೆ ಬೆಳೆಯುತ್ತಲೇ ಹೋಗುತ್ತದೆ. ಹೀಗೆ ಮನುಷ್ಯ ಸದಾಕಾಲ ಬೇಕು, ಬೇಕು ಎನ್ನುತ್ತಿರುವುದರಿಂದಲೇ ಅವನನ್ನು ಬೇಕೂಫಾ ಎನ್ನುವುದು. ಒಂದಾದನಂತರ ಮತ್ತೊಂದರಂತೆ ನುಗ್ಗಿ ಬರುವ ಆಸೆಗಳ ಚಿಲುಮೆ ಮನುಷ್ಯನ ಎದೆಯಲ್ಲಿ ಬತ್ತುವುದೇ ಇಲ್ಲ. ಒಂದು ರೀತಿಯಲ್ಲಿ ನೋಡಿದರೆ ಈ ಆಸೆಗಳ ಬಯಕೆಗಳಿಂದಲೇ ಪ್ರಪಂಚ ಮುಂದೆ ನಡೆದದ್ದು, ಏಳ್ಗೆಯನ್ನು ಪಡೆದದ್ದು. ಆದರೆ ಅದು ಮಿತಿಯಲ್ಲಿದ್ದರೆ ಕ್ಷೇಮ, ಅತಿಯಾದರೆ ಅನಾಹುತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT