ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸ - ಶ್ರೇಷ್ಠ ಔಷಧ

Last Updated 24 ನವೆಂಬರ್ 2019, 20:01 IST
ಅಕ್ಷರ ಗಾತ್ರ

ಹಿಂದೆ ವಾರಾಣಸಿಯನ್ನು ಬ್ರಹ್ಮದತ್ತ ಆಳುತ್ತಿದ್ದಾಗ ಬೋಧಿಸತ್ವ ಕಾಶಿ ರಾಜ್ಯದ ಬ್ರಾಹ್ಮಣನ ಮನೆತನದಲ್ಲಿ ಜನಿಸಿ, ಬೆಳೆದು ಸಮಸ್ತ ವಿದ್ಯೆಗಳನ್ನು ಕಲಿತ. ಅವನ ಹೆಸರು ಕಲ್ಪಕುಮಾರ ಎಂದಿತ್ತು. ನಂತರ ಆತ ಪ್ರವ್ರಜಿತನಾಗಿ ಹಿಮಾಲಯದಲ್ಲಿ ಐದುನೂರು ಜನ ಶಿಷ್ಯರೊಡನೆ ವಾಸಿಸುತ್ತಿದ್ದ ಕೇಶವನೆಂಬ ತಪಸ್ವಿಯನ್ನು ಸೇರಿಕೊಂಡ. ನಿಧಾನವಾಗಿ ಅವನ ಪ್ರಧಾನ ಶಿಷ್ಯನಾದ.

ಒಮ್ಮೆ ಕೇಶವ ತಪಸ್ವಿ ತನ್ನ ಶಿಷ್ಯರೊಡನೆ ವಾರಣಾಸಿಗೆ ಬಂದು ರಾಜನ ಉದ್ಯಾನದಲ್ಲಿ ಬೀಡುಬಿಟ್ಟ. ರಾಜ ಈ ವಿಷಯವನ್ನು ಕೇಳಿ ಉದ್ಯಾನವನಕ್ಕೆ ಬಂದು ಋಷಿಗಳ ವಸತಿಗೆ ಸರಿಯಾದ ಏರ್ಪಾಡು ಮಾಡಿ ಭೋಜನಕ್ಕೆ ವ್ಯವಸ್ಥೆ ಮಾಡಿದ. ಮಳೆಗಾಲದ ಸಮಯ ಮುಗಿಯುತ್ತಿದ್ದಂತೆ ಕೇಶವ ತಪಸ್ವಿ ತನ್ನ ಶಿಷ್ಯರನ್ನು ಕರೆದುಕೊಂಡು ಹಿಮಾಲಯಕ್ಕೆ ಮರಳಿ ಹೋಗುವ ಇಚ್ಛೆ ಪ್ರಕಟಿಸಿದ. ಆಗ ರಾಜ, “ತಾವು ವೃದ್ಧರು, ಹೊರಡಲು ಅವಸರ ಮಾಡಬೇಡಿ. ಇನ್ನೂ ಕೆಲವು ಕಾಲ ಇಲ್ಲಿದ್ದು ವಿಶ್ರಾಂತಿ ಪಡೆಯಿರಿ. ನಿಮ್ಮ ಶಿಷ್ಯರು ಬೇಕಾದರೆ ಪ್ರವಾಸ ಕೈಕೊಳ್ಳಲಿ” ಎಂದ. ಕೇಶವ ಋಷಿಗೂ ಈ ಮಾತು ಸರಿಯೆನ್ನಿಸಿ ತನ್ನ ಎಲ್ಲ ಶಿಷ್ಯರನ್ನು ಪ್ರಧಾನ ಶಿಷ್ಯರೊಂದಿಗೆ ಕಳುಹಿಸಿದ. ಅವರಲ್ಲಿ ಕಲ್ಪಕುಮಾರನೂ ಇದ್ದ.

ಅವರು ಹೋದ ಮರು ದಿನದಿಂದ ಕೇಶವ ಋಷಿಗೆ ಒಂದು ರೀತಿಯ ಸಂಕಟ ಪ್ರಾರಂಭವಾಯಿತು. ಅದರಲ್ಲೂ ಕಲ್ಪಕುಮಾರನನ್ನು ಕಾಣದೆ ಅವನಲ್ಲಿ ಉದ್ವಿಗ್ನತೆ ಹೆಚ್ಚಾಗತೊಡಗಿತು. ಅವನಿಗೆ ನಿದ್ರೆ ಬರಲಿಲ್ಲ, ಊಟ ಪಚನವಾಗಲಿಲ್ಲ. ಮರುದಿನದಿಂದ ಅವನಿಗೆ ರಕ್ತ-ಭೇದಿ ಪ್ರಾರಂಭವಾಯಿತು. ದಿನದಿನಕ್ಕೂ ಅವನ ಆರೋಗ್ಯ ಕುಸಿಯತೊಡಗಿತು. ಇದರಿಂದ ರಾಜನಿಗೂ ಗಾಬರಿಯಾಯಿತು. ತನ್ನ ರಾಜವೈದ್ಯರಿಗೆ ಹೇಳಿ ಶ್ರೇಷ್ಠ ಔಷಧಿಗಳನ್ನು ಕೊಡಿಸಿದ. ಅತ್ಯಂತ ಹಿತವಾದ ಹಾಗೂ ಶಕ್ತಿಯುತವಾದ ಆಹಾರವನ್ನು ಕೊಡಿಸಿದ. ಏನಾದರೂ ರೋಗ ಗುಣವಾಗಲಿಲ್ಲ. ರಾಜನಿಗೆ ದಿಕ್ಕು ತಪ್ಪಿದಂತಾಯಿತು. ಆಗ ಕೇಶವ ಋಷಿ ಹೇಳಿದ, “ರಾಜಾ, ನಾನು ಇಲ್ಲಿದ್ದರೆ ಬದುಕುವ ಸಾಧ್ಯತೆ ಇಲ್ಲ. ನನ್ನನ್ನು ಬೇಗನೆ ಹಿಮಾಲಯಕ್ಕೆ ಕಳುಹಿಸಿಬಿಡು”. ರಾಜ ತಕ್ಷಣ ತನ್ನ ಅಮಾತ್ಯ ನಾರದನೆಂಬುವವನ್ನು ಕರೆದು ಎಲ್ಲ ವ್ಯವಸ್ಥೆಗಳನ್ನು ಮಾಡಿಸಿ ಹಿಮಾಲಯಕ್ಕೆ ಸುರಕ್ಷಿತವಾಗಿ ಕಳುಹಿಸಿದ.

ಕಲ್ಪಕುಮಾರ ಹಾಗೂ ಉಳಿದ ಶಿಷ್ಯರಿಗೆ ಗುರುವನ್ನು ಕಂಡು ತುಂಬ ಸಂತೋಷವಾಯಿತು. ಆದರೆ, ಕಲ್ಪಕುಮಾರನಿಗೆ ಗುರುವಿನ ಆರೋಗ್ಯದ ಬಗ್ಗೆ ಚಿಂತೆಯಾಯಿತು. ಆಗ ತಾನೇ ಉಪ್ಪು ಹಾಕದೆ, ಒಗ್ಗರಣೆಯನ್ನು ಹಾಕದೆ ನವಣೆ ಅಕ್ಕಿಯನ್ನು ನೀರಿನಲ್ಲಿ ಕುದಿಸಿ ಅದರಲ್ಲಿ ಔಷಧಿಯುಕ್ತ ಎಲೆಗಳನ್ನು ಕುದಿಸಿ ಅದರ ಗಂಜಿಯನ್ನು ಕುಡಿಸಿದ. ಎರಡು ದಿನದಲ್ಲಿ ಕೇಶವ ಋಷಿಯ ಆರೋಗ್ಯ ಸರಿಯಾಯಿತು, ಮೊದಲಿನಂತೆ ಸಂಪೂರ್ಣ ಆರೋಗ್ಯ ಕುದುರಿತು.

ಜೊತೆಗೆ ಬಂದಿದ್ದ ರಾಜನ ಅಮಾತ್ಯ ನಾರದನಿಗೆ ಬಹಳ ಆಶ್ಚರ್ಯವಾಯಿತು. “ಗುರುಗಳೇ ರಾಜನ ಅತ್ಯಂತ ಶ್ರೇಷ್ಠ ವೈದ್ಯರು ಕೊಟ್ಟ ವಿಶೇಷ ಲೇಹ್ಯ, ಕಷಾಯ, ಔಷಧಿಗಳಿಂದ ಗುಣವಾಗದ್ದು, ಅಷ್ಟು ಸಮೃದ್ಧವಾದ, ಪುಷ್ಟಿಕರವಾದ ಆಹಾರದಿಂದ ಕಡಿಮೆಯಾಗದ ರೋಗ, ಈ ನವಣೆಗಂಜಿಯಿಂದ ಕಡಿಮೆಯಾದದ್ದು ಹೇಗೆ?” ಎಂದು ಕೇಳಿದ. ಕೇಶವ ಋಷಿ ಹೇಳಿದ, “ಊಟದ ರುಚಿ, ಪೌಷ್ಟಿಕತೆಗಳಿಗಿಂತ, ಅದನ್ನು ನೀಡುವವರ ಪ್ರೀತಿ, ಶ್ರದ್ಧೆ, ವಿಶ್ವಾಸಗಳು ಹೆಚ್ಚಿನ ಕೆಲಸ ಮಾಡುತ್ತವೆ. ಎಲ್ಲ ರಸಗಳಲ್ಲಿ ಶ್ರದ್ಧೆಯೇ ಅತಿ ದೊಡ್ಡ ರಸ”.

ಇದು ತುಂಬ ಸತ್ಯವಾದದ್ದು. ಶ್ರೀಮಂತಿಕೆಗಿಂತ, ಸಂಭ್ರಮಕ್ಕಿಂತ, ಪ್ರೀತಿ, ವಿಶ್ವಾಸ, ಶ್ರದ್ಧೆಗಳು ನೆಮ್ಮದಿಯನ್ನು ತರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT