ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಹನ್ನಾಟಕದ ನಾಯಕ-ನಾಯಕಿಯರು

ಬೆರಗಿನ ಬೆಳಕು
Last Updated 27 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಸಿರಿಸೊಬಗುಗಳ ಬೆದಕು, ಕೆಳೆ ಬಲುಮೆಗಳ ಬೆದಕು |
ಪರಬೊಮ್ಮನಾಟಕದ ವೇಷಚೇಷ್ಟೆ ||
ಅರಸುತಿಹ ಜೀವ ನಾಯಕನು, ನಾಯಕಿಯವನ |
ಕೆರಳಿಸುವ ಮೋಹರುಚಿ – ಮಂಕುತಿಮ್ಮ || 216 ||

ಪದ-ಅರ್ಥ: ಸಿರಿ=ಶ್ರೀಮಂತಿಕೆ, ಬೆದಕು-ಹುಡುಕಾಟ, ಕೆಳೆ=ಸ್ನೇಹ, ಬಲುಮೆ=ಪೌರುಷ,
ವಾಚ್ಯಾರ್ಥ: ಶ್ರೀಮಂತಿಕೆ, ಸೌಂದರ್ಯ, ಸ್ನೇಹ, ಪೌರುಷಗಳ ಹುಡುಕಾಟವೆಲ್ಲ ಪರಬ್ರಹ್ಮನ ವಿಶ್ವನಾಟಕದಲ್ಲಿ ವೇಷಧರಿಸುವ ಚೇಷ್ಟೆ. ಈ ಎಲ್ಲವನ್ನು ಹುಡುಕಾಡುತ್ತಿರುವ ಜೀವನೇ ನಾಯಕನು, ಅವನನ್ನು ಕೆರಳಿಸುವ ಆಸೆಯ ರುಚಿಯೇ ನಾಯಕಿ.

ವಿವರಣೆ: ಒಬ್ಬ ಮನುಷ್ಯನಿಗೆ ಹಣಗಳಿಕೆಯೇ ಬದುಕಿನ ಏಕೈಕ ಗುರಿ. ಆತ ಸದಾಕಾಲ ಅದರದೇ ಚಿಂತೆಯಲ್ಲಿ ತೊಳಲಿ, ಒದ್ದಾಡಿ, ಸಂಕಟಪಟ್ಟು ಹಣಗಳಿಸುತ್ತಾನೆ. ಆದರೆ ಎಷ್ಟು ಸಾಕು? ಮತ್ತಷ್ಟರ ಬೆನ್ನ ಹತ್ತಿ ಬಸವಳಿಯುತ್ತಾನೆ. ಮತ್ತೊಬ್ಬ ಸೊಬಗಿನ, ಸೌಂದರ್ಯ ಬೆನ್ನು ಹತ್ತುತ್ತಾನೆ. ಒಂದು ಸುಂದರವೆಂದು ಬಗೆದು ತೃಪ್ತಿಪಡುವಾಗ ಅದಕ್ಕಿಂತ ಸೊಗಸಾದದ್ದು ಮುಂದೆ ಬಂದು ಕಣ್ಣು ಸೆಳೆಯುತ್ತದೆ. ಆಗ ಆತ ಅದರ ಹಿಂದೆ ಓಡುತ್ತಾನೆ. ಇದೊಂದು ರೀತಿಯ ಯಯಾತಿಯ ಮನಸ್ಸು.

ಇನ್ನು ಕೆಲವರಿಗೆ ಹಣ, ಸೌಂದರ್ಯ ಮುಖ್ಯವಲ್ಲ. ಅವರಿಗೆ ಸ್ನೇಹ ಎಲ್ಲಕ್ಕೂ ಮುಖ್ಯವಾದದ್ದು. ಸ್ನೇಹದ ಮುಂದೆ ಯಾವುದೂ ದೊಡ್ಡದಲ್ಲ. ಕರ್ಣ ನಮ್ಮ ಕಣ್ಣ ಮುಂದೆ ನಿಲ್ಲುವುದು ಅಂಥ ಸ್ನೇಹದ ಪ್ರತಿಮೆಯಾಗಿ. ಅಲೆಗ್ಝಾಂಡರ್‌ನಂತವನಿಗೆ, ನೆಪೋಲಿಯನ್‍ನಿಗೆ, ಹಿಟ್ಲರ್‌ನಿಗೆ, ಚಕ್ರವರ್ತಿ ಅಶೋಕನಿಗೆ ತಮ್ಮ ಪೌರುಷದ ಬಗ್ಗೆ ಹೆಮ್ಮೆ. ಅದೇ ಅವರ ಲಾಂಛನ.

ಇವು ನಾಲ್ಕೇ ಕ್ಷೇತ್ರಗಳಲ್ಲ, ಮನುಷ್ಯ ಜೀವನದ ನೂರಾರು ಮುಖಗಳಲ್ಲಿ ಜನ ಹೆಗ್ಗಳಿಕೆಯನ್ನು ಸಾಧಿಸಲು ಹೆಣಗಾತ್ತಿರುವುದು ಕಾಣುತ್ತದೆ. ಈ ಹೆಣಗಾಟದಿಂದಲೇ ಪ್ರಪಂಚ ಮುಂದುವರಿದದ್ದು. ಅವರಾರೂ ಶಾಶ್ವತರಾಗಲಿಲ್ಲ. ತಮ್ಮ ಜೀವತಾವಧಿಯಲ್ಲಿ ಧೀರರಾಗಿ ತಾವು ನಂಬಿದ ತತ್ವವನ್ನು ಬೆಂಬತ್ತಿ ನಡೆದರು. ಅಧ್ಯಾತ್ಮದ ದೃಷ್ಟಿಯಿಂದ ನೋಡಿದರೆ ಅವೆಲ್ಲ ಒಂದು ತರಹದ ವೇಷ ಎನ್ನಿಸುವುದಿಲ್ಲವೇ? ನೀವು ನೋಡುವ ನಾಟಕದಲ್ಲೋ, ಸಿನಿಮಾದಲ್ಲೋ ಹಾಗೆಯೇ ಅಗುವುದಿಲ್ಲವೇ? ಧಿಮಿಧಿಮಿಧಿಮಿಕೆಂದು ಕುಣಿದ ವ್ಯಕ್ತಿ ನಾಟಕ ಮುಗಿದೊಡನೆ ನೇಪಥ್ಯಕ್ಕೆ ಸರಿಯುತ್ತಾನೆ. ಹಲವು ಹತ್ತು ಪಾತ್ರಗಳನ್ನು ನಿರ್ವಹಿಸಿದ ಪಾತ್ರಧಾರಿ ಅಂಕ ಮುಗಿದೊಡನೆ ಬಣ್ಣ ಒರೆಸುತ್ತಾನೆ.


ನಮ್ಮ ಜೀವನದ ಎಲ್ಲ ಜೀವಿಗಳು ಪರಬ್ರಹ್ಮನ ಈ ಬೃಹನ್ನಾಟಕದಲ್ಲಿ ಪಾತ್ರಧಾರಿಗಳು. ಸೂತ್ರಧಾರ ಹೇಳಿದಂತೆ ಕುಣಿಯುತ್ತಾರೆ, ಮಾತನಾಡುತ್ತಾರೆ, ತಮ್ಮ ಪಾತ್ರ ಮುಗಿದೊಡನೆ ಪಕ್ಕಕ್ಕೆ ಸರಿದು ಮರೆಯಾಗುತ್ತಾರೆ. ಅದನ್ನು ಈ ಕಗ್ಗ ಸ್ವಾರಸ್ಯವಾಗಿ ಹೇಳುತ್ತದೆ. ಸಾಧನೆಗಳನ್ನು ಹುಡುಕಾಡುವ ಪ್ರತಿಯೊಬ್ಬ ಜೀವಿ ಈ ನಾಟಕದ ನಾಯಕನಿದ್ದಂತೆ. ಹಾಗಾದರೆ ನಾಯಕಿ ಯಾರು? ಇವನನ್ನು ಆಕರ್ಷಿಸಿ, ಮರಳು ಮಾಡಿ, ಜಾಲದಲ್ಲಿ ಕಟ್ಟಿಹಾಕುವ ಆಸೆಯ ರುಚಿಯೇ ನಾಯಕಿ. ಆಕೆ ಬೆರಳು ತೋರಿದೆಡೆ ಈ ನಾಯಕ ಓಡುತ್ತಾನೆ. ಏನೇನೋ ಪ್ರಯತ್ನಗಳನ್ನು ಮಾಡಿ ಮೃಗಜಲದಂತಿರುವ ಮೋಹವನ್ನು ತೀರಿಸಿಕೊಳ್ಳಲು ಹೆಣಗುತ್ತಾನೆ. ಇದೇ ಬೃಹನ್ನಾಟಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT