ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಷ್ಟಿಯ-ರೂಪರುಚಿ

Last Updated 29 ನವೆಂಬರ್ 2019, 19:42 IST
ಅಕ್ಷರ ಗಾತ್ರ

ಆಗಸದ ಬಾಗು, ಚಂದ್ರಮನ ಗುಂಡಿನ ನುಣ್ಪು |
ಸಾಗರದ ತೆರೆವಂಕು, ಗಿಡಬಳ್ಳಿ ಬಳುಕು ||
ಮೇಘವರ್ಣಚ್ಛಾಯೆ – ಯೀಸೃಷ್ಟಿಯಿಂ ನಮ್ಮೊ |
ಳಾಗಿಹುದು ರೂಪರುಚಿ – ಮಂಕುತಿಮ್ಮ || 217 ||

ಪದ-ಅರ್ಥ: ಬಾಗು=ಬಾಗುವಿಕೆ, ನುಣ್ಪು=ನುಣುಪು, ತೆರೆವಂಕು=
ತೆರೆಯ ಒಂಕು(ಒಂಕು ಡೊಂಕಾದ ತೆರೆಗಳು), ಮೇಘವರ್ಣಚ್ಛಾಯೆ=
ಮೋಡಗಳ ಬಣ್ಣದ ಹರಡುವಿಕೆ.
ವಾಚ್ಯಾರ್ಥ: ಅಂಚಿನಲ್ಲಿ ಬಾಗಿದಂತೆ ತೋರುವ ಆಕಾಶ, ನುಣುಪಾದ ಚಂದಿರನ ಮೇಲ್ಮೈ, ಸಮುದ್ರದ ಸೊಟ್ಟ ಸೊಟ್ಟಾದ ತೆರೆಗಳು, ಗಿಡಬಳ್ಳಿಗಳ ಹೊಯ್ದಾಟ, ಮೋಡಗಳಿಂದ ತೂರಿಬರುವ ಬಣ್ಣಗಳ ಜಾಲ ಇವೆಲ್ಲವನ್ನು ಹೊಂದಿರುವ ಸೃಷ್ಟಿ ನಮ್ಮಲ್ಲಿ ರೂಪದ ರುಚಿಯನ್ನು ಹುಟ್ಟಿಸುತ್ತಿಹುದು.

ವಿವರಣೆ: ನಮ್ಮನ್ನು ಕೆಣಕುವುವು ನೂರಾರು ತರಹದ ರುಚಿಗಳು. ಕಣ್ಣಿಗೆ ರುಚಿ, ಕಿವಿಯ ರುಚಿ, ನಾಲಿಗೆಯ ರುಚಿ, ವಾಸನೆಯ ರುಚಿ, ಸ್ಪರ್ಶದ ರುಚಿ ನಮ್ಮನ್ನು ಕೆಣಕುತ್ತವೆ. ಇವುಗಳಲ್ಲಿ ರೂಪ ರುಚಿಯೊಂದು. ಸಾಮಾನ್ಯವಾಗಿ ನಾಲಿಗೆ ಇಷ್ಟಪಡುವುದನ್ನು ರುಚಿ ಎನ್ನುವುದು ವಾಡಿಕೆ, ಆದರೆ ಉಳಿದವುಗಳು ನಿಜವಾಗಿಯೂ ರುಚಿಗಳೇ. ‘ಕಣ್ಣಿಂದ ತಿಂದುಬಿಡುವವನ ಹಾಗೆ ನೋಡುತ್ತಾನೆ’ ಎನ್ನುವುದಿಲ್ಲವೇ? ಕಣ್ಣಿಂದ ತಿನ್ನಬಹುದೇ? ಅದು ಕಣ್ಣಿನಿಂದ ತುಂಬ ಪ್ರೀತಿಯಿಂದ, ತೀಕ್ಷ್ಮತೆಯಿಂದ ಅಸ್ಪಾದಿಸುವ ಬಗೆ. ಅದೇ ರೂಪರುಚಿ.

ನಮ್ಮ ಅನನ್ಯವಾದ ಸೃಷ್ಟಿ ಎಂತೆಂತಹ ಅದ್ಭುತವಾದ, ರಮಣೀಯವಾದ ದೃಶ್ಯಗಳನ್ನು ತಂದು ನಮ್ಮ ಕಣ್ಣ ಮುಂದೆ ಸುರುವುತ್ತಿದೆ! ಅವು ನಮ್ಮನ್ನು ಸೆಳೆಯುತ್ತವೆ. ಆ ದೃಶ್ಯ ಹಿತಕರವಾಗಿದ್ದಾಗ ಮನದಲ್ಲಿ ಸುಖದ ಭಾವನೆ ಏಳುತ್ತದೆ, ಆ ದೃಶ್ಯದ ಬಗ್ಗೆ ಅಪಾರವಾದ ಪ್ರೀತಿಯುಂಟಾಗುತ್ತದೆ. ಅದೇ ‘ರಸಭಾವ’. ಈ ರಸದ ಸ್ವಭಾವ ತುಂಬಾ ವಿಚಿತ್ರವಾದದ್ದು. ಅದು ಮನದಲ್ಲಿ ಅನೇಕ ಭಾವನೆಗಳನ್ನು ಉದ್ದೀಪನಗೊಳಿಸುತ್ತದೆ. ವರ್ಡ್ಸ್‌ವರ್ತ್‌ನಿಗೆ ಅತ್ಯಂತ ಸುಂದರವಾದ ನಿಸರ್ಗಕಾವ್ಯಗಳನ್ನು ರಚಿಸಲು ಪ್ರೇರೇಪಿಸಿದ್ದು ಈ ಸೃಷ್ಟಿ ಸೌಂದರ್ಯವೇ. ಮೇಘಗಳ ಅತ್ಯದ್ಭುತ ವರ್ಣವಿನ್ಯಾಸವೇ ಮನುಷ್ಯನನ್ನು ತುಂಬಾ ಆಕರ್ಷಿಸಿದೆ. ಅದಕ್ಕೇ ಕಾಳಿದಾಸನಂಥ ಅತ್ಯಪೂರ್ವ ಪ್ರತಿಭೆ ಮೇಘವನ್ನೇ ಸಂದೇಶ ವಾಹಕನನ್ನಾಗಿ ಮಾಡಿ ರಚಿಸಿದ ‘ಮೇಘದೂತ’ ಆತ ನಿಸರ್ಗದ ರಮಣೀಯತೆಗೆ ಮೆಚ್ಚಿ ತೋರಿದ ಗೌರವ.
ಶುಭ್ರ ಆಕಾಶದ ತುಂಬೆಲ್ಲ ಹರಡಿಕೊಂಡ ನಕ್ಷತ್ರ ಪುಂಜಗಳನ್ನು ಕಂಡಾಗ, ಸಮುದ್ರದ ತೀರದಲ್ಲಿ ಕುಳಿತಾಗ ಕ್ಷಣವೂ ಬಿಡದೆ ದಂಡೆಯನ್ನು ಅಪ್ಪಳಿಸುವ ಚಿತ್ರ, ವಿಚಿತ್ರವಾದ ತೆರೆಗಳನ್ನು ನೋಡಿದಾಗ ಬೇಜಾರಾಗುವ ಮನುಷ್ಯನಿರು ವುದು ಸಾಧ್ಯವೇ? ಹಸಿರುತುಂಬಿದ ಬೆಟ್ಟಗಳ ನಡುವೆ ಭೋರ್ಗರೆಯುತ್ತ ಧರೆಗಿಳಿಯುವ ಜಲಪಾತ ಎಲ್ಲರ ಮನಸ್ಸನ್ನು ಸೊರೆಗೊಳ್ಳುವುದಿಲ್ಲವೇ? ಈ ಅದ್ಭುತವಾದ, ರಮ್ಯವಾದ ಸೃಷ್ಟಿ ಇರುವುದು ನಮ್ಮ ಹೊರಗೆ. ಆದರೆ ಅದು ಸ್ಫುರಿಸುವ ಪ್ರಚೋದನೆ ನಮ್ಮ ಒಳಗನ್ನು ನಿರ್ಮಿಸುತ್ತದೆ. ಆ ರೂಪರುಚಿ ಏನೇನೋ ಹೊಸ ಚಿಂತನೆಗಳನ್ನು, ಸೃಷ್ಟಿಗಳನ್ನು ನಮ್ಮಿಂದ ಮಾಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT