ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸತನ ನೀಡುವ ದೈವಿಕ ಸತ್ವ

Last Updated 20 ಡಿಸೆಂಬರ್ 2019, 19:51 IST
ಅಕ್ಷರ ಗಾತ್ರ

ಉಸಿರವೊಲನುಕ್ಷಣಂ ಪುರುಷನೊಳವೊಗುತವನ |
ಪೊಸಬನಂಗೆಯ್ದು ದೈವಿಕಸತ್ತ್ವಮವನುಂ ||
ಪೊಸತನವನ್ ಉಳಿದ ಲೋಕಕೆ ನೀಡೆ ದುಡಿವಂತೆ |
ಬೆಸಸುತಿಹುದೇಗಳುಂ – ಮಂಕುತಿಮ್ಮ || 226 ||

ಪದ-ಅರ್ಥ: ಉಸಿರವೊಲನುಕ್ಷಣಂ=ಉಸಿರವೊಲು(ಉಸುರಿನಂತೆ)+ಅನುಕ್ಷಣ(ಪ್ರತಿಕ್ಷಣ), ಪುರುಷನೊಳವೊಗುತವನ=ಪುರುಷನೊಳು+ಹೊಗುತ+ಅವನ, ಪೊಸಬನಂಗೆಯ್ದು=ಹೊಸಬನನ್ನಾಗಿ ಮಾಡಿ, ದೈವಿಕಸತ್ತ್ವಮವನುಂ=ದೈವಿಕಸತ್ತ್ವ+ಅವನುಂ(ಅವನನ್ನು), ಬೆಸಸು=ತಿಳಿಸು, ಪ್ರೇರಿಸು.

ವಾಚ್ಯಾರ್ಥ: ಉಸಿರು, ಮನುಷ್ಯನೊಳಗೆ ಹೋಗುತ್ತ ಅವನನ್ನು ಹೊಸಬನಾಗಿಸುವಂತೆ, ದೈವಿಕಸತ್ವವು ಹೊಸತನವನ್ನು ಪ್ರಪಂಚಕ್ಕೆ ನೀಡಲು ದುಡಿಯುವಂತೆ ಅವನನ್ನು ಪ್ರೇರೇಪಿಸುತ್ತದೆ.

ವಿವರಣೆ: ಇತಿಹಾಸ ಪ್ರಸಿದ್ಧರಾದ ಕೆಲವು ಜನರ ಬದುಕನ್ನು ಕಂಡಾಗ ಬೆರಗು ಮೂಡುತ್ತದೆ. ವೇದಕಾಲದ ಮಹರ್ಷಿಗಳು ಅದೇಕೆ ಅಷ್ಟು ತಪಸ್ಸನ್ನು ಮಾಡಿ ಸಿದ್ಧಾಂತಗಳನ್ನು ಕಂಡುಕೊಳ್ಳಬೇಕಿತ್ತು? ಏಕೆ ರಾಮ, ಕೃಷ್ಣರು ತಮ್ಮ ಬದುಕನ್ನೇ ಒರೆಗೆ ಹಚ್ಚಿ ಮೌಲ್ಯಪ್ರತಿಪಾದನೆಗೆ ನಿಲ್ಲಬೇಕಿತ್ತು? ಸುಂದರವಾದ, ಸಮೃದ್ಧವಾದ ಸಂಸಾರವನ್ನು ತೊರೆದು ಸನ್ಯಾಸದ ಬರಡು ಜೀವನಕ್ಕೆ ಬುದ್ಧ, ಮಹಾವೀರ, ಶಂಕರರು ಏಕೆ ತಿರುಗಿದರು? ಬಡತನದಲ್ಲಿ, ಕಷ್ಟದಲ್ಲಿದ್ದರೂ ವಿಜ್ಞಾನದ ಅವಿಷ್ಕಾರಕ್ಕೆ ತನ್ನ ಜೀವನವನ್ನೇ ಹೊಸೆದ ಮೇರಿಕ್ಯೂರಿಯ ಚಿಂತನೆಯಲ್ಲಿದ್ದ ಒತ್ತಡಗಳಾವುವು? ಒಬ್ಬ ಮಹಾನ್ ಸಾಹಿತಿಯ, ಆಟಗಾರನ, ಗಾಯಕನ, ನರ್ತನಪಟುವಿನ, ಸೈನಿಕನ, ರಾಜಕಾರಣಿಯ ಸಾಧನೆಗೆ ಒತ್ತಾಸೆಯಾಗಿ ನಿಂತದ್ದು ಯಾವುದು?

ಯಾವುದೋ ಸತ್ವ ಅವರನ್ನು ಕೆಲಸಕ್ಕೆ ಪ್ರೇರೇಪಿಸಿ ಸಾಧನೆಯನ್ನು ಮಾಡಿಸುತ್ತದೆ. ಸಾಮಾನ್ಯರಂತಿದ್ದವರನ್ನು ಅಸಾಮಾನ್ಯರನ್ನಾಗಿ ಮಾಡುತ್ತದೆ. ಅತ್ಯಂತ ಬಡತನದಲ್ಲಿ ಹುಟ್ಟಿ ಸ್ವಶಿಕ್ಷಣವನ್ನು ಪಡೆದು ವಕೀಲನಾಗಿದ್ದ ಅಬ್ರಹಾಂ ಲಿಂಕನ್ ಸಮಾನತೆಯನ್ನು ತನ್ನ ಬದುಕಿನ ಗುರಿಯನ್ನಾಗಿಸಿಕೊಂಡು ಅಸಾಮಾನ್ಯ ಹಾಗೂ ಶ್ರೇಷ್ಠ ರಾಷ್ಟ್ರಪತಿಯಾಗಿ ಜಗಮಾನ್ಯನಾದದ್ದೂ ಆ ವಿಶ್ವಸತ್ವದ ಪ್ರೇರಣೆಯಿಂದ.

ಈ ಕಗ್ಗ ಹೇಳುವುದು ಅದನ್ನೇ. ಉಸಿರು ದೇಹದೊಳಗೆ ಸೇರಿದಾಗ ಅವನಲ್ಲಿ ಚೈತನ್ಯವನ್ನು ಸ್ಫುರಿಸಿ ಜೀವನವನ್ನು ಮುಂದುವರೆಸುವಂತೆ ಯಾವುದೋ ವಿಶ್ವತತ್ವ ಅವನಲ್ಲಿ ಸೇರಿ ಎರಡು ಕೆಲಸಗಳನ್ನು ಮಾಡುತ್ತದೆ. ಮೊದಲು ಸಾಮಾನ್ಯನಂತಿದ್ದವನಲ್ಲಿ ಹೊಸತನವನ್ನು ಮೂಡಿಸುತ್ತದೆ. ನಂತರ ಅವನ ಹೊಸತನ ತಂದ ಸಾಧನೆಯನ್ನು ಪ್ರಪಂಚಕ್ಕೆ ನೀಡುವಂತೆಪ್ರೋತ್ಸಾಹಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT