ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ರಯದಾತ

Last Updated 31 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಬ್ರಹ್ಮದತ್ತ ವಾರಾಣಸಿಯನ್ನು ಅಳುತ್ತಿದ್ದಾಗ ಬೋಧಿಸತ್ವ ಒಂದು ಸ್ವರ್ಣಹಂಸವಾಗಿ ಹುಟ್ಟಿದ್ದ. ದೊಡ್ಡವನಾದಾಗ ಅತ್ಯಂತ ಬಲಶಾಲಿ ಪಕ್ಷಿಯಾದ. ಆತ ಚಿತ್ರಕೂಟ ಪರ್ವತದ ಸ್ವರ್ಣಗುಹೆಯಲ್ಲಿ ವಾಸವಾಗಿದ್ದರೂ ಹಿಮಾಲಯ ಪ್ರದೇಶಕ್ಕೆ ಹಾರಿ ಹೋಗಿ ಅಲ್ಲಿಯ ಜಲಾಶಯದಲ್ಲಿ ಬೆಳೆದ ಉತ್ತಮ ಆಹಾರವನ್ನು ತಿಂದು ಬರುತ್ತಿದ್ದ.

ಈ ಸ್ವರ್ಣಹಂಸ ದಿನವೂ ಹೋಗಿಬರುವ ದಾರಿಯಲ್ಲಿ ಒಂದು ಮುತ್ತುಗದ ಮರವಿತ್ತು. ಸ್ವರ್ಣಹಂಸ ಹಾರಿ ಬಂದು ಈ ವೃಕ್ಷದ ಮೇಲೆ ಕುಳಿತು ಸ್ವಲ್ಪ ವಿಶ್ರಾಂತಿ ಪಡೆದು ಮತ್ತೆ ಹಾರುತ್ತಿತ್ತು. ಇದು ದಿನನಿತ್ಯವೂ ಆಗುತ್ತಿದ್ದುದರಿಂದ ಪಕ್ಷಿಗೂ ಮುತ್ತುಗದ ಮರದ ವೃಕ್ಷದೇವತೆಗೂ ಸ್ನೇಹವಾಯಿತು.

ಒಂದು ದಿನ ಬೇರೊಂದು ಪಕ್ಷಿ ಹಾರಿ ಬಂದು ಮರದ ಮೇಲೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ ಕೊಂಬೆಗಳ ಮಧ್ಯೆ ಹಿಕ್ಕೆ ಹಾಕಿತು. ಹಿಕ್ಕೆಯಲ್ಲಿದ್ದ ಆಲದ ಮರದ ಬೀಜವೊಂದು ನೆಲದಲ್ಲಿ ಸೇರಿ ಮಳೆಯಾದಾಗ ಒಂದು ಆಲದ ಮರದ ಸಸಿಯಾಯಿತು. ಅದು ನಾಲ್ಕಾರು ಇಂಚು ಎತ್ತರದ ಸಸಿಯಾಗಿದ್ದಾಗ ಹಸಿರು ಕೆಂಪು ಬಣ್ಣದ ಚಿಗುರು ಎಲೆಗಳಿಂದ ತುಂಬ ಆಕರ್ಷಕವಾಗಿ ಕಾಣುತ್ತಿತ್ತು. ಸ್ವರ್ಣಹಂಸ ಬಂದು ಮರದಲ್ಲಿ ಕುಳಿತಾಗ ಮುತ್ತುಗ ಮರದ ದೇವತೆ ಈ ಪುಟ್ಟ ಸಸಿಯ ಬಗ್ಗೆ ಬಹಳ ಹಮ್ಮೆಯ ಮಾತುಗಳನ್ನಾಡಿತು.

ಆಗ ಸ್ವರ್ಣಹಂಸ ವೃಕ್ಷದೇವತೆಗೆ ಬುದ್ಧಿಮಾತು ಹೇಳಿತು, ‘ಸ್ನೇಹಿತ, ಆ ಸಸಿ ಆಲದ ಮರದ್ದು. ಅದು ತುಂಬ ದೊಡ್ಡದಾಗಿ ಬೆಳೆಯುವ ಮರ. ಅದನ್ನು ಈಗಲೇ ಕಿತ್ತು ಹಾಕಿಬಿಡು. ಇಲ್ಲದಿದ್ದರೆ ಅದು ಬೆಳೆಯುತ್ತ, ಬೆಳೆಯುತ್ತ ನಿನ್ನನ್ನೇ ನಾಶಮಾಡಿಬಿಡುತ್ತದೆ’. ಆದರೆ ಮುತ್ತುಗದ ಮರಕ್ಕೆ ಈ ಸಸಿಯ ಮೇಲೆ ಪ್ರೀತಿ ಬಂದಿತ್ತು. ‘ಈ ಆಲದ ಗಿಡ ಬೆಳೆಯಲಿ. ನಾನು ಅದಕ್ಕೆ ತಂದೆ-ತಾಯಿಯರಂತೆ ಆಶ್ರಯ ನೀಡುತ್ತೇನೆ. ಅದರೊಂದಿಗೆ ಸಂಬಂಧವನ್ನು ಗಟ್ಟಿಯಾಗಿ ಬೆಳೆಸುತ್ತೇನೆ’ ಎಂದಿತು.

‘ಏನೋಪ್ಪ, ಅದು ನಿನ್ನಿಚ್ಛೆ, ಸ್ನೇಹಿತನಾಗಿ ನಿನಗೆ ಸರಿಯಾದ ಅಭಿಪ್ರಾಯವನ್ನು ಕೊಡುವುದು ನನ್ನ ಧರ್ಮ. ಆಲದ ಮರವನ್ನು ಬುಡದಲ್ಲಿ ಬೆಳೆಸುವುದು, ಹೊಟ್ಟೆಯಲ್ಲಿ ಬೆಂಕಿಯನ್ನು ಇಟ್ಟುಕೊಂಡಂತೆ‘ ಹೀಗೆ ಹೇಳಿ ಸ್ವರ್ಣಹಂಸ ತನ್ನ ರೆಕ್ಕೆಗಳನ್ನು ಬಿಚ್ಚಿಕೊಂಡು ಹಾರಿ ಚಿತ್ರಕೂಟ ಪರ್ವತಕ್ಕೆ ಹೋಗಿಬಿಟ್ಟಿತು. ಆದರೆ ಮುಂದೆಂದೂ ಮರಳಿ ಮುತ್ತುಗದ ಮರದ ಕಡೆಗೆ ಬರಲೇ ಇಲ್ಲ.

ಮುಂದೆ ವರ್ಷಗಳು ಉರುಳಿದಂತೆ ಆಲದ ಮರ ಬೆಳೆಯಿತು. ಅದರ ಮೇಲೊಂದು ವೃಕ್ಷದೇವತೆ ಬಂದು ನೆಲೆಸಿತು. ಆಲದ ಮರ ಬೆಳೆದಂತೆ ಮುತ್ತುಗದ ಮರದ ಕೊಂಬೆಗಳು ಮುರಿಯತೊಡಗಿದವು. ಅದರ ಬೇರುಗಳು ಮುತ್ತುಗದ ಬೇರುಗಳು ಗಟ್ಟಿಯಾಗಿ ನಿಲ್ಲದಂತೆ ಮಾಡಿದವು.

ಒಂದು ದಿನ ಮುತ್ತುಗದ ಮರ ಕಡಿದುಕೊಂಡು ಕೆಳಗೆ ಬಿತ್ತು. ಅದರ ಬೇರು ಒಣಗಿ ಹೋಗಿತ್ತು. ಆಗ ಮುತ್ತುಗದ ಮರದ ದೇವತೆ ಹೀಗೆ ಹೇಳಿತು, ‘ಸ್ವರ್ಣಹಂಸ ಈ ಮಾತನ್ನು ನನಗೆ ಅಂದೇ ಹೇಳಿತ್ತು. ಆದರೆ ನಾನು ಅದರ ಮಾತು ಕೇಳದಿದ್ದುದಕ್ಕೆ ಈ ಅವಸ್ಥೆ ಬಂದಿದೆ. ಬೆಳೆಯುತ್ತಿರುವಾಗ ಆಶ್ರಯಕೊಟ್ಟವರನ್ನೇ ತಿಂದು ಮುಗಿಸುವವನನ್ನು ಯಾರೂ ಪ್ರಶಂಸೆ ಮಾಡುವುದಿಲ್ಲ. ಅಂತೆಯೇ ತನ್ನ ಬುಡಕ್ಕೇ ಕೊಡಲಿ ಹಾಕುವವನನ್ನು ಪೋಷಿಸುವ ವ್ಯಕ್ತಿಯನ್ನು ಮೂರ್ಖನೆನ್ನುತ್ತಾರೆ‌’

ಕೇಳಿದವರಿಗೆ ಆಶ್ರಯ ನೀಡಬೇಕು ಆದರೆ ಅವರು ನಿಮಗೆ ಕುಠಾರಪ್ರಾಯರಾದವರು ಎಂದು ತಿಳಿದೂ ಆಶ್ರಯ ಕೊಡುವುದು ಮೂರ್ಖತನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT