ಭಾನುವಾರ, ಜನವರಿ 19, 2020
22 °C
beragina belaku

ಮಿಶ್ರಣದ ಸಂಭ್ರಮ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

Gururaja Karjagi

 ತರುಜಾತಿ ಖಗಜಾತಿ ಮೃಗಜಾತಿಗಳು ನೂರು |
ನರಜಾತಿ ಮಿಕ್ಕ ಜಾತಿಗಳಿಂದ ಬೇರೆ ||
ನರರೊಳೋರೊರ್ಪ್ಪನುಂ ತಾನೊಂದು ಬೇರೆ ಜಗ |
ಬೆರಕೆ ಸಾಮ್ಯಾಸಾಮ್ಯ – ಮಂಕುತಿಮ್ಮ || 236 ||

ಪದ-ಅರ್ಥ: ತರು-ಗಿಡ, ಮರಗಳು, ಖಗ=ಪಕ್ಷಿಗಳು, ನರರೊಳೋರೊರ್ಪನುಂ=ನರನೊಳ್(ಮನುಷ್ಯರಲ್ಲಿ)+ಓರೊರ್ಪನುಂ(ಒಬ್ಬೊಬ್ಬನೂ), ಬೆರಕೆ=ಮಿಶ್ರಣ, ಸಾಮ್ಯಾಸಾಮ್ಯ=ಸಾಮ್ಯ (ಸಮಾನವಾಗಿರುವುದು)+ಅಸಾಮ್ಯ(ಅಸಮಾನವಾಗಿರುವುದು)
ವಾಚ್ಯಾರ್ಥ: ಗಿಡಮರಗಳು, ಹಕ್ಕಿಗಳು, ಪ್ರಾಣಿಗಳಲ್ಲಿ ನೂರು ಜಾತಿಗಳು. ಮನುಷ್ಯ ಜಾತಿ ಉಳಿದೆಲ್ಲ ಜಾತಿಗಳಿಗಿಂತ ಭಿನ್ನ. ಆದರೆ ಈ ಮನುಷ್ಯರೊಳಗೆ ಒಬ್ಬೊಬ್ಬನೂ ಒಂದೊಂದು ಬೇರೆಯಾದ ಜಗತ್ತೇ. ಹೀಗೆ ಈ ಜಗತ್ತಿನಲ್ಲಿ ಸಮವಾದದ್ದು, ಅಸಮವಾದದ್ದು ಸೇರಿ ಮಿಶ್ರಣವಾಗಿದೆ.

ವಿವರಣೆ: ಈ ಪ್ರಪಂಚ ಒಂದು ಸೋಜಿಗ, ಇದರಲ್ಲಿರುವ ವಸ್ತುಗಳು ಬೆರಗಾಗುವಷ್ಟು ಭಿನ್ನ, ಭಿನ್ನವಾಗಿವೆ. ಗಿಡಮರಗಳಲ್ಲಿ ಅದೆಷ್ಟು ತರ? ಅದರಂತೆಯೇ ಪಕ್ಷಿಗಳಲ್ಲಿ ನೂರಾರು ಜಾತಿಗಳು. ಇಂದಿನ ವಿಜ್ಞಾನಿಗಳು ಸಮುದ್ರ ತಳದಲ್ಲಿ, ಪರ್ವತದ ಗುಹೆಗಳಲ್ಲಿ, ಆಕಾಶದಲ್ಲಿ, ಹಿಮವತ್ ಪರ್ವತದ ಶಿಖರಗಳಲ್ಲಿ ಕ್ಯಾಮೆರಾಗಳನ್ನಿಟ್ಟು ನೋಡಿ, ತಾವು ಕಂಡದ್ದನ್ನು ನಮಗೆ ತೋರಿದಾಗ ಆಶ್ಚರ್ಯವಾಗದಿದ್ದೀತೇ? ನಮ್ಮ ಹಿರಿಯರು ಹೇಳುತ್ತಿದ್ದಂತೆ ಎಂಬತ್ನಾಲ್ಕು ಲಕ್ಷ ಜೀವರಾಶಿಗಳಿರುವುದು ನಿಜ ಎನ್ನಿಸುತ್ತದೆ. ಅಷ್ಟೊಂದು ವೈವಿಧ್ಯಮಯವಾದ ಜೀವರಾಶಿ.

ಆದರೆ ಮನುಷ್ಯ ಮಾತ್ರ ಇವುಗಳಿಂದ ತುಂಬ ಭಿನ್ನನಾಗಿದ್ದಾನೆ. ಯಾಕೆಂದರೆ ಪ್ರತಿಯೊಂದು ಗಿಡದ, ಪಕ್ಷಿಯ, ಪ್ರಾಣಿಯ ಜಾತಿಗೆ ಒಂದೊಂದು ನಿಯಮವಿದೆ. ಅವು ಆ ನಿಯಮಗಳಂತೆಯೇ, ನಿಸರ್ಗದೊಂದಿಗೆ ಹೊಂದಿಕೊಂಡೇ, ಅದರ ಪ್ರಭಾವದಲ್ಲೇ ಹುಟ್ಟಿ, ಬೆಳೆದು, ಸಾಯುತ್ತವೆ. ಅವುಗಳಿಗೆ ಪ್ರತಿಯೊಂದು ಹಂತದಲ್ಲೂ ಕಾಲದ ನಿಯಮವಿದೆ. ಅವೆಲ್ಲ ಆ ಮಿತಿಗಳಲ್ಲೇ ಬದುಕಿ ಬಾಳುತ್ತವೆ. ಕಗ್ಗ ಹೇಳುವ ಹಾಗೆ ಪ್ರತಿಯೊಬ್ಬ ಮನುಷ್ಯ ಒಂದೊಂದು ಬೇರೆ ಜಗತ್ತಿದ್ದಂತೆ. ಅವನ ಚಿಂತನೆ, ಬದುಕುವ ರೀತಿ, ಅಪೇಕ್ಷೆಗಳು, ಸಾಧನೆಗಳು ಎಲ್ಲವೂ ವಿವಿಧ. ಅವನು ನಿಸರ್ಗದಲ್ಲಿದ್ದರೂ ಅದಕ್ಕೆ ವಿರುದ್ಧವಾಗಿ ಬದುಕುತ್ತಿದ್ದಾನೆ. ಅವನಿಗೆ ಮಿತಿಗಳೇ ಇಲ್ಲ. ಉಳಿದೆಲ್ಲ ಜೀವಿಗಳಿಗೆ ಒಂದೊಂದು ಸ್ವಭಾವವಿದೆ. ಆನೆ ಏನಾದರೂ ಮಾಂಸ ತಿನ್ನದು, ಹುಲಿ ಹುಲ್ಲು ತಿನ್ನದು. ಮೀನುಗಳು ನೀರಿನಲ್ಲಿ ಮಾತ್ರ ಬದುಕಬಲ್ಲವು. ಪಕ್ಷಿಗಳು ನೀರಿನೊಳಗೆ ಬದುಕುವುದು ಅಸಾಧ್ಯ. ಹುಣಿಸೆ ಎಂದಿದ್ದರೂ ಹುಳಿಯೇ, ಮಾವಿನ ಹಣ್ಣು ಎಂದಿಗೂ ಕಹಿಯಾಗದು. ಹೀಗೆ ಮರ, ಪಕ್ಷಿ, ಪ್ರಾಣಿಗಳಿಗೆಲ್ಲ ಅವುಗಳದ್ದೇ ಆದ ಮೂಲಧರ್ಮವಿದೆ. ಮನುಷ್ಯ ಮಾತ್ರ ಏನನ್ನೂ ಮಾಡಿಯಾನು. ಅವನು ಹೆಸರಿಗೆ ಮಾತ್ರ ಮನುಷ್ಯ ಜಾತಿ. ಆದರೆ ಒಬ್ಬೊಬ್ಬನೂ ಒಂದೊಂದು ಜಾತಿ. ಹೀಗೆ ಪ್ರಪಂಚ ಸಮಾನವಾಗಿರುವುದು, ಅಸಮಾನವಾಗಿರುವ ವಸ್ತು ವಿಶೇಷಗಳಿಂದ ಮಿಶ್ರಣವಾಗಿದೆ. ಈ ವೈವಿಧ್ಯತೆಯೇ ಈ ಜಗತ್ತಿನ ಸೊಗಸಿಗೆ, ಸಂಭ್ರಮಕ್ಕೆ ಕಾರಣವಾದದ್ದು.

ಪ್ರತಿಕ್ರಿಯಿಸಿ (+)