ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿಂದ ಅನೇಕ

Last Updated 17 ಜನವರಿ 2020, 19:46 IST
ಅಕ್ಷರ ಗಾತ್ರ

ಮನುಜಕುಲವೊಂದೊಬ್ಬನಿನ್ನೊಬ್ಬನಂತಿಲ್ಲ |
ತನುವಂಗಗಳೊಳೊಂದು, ರೂಪ ಗುಣ ಬೇರೆ ||
ಮನದೊಳೊಬ್ಬೊಬ್ಬನೊಂದೊಂದು, ಪ್ರಪಂಚವಿಂ |
ತನುವೇಕದೊಳ್ ಬಹುಳ – ಮಂಕುತಿಮ್ಮ || 238 ||

ಪದ-ಅರ್ಥ: ಮನುಜಕುಲವೊಂದೊಬ್ಬನಿನ್ನೊಬ್ಬನಂತಿಲ್ಲ=ಮನುಜಕುಲ+ಒಂದು+ಒಬ್ಬನು+ಇನ್ನೊಬ್ಬನಂತಿಲ್ಲ, ತನುವಂಗಳೊಳೊಂದು=ತನು+ಅಂಗಗಳೊಳು+ಒಂದು,

ವಾಚ್ಯಾರ್ಥ: ಮನುಜಕುಲ ಒಂದೆ. ಆದರೆ ಒಬ್ಬನು ಮತ್ತೊಬ್ಬನಂತಿಲ್ಲ. ಒಂದೊಂದು ದೇಹ, ಒಂದೊಂದು ಅಂಗಗಳು ಬೇರೆ ಬೇರೆ. ಅಂತೆಯೇ ರೂಪ, ಗುಣಗಳು ಬೇರೆ. ಮನಸ್ಸಿನಲ್ಲಿಂತೂ ಒಬ್ಬೊಬ್ಬನು ಒಂದೊಂದು ತೆರ. ಪ್ರಪಂಚವೂ ಒಂದೇ ಆದರೂ ಅದು ಅನೇಕತೆಗಳ ಸಂಗಮ.

ವಿವರಣೆ: ಒಬ್ಬ ವ್ಯಕ್ತಿ ಮತ್ತೊಬ್ಬರನ್ನು ಎಷ್ಟು ಮಟ್ಟಿಗೆ ಹೋಲುತ್ತಾನೋ ಅಷ್ಟರಮಟ್ಟಿಗೆ ಅವರು ಸಮಾನರು. ಅವರ ಸಮಾನತೆಯ ಅಂಶಗಳು ‘ಸಾಮಾನ್ಯ’. ಅದೇ ರೀತಿ ಇಬ್ಬರು ವ್ಯಕ್ತಿಗಳು ಎಷ್ಟರಮಟ್ಟಿಗೆ ಭಿನ್ನವಾಗಿರುತ್ತಾರೋ ಅಷ್ಟರಮಟ್ಟಿಗೆ ಅವರು ‘ವಿಶೇಷ’ಗಳು. ಅವರ ಭಿನ್ನತೆಯೇ ವೈಶಿಷ್ಟ್ಯ. ಹೀಗೆ ‘ಸಾಮಾನ್ಯ’ ಮತ್ತು ‘ವೈಶಿಷ್ಟ್ಯ’ ಗಳೆರಡನ್ನೂ ಸೇರಿಸಿಕೊಂಡದ್ದು ಪ್ರಪಂಚ.

ಜಗತ್ತಿನ ಸೃಷ್ಟಿಯ ಪ್ರಾರಂಭದಲ್ಲಿಯ ಸ್ಥಿತಿಯನ್ನು ಅವ್ಯಕೃತವೆಂದು ಕರೆಯು
ತ್ತಾರೆ. ಅದು ಒಂದೇ ವಸ್ತುವಾಗಿದ್ದರೂ ಅಸ್ಪಷ್ಟವಾಗಿ ಯಾವುದೇ ರೂಪವನ್ನು ಪಡೆಯದ್ದು. ಅದರಿಂದ ಹುಟ್ಟಿದವು ಪಂಚಮಹಾಭೂತಗಳು. ಈ ಪಂಚಮಹಾಭೂತಗಳ ಬೇರೆ ಬೇರೆ ಸಂಯೋಗಗಳಿಂದ ‘ಸಾಮಾನ್ಯ’, ‘ವಿಶೇಷ’ಗಳು ಬಂದವು. ಅಂದರೆ ಅನಂತವೂ, ಅಪಾರವೂ ಆದ ಮೂಲವಸ್ತುವಿನಿಂದ ಮಿತಿಯುಳ್ಳ, ಪರಿಮಿತಶಕ್ತಿಯುಳ್ಳ ವಸ್ತುಗಳು, ಜೀವಗಳು ರೂಪ ತಳೆದವು.

ಈ ಮನುಷ್ಯರನ್ನೇ ಗಮನಿಸಿ. ಎಲ್ಲರಿಗೂ ಕಣ್ಣು, ಕಿವಿ, ಮೂಗು, ಬಾಯಿ, ಕೈ ಕಾಲು ಮುಂತಾದ ಅಂಗಾಂಗಳು ಸ್ಥೂಲವಾಗಿ ಇವೆ. ಇವು ಸಾಮಾನ್ಯ ಲಕ್ಷಣಗಳು. ಆದ್ದರಿಂದ ಈ ಅಂಗಾಂಗಳನ್ನು ಹೊಂದಿರುವವರನ್ನು ಮನುಜಕುಲ - ಒಂದೇ ಕುಲ ಎಂದು ತೀರ್ಮಾನಿಸಲಾಯಿತು. ಆದರೆ ಒಬ್ಬರಂತೆ ಮತ್ತೊಬ್ಬರಿಲ್ಲ. ಪ್ರಪಂಚದ ಆದಿಯಿಂದ ಇಂದಿನವರೆಗೆ, ಅಷ್ಟೇಕೆ, ಮುಂದೆ ಪ್ರಪಂಚ ಇರುವವರೆಗೆ ನಿಮ್ಮಂತಹ ವ್ಯಕ್ತಿ ಇದ್ದದ್ದು, ಇರುವುದು ಅಸಾಧ್ಯ. ಮುಖಚರ್ಯೆಯಲ್ಲಿ, ಧ್ವನಿಯಲ್ಲಿ, ಬುದ್ಧಿಶಕ್ತಿಯಲ್ಲಿ, ಮನೋವೃತ್ತಿಯಲ್ಲಿ, ಎಲ್ಲರೂ ಬೇರೆ ಬೇರೆಯೇ.

ಒಂದೇ ದಂಪತಿಯಿಂದ ಹುಟ್ಟಿದ ಮಕ್ಕಳೂ ಭಿನ್ನವಾಗಿರುತ್ತಾರೆಯಲ್ಲವೇ? ಏಕರೂಪದ ಅವಳಿ-ಜವಳಿಗಳು ರೂಪದಲ್ಲಿ ಒಂದೇ ಎಂದು ಕಾಣಿಸಿದರೂ ಬುದ್ಧಿಯಲ್ಲಿ ಇಬ್ಬರೂ ಬೇರೆಯೇ.

ಬಾಹ್ಯರೂಪದ ವ್ಯತ್ಯಾಸಕ್ಕಿಂತ ಮನುಷ್ಯರ ಆಂತರಂಗಿತ ವ್ಯತ್ಯಾಸ ಇನ್ನೂ ಅದ್ಭುತವಾದದ್ದು. ಭೂಗುಣ, ವಾಯುಗುಣಗಳು ಮನುಷ್ಯರ ದೇಹಶಕ್ತಿ ಯನ್ನು, ಮನಸ್ಸಿನ ಶಕ್ತಿಯನ್ನು ರೂಪಿಸುತ್ತವೆ. ಅವರ ಮನೆಯ ಪರಿಸರ, ಅಲ್ಲಿಯ ನಂಬಿಕೆಗಳು, ಮತ, ವಿಶ್ವಾಸಗಳು, ಆರ್ಥಿಕ ಸ್ಥಿತಿ, ಪಡೆದ ಶಿಕ್ಷಣ, ದೊರೆತ ಕೆಲಸ, ಸಿಕ್ಕ ಉತ್ತೇಜನ ಅಥವಾ ಅವಹೇಳನಗಳುಮನೋವೃತ್ತಿಯನ್ನು ನಿರ್ಮಿಸುತ್ತವೆ. ಇದೊಂದು ವಿಶೇಷ ವ್ಯವಸ್ಥೆ. ಪ್ರಪಂಚ ತನ್ನ ರೂಪದಿಂದ, ಆಕಾರದಿಂದ ಒಂದೇ ಮೂಲವಸ್ತುವಿನಂದಾದದ್ದು. ಆದರೆ ಅದರಿಂದ ಹುಟ್ಟಿದ ವ್ಯಕ್ತಿವಿಶೇಷಗಳು ಅನಂತ. ಅದನ್ನೇ ಕಗ್ಗ, “ಏಕದೊಳ್ ಬಹುಳ” ಎಂದು ವರ್ಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT