ಬುಧವಾರ, ಏಪ್ರಿಲ್ 1, 2020
19 °C

ಅಶ್ವತ್ಥದ ಸೇವೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಅಂದಂದಿಗಾದನಿತು ಬುಡಕಟ್ಟಿ ಕಳೆ ತೆಗೆದು |
ಚೆಂದಳಿರು ದಿನದಿನಮುಮೊಗೆಯೆ ನೀರೆರೆದು ||
ಸಂದಬಲದಿಂದ ಜಗದಶ್ವತ್ಥ ಸೇವೆಯಲಿ |
ನಿಂದಿರುವುದಲೆ ಧರ್ಮ – ಮಂಕುತಿಮ್ಮ || 253 ||

ಪದ-ಅರ್ಥ: ಅಂದಂದಿಗಾದನಿತು+ಅಂದಂದಿಗೆ+ಆದನಿತು(ಆದಷ್ಟು), ಚೆಂದಳಿರು=ಚೆಂದದ ಕೆಂಪು ಚಿಗುರು, ದಿನದಿನಮುಮೊಗೆಯ=ದಿನದಿನವೂ+ಮೊಗೆಯೆ(ಮೂಡಿದಾಗ, ಹೊಮ್ಮಿದಾಗ), ಸಂದಬಲದಿಂದ=ತನಗೆ ಸಾಧ್ಯವಾದ ಶಕ್ತಿಯಿಂದ

ವಾಚ್ಯಾರ್ಥ: ಅಂದಂದಿಗೆ ಆದಷ್ಟು ಬೇರಿಗೆ ಕಟ್ಟೆ ಕಟ್ಟಿ, ಕಸ ತೆಗೆದು, ಕೆಂಪು ಚಿಗುರು ಪ್ರತಿದಿನ ಚಿಮ್ಮಿದಾಗ ನೀರು ಹನಿಸಿ, ತನಗೆ ಸಾಧ್ಯವಾದಷ್ಟು ಶಕ್ತಿಯಿಂದ ಈ ಪ್ರಪಂಚವೆಂಬ ಅಶ್ವತ್ಥವೃಕ್ಷದ ಸೇವೆಯಲ್ಲಿ ತೊಡಗಿರುವುದೇ ಧರ್ಮ.

ವಿವರಣೆ: ಹಿಂದಿನ ಕೆಲವು ಕಗ್ಗಗಳಲ್ಲಿ ಪ್ರಪಂಚವೆನ್ನುವುದು ಅವಿನಾಶಿಯಾದಂಥ ಒಂದು ಅಶ್ವತ್ಥಮರ ಎಂಬುದನ್ನು ಹೇಳಿ, ಈ ಪದ್ಯದಲ್ಲಿ ನಮ್ಮ ಕರ್ತವ್ಯವೇನು, ಧರ್ಮವೇನು ಎಂಬುದನ್ನು ಸೊಗಸಾಗಿ ತಿಳಿಸುತ್ತದೆ.

ನಾವು ಬೇಕೋ, ಬೇಡವೋ, ಇಷ್ಟಪಟ್ಟೋ, ಕಷ್ಟಪಟ್ಟೋ ಈ ಪ್ರಪಂಚದಲ್ಲಿ ಇದ್ದೇವೆ. ಬದುಕಿರುವವರೆಗೂ ನಾವು ಈ ಅವಿನಾಶಿಯಾದ ಪ್ರಪಂಚದ ಒಂದು ಭಾಗವಾಗಿದ್ದೇವೆ. ಹಾಗಾದರೆ ನಾವು ಇಲ್ಲಿ ಇರುವುದು ಹೇಗೆ? ಈ ಪ್ರಪಂಚಕ್ಕೆ ನಮ್ಮದೇನಾದರೂ ಸೇವೆಯನ್ನು ಸಲ್ಲಿಸಬಹುದೆ? ಹೌದಾದರೆ ನಮ್ಮ ಸೇವೆ ಹೇಗಿರಬೇಕು? ಕಗ್ಗದ ಸಲಹೆ ತುಂಬ ಚೆಂದ.

ಅಂದಂದಿಗೆ ಅಂದರೆ ಪ್ರತಿನಿತ್ಯವೂ ನಮ್ಮ ಕೈಯಿಂದ ಆದಷ್ಟು ಈ ವೃಕ್ಷದ ಬೇರಿಗೆ ಪಾತಿ ಕಟ್ಟಬೇಕು. ಅಶ್ವತ್ಥವೃಕ್ಷದ ಬೇರಿಗೆ ನೀರು ಕಟ್ಟಲು ಮೊದಲು ಪಾತಿ ಮಾಡಬೇಕು. ಬೇರನ್ನು ರಕ್ಷಿಸುವುದು ಬಹುಮುಖ್ಯ. ಈ ವೃಕ್ಷದ ಬೇರು ಎಂದರೆ ಸಂಸ್ಕೃತಿ. ಎಲ್ಲಿ ಬೇರು ಗಟ್ಟಿಯಾಗಿದೆಯೋ, ಅಲ್ಲಿ ಮರವೂ ಗಟ್ಟಿಯಾಗಿರುತ್ತದೆ. ಪಾತಿ ಕಟ್ಟಿ, ನೀರು ಹನಿಸುವ ಕ್ರಿಯೆಯೆಂದರೆ ಸಂಸ್ಕೃತಿಯನ್ನು ರಕ್ಷಿಸುವ ಕಾರ್ಯ.

ನಾವಿದ್ದ ಸ್ಥಳದಲ್ಲಿ, ನಾವು ಮಾಡುವ ಕಾರ್ಯದಲ್ಲಿ, ಕ್ಷೇತ್ರದಲ್ಲಿ ನಮ್ಮ ಪರಂಪರೆಯ, ಸಂಸ್ಕೃತಿಯ ನೆಲಗಳನ್ನು ರಕ್ಷಿಸುವ ಕೆಲಸವನ್ನು ದಿನನಿತ್ಯವೂ ಮಾಡಬೇಕು. ಅದರೊಡನೆ ಕಳೆಯನ್ನು ತೆಗೆಯಬೇಕು. ನಮ್ಮ ಸಾಮಾಜಿಕ ಜೀವನದಲ್ಲಿ ಎಷ್ಟೊಂದು ಕಳೆ ಸೇರಿಕೊಂಡಿದೆಯಲ್ಲ! ಅಸ್ಪೃಶ್ಯತೆ ಎಂಬ ಕಳೆ, ಜಾತಿ, ಮತಗಳೆಂಬ ಕಳೆ, ಲಿಂಗಭೇದ, ಭಾಷಾದ್ವೇಷಗಳೆಂಬ ಕಳೆಗಳು ನಿಬಿಡವಾಗಿ ಹರಡಿಕೊಂಡಿವೆ. ನಾವು ಮಾಡಬೇಕಾದ ಸೇವೆಯೆಂದರೆ ನಮಗೆ ಸಾಧ್ಯವಾದಷ್ಟು ಮಟ್ಟಿಗೆ ಈ ಕಳೆಗಳನ್ನು ತೆಗೆಯಲು ಪ್ರಯತ್ನಿಸಬೇಕು. ಹೀಗೆ ಮಾಡಿದಾಗ ಈ ವೃಕ್ಷದಲ್ಲಿ ಉತ್ಸಾಹದ ಹೊಸ ಚಿಗುರು ಕಾಣುತ್ತದೆ. ಹೊಸತಲೆಮಾರಿನ ಸಾಧನೆಯ ಉತ್ಸಾಹದ ಚಿಗುರಿಗೆ ನಾವು ಮೆಚ್ಚುಗೆಯ, ಸಹಕಾರದ ನೀರೆರೆಯಬೇಕು.

ಇದುವರೆಗೂ ತಮ್ಮ ಕಾರ್ಯದಿಂದ, ಸೇವೆಯಿಂದ ಪ್ರಪಂಚದಲ್ಲಿ ಸಾಧಕರಾದವರು ಮಾಡಿದ್ದು ಇದೇ ಅಲ್ಲವೆ? ಅವರು ತಮ್ಮ ದಣಿವಿರದ ಜೀವನೋತ್ಸಾಹದಿಂದ, ಸತತವಾದ ಪರಿಶ್ರಮದಿಂದ ಮತ್ತು ಸಾಮಾಜಿಕ ಕಳಕಳಿಯಿಂದ ಈ ಜಗತ್ತನ್ನು ಶ್ರೀಮಂತಗೊಳಿಸಿದ್ದಾರೆ. ಹೀಗೆ ನಮಗಿರುವ ಶಕ್ತಿಯಿಂದ ಪ್ರಪಂಚವೆಂಬ ಅಶ್ವತ್ಥವೃಕ್ಷದ ಸೇವೆಯನ್ನು ಮಾಡುವುದೇ ನಮಗಿರುವ ಧರ್ಮ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)