ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ದಕ್ಷತೆಯ ಫಲ

Last Updated 10 ಮಾರ್ಚ್ 2020, 8:59 IST
ಅಕ್ಷರ ಗಾತ್ರ

ದ್ರಾಕ್ಷಿರಸವೇನಲ್ಲ ಜೀವನದ ತಿರುಳಾರ್ಗಮ್ |
ಇಕ್ಷುದಂಡದವೊಲದು ಕಷ್ಟಭೋಜನವೆ ||
ದಕ್ಷತೆಯಿನಿಡಿಯುವಂಗೊಂದೆರಡು ಗುಟುಕು ರಸ |
ಮಾಕ್ಷಿಕರು ಮಿಕ್ಕೆಲ್ಲ – ಮಂಕುತಿಮ್ಮ || 260 ||

ಪದ-ಅರ್ಥ: ತಿರುಳಾರ್ಗಮ್=ತಿರುಳು+ಆರ್ಗಮ್(ಯಾರಿಗೂ), ಇಕ್ಷುದಂಡ=ಕಬ್ಬಿನ ಜಲ್ಲೆ, ದಕ್ಷತೆಯಿನಿಡಿಯುವಂಗೊಂದೆರಡು=ದಕ್ಷತೆಯಿಂ(ದಕ್ಷತೆಯಿಂದ)+ಇಡಿಯುವಂಗೆ(ಹಿಂಡುವವನಿಗೆ, ಕಚ್ಚುವವನಿಗೆ)+ಒಂದೆರಡು, ಮಾಕ್ಷಿಕ=ನೊಣ.

ವಾಚ್ಯಾರ್ಥ: ಬದುಕಿನ ಸ್ವಾರಸ್ಯ ದ್ರಾಕ್ಷಿರಸದಂತಲ್ಲ. ಅದು ಕಬ್ಬಿನ ಜಲ್ಲೆಯಿಂದ ರಸ ತೆಗೆದಂತೆ ಕಷ್ಟದ ಕಾರ್ಯವೆ. ತುಂಬ ದಕ್ಷತೆಯಿಂದ ಹಿಂಡುವವನಿಗೆ ಒಂದೆರಡು ಗುಟುಕು ರಸ ದಕ್ಕೀತು. ದಕ್ಷತೆಯಿಲ್ಲದ ಉಳಿದವರು ನೊಣಗಳಿದ್ದಂತೆ.

ವಿವರಣೆ: ಬದುಕಿನ ಸ್ವಾರಸ್ಯ ಸುಲಭವಾಗಿ ದಕ್ಕುವುದಲ್ಲ. ಅದು ಎಂತೆಂತಹ ಮಹಾತ್ಮರನ್ನು ಅಲ್ಲಾಡಿಸಿ, ಗುದ್ದಿ ಹಣ್ಣು ಮಾಡಿ ಪರೀಕ್ಷಿಸಿದೆ. ಆ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮಾತ್ರ ಜಗಮಾನ್ಯರಾಗಿದ್ದಾರೆ. ಯಾರಿಗೂ ಬದುಕಿನ ಯಶಸ್ಸು ಅಕಸ್ಮಾತ್ತಾಗಿ, ಸರಳವಾಗಿ ತಟ್ಟೆಯ ಮೇಲೆ ತೇಲಿಬಂದಿಲ್ಲ. ರಾಮ ಅವತಾರವೇ ಸರಿ ಆದರೆ ಮರ್ಯಾದಾ ಪುರುಷೋತ್ತಮ ರಾಮಚಂದ್ರನಾಗಲು ಅವನು ಪಟ್ಟ ಕಷ್ಟ ಅಷ್ಟಿಷ್ಟದ್ದೇ? ರಾಜನಾಗಬೇಕಿದ್ದವನು ಕಾಡಿಗೆ ಹೋಗಬೇಕಾಯಿತು. ಅಲ್ಲಿ ರಾಕ್ಷಸರೊಂದಿಗೆ ಹೋರಾಟ, ಪತ್ನಿಯ ಅಪಹರಣ. ಆಕೆಗಾಗಿ ಹುಡುಕಾಟ, ತಿರುಗಾಟ ಮತ್ತು ಯುದ್ಧ. ಕೊನೆಗಾದರೂ ಸುಖವಾಯಿತೆ? ಪ್ರೀತಿಯ ಹೆಂಡತಿಯನ್ನು ಕಾಡಿಗೆ ಕಳುಹಿಸಿ ಏಕಾಂಗಿಯಾಗಿ ಕಳೆದ ಬದುಕು. ಇಡೀ ಬದುಕೇ ಬೆಂಕಿಯಲ್ಲಿ ಪಯಣ. ಅಂತೆಯೇ ಕೃಷ್ಣ, ಬಸವಣ್ಣ, ಗಾಂಧಿ, ಅಂಬೇಡ್ಕರ್ ಇವರ ಯಾರ ಬದುಕೂ ಸುಂದರವಾದ, ಸುಲಭವಾದ ಪ್ರಯಾಣವಾಗಿರಲಿಲ್ಲ. ಕ್ಷಣಕ್ಷಣಕ್ಕೂ ಅಗ್ನಿಪರೀಕ್ಷೆ. ಈ ಪರೀಕ್ಷೆಗಳಲ್ಲಿ ಸತತವಾಗಿ ಬಂಗಾರದಂತೆ ಪುಟವಿಟ್ಟು ಬಂದವರು ಮಾತ್ರ ಮಾರ್ಗದರ್ಶಿಗಳಾಗಿ ಎತ್ತರದಲ್ಲಿ ನಿಂತರು. ಆದರೆ ಈ ಪರೀಕ್ಷೆಗಳಲ್ಲಿ ಭಸ್ಮವಾಗಿ ಕಳೆದುಹೋದವರು ಅದೆಷ್ಟು ಲಕ್ಷ ಮಂದಿಯೋ?

ಅದನ್ನೇ ಈ ಕಗ್ಗ ಒತ್ತಿ ಹೇಳುತ್ತದೆ. ಬದುಕಿನ ಸ್ವಾರಸ್ಯ, ಸಾಧನೆ ದ್ರಾಕ್ಷಿರಸವನ್ನು ಕುಡಿದ ಹಾಗೆ ಸುಲಭವಲ್ಲ. ಯಾಕೆಂದರೆ ದ್ರಾಕ್ಷಿಯಿಂದ ರಸವನ್ನು ತೆಗೆಯುವುದು ಕಷ್ಟವಲ್ಲ. ಮನುಷ್ಯನ ಬದುಕೆಂದರೆ ಕಬ್ಬಿನ ಜಲ್ಲೆಯಿಂದ ರಸವನ್ನು ತೆಗೆದ ಹಾಗೆ. ಜಲ್ಲೆಯನ್ನು ಬಾಯಿಯನ್ನು ಒತ್ತಿ ಹಿಡಿದು ಹಲ್ಲಿನಿಂದ ಸಿಪ್ಪೆಯನ್ನು ಕಚ್ಚಿ ಎಳೆದು ತೆಗೆಯಬೇಕು. ಅದು ಅಲ್ಲಲ್ಲಿ ಒಸಡಿಗೆ, ಹಲ್ಲು ಸಂದಿಗೆ, ತುಟಿಗಳಿಗೆ ಚುಚ್ಚಿ ರಕ್ತ ಬರಿಸುತ್ತದೆ. ಸಿಪ್ಪೆ ತೆಗೆದಾದ ಮೇಲೆ ಹಲ್ಲಲ್ಲಿ ಮತ್ತೆ ಬಿಗಿದುಹಿಡಿದು ಕಚ್ಚಿಹಿಡಿದಾಗ ಒಂದೆರಡು ಗುಟುಕು ಸಿಹಿ ರಸ ದೊರಕೀತು. ಯಾರು ದಕ್ಷತೆಯಿಂದ, ನಿಯತ್ತಿನಿಂದ, ಧರ್ಮದಿಂದ ಸ್ಥಿರವಾಗಿ ಬದುಕುತ್ತಾರೋ ಅವರಿಗೆ ಮಾತ್ರ ಈ ಬದುಕಿನ ಸ್ವಾರಸ್ಯದ ರಸ ಕೊಂಚ ದೊರಕುತ್ತದೆ. ಉಳಿದವರು, ಹಾಗೆ ಧೃಡತೆಯಿಂದ, ದಕ್ಷತೆಯಿಂದ, ಬದುಕಲಾರದವರು ನೊಣಗಳಿದ್ದಂತೆ ಎನ್ನುತ್ತದೆ ಕಗ್ಗ. ನೊಣ ಕಬ್ಬಿನ ಜಲ್ಲೆಯ ಮೇಲೆಯೇ ಕುಳಿತಿರುತ್ತದೆ. ಅದರ ಸಂಪರ್ಕದಲ್ಲೇ ಇದ್ದರೂ ಅದಕ್ಕೊಂದು ಹನಿ ರಸ ಕೂಡ ದಕ್ಕುವುದಿಲ್ಲ.

ಬದುಕಿನ ಸ್ವಾರಸ್ಯವನ್ನು ಕಾಣಬೇಕೆನ್ನುವವರು ದಕ್ಷತೆಯಿಂದ, ಬದ್ಧತೆಯಿಂದ ಬದುಕುವುದು ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT