ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಅಲ್ಪರ ಸಂಗ

Last Updated 10 ಮಾರ್ಚ್ 2020, 19:31 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಒಂದು ಪವಿತ್ರ ಮರದ ವೃಕ್ಷದೇವತೆಯಾಗಿದ್ದ.

ಒಂದು ಬಾರಿ ಒಬ್ಬ ಅತ್ಯಂತ ಬಲಶಾಲಿಯಾಗಿದ್ದ ಗರುಡರಾಜ ತನ್ನ ದೇಹವನ್ನು ನೂರೈವತ್ತು ಯೋಜನದ ಗಾತ್ರಕ್ಕೆ ಬೆಳೆಸಿಕೊಂಡು ಹಾರುವಾಗ ಸಮುದ್ರವೇ ಇಬ್ಭಾಗವಾದಂತೆ ತೋರುತ್ತಿತ್ತು. ಅಂತಹ ರಭಸ ಮತ್ತು ಶಕ್ತಿ ಆ ಗರುಡರಾಜನಿಗೆ! ಹಾರಿಬರುತ್ತಿರುವಾಗ ದಾರಿಯಲ್ಲಿ ಸಾವಿರ ಮಾರು ಉದ್ದವಿದ್ದ ನಾಗರಾಜನನ್ನು ಕಂಡಿತು. ಸರಕ್ಕನೆ ಕೆಳಗೆರಗಿ ಅದರ ಬಾಲವನ್ನು ಹಿಡಿದೆತ್ತಿ ಮತ್ತೆ ಆಕಾಶಕ್ಕೆ ಹಾರಿತು. ನಾಗರಾಜ ತನ್ನನ್ನು ಗರುಡನಿಂದ ಬಿಡಿಸಿಕೊಳ್ಳಲು ಒದ್ದಾಡುತ್ತಿತ್ತು. ಹೀಗೆ ಹಾರಿ ಬರುತ್ತಿದ್ದಾಗ ದಾರಿಯಲ್ಲೊಂದು ಭಾರೀ ಆಲದಮರ ಕಂಡಿತು. ನಾಗರಾಜ ತನ್ನ ಶರೀರವನ್ನು ಮತ್ತಷ್ಟು ಉದ್ದಗೊಳಿಸಿಕೊಂಡು ಆಲದ ಮರದ ಕಾಂಡವನ್ನು ಹೆಡೆಯಿಂದ ಸುತ್ತಿ ಗಟ್ಟಿಯಾಗಿ ಹಿಡಿದುಕೊಂಡಿತು. ಗರುಡರಾಜ ಮತ್ತಷ್ಟು ಶಕ್ತಿ ಹಾಕಿ ಎಳೆಯಿತು. ಆಗ ನಾಗರಾಜನ ಜೊತೆಗೆ ಆಲದಮರವೂ ಕಿತ್ತುಕೊಂಡು ಬಂದಿತು. ಹೀಗೆ ನಾಗರಾಜನೊಂದಿಗೆ ಆಲದ ಮರವನ್ನು ಹೊತ್ತು ಹಾರುತ್ತ ಗರುಡರಾಜ ಪವಿತ್ರವೃಕ್ಷದ ಪಕ್ಕದಲ್ಲಿದ್ದ ಭಾರೀ ಮರದ ಮೇಲೆ ಕುಳಿತುಕೊಂಡಿತು. ಅಲ್ಲಿ ನಾಗರಾಜನ ಹೊಟ್ಟೆಯನ್ನು ಸೀಳಿ, ಮಾಂಸವನ್ನು ತಿಂದು ಚರ್ಮವನ್ನು ಬೀಸಿ ಸಮುದ್ರಕ್ಕೆ ಎಸೆಯಿತು. ನಂತರ ಬಂದು ಈ ಪವಿತ್ರವೃಕ್ಷದ ಕೊಂಬೆಯ ಮೇಲೆ ಕುಳಿತಿತು.

ನಾಗರಾಜನ ಜೊತೆಗೆ ಹಾರಿಬಂದ ಆಲದ ಮರದಲ್ಲೊಂದು ಪುಟ್ಟ ಹಕ್ಕಿ ಕುಳಿತಿತ್ತು. ನಡೆದ ಪ್ರಸಂಗವನ್ನು ಕಂಡು ಗಾಬರಿಯಾಗಿದ್ದ ಹಕ್ಕಿ, ನಿಧಾನವಾಗಿ ಹಾರಿಬಂದು ಪವಿತ್ರವೃಕ್ಷದ ಮತ್ತೊಂದು ಕೊಂಬೆಯ ಮೇಲೆ ಕುಳಿತಿತು. ಅದನ್ನು ನೋಡುತ್ತಲೇ ಪವಿತ್ರವೃಕ್ಷ ಗಾಬರಿಯಿಂದ ನಡುಗತೊಡಗಿತು. ನಡುಕ ಎಷ್ಟು ಹೆಚ್ಚಾಗಿತ್ತೆಂದರೆ ಇಡೀ ಮರ ಕಂಪಿಸಿತು. ಅದರ ಮೇಲೆ ಕುಳಿತಿದ್ದ ಗರುಡರಾಜನಿಗೆ ಆಶ್ಚರ್ಯವಾಯಿತು. ‘ಯಾಕೆ ವೃಕ್ಷವೇ, ನಿನಗಿಷ್ಟು ಭಯ?’ ಎಂದು ಕೇಳಿತು. ಆಗ ವೃಕ್ಷದೇವತೆ ಹೇಳಿತು. ‘ನನಗೆ ನಿನ್ನ ಭಯವಿಲ್ಲ, ಆದರೆ ಆ ಪುಟ್ಟ ಹಕ್ಕಿ ನನ್ನ ಕೊಂಬೆಯ ಮೇಲೆ ಕುಳಿತಿದೆಯಲ್ಲ, ಅದರದೇ ಭಯ ನನಗೆ’, ಗರುಡರಾಜನ ಆಶ್ಚರ್ಯ ಇನ್ನೂ ಹೆಚ್ಚಾಯಿತು.

‘ನನಗೆ ಅರ್ಥವಾಗಲಿಲ್ಲ. ನೂರೈವತ್ತು ಯೋಜನಗಾತ್ರದ ಭಯಂಕರ ಪಕ್ಷಿ ನಾನು. ಸಾವಿರ ಮಾರುದ್ದದ ಭಾರೀ ಸರ್ಪವನ್ನು ಹಿಡಿದೆತ್ತಿಕೊಂಡು ಬಂದು ಅದನ್ನು ಕೊಂದು ಹಾಕಿದಾಗಲೂ ಭಯ ಪಡದ ನೀನು ಈ ಅಮಾಯಕವಾದ ಪುಟ್ಟ ಹಕ್ಕಿಯನ್ನು ಕಂಡು ಭಯುಪಡುವುದೇಕೆ?’ ಎಂದು ಕೇಳಿತು.

ವೃಕ್ಷದೇವತೆ ಹೇಳಿತು, ‘ಗರುಡರಾಜ ನಿನ್ನಿಂದ ನನಗೆ ಭಯವಿಲ್ಲ ಯಾಕೆಂದರೆ ನೀನು ಮಾಂಸಾಹಾರಿ ಪಕ್ಷಿ. ಆದರೆ ಈ ಪುಟ್ಟ ಹಕ್ಕಿ ತುಂಬ ಅಪಾಯಕಾರಿ. ಇದು ಅಂಜೂರ ಅಥವಾ ಅತ್ತಿಯ ಹಣ್ಣುಗಳನ್ನು ತಿಂದು ಬಂದು ನನ್ನ ಕೊಂಬೆಯ ಮೇಲೆ ಕುಳಿತು ಹಿಕ್ಕೆ ಹಾಕುತ್ತದೆ. ಹಿಕ್ಕೆಯಲ್ಲಿದ್ದ ಬೀಜಗಳು ನನ್ನ ಬುಡದಲ್ಲಿ, ಕೊಂಬೆಯ ಮೇಲೆ ಬಿದ್ದು, ಮಳೆಗಾಲದಲ್ಲಿ ಚಿಗುರಿ ಬೆಳೆಯುತ್ತ, ನನ್ನ ಬೇರುಗಳನ್ನೇ ಅಭದ್ರ ಮಾಡುತ್ತವೆ. ಕೊನೆಗೊಂದು ದಿನ ನಾನೇ ಇಲ್ಲದಂತೆ ಮಾಡುತ್ತವೆ. ಅದಕ್ಕೇ ಈ ಅಲ್ಪರೊಂದಿಗಿನ ಸ್ನೇಹ ನನಗೆ ಭಯತರುತ್ತದೆ’. ಗರುಡರಾಜ ತನ್ನ ರೆಕ್ಕೆಯಿಂದ ಗಾಳಿ ಬೀಸಿ ಹಕ್ಕಿಯನ್ನು ಓಡಿಸಿ ಮತ್ತಾವ ಪುಟ್ಟ ಪಕ್ಷಿಯೂ ಪವಿತ್ರ ವೃಕ್ಷದ ಹತ್ತಿರ ಬರದಂತೆ ತಾಕೀತು ಮಾಡಿತು.

ದೊಡ್ಡವರೊಂದಿಗಿನ ಸಂಗ ಅಪಾಯಕಾರಿಯಲ್ಲ. ಆದರೆ ಅಲ್ಪರೊಂದಿಗೆ ಮಾಡಿದ ಸಂಗ ಅಪಾಯಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT