ಶುಕ್ರವಾರ, ಏಪ್ರಿಲ್ 10, 2020
19 °C

ಬೆರಗಿನ ಬೆಳಕು: ಅವಶ್ಯವಿಲ್ಲದ ಹಿಂಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಹ್ಮದತ್ತ ವಾರಣಾಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಎಂಭತ್ತು ಕೋಟಿ ಸಂಪತ್ತಿದ್ದ ಬ್ರಾಹ್ಮಣನ ಮನೆಯಲ್ಲಿ ಜನಿಸಿದ್ದ. ಸಕಲ ಶಾಸ್ತಗಳನ್ನು ಕಲಿತು, ಹಣದ ವ್ಯರ್ಥತೆಯನ್ನು ಅರಿತು ಪ್ರವ್ರಜಿತನಾಗಿ ಹಿಮಾಲಯವನ್ನು ಸೇರಿದ. ಕೆಲವರ್ಷಗಳ ನಂತರ ಪ್ರಪಂಚವನ್ನು ಸುತ್ತುತ್ತ ವಾರಣಾಸಿಗೆ ಬಂದು ರಾಜೋದ್ಯಾನದಲ್ಲಿ ನೆಲೆಸಿದ.

ಈ ಸಮಯದಲ್ಲಿ ಒಂದು ರಾತ್ರಿ ರಾಜನಿಗೆ ಮಲಗುವ ಸಮಯದಲ್ಲಿ ಎಂಟು ಶಬ್ದಗಳು ಕೇಳಿಸಿದವು. ಮೊದಲನೆಯದು, ರಾಜಭವನದ ಮುಂದೆ ಇದ್ದ ಉದ್ಯಾನವನದಲ್ಲಿ ಕೊಕ್ಕರೆಯ ಧ್ವನಿ. ಅದು ಆಗುತ್ತಿದ್ದಂತೆಯೇ ಗಜಶಾಲೆಯ ಬಾಗಿಲ ಮೇಲಿದ್ದ ಕಾಗೆ ಕಿರಿಚಿಕೊಂಡಿತು. ಮೂರನೆಯದಾಗಿ ರಾಜಭವನದ ಗೋಪುರದಲ್ಲಿದ್ದ ಮರ ಕೊರೆಯುವ ಹುಳ ಧ್ವನಿಮಾಡಿತು. ನಾಲ್ಕನೆಯದು ಅರಮನೆಯಲ್ಲಿದ್ದ ಕೋಗಿಲೆಯ ಧ್ವನಿ. ಐದನೆಯದು ಅರಮನೆಯಲ್ಲಿಯೇ ಬೆಳೆದು ಓಡಾಡುತ್ತಿದ್ದ ಜಿಂಕೆಯ ಕೂಗು. ಆರನೆಯದು, ಅರಮನೆಯಲ್ಲಿ ಸಾಕಿದ್ದ ಕೋತಿಯ ಕಿರಿಚಾಟ. ಏಳನೆಯದು ಅರಮನೆಯ ಸೇವಕನ ಕೂಗು. ಇದಕ್ಕೆ ಸರಿಯಾಗುವಂತೆ ಪ್ರತ್ಯೇಕ ಬುದ್ಧರೊಬ್ಬ ‘ಉದಾನ’ ಹೇಳಿದ ಧ್ವನಿ ಕೇಳಿಸಿತ್ತು.

ಆತ ಆತಂಕದಿಂದ ಮರುದಿನ ಪುರೋಹಿತರಿಗೆ ಈ ವಿಷಯ ತಿಳಿಸಿ, ಇದರ ಅರ್ಥವೇನು? ಅದರಿಂದ ತನಗೇನಾದರೂ ಆಪತ್ತಿದೆಯೆ? ಎಂದು ಕೇಳಿದ. ಪುರೋಹಿತರು, “ಪ್ರಭೂ, ಇದು ಭಾರಿ ಆಪತ್ತಿನ ಲಕ್ಷಣ. ಇದು ಮಾಡಬಹುದಾದ ಅಪಾಯವನ್ನು ತಪ್ಪಿಸಲು ಒಂದು ದೊಡ್ಡ ಯಜ್ಞ ಮಾಡಬೇಕು. ಅದಕ್ಕೆ ಅನೇಕ ಪ್ರಾಣಿಗಳ ಬಲಿ ನೀಡಬೇಕಾಗುತ್ತದೆ” ಎಂದು ಹೇಳಿದರು. ಮೊದಲೇ ಗಾಬರಿಯಾಗಿದ್ದ ರಾಜ ಅದಕ್ಕೆ ಒಪ್ಪಿ, ಅಮಾತ್ಯರಿಗೆ ಈ ಯಜ್ಞಕ್ಕೆ ಬೇಕಾಗುವಷ್ಟು ಹಣವನ್ನು ನೀಡಲು ಹೇಳಿದ. ಪುರೋಹಿತರು ಬಲಿ ನೀಡಲು ಸಾವಿರಾರು ಸಣ್ಣ, ದೊಡ್ಡ ಪ್ರಾಣಿಗಳನ್ನು ತರಿಸಿ ಕೂಡಿಟ್ಟರು.

ಪ್ರಮುಖ ಪುರೋಹಿತನ ಮಗ ಬಹಳ ಬುದ್ಧಿವಂತ ಮತ್ತು ಸಕಲ ಶಾಸ್ತçಗಳನ್ನು ಚೆನ್ನಾಗಿ ತಿಳಿದವನು. ಆತ ಹೋಗಿ ಪುರೋಹಿತರ ಗುಂಪಿಗೆ ಕೇಳಿದ, “ಯಾವ ಶಾಸ್ತ್ರದಲ್ಲಿ ಈ ಪ್ರಾಣಿಹತ್ಯೆಯನ್ನು ಹೇಳಿದೆ? ಆ ಬೇರೆ ಬೇರೆ ಧ್ವನಿಗಳಿಗೂ, ಈ ಯಜ್ಞಕ್ಕೂ ಏನು ಸಂಬಂಧ?” ಅವರು ಗಟ್ಟಿಯಾಗಿ ನಕ್ಕು ಹೇಳಿದರು, “ಹುಚ್ಚಪ್ಪಾ, ನಮಗದು ತಿಳಿದಿಲ್ಲವೇ? ಆದರೆ ಈ ಯಜ್ಞದ ನೆಪದಿಂದ ನಮಗೆ ಬೇಕಾದಷ್ಟು ಹಣ, ಕಾಳು ಮತ್ತು ಮಾಂಸ ದೊರೆಯುತ್ತದೆ. ಅದೇ ಯಜ್ಞ ಫಲ”. ತರುಣ ಪುರೋಹಿತನಿಗೆ ಇದು ಅನ್ಯಾಯ ಎನ್ನಿಸಿತು. ಆಗ ಅವನಿಗೆ ರಾಜೋದ್ಯಾನದಲ್ಲಿದ್ದ ಬೋಧಿಸತ್ವನ ನೆನಪಾಯಿತು. ಆತ ಅಲ್ಲಿಗೆ ಹೋಗಿ ಬೋಧಿಸತ್ವನಿಗೆ ಎಲ್ಲ ವಿಷಯ ತಿಳಿಸಿ ಪರಿಹಾರ ಕೇಳಿದ. ಆಗ ಬೋಧಿಸತ್ವ ಈ ತರುಣ ಪುರೋಹಿತನನ್ನು ಕರೆದುಕೊಂಡು ಅರಮನೆಗೆ ಬಂದು ರಾಜನನ್ನು ಕಂಡ. ಆತ ರಾಜನಿಗೆ ತಿಳಿಹೇಳಿದ, “ರಾಜಾ, ಮೊದಲನೆ ಸದ್ದು ಕೊಕ್ಕರೆಯದು. ಕೊಳದ ನೀರು ಒಣಗಿಹೋಗಿದೆ ಆದ್ದರಿಂದ ಅದಕ್ಕೆ ತಿನ್ನಲು ಮೀನು ಸಿಕ್ಕದೆ ಹಸಿವಿನಿಂದ ಕೂಗಿದೆ. ಗಜಶಾಲೆಯಲ್ಲಿದ್ದ ಕಾಗೆಯ ಮೊಟ್ಟೆಗಳನ್ನು ಆನೆಯ ಮಾವುತ ಒಡೆದುಹಾಕಿದ್ದಾನೆ. ಆದ್ದರಿಂದ ಅದು ದು:ಖದಿಂದ ಕೂಗಿತು. ಹೀಗೆ ಒಂದೊAದೇ ಧ್ವನಿಯ ಕಾರಣವನ್ನು ವಿವರಿಸಿ, ಅವುಗಳಿಂದ ರಾಜನಿಗೆ ಯಾವ ಅಪಾಯವೂ ಇಲ್ಲವೆಂದು ಖಚಿತಪಡಿಸಿದ. ರಾಜ ತೃಪ್ತನಾಗಿ ಪುರೋಹಿತರಿಗೆ ಹೇಳಿ ಯಜ್ಞವನ್ನು ನಿಲ್ಲಿಸಿ ಬಲಿಕೊಡಲು ತಂದಿದ್ದ ಪ್ರಾಣಿಗಳನ್ನು ಬಿಡಿಸಿಬಿಟ್ಟ.

ಯಾವ ಪ್ರಾಣಿಹಿಂಸೆಯಿಂದಲೂ, ಎಂದಿಗೂ ಒಳ್ಳೆಯದಾಗುವುದು ಸಾಧ್ಯವಿಲ್ಲ. ಯಾವ ದೇವ, ದೇವತೆಯೂ ಹಿಂಸೆಯನ್ನು ಅಪೇಕ್ಷಿಸಲಾರದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)