ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಸಾಧನೆಯ ಮೆಟ್ಟಿಲುಗಳು

Last Updated 30 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಎಲ್ಲರಿಗಮಾಗಿ ತಾನ್, ಎಲ್ಲರುಂ ತನಗಾಗಿ |
ನಿಲ್ಲುವೇಕಾತ್ಮತೆಯ ಬಾಳ್ಪೆಯಿಂ ಕಲಿಯಲ್ ||
ಸಲ್ಲುವುಪಕರಣಗಳು ಮನೆ ರಾಜ್ಯ ಸಂಸಾರ- |
ವಲ್ಲಗಳೆಯದಿರವನು – ಮಂಕುತಿಮ್ಮ || 270 ||

ಪದ-ಅರ್ಥ: ಎಲ್ಲರಿಗಮಾಗಿ=ಎಲ್ಲರಿಗಂ (ಎಲ್ಲರಿಗೂ)+ಆಗಿ, ನಿಲ್ಲುವೇಕಾತ್ಮತೆಯ=ನಿಲ್ಲುವ+ಏಕಾತ್ಮತೆಯ (ಎಲ್ಲರೂ ಒಂದೇ ಎಂಬ ಭಾವ), ಸಲ್ಲುವುಪಕರಣಗಳು=ಸಲ್ಲುವ+ಉಪಕರಣಗಳು, ಸಂಸಾರವಲ್ಲಗಳೆಯದಿರವನು=ಸಂಸಾರ(ಪ್ರಪಂಚ)+ಅಲ್ಲಗೆಳೆಯದಿರು+ಅವನು(ಅವುಗಳನ್ನು)

ವಾಚ್ಯಾರ್ಥ: ತಾನು ಇರುವುದು ಎಲ್ಲರಿಗಾಗಿ, ಎಲ್ಲರೂ ತನಗಾಗಿ ಎಂದು ನಿಲ್ಲುವ ಏಕಾತ್ಮತೆಯನ್ನು ಕಲಿಯಲು ನಮಗೆ ಸಾಧನಗಳಾಗಿ ದೊರೆಯುವ ಉಪಕರಣಗಳು ಮನೆ, ರಾಜ್ಯ ಮತ್ತು ಸಂಸಾರಗಳು. ಅವುಗಳನ್ನು ಹಳಿಯುವುದು, ಅಲ್ಲಗೆಳೆಯುವುದು ಬೇಡ.

ವಿವರಣೆ: ಈ ಕಗ್ಗದ ಮೂಲ ಚಿಂತನೆ ಏಕಾತ್ಮತೆ. ಉಪನಿಷತ್ತುಗಳ ಸಾರವಾದ ಭಗವದ್ಗೀತೆ ಏಕಾತ್ಮತೆಯ ಬಗ್ಗೆ ತುಂಬ ಸಾರರೂಪವಾಗಿ ಹೇಳುತ್ತದೆ. ‘ಯಾವ ಮನುಷ್ಯನು, ಸಮಸ್ತ ಜಂತುಗಳೂ ತನ್ನೊಳಗೆ – ತನ್ನ ಅಂಶವಾಗಿಯೇ ಸೇರಿಕೊಂಡಿವೆಯೆಂಬಂತೆ ಅಭೇದ ಬುದ್ಧಿಯಿಂದ ನಡೆದುಕೊಳ್ಳುತ್ತಾನೋ ಮತ್ತು ಯಾರು ತನ್ನ ಆತ್ಮವನ್ನೇ ಸಮಸ್ತ ಜೀವಜಂತುಗಳಲ್ಲಿಯೂ ಕಾಣುತ್ತ ಅವುಗಳ ಅನುಭವದಲ್ಲಿ ಸಹಭಾಗಿಯಾಗಿರುತ್ತಾನೋ ಅವನಿಗೆ ಯಾವ ಶೋಕವೂ ಇರುವುದಿಲ್ಲ’, ಇದು ಏಕಾತ್ಮತೆ ಅಥವಾ ಸರ್ವಾತ್ಮತ್ಪ.

ಎಲ್ಲರೂ ತನ್ನವರೇ, ತಾನೂ ಎಲ್ಲರಿಗೆ ಸೇರಿದವನು ಎಂಬ ಭಾವವಿದ್ದಾಗ ಮತ್ತೊಬ್ಬರೊಡನೆ ಭೇದ, ತಂಟೆ ಬರುವುದು ಸಾಧ್ಯವಿಲ್ಲ. ಯಾಕೆಂದರೆ ಯಾರೂ ಹೊರಗಿನವರಲ್ಲವಲ್ಲ! ಈ ಏಕಾತ್ಮತೆಯ ತತ್ವ ಮಾತನಾಡುವುದಕ್ಕೆ ಬಲು ಚೆಂದ ಮತ್ತು ಸುಲಭ. ಅದನ್ನು ಅನುಭವದಲ್ಲಿ, ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಕಷ್ಟ. ಏಕಾತ್ಮತೆ ಎನ್ನುವುದು ಬದುಕಿನಸಾಧನೆಯಶಿಖರ. ಈ ಶಿಖರವನ್ನು ತಲುಪಲು ಮೆಟ್ಟಿಲು ಮೆಟ್ಟಲಾಗಿ ಏರಬೇಕು. ಅನೇಕ ವರ್ಷಗಳ ಸತತ ಅಭ್ಯಾಸದಿಂದ ಇದು ಸಾಧ್ಯವಾಗುವಂತಹದು. ಈ ಅಭ್ಯಾಸದಲ್ಲಿ ಮನಸ್ಸು, ಬುದ್ಧಿ ಮತ್ತು ಎಲ್ಲ ಕರಣಗಳು ಏಕತ್ರಗೊಂಡು ಎಲ್ಲಕ್ಕಿಂತ ಸೂಕ್ಷ್ಮವಾದ ಆತ್ಮಶಕ್ತಿಯಲ್ಲಿ ಕೇಂದ್ರೀಕರಿಸಬೇಕು. ಇದನ್ನು ಸಾಧಿಸುವ ದಿಶೆಯಲ್ಲಿ ನಮ್ಮ ಬದುಕಿನ ಸುತ್ತಮುತ್ತಲಿನ ವಾತಾವರಣಗಳು ಸಹಕಾರಿಯಾಗುತ್ತವೆ. ಕೇಂದ್ರದಿಂದ ಅಲೆಗಳು ಹೊರಟು ದಡವನ್ನು ತಲುಪುವಂತೆ ಏಕಾತ್ಮತೆಯ ಭಾವ ವ್ಯಕ್ತಿಯಿಂದ ಪ್ರಾರಂಭವಾಗಿ ನಿಧಾನವಾಗಿ ಹರಡುತ್ತ ವಿಶ್ವವನ್ನೇ ತಬ್ಬಿಕೊಳ್ಳಬೇಕು.

ಮೊದಲು ಪ್ರಾರಂಭವಾಗುವುದು ವ್ಯಕ್ತಿಯಿಂದ ಎಂದೆನಲ್ಲವೆ? ನಾನು ಬರೀ ಈ ದೇಹ, ಮನಸ್ಸಲ್ಲ, ನಾನು ಭಗವದ್‌ಶಕ್ತಿಯ ಒಂದು ಕಿಡಿ ಎಂಬ ಭಾವನೆ ಬಲಿಯುತ್ತ ಹೋಗಬೇಕು. ನಂತರ ಎರಡನೆಯ ಅಲೆ, ಮನೆ ಅಥವಾ ಕುಟುಂಬ. ಮಮತೆ, ಮೋಹದಿಂದ ಮನೆಯವರನ್ನೆಲ್ಲ – ತಂದೆ, ತಾಯಿ, ಹೆಂಡತಿ, ಮಗ, ಮಗಳು – ಇವರನ್ನೆಲ್ಲ ತನ್ನವರು ಎಂದುಕೊಳ್ಳುತ್ತದೆ ಜೀವ. ಅವರಿಗೇನಾದರೂ ಆದರೆ ತನಗೇ ಆದಂತೆ ದುಃಖಪಡುತ್ತದೆ. ನಂತರ ಈ ಅಲೆ ವಿಸ್ತಾರವಾಗುತ್ತ ನನ್ನ ಊರು, ನನ್ನ ರಾಜ್ಯ, ನನ್ನ ದೇಶ ಎಂದು ಪಸರಿಸುತ್ತ ಕೊನೆಗೆ ಈ ವಿಶ್ವವೇ ನನ್ನದು, ನಾನೇ ವಿಶ್ವದ ಒಂದು ಅವಿಭಾಜ್ಯ ಅಂಗ ಎಂದು ವಿಸ್ತರಿಸುವುದೇ ಆತ್ಮವಿಸ್ತರಣ ಕ್ರಿಯೆ.

ಆದ್ದರಿಂದ ಮನೆ, ಕುಟುಂಬ, ರಾಜ್ಯ ಇವೆಲ್ಲವುಗಳು ಏಕಾತ್ಮತೆಯ ಸಾಧನೆಯಲ್ಲಿ ಪೂರಕ ಪರಿಕರಗಳಾಗುತ್ತವೆ. ಆದ್ದರಿಂದ ಅವುಗಳನ್ನು ಹೊರೆ, ಬಂಧನಗಳು, ನಿಷ್ಪ್ರಯೋಜಕ ಎನ್ನಬಾರದು. ಈ ಸುಂದರ ಅಧ್ಯಾತ್ಮಿಕ ಸತ್ಯವನ್ನು ಅತ್ಯಂತ ಸುಲಭವಾದ ನಾಲ್ಕು ಸಾಲುಗಳಲ್ಲಿ ಹೇಳಿದ್ದು ಪೂಜ್ಯ. ಡಿ.ವಿ.ಜಿ ಯವರ ಶಕ್ತಿ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT