ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಅರ್ಥವಾದ ಪ್ರಪಂಚ

Last Updated 1 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ವ್ಯರ್ಥವೀ ಜೀವನದ ಬಡಿದಾಟವೆನ್ನದಿರು |
ಅರ್ಥವಹುದದು ನಿನಗೆ ಪೂರ್ಣದರ್ಶನದಿಂ ||
ನರ್ತಿಪನು ಜಡಜೀವರೂಪಂಗಳಲಿ ಬೊಮ್ಮ |
ಪೂರ್ತಿಯಿದನರಿಯೆ ಸೊಗ – ಮಂಕುತಿಮ್ಮ || 271 ||

ಪದ-ಅರ್ಥ: ಅರ್ಥವಹುದದು=ಅರ್ಥ
ವಹುದು+ಅದು, ಪೂರ್ತಿಯಿದನರಿಯೆ=
ಪೂರ್ತಿಯಿಂ(ಪೂರ್ತಿಯಾಗಿ)+ಇದನು+ಅರಿಯೆ, ಸೊಗ=ಸಂತೋಷ; ಒಳ್ಳೆಯದು.

ವಾಚ್ಯಾರ್ಥ: ಈ ಜೀವನದ ಬಡಿದಾಟವನ್ನು ವ್ಯರ್ಥವೆನ್ನಬೇಡ. ಪೂರ್ಣದರ್ಶನವಾದಾಗಲೇ ಅದರ ಅರ್ಥವಾಗುವುದು. ಪರಬ್ರಹ್ಮ ಎಲ್ಲ ಜಡ, ಜೀವರೂಪಗಳಲ್ಲಿ ನೃತ್ಯ ಮಾಡುತ್ತಿದ್ದಾನೆ. ಇದನ್ನು ಪೂರ್ತಿಯಾಗಿ ಅರಿತಾಗಲೇ ಸೊಗಸು.

ವಿವರಣೆ: ನನಗೆ ತುಂಬ ಆತ್ಮೀಯರಾಗಿರುವ ಶ್ರೀ ಬಿ.ಕೆ.ಎಸ್. ವರ್ಮಾರವರ ಚಿತ್ರ ಪ್ರದರ್ಶನಕ್ಕೆ ಹೋಗಿದ್ದೆ. ನೂರಾರು ಜನರ ಮುಂದೆಯೇ ಅವರ ಚಿತ್ರ ಬಿಡಿಸುವ ಶೈಲಿ ವಿಶಿಷ್ಟವಾದದ್ದು. ದೊಡ್ಡ ಕಾಗದವನ್ನು ಚೌಕಟ್ಟಿಗೆ ಹಾಕಿ ನಿಲ್ಲಿಸಿ ತಾವು ಸ್ವಲ್ಪ ದೂರ ನಿಂತು ಏನನ್ನೋ ಯೋಚಿಸಿ, ಸರಸರನೆ ಬಂದು ಒಂದು ಸ್ಥಳದಲ್ಲಿ ಒಂದು ಚುಕ್ಕೆಯನ್ನಿಟ್ಟರು. ಮತ್ತೆ ಮುಂದೆ ಎಲ್ಲೊ ಒಂದೆಡೆಗೆ ಗೆರೆಗಳನ್ನೆಳೆದರು. ನಂತರ ಮಸಿಯಲ್ಲಿ ಅದ್ದಿದ ದಾರದಿಂದ ಚಕಚಕನೇ ಪಟ್ಟಿಗಳನ್ನೆಳೆದರು. ಅವರು ಏನು ಮಾಡುತ್ತಿದ್ದಾರೆ, ಏನು ಬಿಡಿಸಲು ಹೊರಟಿದ್ದಾರೆ ಯಾವುದೂ ತಿಳಿಯಲಿಲ್ಲ. ಕೊನೆಗಲ್ಲೊಂದು ನವಿಲುಗರಿ ಮೂಡಿತು, ನಂತರ ಕೊಳಲು ಬಂದಿತು. ಚಿತ್ರ ಮುಗಿದಾಗ ಸುಂದರವಾದ ಕೃಷ್ಣನ ಚಿತ್ರ ನಮ್ಮ ಮುಂದೆ ನಿಂತಿತ್ತು. ಅವರು ಚಿತ್ರ ಪ್ರಾರಂಭ ಮಾಡಿದಾಗ ಅದು ಏನೆಂದೂ ತಿಳಿಯಲಿಲ್ಲ. ಅವು ಕೇವಲ ಏನೇನೋ ಗೆರೆಗಳು ಎಂದು ತೋರುತ್ತಿದ್ದವು. ಪೂರ್ತಿ ಚಿತ್ರ ಮುಗಿದ ಮೇಲೆ ಅವರು ಎಳೆದ ಪ್ರತಿಯೊಂದು ಗೆರೆಗೂ, ಪ್ರತಿಯೊಂದು ಚುಕ್ಕೆಗೂ ಒಂದು ವಿಶೇಷ ಅರ್ಥವಿರುವುದು ತಿಳಿಯಿತು.

ಬದುಕೂ ಹಾಗೆಯೇ, ಪ್ರಪಂಚವೂ ಹಾಗೆಯೇ. ನಾವು ಅದನ್ನು ನಮ್ಮ ಮೂಗಿನ ನೇರಕ್ಕೆ ನೋಡುತ್ತೇವೆ, ನಮಗೆ ಸರಿ ಎನ್ನಿಸಿದಂತೆ ಭಾವಿಸುತ್ತೇವೆ. ಅವೆಲ್ಲ ಚಿತ್ರದ ಚುಕ್ಕೆಗಳು, ಗೆರೆಗಳು. ನಮ್ಮ ಪ್ರಜ್ಞೆಗೆ ಇಡೀ ವಿಶ್ವವನ್ನು ಅದರ ಸೃಷ್ಟಿಯನ್ನು, ಸೃಷ್ಟಿಕರ್ತನನ್ನು ತಿಳಿಯುವುದು ಸಾಧ್ಯವಾದರೆ ಆಗ ಪ್ರಪಂಚ ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಅಲ್ಲಿಯವರೆಗೂ ಪ್ರಪಂಚದ ಈ ವ್ಯವಹಾರಗಳು ವ್ಯರ್ಥ ಬಿಡಿದಾಟ ಎನ್ನಿಸುತ್ತವೆ, ಚಿತ್ರದ ಚುಕ್ಕೆ, ಗೆರೆಗಳಂತೆ. ಯಾರಿಗೆ ಪ್ರಪಂಚದ ಪೂರ್ಣದರ್ಶನವಾಗಿದೆಯೋ ಅವರಿಗೆ ಇನ್ನೊಂದು ದೊಡ್ಡ ಸತ್ಯ ಕಣ್ಣಿಗೆ ಕಾಣುತ್ತದೆ. ಅದೊಂದು ದಿವ್ಯ ದರ್ಶನ. ಇಲ್ಲಿಯ ಜೀವಜಂತುಗಳು, ಜಡವಸ್ತುಗಳು ಎಲ್ಲವೂ ಆ ಪರಬ್ರಹ್ಮವೇ. ಆ ಪರಬ್ರಹ್ಮ ಶಕ್ತಿಯೇ ಬೇರೆ ಬೇರೆ ರೂಪಗಳಲ್ಲಿ ಪ್ರಪಂಚವನ್ನು ಆವರಿಸಿಬಿಟ್ಟಿದೆ! ಅದನ್ನು ಅರಿತಾಗ ಬದುಕೇ ಸುಂದರವಾಗಿ ಕಾಣುತ್ತದೆ.
ಈ ವಿಷಯವನ್ನು ಕಗ್ಗ ನಾಲ್ಕೇ ಸಾಲುಗಳಲ್ಲಿ ಹೇಳಿರುವುದು ತುಂಬ ಸೊಗಸಾಗಿದೆ. ಪೂರ್ಣದರ್ಶನವಾಗದವನಿಗೆ ಪ್ರಪಂಚ ಕೇವಲ ವ್ಯರ್ಥ ಬಡಿದಾಟ ಆದರೆ ಪೂರ್ಣದರ್ಶನಿಗೆ ಅದೊಂದುಭಗವಂತನ ಲೀಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT