ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಸನ್ಯಾಸತ್ವದ ನಿರೀಕ್ಷೆ

Last Updated 2 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಸಾವತ್ತಿಯ ಕುಲಪುತ್ರನೊಬ್ಬ ಬುದ್ಧನ ಪ್ರವಚನಗಳನ್ನು ಕೇಳಿ ತುಂಬ ಸಂತೋಷದಿಂದ ಮನೆಗೆ ಹೋಗಿ ತೀರ್ಮಾನ ಮಾಡಿದ. ಈ ವ್ಯಾವಹಾರಿಕ ಜೀವನ ಇನ್ನು ಸಾಕು. ನಾನು ಗುರುಗಳ ಜೊತೆ ಸೇರಿ ಸನ್ಯಾಸಿಯಾಗಿ ಬಿಡುತ್ತೇನೆ. ಇದೇ ನನ್ನ ಜೀವನದ ಪರಮಗುರಿ. ಮರುದಿನವೇ ಗುರುಗಳೊಬ್ಬರನ್ನು ಹುಡುಕಿಕೊಂಡು ಹೋಗಿ ತನ್ನ ಅಪೇಕ್ಷೆಯನ್ನು ತಿಳಿಸಿದ. ಅವರು, ‘ಸನ್ಯಾಸ ಸುಲಭವಲ್ಲ, ಯಾವುದೋ ಭಾವನಾವೇಶಕ್ಕೆ ಒಳಗಾಗಿ ಸನ್ಯಾಸ ತೆಗೆದುಕೊಳ್ಳುವುದು ಬೇಡ’ ಎಂದರು. ಈತ ಮೊಂಡು ಹಿಡಿದು ಕುಳಿತ, ‘ಗುರುಗಳೇ, ನನ್ನ ಮನಸ್ಸು ಅಲುಗದ ಶಿಲೆಯಂತೆ ಭದ್ರವಾಗಿದೆ. ಸನ್ಯಾಸ ಬಿಟ್ಟರೆ ನನಗೆ ಬೇರೆ ಬದುಕೇ ಇಲ್ಲ’. ಗುರುಗಳನ್ನು ಹೀಗೆಯೇ ಕಾಡಿ, ಕಾಡಿ ಕೊನೆಗೆ ಅವರಿಂದ ಸನ್ಯಾಸವನ್ನು ಪಡೆದ.

ಈತ ಉಪಾಧ್ಯಾಯರ, ಆಚಾರ್ಯರ ಉಪದೇಶಗಳನ್ನು ಕೇಳಿದ. ತನ್ನ ಜನ್ಮ ಸಾರ್ಥಕವಾಯಿತು ಎಂದು ಭಾವಿಸಿದ. ಗುರುಗಳೊಂದಿಗೆ ಈತನೂ ಭಿಕ್ಷೆಗೆ ಹೋಗಬೇಕಾಗುತ್ತಿತ್ತು. ಬಂದದ್ದನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕಾಗಿತ್ತು. ಈತ ಹೊಸ ಸನ್ಯಾಸಿಯಾದ್ದರಿಂದ ಅವನಿಗೆ ಹೊಸ ಚೀವರ, ಹೊಸ ಪಾತ್ರೆಗಳು ದೊರೆಯಲಿಲ್ಲ. ಹಳೆಯದಾದ ಬೇರೊಬ್ಬರು ಬಳಸಿ ಚಿಂದಿಚಿಂದಿಯಾದ ಚೀವರ, ಸೋರುವ ಪಾತ್ರೆಗಳು ದೊರೆತವು. ಭಿಕ್ಷೆ ಕೂಡ ಅವನಿಗೆ ಸರಿಯಾಗಿ ಸಿಗುತ್ತಿರಲಿಲ್ಲ. ಭಿಕ್ಷಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿದ್ದುದರಿಂದ ಈತನಿಗೆ ಬರೀ ಸೌಟಿಗೆ ಹತ್ತಿದ ತೊಳಸಿದ ಅನ್ನದ ಗಂಜಿ, ವಾಸನೆ ಬಂದ ಒಣಗಿದ ರೊಟ್ಟಿ ಅಥವಾ ಸುಟ್ಟ ಮೊಳಕೆಯ ಕಾಳು ಸಿಗುತ್ತಿತ್ತು. ಅದಾದರೂ ಹೊಟ್ಟೆ ತುಂಬ ದೊರಕುತ್ತಿತ್ತೇ? ತಿಂದು ಹಲ್ಲಿಗೆ ಹತ್ತುತ್ತಿತೇ ವಿನ: ಹೊಟ್ಟೆಯನ್ನು ತಲುಪುತ್ತಿರಲಿಲ್ಲ. ಒಂದು ವಾರದ ಮಟ್ಟಿಗೆ ಅದನ್ನು ಹೇಗೋ ತಡೆದುಕೊಂಡ ಈ ಮನುಷ್ಯ. ಮರುವಾರ ಅವನಿಗೆ ಭ್ರಮೆಯಾದಂತೆನ್ನಿಸತೊಡಗಿತು.

ಒಂದು ದಿನ ಆತ ತನಗೆ ದೊರಕಿದ ಭಿಕ್ಷೆಯನ್ನು ತೆಗೆದುಕೊಂಡು ತನ್ನ ಹೆಂಡತಿ ಇದ್ದೆಡೆಗೆ ಹೋದ. ಮನೆ ಬಿಟ್ಟು ಹೋಗಿ ಸನ್ಯಾಸಿಯಾಗಿದ್ದ ಗಂಡ ಮರಳಿ ಬಂದ ಎಂಬ ಸಂತೋಷದಲ್ಲಿ ಆಕೆ ಅವನಿಗೆ ನಮಸ್ಕಾರ ಮಾಡಿ, ಅವನ ಭಿಕ್ಷಾಪಾತ್ರೆಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಶುದ್ಧ ಮಾಡಿದಳು. ನಂತರ ಅವನನ್ನು ಕೂರಿಸಿ ಷಡ್ರಸದ ಭೋಜನವನ್ನು ಮಾಡಿಸಿದಳು. ಮತ್ತೆ ಅವನ ನಾಲಿಗೆಗೆ ಜೀವ ಬಂದಂತಾಯ್ತು. ನಾಲಿಗೆ ರುಚಿಗೆ ಬಲಿಯಾದ ಈ ಸನ್ಯಾಸಿ ದಿನನಿತ್ಯ ಮನೆಗೆ ಹೋಗತೊಡಗಿದ. ಊಟ ಮಾಡುತ್ತಲೇ ಮನೆಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದತೊಡಗಿದ. ಮುಂದೆ ಮನೆಯಾಕೆಯ ಬಗ್ಗೆಯೂ ಅತಿಯಾದ ಸೆಳೆತ ಬರತೊಡಗಿತು. ಇನ್ನೂ ಸನ್ಯಾಸವೇನು ಉಳಿಯಿತು? ಆತ ಹೋಗಿ ತನ್ನ ಗುರುಗಳನ್ನು ಕಂಡು ತನ್ನ ಅವಸ್ಥೆಯನ್ನು ಹೇಳಿಕೊಂಡು ಸನ್ಯಾಸದಿಂದ ಬಿಡುಗಡೆಯನ್ನು ಬೇಡಿದ.

ಈ ವಿಷಯವನ್ನು ಕೇಳಿ ಬುದ್ಧ ತಮ್ಮ ಶಿಷ್ಯರಿಗೆ ಹೇಳಿದ, ‘ಸನ್ಯಾಸಿಯಾಗುವುದು ಎಂದರೆ ಬಟ್ಟೆ ಬದಲಾಯಿಸಿಕೊಳ್ಳುವುದು, ತಲೆ ಬೋಳಿಸಿಕೊಳ್ಳುವುದು ಅಲ್ಲ. ಅವುಗಳನ್ನು ಮಾಡುವುದರ ಮೊದಲು ಮನಸ್ಸನ್ನು ಹದಗೊಳಿಸಿಕೊಳ್ಳಬೇಕು. ಮನದಲ್ಲಿ ಅರಿಷಡ್ವರ್ಗಗಗಳನ್ನು ತುಂಬಿಕೊಂಡು, ವಾಸನೆಗಳಿಂದ ಮುಕ್ತರಾಗದೆ ಸನ್ಯಾಸಿಯಾಗುವುದು ತನ್ನ ಆತ್ಮಕ್ಕೆ ಮತ್ತು ಸಮಾಜಕ್ಕೆ ಮಾಡಿದ ಅಪಚಾರ’.

ಈ ಮಾತು ಸರ್ವಕಾಲಕ್ಕೆ ಅನ್ವಯವಾಗುವಂತಹದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT