ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಚಿಮ್ಮುವ ಉಲ್ಲಾಸ

Last Updated 3 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಬೊಮ್ಮನೇ ಸಂಸ್ಕೃತಿಯ ಕಟ್ಟಿಕೊಂಡುತ್ಸಹಿಸೆ
ಸುಮ್ಮನರೆಚಣವಿರದೆ ಪ್ರಕೃತಿ ತೊಡಗುತಿರೆ ||
ಜನ್ಮಸಾಕೆನ್ನುವುದೇಂ? ದುಮ್ಮಾನವಡುವುದೇಂ? |
ಚಿಮ್ಮುಲ್ಲಸವ ಧರೆಗೆ – ಮಂಕುತಿಮ್ಮ || 272 ||

ಪದ-ಅರ್ಥ: ಕಟ್ಟಿಕೊಂಡುತ್ಸಹಿಸೆ=ಕಟ್ಟಿಕೊಂಡು+ಉತ್ಸಹಿಸೆ(ಉತ್ಸಾಹದಿಂದಿರುವಾಗ) ಸುಮ್ಮನರೆಚಣವಿರದೆ=ಸುಮ್ಮನೆ+ಅರೆಚಣ(ಅರೆಕ್ಷಣ)+ಇರದೆ, ದುಮ್ಮಾನ=ದು:ಖ, ಚಿಮ್ಮುಲ್ಲಸವ=ಚಿಮ್ಮು+ಉಲ್ಲಸವ(ಉಲ್ಲಾಸವನ್ನು)

ವಾಚ್ಯಾರ್ಥ: ಭಗವಂತನೇ ಸಂಸ್ಕೃತಿಯನ್ನು ಕಟ್ಟಿಕೊಂಡು ಉತ್ಸಾಹಪಡುತ್ತಿರುವಾಗ, ಪ್ರಕೃತಿ ಒಂದು ಕ್ಷಣವೂ ಸುಮ್ಮನಿರದೆ ಕಾರ್ಯನಿರತವಾಗಿರುವಾಗ, ನೀನು ಜನ್ಮ ಸಾಕು ಎನ್ನುವುದೇಕೆ? ದುಃಖಪಡುವುದೇಕೆ? ಜಗತ್ತಿಗೆ ನಿನ್ನ ಉಲ್ಲಾಸವನ್ನು ಚಿಮ್ಮುತ್ತಿರು.

ವಿವರಣೆ: ಮಹಾಭಾರತದ ಯುದ್ಧ ಭಯಂಕರವಾಗಿದೆ. ಅಂದಂತೂ ಪಾಂಡವರ ಪಾಲಿಗೆ ದುರ್ದಿನ. ಎಲ್ಲ ಅತಿರಥ, ಮಹಾರಥರನ್ನು ತನ್ನ ಪರಾಕ್ರಮದಿಂದ ಸೋಲಿಸಿ ಕೊನೆಯಲ್ಲಿ ಅವರು ಮಾಡಿದ ಅನ್ಯಾಯದಿಂದ ವೀರಮರಣವನ್ನು ಅಪ್ಪುತ್ತಾನೆ ಅಭಿಮನ್ಯು. ಅದನ್ನು ಕಂಡ ಪಾಂಡವಪಡೆ ದುಃಖಸಾಗರದಲ್ಲಿ ಮುಳುಗಿದೆ. ವಂಶದ ಕುಡಿ ಮುರುಟಿ ಹೋಯಿತಲ್ಲ ಎಂಬ ಸಂಕಟದಲ್ಲಿ ಎಲ್ಲರೂ ಕಳೆದುಹೋಗಿದ್ದಾರೆ. ಯಾರಿಗೂ ಯುದ್ಧ ಮುಂದುವರೆಸುವ ಉತ್ಸಾಹವೇ ಇಲ್ಲ. ಅಭಿಮನ್ಯುವಿನ ದೇಹಕ್ಕೆ ಅಗ್ನಿಸಂಸ್ಕಾರ ಮಾಡಿ ಬಂದ ವೀರರೆಲ್ಲ ಶಕ್ತಿಹೀನರಂತೆ ಮಲಗಿದ್ದಾರೆ. ಅದೊಂದು ದೀರ್ಘರಾತ್ರಿ.

ಬೆಳಿಗ್ಗೆ ಇನ್ನೂ ಸೂರ್ಯೋದಯವಾಗಿಲ್ಲ. ಮಲಗಿದ್ದ ಪಾಂಡವರಿಗೆ ಗಂಟೆಗಳ ಕಿಣಿಕಿಣಿ ಧ್ವನಿ ಕೇಳಿಸುತ್ತದೆ. ಏನಿರಬಹುದು ಎಂದು ಧರ್ಮರಾಜ ಹೊರಗೆ ಬಂದು ನೋಡಿದರೆ ಶ್ರೀಕೃಷ್ಣ ಕುದುರೆಗಳ ಮೈತೊಳೆದು, ನಿನ್ನೆ ಆದ ಗಾಯಗಳಿಗೆ ಮುಲಾಮು ಹಚ್ಚುತ್ತಿದ್ದಾನೆ, ಅವುಗಳ ಮೈ ತಿಕ್ಕುತ್ತಿದ್ದಾನೆ! ಧರ್ಮರಾಜನನ್ನು ಕಂಡು ಕೃಷ್ಣ ಮುಗುಳ್ನಕ್ಕ. ಅವನದು ಎಂದಿನಂತೆ ಸಂತೋಷ ಉಕ್ಕಿಸುವ ಮಂದಹಾಸ. ನಿನ್ನೆ ಏನೂ ಆಗಿಲ್ಲವೆಂಬಂತೆ, ಹೊಸದಿನದ ಯುದ್ಧವನ್ನು ಅದೇ ಉತ್ಸಾಹದಿಂದ ಪ್ರಾರಂಭಿಸುವ ಉಮೇದು ಅವನ ಮುಖದಲ್ಲಿ ಕಾಣುತ್ತದೆ. ಅದು ಎಲ್ಲರನ್ನೂ ಚುರುಕುಗೊಳಿಸಿತು. ಹದಿನೆಂಟು ದಿನ ಯುದ್ಧದಲ್ಲಿ, ಹದಿನೆಂಟು ದಿನದ ಅಕ್ರೋಹಿಣಿ ಸೇನೆಯ ಮಾರಣಹೋಮಕ್ಕೆ ಯಜ್ಞದೀಕ್ಷಿತನಾಗಿ ನಿಂತ ಶ್ರೀ ಕೃಷ್ಣನೇ ಈ ಪರಿಯ ಉತ್ಸಾಹ ತೋರುತ್ತಿದ್ದರೆ ಉಳಿದವರು ಹೇಗೆ ಸುಮ್ಮನಿದ್ದಾರು? ಮತ್ತೆಲ್ಲರೂ ಕೊಡವಿಕೊಂಡು ಮೇಲೆದ್ದರು.

ನಾಯಕರೇ ಉತ್ಸಾಹದಿಂದ ನರ್ತಿಸುತ್ತಿದ್ದರೆ ಹಿಂಬಾಲಕರು ಅಳುಮುಖ ಹಾಕಿಕೊಂಡು ಕುಳಿತಿರುವುದು ಸಾಧ್ಯವೇ? ಈ ಕಗ್ಗ ಹೇಳುವುದು ಈ ಚಿಂತನೆಯನ್ನೇ. ಸೃಷ್ಟಿಸಿದ ಭಗವಂತನೇ ಜಗತ್ತೆಂಬ ಸಂಸಾರವನ್ನು ಕಟ್ಟಿಕೊಂಡು ಉತ್ಸಾಹ ತೋರುತ್ತಿದ್ದರೆ, ಒಂದು ಕ್ಷಣವೂ ಸುಮ್ಮನಿರದೆ ಪ್ರಕೃತಿ ಸದಾ ಕಾರ್ಯನಿರತವಾಗಿದ್ದರೆ, ನಾವೇಕೆ ದುಃಖದಿಂದ ನರಳುತ್ತಿದ್ದೇವೆ? ಸಾಕು ಈ ಜನ್ಮ ಎಂದು ಕೊರಗುವುದೇಕೆ? ಸೃಷ್ಟಿಕರ್ತ ಮತ್ತು ಅವನೇ ಮಾಡಿದ ಸೃಷ್ಟಿ ಸದಾ, ಸರ್ವದಾ ಚೈತನ್ಯಮುಖಿಯಾಗಿದ್ದಾಗ, ಪ್ರತಿಕ್ಷಣವೂ ಹೊಸಹೊಸದಾಗುತ್ತಿರುವಾಗ ನಾವೇಕೆ ನಿಂತ ನೀರಿನಂತೆ ಕೊಳೆಯಬೇಕು? ನಮಗೆ ಈಗ ಬೇಕಾದದ್ದು ಸದಾಕಾಲದ ಉತ್ಸಾಹ, ಕಾರ್ಯೋನ್ಮುಖತೆ. ಅದನ್ನು ಕಗ್ಗದ ಕೊನೆಯ ಸಾಲು ‘ಚಿಮ್ಮುಲ್ಲಸವ ಧರೆಗೆ’ ಎಂದರೆ ನೀನು ಬದುಕಿರುವ ಜಗತ್ತಿಗೆ, ನೀನು ಬದುಕಿರುವ ಕೊನೆಯ ಕ್ಷಣದವರೆಗೂ ಉಲ್ಲಾಸವನ್ನು ಚಿಮ್ಮುತ್ತಿರು ಎಂದು ಆಶಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT